ಭಾರತದಲ್ಲಿ ವೈವಿಧ್ಯಮಯ ಬಿದಿರು ತಳಿಗಳಿವೆ. ಇಲ್ಲಿ ಬಿದಿರು ಸಮೃದ್ಧವಾಗಿತ್ತು. ಬ್ರಿಟಿಷರು ಆಡಳಿತ ಶುರುವಾದ ನಂತರ ಅವರು ಅದನ್ನು ಕಳೆಯೆಂದು ಭಾವಿಸಿದರು. ನಿಮೂರ್ಲನೆ ಮಾಡುತ್ತಾ ಅಲ್ಲೆಲ್ಲ ಸಾಗುವಾನಿ ನೆಡುತೋಪುಗಳನ್ನು ನಿರ್ಮಿಸಿದರು. ಇಂದು ಬೇರೆಬೇರೆ ಕಾರಣಗಳಿಂದ ಮಹತ್ವ ಕಳೆದುಕೊಂಡಿರುವ ಬಿದಿರು ಎಲ್ಲ ಅರ್ಥದಲ್ಲಿಯೂ ಪುನುರುಜ್ಜೀವನಗೊಳ್ಳಬೇಕಾದ ಅವಶ್ಯಕತೆ ಇದೆ ಎಂದು ನಿವೃತ್ತ ಹಿರಿಯ ಅರಣ್ಯಾಧಿಕಾರಿ, ಭಾರತೀಯ ಬಿದಿರು ಸಮಾಜದ ಸಂಸ್ಥಾಪಕ ಸದಸ್ಯ ಎಸ್. ನೇಗಿನಾಳ್ ಅಭಿಪ್ರಾಯಪಟ್ಟರು.
ಭಾರತೀಯ ಬಿದಿರು ಸಮಾಜದ ಕರ್ನಾಟಕ ಶಾಖೆ ಇಂದು ಬೆಂಗಳೂರು ಲಾಲ್ ಬಾಗ್ ನಲ್ಲಿ ‘ವಿಶ್ವ ಬಿದಿರು ದಿನ’ ಆಚರಿಸಿತು. ಈ ಸಮಾರಂಭವನ್ನು ಬಿದಿರುಸಸಿಗೆ ನೀರೆರುಯುವುದರ ಮೂಲಕ ಅವರು ಉದ್ಘಾಟಿಸಿ ಮಾತನಾಡಿದರು. ಸಾವಿರಾರು ವರ್ಷಗಳಿಂದಲೂ ಭಾರತೀಯರ ಬದುಕಿನಲ್ಲಿ ಬಿದಿರು ಹಾಸುಹೊಕ್ಕಾಗಿದೆ. ಅಪ್ರತಿಮ ಯೋಧರಾದ ರಾಮಲಕ್ಷ್ಮಣ ಅವರ ಬಿಲ್ಲುಬಾಣಗಳು, ಕೃಷ್ಣನ ಕೊಳಲು ರೂಪುಗೊಂಡಿದ್ದು ಬಿದಿರಿನಿಂದಲೇ ಎಂದರು. ಭಾರತದಲ್ಲಿ ಬಿದಿರು ಹೆಸರು ಹೊಂದಿರುವ ಸಾಕಷ್ಟು ಊರುಗಳಿವೆ. ಇದರಿಂದಲೂ ಇದರ ಮಹತ್ವ ತಿಳಿಯುತ್ತದೆ. ಕರ್ನಾಟಕದಲ್ಲಿಯೂ ಬಿದಿರಿನ ನಾಲ್ಕೈದು ತಳಿಗಳಿವೆ. ದಾಂಡೇಲಿಯಲ್ಲಿ ಬಿದಿರು ಸಮೃದ್ಧವಾಗಿತ್ತು. ಸಾಗುವಾನಿ ನೆಡುತೋಪು ಬೆಳೆಸಿದ್ದರಿಂದ, ಕಾಗದದ ಕಾರ್ಖಾನೆಗಳಿಂದ ಅದರ ವಿಸ್ತೀರ್ಣ ಕುಸಿಯಿತು ಎಂದರು.


