ಮೊನ್ನೆ ಸಹಜ ಕೃಷಿ ಪದ್ಧತಿಯಲ್ಲಿ ಅಡಿಕೆ ಬೆಳೆಯುತ್ತಿರುವ ಚಂದ್ರಶೇಖರ್ ಅವರ ತೋಟಕ್ಕೆ ಹೋಗಿದ್ದೆ. ಜೀವಾಮೃತವನ್ನಷ್ಟೇ ಬಳಸುತ್ತಿರುವ ಅವರು ಹನ್ನೆರಡು ವರ್ಷಗಳಿಂದ ಮಣ್ಣಿಗೆ ರಾಸಾಯನಿಕ ಗೊಬ್ಬರವನ್ನೇ ಸೋಕಿಸಿಲ್ಲವಂತೆ. ಆದರೂ ಇತರೇ ಬೆಳೆಗಾರರಿಗಿಂತ 20-30% ಹೆಚ್ಚು ಫಸಲು ತೆಗೆಯುತ್ತಿದ್ದಾರಂತೆ. ಅಡಿಕೆಯ ನಡುವೆ ಬೆಳೆದಿರುವ ಎರಡು ವರ್ಷದ ರೋಬಸ್ಟಾ ಕಾಫಿ ಗಿಡಗಳು ನಾಲ್ಕು ವರ್ಷದ ಗಿಡಗಳಂತೆ ಬೆಳೆದಿವೆ.
ಕಳೆ, ಕೀಟ ನಾಶಕಗಳನ್ನು ಬಳಸುವುದರಿಂದ ಕೇವಲ ಕಳೆಯನ್ನಷ್ಟೇ ಅಲ್ಲ, ಕೀಟ ಜಗತ್ತನ್ನೇ ಸರ್ವನಾಶ ಮಾಡುತ್ತಿದ್ದೇವೆನ್ನುವ ಕಿಂಚಿತ್ತು ಅರಿವಿಲ್ಲದ ರೈತರ ಬಗ್ಗೆ ಅವರು ಆತಂಕಗೊಂಡರು. “ನಾನು ಬರೆದಿರುವುದನ್ನು ಓದುವ ಕೃಷಿಕರು ಒಂದು ಕ್ಷಣ ಆಲೋಚಿಸಿ ನೋಡಿ. ರಾಸಾಯನಿಕ ವಿಷವನ್ನು ಬಳಸಿ ನಾವು ಕೊಲ್ಲುತ್ತಿರುವುದಾದರೂ ಯಾವುದನ್ನು”
ಕಳೆಗೆ ಸಿಂಪಡಿಸುವ ರಾಸಾಯನಿಕಗಳು ನೆಲಕ್ಕಿಳಿದು ಕಣ್ಣಿಗೆ ಕಾಣದ, ಜೀವ ವೈವಿಧ್ಯದ ಅಮೂಲ್ಯ ಭಾಗವಾದ ಲಕ್ಷಾಂತರ, ಕೋಟ್ಯಂತರ ಕ್ರಿಮಿಕೀಟಗಳನ್ನು ಅನಾಮತ್ತು ಕೊಲ್ಲುತ್ತಿರುವುದರ ಬಗ್ಗೆ , ಔಷಧಿಯ ಹೆಸರಿನಲ್ಲಿ ಹಣ್ಣು, ಸೊಪ್ಪು, ತರಕಾರಿಯಿಂದ್ಹಿಡಿದು ತಿನ್ನುವ ಅನ್ನಕ್ಕೂ ವಿಷವಿಕ್ಕುತ್ತಿರುವ ನಾವು ಯೋಚಿಸಿದ್ದೇವೆಯಾ ? ಯೋಚಿಸುತ್ತೇವೆಯೇ ?
