ಶತಮಾನಗಳಿಂದ ಎಲೆಕೋಸು, ಉತ್ತರ ಯುರೋಪಿಯಾನ್ ಪಾಕಪದ್ಧತಿಯ ಪ್ರಧಾನ ಆಹಾರ. ಆರೋಗ್ಯಕರ, ಕಡಿಮೆ ಕ್ಯಾಲೋರಿ, ಕಡಿಮೆ ಕಾರ್ಬೋಹೈಡ್ರೇಟ್, ಫೈಬರ್ ಭರಿತ ತರಕಾರಿ. ಇದರಿಂದ ಹಲವಾರು ವಿಭಿನ್ನ ರುಚಿ ಖಾದ್ಯ ಪದಾರ್ಥಗಳನ್ನು ಮಾಡಬಹುದು.
ಕಪ್ಪು ಕೊಳತೆ ರೋಗವು, ಕ್ಸಾಂಥೋಮೊನಾಸ್ ಕ್ಯಾಂಪೆಸ್ಟ್ರಿಸ್ ಪಿವಿ ಕ್ಯಾಂಪೆಸ್ಟ್ರಿಸ್ ಎಂಬ ದುಂಡಾಣುವಿನಿಂದ ಉಂಟಾಗುತ್ತದೆ. ಈ ರೋಗಾಣು ವಿಶ್ವಾದ್ಯಂತ ಎಲೆಕೋಸು ಮತ್ತು ಇತರ ಕ್ರೂಸಿಫರ್ ಬೆಳೆಗಳ ಗಮನಾರ್ಹ ರೋಗಕಾರಕ. ಮೊದಲಿಗೆ ಈ ರೋಗವನ್ನು ನ್ಯೂಯಾರ್ಕನಲ್ಲಿ 1893ರಲ್ಲಿ ಬರ್ನಿಪ್ ಬೆಳೆಯಲ್ಲಿ ಗುರುತಿಸಲಾಗಿತ್ತು. ತದನಂತರ ಎಲೆಕೋಸಿನ ಬೆಳೆಯಲ್ಲಿ ಗುರುತಿಸಲಾಯಿತ್ತು. ಈ ರೋಗಾಣುವಿನಿಂದ ಎಲೆಕೋಸಿನ ಇಳುವರಿ ಇಳುವರಿ ಕುಂಠಿತಗೊಳ್ಳುತ್ತದೆ. ಇದು ವಿಶ್ವಾದ್ಯಂತ ಎಲೆಕೋಸು ಬೆಳೆಗಾರರನ್ನು ಚಿಂತೆಗೀಡುಮಾಡಿದೆ. ರೋಗಕಾರಕವು ಬೆಚ್ಚಗಿನ, ಆದ್ರ್ರ ವಾತಾವರಣದಲ್ಲಿ ಬೆಳೆಯುತ್ತದೆ. ನೀರು, ಗಾಳಿ ಬೀಸಿದ ನೀರಿನ ಹನಿಗಳು ಮತ್ತು ಸೊಂಕಿತ ಹೊಲಗಳಿಂದ ಆರೋಗ್ಯಕರ ಹೊಲಗಳಿಗೆ ಚಲಿಸುವ ಮೂಲಕ ಸಸ್ಯದಿಂದ ಸಸ್ಯಕ್ಕೆ ಹರಡುತ್ತದೆ. ರೋಗಾಣುವು ಹಸಿರುಮನೆ ಅಥವಾ ಬೀಜದ ಹಾಸಿಗಳಲ್ಲಿ ಸಸ್ಯದ ಕಸಿ ಮಾಡುವ ಸಂದರ್ಭದಲ್ಲಿ ಅಧಿಕ ವೇಗದಲ್ಲಿ ಹರಡುತ್ತದೆ.
