ವಿದೇಶಿ ಅಡಿಕೆ ಆಮದು ಬ್ರಿಟಿಷ್ ಕಾಲದಲ್ಲಿಯೂ ಇತ್ತು. ಸ್ವಾತಂತ್ರ್ಯ ಹೋರಾಟದಲ್ಲಿ ಸ್ವದೇಶಿ ಆಂದೋಲನ ಜೋರಾಗಿ ನಡೆಯುತ್ತಿದ್ದ ಕಾಲದಲ್ಲಿ ವಿದೇಶಿ ಅಡಿಕೆಗೆ ಬಹಿಷ್ಕಾರ ಹಾಕಿದ ಪ್ರಕರಣ ನಡೆದಿದೆ. ಇವತ್ತು ನನ್ನ ಸಂಗ್ರಹದ ಹಳೆಯ ಕಡತ ಓದುವಾಗ ಸ್ವಾರಸ್ಯಕರ ಘಟನೆ ಕಂಡಿತು .
1932ರ ಅಕ್ಟೋಬರ್ 26ರಂದು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಹೆಗಡೆಕಟ್ಟೆ ಕೇಂದ್ರ ರಾಜಕೀಯ ಪರಿಷತ್ತಿನ ಸಭೆ ನಡೆಯಿತು. ಇಲ್ಲಿನ ಸನಿಹದ ಚಟ್ಟೆಮನೆಯ ವಿಘ್ನೇಶ್ವರ ಸುಬ್ರಾಯ ಭಟ್ಟ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಮೊದಲು ಬ್ರಿಟಿಷರು ಕಿತ್ತೆಸೆದ ದ್ವಜದ ಕಂಬದ ಸ್ಥಳದಲ್ಲಿಯೇ ಪುನಃ ದ್ವಜ ಕಂಬ ನಿಲ್ಲಿಸಿ ಬಾವುಟ ಹಾರಿಸಿದರು. ಮುಖ್ಯ ಭಾಷಣ ಮಾಡಿದ ವಿಘ್ನೇಶ್ವರ ಭಟ್ಟರು ವಿದೇಶಿ ಅಡಿಕೆ ಆಗಮನದ ಮಹತ್ವದ ವಿಚಾರ ಪ್ರಸ್ತಾಪಿಸಿದರು.
” ನಮ್ಮ ದೇಶಕ್ಕೆ ಪರದೇಶಗಳಿಂದ ಎರಡು ಕೋಟಿ ರೂಪಾಯಿ ಅಡಿಕೆ ಬರುತ್ತಿದೆ. ಮೇಲಾಗಿ ನಾವೇ ಬೆಳೆಸಿದ ಅಡಿಕೆಗಿಂತ ಕಡಿಮೆ ದರಕ್ಕೆ ಪರದೇಶಿ ಅಡಿಕೆ ಸಿಗುತ್ತಿದೆ. ಹೀಗಿದೆಯೆಂದು ಅಡಿಕೆಯನ್ನು ತಿನ್ನುವವರು ಈ ಅಗ್ಗ ಸಿಗುವ ಪರದೇಶಿ ಅಡಿಕೆಯನ್ನು ತಿನ್ನಲು ಹೆಚ್ಚು ಶುರುಮಾಡಿದರೆ ಅಡಿಕೆಯನ್ನು ಬೆಳೆಸುವ ನಮ್ಮೆಲ್ಲರ ಗತಿ ಏನಾದೀತು? ಅದೇ ಪರದೇಶಿ ಅಡಿಕೆ ಎರಡು ಕೋಟಿ ರೂಪಾಯಿ ಬರುವುದನ್ನು ಯಾರೂ ತಿನ್ನದೇ ನಾವು ಬೆಳೆಸುವ ನಮ್ಮ ಅಡಿಕೆಯನ್ನು ತಿಂದರೆ ಎಷ್ಟು ಸುಖದಿಂದ ಬಾಳುವೆವು! ಅದೇ ಕಾರಣದಿಂದ ನಾವು ನಮ್ಮ ದೇಶದ ಸಾಮಾನುಗಳನ್ನೇ ಕೊಂಡುಕೊಳ್ಳ ಬೇಕು ಮತ್ತು ನಮ್ಮ ದೇಶದಲ್ಲಿ ಆಗದ ಸಾಮಾನುಗಳನ್ನು ನಮ್ಮ ದೇಶದಲ್ಲಿ ಆಗುವವರೆಗೂ ಕೊಂಡುಕೊಳ್ಳಲಿಕ್ಕೆಂದು ಪ್ರತಿಜ್ಞೆ ಮಾಡಬೇಕು” ಹೀಗೆ ಧೀರ್ಘ ಭಾಷಣ ಮಾಡುತ್ತಾರೆ.
