ಜೇನುಹುಳು ಆದಾಯ ಹೆಚ್ಚಿಸುವ ಕಾಮಧೇನು

1

ಜೇನುತುಪ್ಪಕ್ಕಾಗಿ ಮಾತ್ರ ಜೇನು ಸಾಕಾಣಿಕೆ ಮಾಡಲಾಗುತ್ತದೆ ಎಂಬ ಭಾವನೆ ಹಲವರಲ್ಲಿ ಇದೆ. ಆದರೆ ಜೇನು ಸಾಕಾಣಿಕೆ ಕಾರ್ಯ ಇಷ್ಟಕ್ಕೆ ಸೀಮಿತಗೊಂಡಿಲ್ಲ. ಕೃಷಿಗೆ ಇದರಿಂದಾಗುವ ಅನುಕೂಲ ಅಪರಿಮಿತ. ಅದರಲ್ಲೂ ಕೃಷಿಕರಿಗೆ ಇದೊಂದು ವರದಾನ.

ಜೇನುಸಾಕಣೆಯನ್ನು ಕೈಗೊಳ್ಳುವುದರಿಂದ ಉಪಕಸುಬು ಆದಂತೆ ಆಗುತ್ತದೆ. ಜೊತೆಗೆ ಹೆಚ್ಚಿನ ಆದಾಯವೂ ದೊರೆಯುತ್ತದೆ. ಜೇನುಹುಳುಗಳು ಇರುವ ಪರಿಸರದಲ್ಲಿ ಇಳುವರಿ ಹೆಚ್ಚಾಗುವ ಲಾಭವೂ ಕೃಷಿಕರಿಗೆ ದೊರೆಯುತ್ತದೆ. ಅಲ್ಲದೇ ಜೇನು ಪರಾಗಸ್ಪರ್ಶ ಕ್ರಿಯೆ ಆಗಿರುವ, ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡು ಬೆಳೆದ ಕೃಷಿ ಉತ್ಪನ್ನಗಳಿಗೆ ತಾಳಿಕೆ ಅವಧಿಯೂ ಹೆಚ್ಚು. ಜೇನುಹುಳುಗಳಿಗೆ ಹೂಗಳ ಪರಾಗ ಮುಖ್ಯವಾದ ಆಹಾರ ಮೂಲ. ಪರಾಗವನ್ನು ಸೇವಿಸುವ ಜೇನುಗಳು ಮರಿಜೇನುಗಳಿಗಾಗಿಯೂ ಅವುಗಳನ್ನು ಸಂಗ್ರಹಿಸುತ್ತವೆ. ಪರಾಗದಲ್ಲಿ ಪೌಷ್ಟಿಕಾಂಶಗಳು ಹೆಚ್ಚಿಗೆ ಇರುತ್ತವೆ. ಇದರಿಂದಲೇ ಜೇನುತುಪ್ಪ ಸೇವನೆಯೂ ಮನುಷ್ಯರಿಗೆ ಪುಷ್ಟಿದಾಯಕ.

ಇಷ್ಟೆಲ್ಲ ಅನುಕೂಲವಿರುವ ಜೇನು ಸಾಕಣೆಯನ್ನು ಕೈಗೊಳ್ಳಲು ಎಕರೆಗಟ್ಟಲೇ ಜಾಗವೇನೂ ಆಗಬೇಕಿಲ್ಲ. ಲಭ್ಯವಿರುವ ಸೀಮಿತ ಜಾಗದಲ್ಲಿಯೇ ಇದನ್ನು ಕೈಗೊಳ್ಳಬಹುದು. ಎಷ್ಟು ಪ್ರಮಾಣದಲ್ಲಿ ಕೈಗೊಳ್ಳಬೇಕು ಎಂಬುದು ಕೃಷಿಕರ ವಿವೇಚನೆಗೆ ಸೇರಿದ ವಿಷಯ. ಜೇನು ಸಾಕಣೆ ತರಬೇತಿಯನ್ನು ಪ್ರತಿ ಜಿಲ್ಲಾ ಕೇಂದ್ರಗಳಲ್ಲಿಯೂ ತೋಟಗಾರಿಕೆ ಇಲಾಖೆ ನೀಡುತ್ತದೆ. ಜೇನು ಸಾಕಾಣಿಕೆದಾರರ ಸಂಘವೂ ತರಬೇತಿ ನೀಡುತ್ತದೆ.ರೈತರು ತರಬೇತಿ ಪಡೆದು ಯಶಸ್ವಿಯಾಗಿ ಜೇನುಕೃಷಿ ಮಾಡಬಹುದು.

