ಕೃಷಿಕರು, ಕೃಷಿಭೂಮಿಗೆ ಕಾಲಿಟ್ಟ ಕೂಡಲೇ ಮಣ್ಣುಮುಟ್ಟಿ ನಮಸ್ಕರಿಸುವುದು ಸಾಮಾನ್ಯ. ಈಗಲೂ ಬಹಳಷ್ಟು ಮಂದಿ ಪಾದರಕ್ಷೆ ಹಾಕಿಕೊಂಡು ಕೃಷಿಭೂಮಿಯ ಮಣ್ಣನ್ನು ತುಳಿಯುವುದಿಲ್ಲ. ಇಲ್ಲಿನ ಮಣ್ಣಿನ ಮಹತ್ವ ಅಪಾರ. ಇದರ ಫಲವತ್ತತೆ ಉಳಿಸಲು, ವೃದ್ಧಿಸಲು ಕೋಟ್ಯನುಕೋಟಿ ಸೂಕ್ಷ್ಮಾಣುಗಳು ನಿರಂತರವಾಗಿ ಶ್ರಮಿಸುತ್ತಿರುತ್ತವೆ. ಆದ್ದರಿಂದಲೇ ಮಣ್ಣು ಜೀವಂತ. ಇದರಿಂದಾಗಿಯೇ ಸಸ್ಯಗಳು ಸಮೃದ್ಧವಾಗಿ ಬೆಳೆಯಲು ಸಾಧ್ಯ.
ಪ್ರಸ್ತುತ ಸಸ್ಯಾಭಿವೃದ್ಧಿಯಲ್ಲಿ ಗಣನೀಯ ಪಾತ್ರ ವಹಿಸುವ ಸಿಲಿಸಿಕ್ ಆ್ಯಸಿಡ್ ಕುರಿತು ತಿಳಿದುಕೊಳ್ಳೋಣ. ಸಿಲಿಕಾನ್ ಡೈ ಆಕ್ಸೈಡ್ ಮಣ್ಣಿನಲ್ಲಿ ಸೂಕ್ಷ್ಮಾಣು ಜೀವಿಗಳ ಚಟುವಟಿಕೆ ಅಬಾಧಿತವಾಗಿ ನಡೆಯುವಾಗ ಸಿಲಿಸಿಕ್ ಆ್ಯಸಿಡ್ ಆಗಿ ಪರಿವರ್ತಿತವಾಗುತ್ತದೆ. ಈ ಅಂಶ ಸಸ್ಯಗಳಿಗೆ ಅಗತ್ಯವಾಗಿ ಬೇಕು. ಇದು ಸ್ವಾಭಾವಿಕವಾಗಿಯೂ ಉತ್ಪಾದಿತವಾಗುತ್ತದೆ.ಮಣ್ಣಿನಲ್ಲಿ ಸಲ್ಫರ್ ಇದೆ ಅಥವಾ ನಾವೇ ಹಾಕಿರುತ್ತೇವೆ. ಮಳೆ ಬಂದ ನಂತರ ನಡೆಯುವ ಜೈವಿಕ ಪ್ರಕ್ರಿಯೆಯಲ್ಲಿ ಇದು ಸಲ್ಫೂರಿಕ್ ಆ್ಯಸಿಡ್ ಆಗುತ್ತದೆ. ನಂತರದ ಹಂತಗಳಲ್ಲಿ ಸಿಲಿಕಾನ್ ಜೊತೆ ರಿಯಾಕ್ಟ್ ಆಗಿ ಸಿಲಿಸಿಕ್ ಆ್ಯಸಿಡ್ ಆಗುತ್ತದೆ ಎಂದು ಸಂಶೋಧಕ ಲೋಕೇಶ್ ಮಕಂ ಹೇಳುತ್ತಾರೆ.
ಮಣ್ಣು ಒಣಗಿದಾಗ ಸಿಲಿಕಾನ್ ಡೈ ಆಕ್ಸೈಡ್ ಆಗುತ್ತದೆ. ಆಗ ಸಸ್ಯ ಬೆಳವಣಿಗೆ ಹೊಂದುವುದಿಲ್ಲ. ಆರ್ಗ್ಯಾನಿಕ್ ಸಿಲಿಕಾ ಅದು ಸಿಲಿಕಾನ್ ಡೈ ಆಕ್ಸೈಡ್ ಆಗುತ್ತದೆ. ಮಣ್ಣಿನಲ್ಲಿ ಸೂಕ್ಷ್ಮಾಣು ಜೀವಿಗಳಿದ್ದಾಗ ಇದನ್ನು ಆರ್ಥೋ ಸಿಲಿಸಿಕ್ ಆ್ಯಸಿಡ್ ಮಾಡುತ್ತವೆ. ಒಂದುವೇಳೆ ಕೃಷಿಭೂಮಿಯಲ್ಲಿ ರಾಸಾಯನಿಕ ಕೀಟನಾಶಕಗಳ ಅಂಶ ತೀವ್ರವಾಗಿದ್ದಾಗ ಈ ಪ್ರಕ್ರಿಯೆಗೆ ಬಾಧಕ ಉಂಟಾಗುತ್ತದೆ. ಏಕೆಂದರೆ ಅಲ್ಲಿ ಸೂಕ್ಷ್ಮಾಣುಗಳು ಇರುವುದಿಲ್ಲ.