ಆನೆ, ಸಾಂಬ, ಜಿಂಕೆಗಳಿಗೆ ಬಿದಿರು ಅಚ್ಚುಮೆಚ್ಚಿನ ಆಹಾರ. ಅರಣ್ಯದಲ್ಲಿ ಇವುಗಳ ಕೊರತೆ ಉಂಟಾಗಿರುವುದರಿಂದಲೇ ಅವುಗಳು ನಾಡಿನ ಬೆಳೆಗಳಿಗೆ ದಾಳಿ ಮಾಡುವಂಥ ಸ್ಥಿತಿ ನಿರ್ಮಾಣವಾಗಿದೆ. ಹೀಗೆಂದು ಅವರು ವಿಷಾದಿಸಿದರು. ಆಮ್ಲಜನಕ ಉತ್ಪಾದನೆಯಲ್ಲಿಯೂ ಬಿದಿರು ಮಹತ್ವ ಅಪಾರ. ಅದರ ವೈಭವ ಮರುಕಳಿಸಬೇಕಿದೆ. ದೈನಂದಿನ ಜೀವನದಲ್ಲಿಯೂ ಅವುಗಳ ಬಳಕೆ ಹೆಚ್ಚಬೇಕಿದೆ ಎಂದು ಅವರು ಆಶಿಸಿದರು.
ಕರ್ನಾಟಕ ಅರಣ್ಯ ಇಲಾಖೆ ಮುಖ್ಯಸ್ಥ ಪುನ್ನತಿ ಶ್ರೀಧರ್ ಸಮಾರಂಭದಲ್ಲಿ ಮಾತನಾಡಿದರು. ರಾಜ್ಯದ ಸ್ವಯಂಸೇವಾ ಸಂಸ್ಥೆಗಳು ಸಹ ಬಿದಿರು ಮಹತ್ವದ ಬಗ್ಗೆ ಜನರಿಗೆ ತಿಳಿಸಬೇಕಿದೆ. ಈ ಮೂಲಕ ಬಿದಿರು ವಿಸ್ತೀರ್ಣತೆ ಹೆಚ್ಚಿಸಬೇಕಿದೆ. ಬಿದಿರು ಬೆಳೆಯಲು ಕರ್ನಾಟಕ ಸರ್ಕಾರ ಪ್ರೋತ್ಸಾಯಿಸುತ್ತಿದೆ. ಪ್ರತಿ ಎಕರೆಗೆ 5 ಸಾವಿರ ರೂ ಸಹಾಯಧನ ನೀಡಲಾಗುತ್ತಿದೆ. ಈ ವಿಷಯವನ್ನು ಆಸಕ್ತ ರೈತರಿಗೆ ತಲುಪಿಸಬೇಕಿದೆ ಎಂದರು.


ಭಾರತೀಯ ಬಿದಿರು ಸಮಾಜದ ಅಧ್ಯಕ್ಷ ಡಾ. ಕೆ. ಸುಂದರ್ ನಾಯಕ್ ಅವರು ಸ್ವಾಗತ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ಅವರು ಭಾರತೀಯ ಬಿದಿರು ಸಮಾಜದ ಕರ್ನಾಟಕ ಶಾಖೆಯ ಆರಂಭದ ಉದ್ದೇಶ-ಕಾರ್ಯಗಳನ್ನು ತಿಳಿಸಿದರು. ಕೇರಳ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಅರುಣಾಚಲ, ಇತ್ಯಾದಿ ರಾಜ್ಯಗಳಲ್ಲಿಯೂ ಇದರ ಶಾಖೆಗಳನ್ನು ಆರಂಭಿಸಲಾಗಿದೆ ಎಂದರು.