ಮುಖ್ಯವಾಗಿ ಕೃಷಿಕರು ಜೇನು ಸಾಕಣೆ ಆರಂಭಿಸುವ ಮೊದಲು  ಎರಡು ಅಂಶಗಳನ್ನು ಯೋಜಿಸಬೇಕು. ವಾಣಿಜ್ಯ ಉದ್ದೇಶಕ್ಕಾಗಿ ಮಾಡುತ್ತಿರುವುದೇ ಅಥವಾ ಬೆಳೆಯ ಇಳುವರಿ ಹೆಚ್ಚಿಸಿಕೊಳ್ಳುವ ಮತ್ತು ಮನೆ, ಸ್ನೇಹಿತರ ಉಪಯೋಗಕ್ಕೆ ನೀಡಲು ಮಿತಪ್ರಮಾಣದ ಜೇನು ಉತ್ಪಾದನೆಗಾಗಿ ಮಾಡುತ್ತಿರುವುದೇ ಎಂದು ಸ್ಪಷ್ಪಪಡಿಸಿಕೊಳ್ಳಬೇಕು.

ವಾಣಿಜ್ಯ ಉದ್ದೇಶಕ್ಕಾಗಿ ಮಾಡುತ್ತಿದ್ದರೆ ಹೂಡಬೇಕಾದ ಬಂಡವಾಳವೂ ಹೆಚ್ಚಿಗೆ ಇರಬೇಕಾಗುತ್ತದೆ. ಮನೆ ಬಳಕೆಗೆ ಮತ್ತು ಇಳುವರಿ ಹೆಚ್ಚಳ ಉದ್ದೇಶಕ್ಕೆ ಇಂಥ ಬಂಡವಾಳ ಅಗತ್ಯವಿರುವುದಿಲ್ಲ ಜೇನುನೊಣಗಳ ಪರಾಗಸ್ಪರ್ಶ ಕ್ರಿಯೆಯಿಂದ ಬೆಳೆಯ ಇಳುವರಿ ಮಾಮೂಲಿ ಪ್ರಮಾಣಕ್ಕಿಂತ ಶೇಕಡ ೨೦ಕ್ಕೂ ಹೆಚ್ಚಾಗುತ್ತದೆ. ಸೇಬು, ಸೀಬೆ(ಪೇರು), ಚರ‍್ರಿ, ಕಿತ್ತಳೆ, ನಿಂಬೆ, ತಾಳೆ, ನೇರಳೆ, ಗೋಡಂಬಿ, ನಿಂಬೆ, ದಾಳಿಂಬೆ ತೋಟಗಳಲ್ಲಿ ಜೇನು ಪೆಟ್ಟಿಗೆಗಳನ್ನಿಡುವುದು ಪರಿಣಾಮಕಾರಿ. ಕುಸುಬೆ, ಜೋಳ ಎಳ್ಳು, ಅಲ್ಲದೇ ತರಕಾರಿಗಳ ಕೃಷಿ ಮಾಡುವ ಸ್ಥಳಗಳಲ್ಲಿಯೂ ಜೇನು ಪೆಟ್ಟಿಗೆಗಳನ್ನು ಇಡುವುದು ಉತ್ತಮ.