ಸಸ್ಯಗಳಿಗೆ ಸಿಲಿಸಿಕ್ ಆ್ಯಸಿಡ್ ದಕ್ಕಿದಾಗ ಅದ್ಬುತ ಪ್ರತಿಕ್ರಿಯೆ ಕಂಡು ಬರುತ್ತದೆ. ಈ ಅಂಶ ಸಸ್ಯಗಳ ಕಾಂಡ ಮತ್ತು ಎಲೆಗಳ ಭಾಗಗಳಲ್ಲಿ ಸೇರುತ್ತದೆ. ಇದರಿಂದ ಸಸ್ಯಗಳ ಕಾಂಡಗಳಿಗೆ ದೀರ್ಘಕಾಲ ನೀರನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ದಕ್ಕುತ್ತದೆ. ಕಡಿಮೆ ನೀರಿನಲ್ಲಿಯೂ ಸಸ್ಯಗಳು ದೀರ್ಘಕಾಲ ಬದುಕುತ್ತವೆ. ಉದಾಹರಣೆಗೆ ಸಿಲಿಸಿಕ್ ಆ್ಯಸಿಡ್ ಅಂಶ ದಕ್ಕುವ ಮುನ್ನ ಸಸ್ಯವೊಂದಕ್ಕೆ 20 ಲೀಟರ್ ಬೇಕಿದ್ದರೆ ಅದು ದಕ್ಕಿದ ನಂತರ 5 ಲೀಟರ್ ನೀರೇ ಸಾಕಾಗುತ್ತದೆ. ಇದೊಂದು ಉದಾಹರಣೆ ಮಾತ್ರ.
ಕೆಲವರು ಪೌಡರ್ ರೂಪದಲ್ಲಿ ಸಿಲಿಸಿಕ್ ಆ್ಯಸಿಡ್ ಇರುತ್ತದೆ ಎನ್ನುತ್ತಾರೆ. ಆಗ ಅದರಲ್ಲಿ si, oH OH OH OH ಇರಬೇಕು. ಇದರಲ್ಲಿ ವ್ಯತ್ಯಾಸವಾದರೆ ಅದನ್ನು ಸಸ್ಯಗಳು ಇದನ್ನು ಹೀರಲು ಆಗುವುದಿಲ್ಲ. ಆದರೆ ಸಿಲಿಸಿಕ್ ಆ್ಯಸಿಡ್ ದ್ರವರೂಪದಲ್ಲಿ ಇದ್ದಾಗ ಅದನ್ನು ಸಸ್ಯಗಳು ಸಲೀಸಾಗಿ ಹೀರಿಕೊಂಡು ಸಮೃದ್ಧ ಬೆಳವಣಿಗೆ ಹೊಂದುತ್ತವೆ.
ಪ್ರಸ್ತುತ ಸಂದರ್ಭದಲ್ಲಿ ಸಸ್ಯಗಳಲ್ಲಿ ಸಿಲಿಸಿಕ್ ಆ್ಯಸಿಡ್ ಕೊರತೆ ಇದೆ. ಇದು ಅವುಗಳ ಬೆಳವಣಿಗೆ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡುತ್ತದೆ. ಆಗ ಸಿಲಿಕಾನ್ ಡೈ ಆಕ್ಸೈಡ್ ಸಸ್ಯಗಳ ಒಳಗೆ ಪ್ರವೇಶಿಸುತ್ತದೆ.ಆದ್ದರಿಂದ ಸಿಲಿಸಿಕ್ ಆ್ಯಸಿಡ್ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಇದಕ್ಕೆ ಅಡಿಪಾಯ ಎಂದರೆ ಮಾಗಿ ಉಳುಮೆ. ಕೃಷಿಭೂಮಿಗೆ ಅವಶ್ಯವಾಗಿ ನೀಡಬೇಕಾದ ಸಾವಯವ ಗೊಬ್ಬರಗಳನ್ನು ಹಾಕಿ ಅದು ಮಣ್ಣಿನಲ್ಲಿ ಚೆನ್ನಾಗಿ ಮಿಶ್ರಣವಾಗುವಂತೆ ಮಾಡಬೇಕು. ಮಣ್ಣು ಅಡಿಮೇಲಾಗಬೇಕು. ಅದಕ್ಕೆ ಬಿಸಿಲು ಬೀಳಬೇಕು.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 99008 00033