ನಾವು ಔಷಧವೆಂದು ಬಳಸುತ್ತಿರುವ ರಾಸಾಯನಿಕವು ಔಷಧಿಯೇ ಆಗಿದ್ದಿದ್ದಲ್ಲಿ ನಮ್ಮ ತೋಟ, ನಮ್ಮ ಹೊಲ, ನಮ್ಮ ಗದ್ದೆ ಸಮೃದ್ಧವಾಗಬೇಕಿತ್ತಲ್ಲವೇ!? ದಿನ ದಿನಕ್ಕೂ ಔಷಧಿಯುಂಡು ನಳನಳಿಸಬೇಕಿದ್ದ ಭೂಮಿಯು ಏಕೆ ರೋಗಗ್ರಸ್ಥವಾಗುತ್ತಾ ಸಣ್ಣದೊಂದು ಕೀಟದಾಳಿಯನ್ನೂ ಎದುರಿಸಲಾರದಷ್ಟು ನಿಶ್ಯಕ್ತವಾಗಿ ಹೋಗಿದೆ !?
ಉತ್ತರವನ್ನು ಬೂತಗನ್ನಡಿ ಹಾಕಿ ಹುಡುಕಬೇಕಿಲ್ಲ. ನಾವು ಭೂಮಿಗೆ ಹಾಕಿರುವ ರಾಸಾಯನಿಕಗಳೇ ಉತ್ತರ.! ಈ ವಿಷದ ಬಾಟಲಿಯ ಮುಚ್ಚು ತೆಗೆದು ಒಂದು ಸೆಕೆಂಡ್ ಮೂಗಿನ ಬಳಿ ಹಿಡಿದು ಉಸಿರೆಳೆದುಕೊಂಡರೆ, ತಲೆ ಸುತ್ತಿ ಬಂದು ದೇಹ ಬಳಲಿದಂತಾಗುವ ದ್ರವವನ್ನು ಔಷಧಿಯೆಂದು ವರ್ಷವಿಡೀ ಮಣ್ಣಿಗೆ ಸಿಂಪಡಿಸಿದರೆ ಕ್ರಿಮಿ, ಕೀಟಗಳೆಲ್ಲುಳಿದಾವು!
ಹೇಗೆ ಮಣ್ಣಿನ ಮೇಲೊಂದು ಜೀವ ಜಗತ್ತಿದೆಯೋ ಹಾಗೆಯೇ ಮಣ್ಣಿನ ಒಳಗಿನದ್ದೂ ಕೂಡಾ ಒಂದು ಜಗತ್ತೇ… ಅಲ್ಲಿ ಅಸಂಖ್ಯಾತ ಕ್ರಿಮಿಗಳ ನಡುವೆ ನಡೆಯುವ ಯುದ್ಧವೇ ಜೈವಿಕ ಕ್ರಿಯೆ. ಕೃಷಿ ಭೂಮಿಯೊಳಗೆ ಹೇಗೆ ಬೆಳೆಗಳನ್ನು ತಿಂದು ಬದುಕುವ ಕೀಟಗಳಿವೆಯೋ ಹಾಗೆಯೇ ಆ ಕೀಟಗಳನ್ನು ತಿಂದು ಕೃಷಿ ವ್ಯವಸ್ಥೆಯನ್ನು ಕಾಪಾಡುವ ಜೀವಿಗಳೂ ಅಸಂಖ್ಯಾತವಾಗಿವೆ. ಈ ಕೀಟಗಳ ಬಡಿದಾಟದಲ್ಲಿ ಐದರಿಂದ ಹತ್ತು ಪರ್ಸೆಂಟ್ ನಷ್ಟು ಫಸಲು ಮಣ್ಣು ಪಾಲಾಗುವುದು ಪ್ರಕೃತಿ ನಿಯಮ, ಆದರೆ ಸಕಲವೂ ತನ್ನದೇ, ಸಮಸ್ತವೂ ತನಗೇ ದಕ್ಕಬೇಕೆಂಬ ದುರಾಸೆಗೆ ಬೀಳುವ ರೈತ ಕೀಟನಾಶಕವೆಂಬ ಹೆಸರಿನ ವಿಷವನ್ನು ತನ್ನ ಫಸಲಿಗೆ ಹಾನಿ ಮಾಡಿದ ಕೀಟವನ್ನು ಕೊಲ್ಲುತ್ತೇನೆನ್ನುವ ಕುರುಡುತನದಲ್ಲಿ ತನ್ನ ಭೂಮಿಯನ್ನು ಕಾಯುವ ಕ್ರಿಮಿ ಕೀಟಗಳನ್ನೂ ಕೊಂದು ಹಾಕುತ್ತಾನೆ.