ಜೇನು ಇಳುವರಿ ಪ್ರತಿ ಬಾರಿಯೂ ಏಕಪ್ರಕಾರವಾಗಿ ಇರುವುದಿಲ್ಲ. ಸರಾಸರಿ ಒಂದು ಜೇನುಪೆಟ್ಟಿಗೆಯಿಂದ ವಾರ್ಷಿಕ ೮-೨೦ ಕೆಜಿವರೆಗೂ ಜೇನು ದ್ರವ ದೊರೆಯಬಹುದು. ಆದರೆ ಜೇನುಕೃಷಿಯು ರೋಗಬಾಧೆ ಹೊರತುಪಡಿಸಿ ನಷ್ಟದಾಯಕವಲ್ಲ. ಜೇನು ಪೆಟ್ಟಿಗೆಯೊಂದರ ಬೆಲೆ ೮೦೦ ರುಪಾಯಿಗಳಿಂದ ೧೦೦೦ ರುಪಾಯಿಗಳವರೆಗೂ ಇದೆ. ಪೆಟ್ಟಿಗೆಗಳ ಗುಣಮಟ್ಟಕ್ಕೆ ಅನುಗುಣವಾಗಿ ಬೆಲೆಯಲ್ಲಿ ವ್ಯತ್ಯಾಸಗಳಾಗುತ್ತವೆ. ಖರ್ಚು ಕಳೆದು ಒಂದು ಪೆಟ್ಟಿಗೆಯಿಂದ ಉತ್ತಮ ಆದಾಯ ನಿರೀಕ್ಷಿಸಬಹುದು. ಮುತುವರ್ಜಿಯಿಂದ ಜೇನು ಸಾಕಾಣಿಕೆ ಮಾಡಿದರೆ ಕನಿಷ್ಠ ಹತ್ತು ಪೆಟ್ಟಿಗೆಗಳಿಂದ ಸಾಕಷ್ಟು ಆದಾಯ ಗಳಿಸಬಹುದು. ಸಣ್ಣ ಕುಟುಂಬದ ಮೇಲು ಖರ್ಚಿಗೆ ಸಾಕಾಗುವಷ್ಟು ಹಣ ಗಳಿಸಬಹುದು.

ಪರಾಗಗಳನ್ನು ತರುವ ಜೇನುನೋಣಗಳು ಅವುಗಳನ್ನು ತಮ್ಮ ಗೂಡುಗಳಲ್ಲಿ ಸಂಗ್ರಹಿಸುತ್ತವೆ. ಈ ಜೇನುನೊಣಗಳು ಮಕರಂದಕ್ಕಾಗಿ ಹಾರಾಡುವಾಗ ಪರಾಗಗಳು ಅವುಗಳಿಗೆ ಅಂಟಿಕೊಂಡಿರುತ್ತವೆ. ಬೇರೆಬೇರೆ ಹೂವಿನ ಮೇಲೆ ಕುಳಿತಾಗ ಹೂವಿನ ಶಲಾಕಾಗ್ರಗಳ ಮೇಲೆ ಬಿದ್ದು ಪರಾಗಸ್ಪರ್ಶ ಕ್ರಿಯೆ ನಡೆಯುತ್ತದೆ. ಇದರ ಪ್ರಕ್ರಿಯೆಯಿಂದ ಕ್ಷೇತ್ರ ಮತ್ತು ತೋಟಗಾರಿಕೆ ಬೆಳೆಗಳ ಇಳುವರಿ ಹೆಚ್ಚಳವಾಗುತ್ತದೆ. ಅಡಿಕೆ-ತಾಳೆ ಮುಂತಾದ ತೋಟಗಾರಿಕೆ ಬೆಳೆಗಳಲ್ಲಿ ಹೊಂಬಾಳೆ ಬಿರಿದಾಗ ಸಾಕಷ್ಟು ಪರಾಗ ಉತ್ಪತ್ತಿ ಆಗಿರುತ್ತದೆ. ಇದನ್ನು ಸಂಗ್ರಹಿಸಲು ಹೊಂಬಾಳೆಗಳಿಗೆ ಜೇನುನೊಣಗಳು ಮುತ್ತಿರುತ್ತವೆ.