ಜಾಗತಿಕ ತಾಪಮಾನ ಹೆಚ್ಚುತ್ತಿದೆ. ಭೂ ತಾಪಮಾನ ಹೆಚ್ಚಿದರೆ ಪ್ರಾಕೃತಿಕ ಅನಾಹುತಗಳು ಸಂಭವಿಸುತ್ತವೆ. ಇದನ್ನು ತಡೆಯುವಲ್ಲಿ ಬಿದಿರು ಕೂಡ ಮಹತ್ವದ ಪಾತ್ರ ವಹಿಸುತ್ತದೆ. ಆದ್ದರಿಂದ ಇದನ್ನು ಹೆಚ್ಚೆಚ್ಚು ಬೆಳೆಸಬೇಕಿದೆ. ಜೊತೆಗೆ ನಾವು ನಿಸರ್ಗದ ಜೊತೆಗೆ ಸಾಮರಸ್ಯದಿಂದ ಬದುಕುವಂಥ ಜೀವನಶೈಲಿಯನ್ನೂ ರೂಪಿಸಿಕೊಳ್ಳಬೇಕಿದೆ ಎಂದರು.


ಭಾರತೀಯ ಬಿದಿರು ಸಮಾಜದ ಕರ್ನಾಟಕ ಶಾಖೆ ಅಧ್ಯಕ್ಷರಾದ ನೀಲಮ್ ಮಂಜುನಾಥ್, ಕರ್ನಾಟಕ ಶಾಖೆ ಸಾಗಿಬಂದ ಹಾದಿಯ ಬಗ್ಗೆ ಪುನರವಲೋಕನ ಮಾಡಿದರು. ಶಾಖೆಯ ಉದ್ದೇಶ, ಭವಿಷ್ಯದ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು. ರಾಜ್ಯ ತೋಟಗಾರಿಕೆ ಇಲಾಖೆ ನಿರ್ದೇಶಕ ಬಿ. ವೆಂಕಟೇಶ್, ಕರ್ನಾಟಕ ಬಿದಿರು ಸಮಾಜದ ಕಾರ್ಯನಿರ್ವಾಹಕ ನಿರ್ದೇಶಕರುಗಳಾದ ಜೈಸಿಂಹ ಕೃಷ್ಣರಾವ್, ರಂಗನಾಥ್ ಕೃಷ್ಣನ್ ಕಾರ್ಯದರ್ಶಿ ರಾಜ್ಯಲಕ್ಷ್ಮಿ ಅವರು ಡಾ.ಎನ್.ಎ.ಎಸ್.ಎಂ ಎಫ್.ಜಿ.ಸಿ. ಸಹಾಯಕ ಪ್ರಾಧ್ಯಾಪಕಿ ಡಾ.ಅನ್ನಪೂರ್ಣ ಕಿಶೋರ್ ಕುಮಾರ್ ಉಪಸ್ಥಿತರಿದ್ದರು.


ಸಮಾರಂಭದ ಅಂಗವಾಗಿ ಬಿದಿರು ಸಂಗೀತ ಉಪಕರಣಗಳನ್ನೇ ಆಧರಿಸಿದ ಬ್ಯಾಂಡ್, ಬಿದಿರು ಬಳಸಿಯೂ ತಯಾರಿಸಲಾದ ಉಡುಪು ಪ್ರಧಾನವಾಗಿರುವ ಫ್ಯಾಷನ್ ಶೋ ಆಯೋಜಿತವಾಗಿತ್ತು. ಬಿದಿರು ಬ್ಯಾಂಡ್ ನೆರೆದವರ ಭಾರಿ ಮೆಚ್ಚುಗೆ ಪಡೆಯಿತು. ಇದೇ ಸಂದರ್ಭದಲ್ಲಿ ಆಸಕ್ತ ರೈತರಿಗೆ ಬಿದಿರು ಸಸಿಗಳನ್ನು ವಿತರಿಸಲಾಯಿತು. ಬಿದಿರು ಬಳಸಿ ತಯಾರಿಸಲಾದ ವಿವಿಧ ಉಪಕರಣಗಳ ಮಾರಾಟ ಮಳಿಗೆಗಳಿದ್ದವು. ಮಕ್ಕಳಲ್ಲಿ ಬಿದಿರು ಬಗ್ಗೆ ಅರಿವು ಮೂಡಿಸಲು ಅವರಿಂದಲೇ ವಿವಿಧ ಬಿದಿರು ಕಿರು ಕಲಾಕೃತಿ ರೂಪಿಸುವ ಕಾರ್ಯಾಗಾರದಲ್ಲಿ ಚಿಣ್ಣರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here