ಔಷಧ ದಂಧೆಯೆಂಬುದು(ದೇಹ, ಮಣ್ಣು ಎರಡರದ್ದೂ) ದೇಶದ ಅತ್ಯಂತ ದೊಡ್ಡ ಲಾಭದಾಯಕವಾಗಿರುವ ಹೊತ್ತಿನಲ್ಲಿ ಕೃಷಿ ವಿಶ್ವವಿದ್ಯಾಲಯಗಳು, ಕೃಷಿ ಇಲಾಖೆಗಳು ನೈಸರ್ಗಿಕ ಕೃಷಿಯ ಉಪಯೋಗ ಹಾಗೂ ಲಾಭದ ರಹಸ್ಯವನ್ನು ಮರೆಮಾಚಿ, ಆಧುನಿಕ ಕೃಷಿ ಪದ್ದತಿಯೇ ಶ್ರೇಷ್ಠ ಎಂಬ ಭ್ರಮೆಗೆ ರೈತರನ್ನು ದೂಡಿ ನಿಸರ್ಗದ ಜೈವಿಕ ವ್ಯವಸ್ಥೆಗೇ ಬೆಂಕಿಯಿಟ್ಟಿವೆ. ಈ ವಿನಾಶಕಾರಿ ಪದ್ದತಿಗೆ ‘ಹಸಿರು ಕ್ರಾಂತಿ’ ಎಂಬ ಚೆಂದದ ಹೆಸರು ಬೇರೆ!
ಇತ್ತ, ಹೆಚ್ಚೆಚ್ಚು ಬೆಳೆಯುವ ಹುಚ್ಚಿಗೆ ಬಿದ್ದಿರುವ ರೈತರು, ಹೊಸ ಹೊಸ ಹೆಸರಿನಲ್ಲಿ, ಬಾಟಲಿಯಲ್ಲಿ ಮಾರುವ ವಿಷವನ್ನು ಸಂಭ್ರಮಕ್ಕೆ ಬಿದ್ದಂತೆ ಸಿಂಪಡಿಸುತ್ತಾ ತನ್ನ ಭೂಮಿಯನ್ನು ಕಾಯುವ ಜೀವಿಗಳನ್ನೂ ಕೊಲ್ಲುತ್ತಿದ್ದಾರೆ. ಚಿಕ್ಕವರಿದ್ದಾಗ ಚಳಿಗಾಲದ ದಿನಗಳಲ್ಲಿ ಬಿಸಿಲೇರುವ ತನಕ ಅಂಗಳಕ್ಕೆ ಕಾಲಿಡಲು ವಿಪರೀತ ಭಯ. ಕಾರಣ ಆ ಋತುವಿನಲ್ಲಿ ಎರೆಹುಳುಗಳೆಲ್ಲ ಮಣ್ಣಿನಿಂದಾಚೆಗೆ ಬಂದು ಎಲ್ಲೆಂದರಲ್ಲಿ ರಾಶಿಯಾಗಿ ಹರಿದಾಡುತ್ತಿದ್ದವು. ಎರೆಹುಳುಗಳು ನೆಲದ ಸಮೃದ್ಧಿಯ ಪ್ರತೀಕ.
ಇತ್ತೀಚಿನ ದಿನಗಳಲ್ಲಿ ಎರೆಹುಳುಗಳನ್ನು ಎಲ್ಲಿಯಾದರೂ ಕಂಡಿದ್ದೀರಾ ? ದಿನವೂ ಕಾಣುತ್ತಿದ್ದರೆ ನೀವು ಅದೃಷ್ಟವಂತರು ಹಾಗೂ ಸ್ವಸ್ಥ ಕೃಷಿಯಲ್ಲಿ ತಡಗಿಕೊಂಡಿದ್ದೀರೀ ಎಂದರ್ಥ. ಇತ್ತೀಚೆಗೆ ಎರೆಹುಳುಗಳು ಕಾಣುತ್ತಿಲ್ಲವೆಂದಾದರೆ ಅದಕ್ಕೆ ಕಾರಣ ಮತ್ತದೇ ‘ ಆಧುನಿಕ ಕೃಷಿಯ ಔಷಧಿಗಳು’!