ಚಿತ್ರ ಲೇಖನ : ವಿನೋದ ರಾ ಪಾಟೀಲ ಚಿಕ್ಕಬಾಗೇವಾಡಿ

ಹಿಂದೆ ಬೆಳಗಾವಿ ಜಿಲ್ಲೆಯ ಹಲವು ಕಡೆ ಸಾವೆ, ನವಣೆ, ಬರಗವನ್ನು ಯಥೇಚ್ಚವಾಗಿ ಬೆಳಯುತ್ತಿದ್ದರು. ಬದಲಾದ ಕೃಷಿ ವಾತಾವರಣದ ಪರಿಣಾಮ ಹಾಗೂ ಶ್ರಮದ ಕೊಯ್ಲು, ಸಂಸ್ಕರಣೆ ಕಾರಣ ಈ ಭಾಗದಲ್ಲಿ ಇವುಗಳ ಕ್ಷೇತ್ರವ್ಯಾಪ್ತಿ ಕಡಿಮೆಯಾಯಿತು.ಇವುಗಳ ಜಾಗವನ್ನು ಕಬ್ಬು, ಮೆಕ್ಕೆಜೋಳ, ಹೈಬ್ರೀಡ್ ಹತ್ತಿಗಳು ಆವರಿಸಿಕೊಂಡವು.
ಬೈಲಹೊಂಗಲ ತಾಲೂಕಿನ ಸಂಪಗಾಂವ, ತಿಗಡಿ, ನಾಗಲಾಪೂರ, ಪಟ್ಟಿಹಾಳ ಭಾಗದಲ್ಲಿ ಸಾವೆ ಪ್ರಸಿದ್ದವಾಗಿತ್ತು.

ಇಂತಹ ಬೆಳೆಗಳನ್ನು ಮತ್ತೆ ಪ್ರಚಲಿತಕ್ಕೆ ತರಬೇಕು ಹಾಗೂ ಸ್ವತಃ ಬಳಕೆ ಮಾಡಿಕೊಳ್ಳಬೇಕು ಎಂದು ಚಂದ್ರಕಾಂತ ವಿರುಪಾಕ್ಷ ಕೋಟಗಿ ನಿಶ್ಚಯಿಸಿದರು. ಇವರು ಬೈಲಹೊಂಗಲ ತಾಲೂಕಿನ ತಿಗಡಿ ಗ್ರಾಮದ ನಿವಾಸಿ. ನಿವೃತ್ತ ಡಿ,ಸಿ.ಸಿ ಬ್ಯಾಂಕ್ ನಿವೃತ್ತ ನೌಕರ. ಇವರದ್ದು ಅವಿಭಕ್ತ ಕೃಷಿ ಕುಟುಂಬ. ಸಾವಯವ ಕೃಷಿ ಒಲವು ಹೊಂದಿರುವ ಇವರು ಕಳೆದ ವರ್ಷದಿಂದ ಹಂತಹಂತವಾಗಿ ಸಾವಯವ ಕೃಷಿಪದ್ಧತಿ ಅಳವಡಿಸಿಕೊಳ್ಳುತ್ತಿದ್ದಾರೆ. 12 ಎಕರೆ ಭೂಮಿ ಹೊಂದಿರುವ ಇವರು ಕಬ್ಬು, ಹತ್ತಿ, ಶೇಂಗಾ, ಮಿಶ್ರಬೆಳೆಗಳನ್ನು ಬೆಳೆಯುತ್ತಾರೆ.

ಬೆಳೆ ಬದಲಾವಣೆಯಿಂದ ಭೂಮಿಯ ಫಲವತ್ತತೆ ಹೆಚ್ಚುವದನ್ನು ಅರಿತ ಕಾರಣ ಈ ವರ್ಷ ಬೆಳೆದ ಬೆಳೆಯನ್ನು ಆ ಭೂಮಿಯಲ್ಲಿ ಪುನಃ ಬೆಳೆಯುದಿಲ್ಲ. ಇವರ ಕುಟುಂಬದವರು ಕಳೆದ ಒಂದು ವರ್ಷದಿಂದ ಸಿರಿಧಾನ್ಯವನ್ನು ನಿತ್ಯ ಆಹಾರವಾಗಿ ಬಳಸುತ್ತಿದ್ದಾರೆ. ಇದರ ಪರಿಣಾಮ ಇವುಗಳನ್ನು ತಾವೇ ಬೆಳೆದುಕೊಳ್ಳಲು ನಿರ್ಧರಿಸಿ 2 ಎಕರೆಯಲ್ಲಿ ಧಾರವಾಡದಿಂದ ಉದಲು ಸಾವೆ, ಬರಗು, ನವಣೆ ಬಿತ್ತನೆಬೀಜಗಳನ್ನು ತಂದು ಹಾಕಿದ್ದಾರೆ.