ಮಳೆಗಾಲದಲ್ಲಿ ಪ್ರತಿಬಾರಿ ಮಳೆ ಆಗಿ ನಿಂತ ಬಳಿಕ ಮತ್ತು ಚಳಿಗಾಲದಲ್ಲಿ ಸೂರ್ಯೋದಯ ಆದ ನಂತರ ಇಬ್ಬನಿ ಆವಿಯಾಗುವ ಕಾಲಘಟ್ಟದಲ್ಲಿ ಜೇನುನೊಣಗಳು ಪರಾಗಕ್ಕಾಗಿ ಇಂಥ ಮರಗಳ ಬಳಿ ಗುಂಪುಗುಂಪಾಗಿ ಹಾರಾಡುತ್ತಿರುತ್ತವೆ.ಪರಕೀಯ ಪರಾಗಸ್ಪರ್ಶದಿಂದ ಫಲಕಟ್ಟುವ ಮತ್ತು ಏಕಲಿಂಗ ಪುಷ್ಪಗಳಿಂದ ಕೂಡಿದ ಬೆಳೆಗಳಿಗೆ ಜೇನುನೊಣಗಳು ಪರಮಾಪ್ತ.

ಈ ಎಲ್ಲ ಕಾರಣದಿಂದ ಹಾನಿಕಾರಕ ಕೀಟನಾಶಕಗಳನ್ನು ಕ್ಷೇತ್ರ ಬೆಳೆಗಳಿಗೆ ಮತ್ತು ತೋಟಗಾರಿಕೆ ಬೆಳೆಗಳಿಗೆ ಸಿಂಪಡಿಸಬಾರದು. ಕೀಟನಾಶಕಗಳ ಸಿಂಪಡಣೆ, ಪರಿಸರದಲ್ಲಿರುವ ಜೀವಿಗಳಿಗೆ ಹಾನಿಕಾರಕ. ಜೊತೆಗೆ ಬೆಳೆಗೂ ಹಾನಿದಾಯಕ.

ಔಷಧ ಗುಣ: ಜೇನುತುಪ್ಪ ಔಷಧ ಗುಣಗಳಿಂದ ಕೂಡಿದೆ. ಈ ಕಾರಣದಿಂದಲೇ ಭಾರತೀಯರು, ಸಾವಿರಾರು ವರ್ಷಗಳಿಂದ ಔಷಧ ಮತ್ತಿತ್ತರ ಕಾರಣಗಳಿಗಾಗಿ ಇದನ್ನು ಬಳಸುತ್ತಾ ಬಂದಿದ್ದಾರೆ. ನಿತ್ಯ ಮಿತ ಪ್ರಮಾಣದ ಜೇನುತುಪ್ಪ ಸೇವನೆಯಿಂದ ಆರೋಗ್ಯದ ಮೇಲೆ ಉತ್ತಮ ಪರಿಣಾಮಗಳು ಉಂಟಾಗುತ್ತವೆ. ಜೇನು ಸಾಕಣೆದಾರರಿಗೆ ಜೇನು ದ್ರವದ ಜೊತೆ ಮೇಣ, ಜೇನಿನ ಅಂಟು ಕೂಡ ಆದಾಯ ನೀಡುತ್ತದೆ. ಇಷ್ಟೆಲ್ಲ ಅನುಕೂಲವಿರುವ ಜೇನುಹುಳುಗಳನ್ನು ಮುತುವರ್ಜಿಯಿಂದ ಸಾಕಣೆ ಮಾಡುವುದು ಅಗತ್ಯ.

1 COMMENT

LEAVE A REPLY

Please enter your comment!
Please enter your name here