‘ನಮ್ಮ ಮಗು ಎಷ್ಟೇ ಕುರೂಪಿ ಆಗಿದ್ದರೂ ಸುಂದರವಾಗಿದ್ದ ಬೇರೆ ಮಕ್ಕಳ ಮೇಲೆ ಪ್ರೀತಿ ಮಾಡುವುದಕ್ಕಿಂತ ಜಾಸ್ತಿ ಪ್ರೀತಿಯನ್ನು ನಮ್ಮ ಮಕ್ಕಳ ಮೇಲೆ ಮಾಡುತ್ತೇವೆ, ಸ್ವದೇಶಿ ಪ್ರೇಮ ಹೀಗೆ ಇರಬೇಕು’ ಎಂದು ಮಾರ್ಮಿಕ ಉದಾಹರಣೆ ಸಹಿತ ವಿವರಿಸುತ್ತಾರೆ .
ಸುಮಾರು ನೂರು ಜನ ಸೇರಿದ ಈ ಹೆಗಡೆ ಕಟ್ಟೆ ಸಭೆಯಲ್ಲಿ ಸ್ವಾಗತಾಧ್ಯಕ್ಷ ನರಸ ಭಟ್ಟ ಅಣ್ಣೆ ಭಟ್ಟ ಓಣಿಕೈ, ಸುಬ್ರಾಯ ಗಣಪೈ ಹೆಗಡೆ ಹೊನ್ನೆಕಟ್ಟೆ ಮುಂತಾದ ಧುರೀಣರು ಭಾಗವಹಿಸಿದ್ದರು. ಸಭೆಯ ನಿರ್ಣಯದಲ್ಲಿ ಹೆಗಡೆ ಕಟ್ಟೆ ಕೇಂದ್ರದ ಮುಂದಾಳುಗಳಾದ ಮಂಜುನಾಥ ಹೆಗಡೆ ಮಕ್ಕಳತಾಯಿಮನೆ ಇವರು ಸ್ವಾತಂತ್ರ್ಯ ಹೋರಾಟಕ್ಕಾಗಿ ಮಾಡಿದ ಸ್ವಾರ್ಥ ತ್ಯಾಗ, ಕಷ್ಟ ಸಹನೆಯ ಬಗ್ಗೆ ಅಭಿನಂದನೆ ಸಲ್ಲಿಸಲಾಗುತ್ತದೆ.
ಹೆಗಡೆ ಕಟ್ಟೆ ಹೋರಾಟದ ವಿವರ ವರದಿ 1932 ರ ಸತ್ಯಾಗ್ರಹ ಕರಪತ್ರ ಪತ್ರಿಕೆಯ ಅಕ್ಟೋಬರ್ 30 ಹಾಗೂ ನವೆಂಬರ್ 2ರ ಸಂಚಿಕೆಯಲ್ಲಿ ಪ್ರಕಟವಾಗಿದೆ.
ನಮ್ಮ ನೆಲದಲ್ಲಿ ನಾವು ಅಭಿಮಾನ ಪಡಬಹುದಾದ ಚಾರಿತ್ರಿಕ ಹೋರಾಟಗಳು ನಡೆದಿವೆ. ಓದಿದ ನಾವು ಇವನ್ನು ಅರಿತಾಗ ವಿದ್ಯೆ ಸಾರ್ಥಕವಾಗುತ್ತದೆ .