ರೋಗಕಾರಕವು ಬೀಜಗಳಲ್ಲಿ ತನ್ನ ರೋಗದ ಅಂಶವನ್ನು ಮುಂದಿನ ಬೆಳೆಗೆ ರವಾನೆ ಮಾಡುತ್ತದೆ. ಜೊತೆಗೆ ಕಳೆಬೆಳೆಗಳಾದ ಹಳದಿ ರಾಕೆಟ್, ಕೆಫರ್ಡ್ ಪರ್ಸ್, ಕಾಡುಸಾಸಿವೆ ಮತ್ತು ಇನ್ನಿತರ ತನ್ನದೆ ಜಾತಿಯ ಬೆಳೆಗಳಲ್ಲಿ ತನ್ನ ರೋಗಕಾರಕದ ಅವಶೇಷಗಳನ್ನು ವೃದ್ಧಿಗೊಳಿಸುತ್ತದೆ. ಹಾಗೆಯೇ ಹೊಲದಲ್ಲಿನ ಬೆಳೆ ಅವಶೇಷಗಳಲ್ಲಿಯೂ ಬದುಕಬಲ್ಲದು.
ನೀರು-ಸ್ಪ್ಲಾಶ್(ತುಂತುರು) ಹರಿಯುವ ನೀರು ಮತ್ತು ಸೊಂಕಿತ ಸಸ್ಯಗಳನ್ನು ನಿರ್ವಹಿಸುವುದರಿಂದ ಮತ್ತಷ್ಟು ಹರಡಲು ಅನುಕೂಲವಾಗುತ್ತದೆ. ಬ್ಯಾಕ್ಟೀರಿಯಾ/ದುಂಡಾಣವು ಮುಖ್ಯವಾಗಿ ಎಲೆಗಳ ಅಂಚಿನಲ್ಲಿರುವ ನೀರಿನ ರಂಧ್ರಗಳ (ಹೈಡಾಥೋಡ್) ಮೂಲಕ ಸಸ್ಯವನ್ನು ಪ್ರವೇಶಿಸುತ್ತದೆ. ಜೊತೆಗೆ ಗಿಡಗಳ ಮೂಲ ವ್ಯವಸ್ಥೆ ಮತ್ತು ಗಾಯಗಳ ಮೂಲಕವು ಪ್ರಸರವಾಗುತ್ತದೆ. ನಂತರ ಅವುಗಳ ದುಂಡಾಣುವು ನೀರಿನ ನಾಳಗಳ ಮೂಲಕ ಸಸ್ಯದ ಕಾಂಡ ಮತ್ತು ತಲೆಗೆ ಚಲಿಸುತ್ತದೆ. ರೋಗಾಣುವು ಸಸ್ಯದ ಮೊಳಕೆಯ ಹಂತ, ಬೆಳೆಯುವ ಹಂತ ಮತ್ತು ಶಿರೋನಾಮೆ ಹಂತಗಳಲ್ಲಿ (ಎಲೆಕೋಸು ಉತ್ಪಾದನೆಯಹಂತ) ರೋಗಬಾಧೆಯನ್ನು ಉಂಟುಮಾಡುತ್ತದೆ.
ರೋಗಬಾಧೆಯ ಲಕ್ಷಣಗಳು:
- ಮೊದಲಿಗೆ ಎಲೆಗಳು ಅಂಚಿನಲ್ಲಿ ಹಳದಿ ಬಣ್ಣದ ‘ವಿ’ ಆಕಾರದ ಗಾಯಗಳನ್ನು ಕಾಣಬಹುದು.
- ತದನಂತರ ಎಲೆಯ ರೋಗಪೀಡತ ಭಾಗವು ದುಂಡಾಣುವಿನ ವೃದ್ಧಿಯೊಂದಿಗೆ ರೋಗ ಪೀಡಿತ ಪ್ರದೇಶವನ್ನು ವಿಸ್ತರಿಸಿ ಕಂದು ಬಣ್ಣಕ್ಕೆ ತಿರುಗುತ್ತಿದ್ದಂತೆ, ಎಲೆಗಳ ರಕ್ತನಾಳಗಳು ಕಪ್ಪು ಬಣ್ಣಕ್ಕೆ ತಿರುಗುತ್ತದೆ.