ಬೆಳೆಯುವ ಮುನ್ನ :ಕಪ್ಪುಮಣ್ಣಿನ ಹೊಲಕ್ಕೆ ಕೊಟ್ಟಿಗೆ ಗೊಬ್ಬರ ಹಾಗೂ ಎರೆಹುಳುಗೊಬ್ಬರವನ್ನು ಹರವಿ ಉಳುಮೆ ಮಾಡಿ ನಾಲ್ಕು ತಾಳಿನಕೂರಿಗೆ ಸಹಾಯದಿಂದ ಸಿರಿಧಾನ್ಯಗಳನ್ನು ಬಿತ್ತನೆ ಮಾಡಿದ್ದಾರೆ. ಸಂಪೂರ್ಣವಾಗಿ ಮಳೆಯಾಧಾರಿತ ಬೆಳೆಗಳಾದ ಇವುಗಳಿಗೆ ಯಾವುದೇ ರಾಸಾಯನಿಕ ಔಷಧ ಸಿಂಪಡನೆ ಮಾಡುವುದಿಲ್ಲ. ನವಣೆ, ಸಾವೆ ಉದಲು 3 ತಿಂಗಳಲ್ಲಿ ಕೊಯ್ಲಿಗೆ ಬಂದರೆ ಬರಗ ಎರಡೂವರೆ ತಿಂಗಳಲ್ಲಿ ಕೊಯ್ಲಿಗೆ ಬಂದಿದೆ. ಸಿರಿಧಾನ್ಯಗಳನ್ನು ಅದಲು ಬದಲು ಮಾಡಿ ಹಿಂಗಾರಿನಲ್ಲೂ ಬೆಳೆಯಲು ನಿರ್ಧರಿಸಿದ್ದಾರೆ.ಹಿಂದೆ ಈ ಭಾಗದಲ್ಲಿ ಉದಲು ಬೆಳೆಯುತ್ತಿರಲಿಲ್ಲ. ಈಗ ಉದಲು ಇಲ್ಲಿ ಭರಪೂರ ಇಳುವರಿ ಬಂದಿರುವುದು ಖುಷಿಯ ಸಂಗತಿ.

ಇಳುವರಿ ಮತ್ತು ಸಂಸ್ಕರಣೆ: ಅರ್ಧರ್ಧ ಎಕರೆಯಲ್ಲಿ ಬೆಳೆದ ಬೆಳೆ ಇಳುವರಿಯಲ್ಲೂ ಸೈ ಎನಿಸಿಕೊಂಡಿವೆ. ನವಣೆ 4 ರಿಂದ 5 ಕ್ವಿಂಟಾಲ್ ,ಸಾವೆ 4 ಕ್ವಿಂಟಾಲ್,ಬರಗ 4 ಕ್ವಿಂಟಾಲ್,ಉದಲು 5 ರಿಂದ 6 ಕ್ವಿಂಟಾಲ್ ಇಳುವರಿ ಬಂದಿದೆ. ಮನೆ ಬಳಕೆ ಇಟ್ಟುಕೊಂಡು ಉಳಿದದ್ದನ್ನು ಬೀಜಮಾಡಿ ಮಾರಾಟ ಮಾಡುವ ಯೋಚನೆಯನ್ನು ಹೊಂದಿದ್ದಾರೆ. ಇವುಗಳನ್ನು ತೆನೆ ಕೊಯ್ಲು ಮಾಡಿ. ಒಣಗಿಸಿ, ಬಡಮನಿಯಲ್ಲಿ ಬಡಿದು ಗಾಳಿಯಲ್ಲಿ ತೂರಿ ಸಂಸ್ಕರಣೆಯನ್ನು ಮಾಡಿದ್ದಾರೆ.


ಅಡುಗೆ ಮತ್ತು ಸತ್ವಭರಿತ ಮೇವು: ಸಿರಿಧಾನ್ಯಗಳಿಂದ ಅನ್ನ, ಉಪ್ಪಿಟ್ಟು,ಇಡ್ಲಿ ಮುಂತಾದ ಅಡುಗೆ ಮಾಡಬಹುದಾಗಿದೆ.ಹಿಂದೆ ಈ ಭಾಗದಲ್ಲಿ ಪೈಲ್ವಾನರು ಯಥೇಚ್ಚವಾಗಿ ಬಳಸುತ್ತಿದ್ದರು. ಈ ಬೆಳೆಗಳ ಸತ್ವಯುತ ಮೇವನ್ನು ದನಗಳು ಇಷ್ಟಪಟ್ಟು ತಿನ್ನುತ್ತವೆ. “ಇವುಗಳ ಬಳಕೆ ಆರೋಗ್ಯದ ದೃಷ್ಟಿಯಿಂದ ಒಳಿತು. ಅದಕ್ಕಾಗಿ ನಮ್ಮ ಬಳಕೆಗಾಗಿ ಹಾಗೂ ಇವುಗಳನ್ನು ಮತ್ತೆ ಪ್ರಚಲಿತಕ್ಕೆ ತರುವಲ್ಲಿ ನಮ್ಮ ಅಳಿಲು ಸೇವೆಯೂ ಇರಲಿ ಎನ್ನುವ ನಿಟ್ಟಿನಲ್ಲಿ ಇವುಗಳನ್ನು ಬೆಳೆದು ಯಶ ಕಂಡಿದ್ದೇನೆ” ಎಂದು ಚಂದ್ರಕಾಂತ ಕೋಟಗಿ ಹೇಳುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9449692024

LEAVE A REPLY

Please enter your comment!
Please enter your name here