- ನಂತರ ದುಂಡಾಣುವಿನ ಬಾಧೆಯಿಂದಾಗಿ ರೋಗ ಪೀಡಿತ ಎಲೆಗಳು ಕೊಳೆತು, ಕುಸಿಯುತ್ತದೆ.
- ತದನಂತರ ದುಂಡಾಣುವು ಸಸ್ಯದ ಕಾಂಡವನ್ನು ಪ್ರವೇಶಿಸಿ ನಾಳಿಯ ವ್ಯವಸ್ಥೆಯ ಮೂಲಕ ಸಸ್ಯದ ಎಲ್ಲಾ ಭಾಗಗಳಿಗೆ ಪ್ರಸಾರಿಸುತ್ತಿದೆ.
- ರೋಗಬಾಧಿತ ಸಸ್ಯದ ಕಾಂಡಗಳು ನಂತರ ರೋಗಬಾಧಿತ ಪ್ರದೇಶದಲ್ಲಿ ಮತ್ತು ಮಣ್ಣಿನ ಮೇಲ್ಮೈ ಬಳಿ ಕತ್ತರಿಸಿದಾಗ ಕಪ್ಪು ಬಣ್ಣಗಳ ಉಂಗುರವನ್ನು ತೋರಿಸುತ್ತದೆ.
- ರೋಗಾಣುವು ಸಸ್ಯದ ಬೇರುಗಳಿಗೆ ತಲುಪಿ, ನಾಳಿಯ ಕಟ್ಟು ಕಪ್ಪು ಬಣ್ಣಕ್ಕೆ ತಿರುಗಿ, ಒಣಗಿ ಸಾಯುತ್ತದೆ.
- ಸಂಗ್ರಹಣೆ ಸಮಯದಲ್ಲಿ ಎಲೆಕೋಸುವಿನ ಕೊಳೆತು ಕೆಟ್ಟ ವಾಸನೆ ಬರುತ್ತದೆ.
ನಿರ್ವಹಣಾ ಕ್ರಮಗಳು:
- ಪ್ರಮಾಣೀಕೃತ ರೋಗ ಮುಕ್ತ ಬೀಜವನ್ನು ಬಳಸುವಿಕೆ.
- ಬಿತ್ತನೆಯ ಬೀಜಗಳನ್ನು, ಬಿತ್ತುವ ಮೊದಲು ಬಿಸಿ ನೀರಿನಲ್ಲಿ 52’ಸೆ. ಉಷ್ಣಾಂಶದಲ್ಲಿ 30 ನಿಮಿಷಗಳ ಕಾಲ ಉಪಚರಿಸಿ ನಂತರ ದುಂಡಾಣುನಾಶಕವಾದ ಸ್ಟ್ರೆಪ್ಟೊಸೈಕ್ಲಿನ್ ದ್ರಾವಣದಲ್ಲಿ 30 ನಿಮಿಷ ಅದ್ಧಿ, ನೆರಳಿನಲ್ಲಿ ಒಣಗಿಸಿ ಬಿತ್ತಬೇಕು.
- ಅಧಿಕ ರೋಗಬಾಧಿತ ಪ್ರದೇಶದಲ್ಲಿ ಬೆಳೆ ಪರಿವರ್ತನೆ ಕೈಗೊಳ್ಳಬೇಕು (ಕನಿಷ್ಠ 2 ವರ್ಷದ ವರೆಗೆ ಎಲೆಕೋಸು ಜಾತಿಯ ಬೆಳೆ ಬೆಳೆಯಬಾರದು)
- ರೋಗ ನಿರೋಧಕ ತಳಿಯನ್ನು ಬೆಳೆಸಬೇಕು.
- ರೋಗದ ಬಾಧೆ ಅತಿಯಾದಾಗ ಬೆಳೆಗೆ 10 ಮಿ.ಗ್ರಾಂ ಅಗ್ರಿಮೈಸಿನ್-100 ಅಥವಾ 0.5 ಗ್ರಾಂ ಸ್ಟ್ರೆಪ್ಟೊಮೈಸಿನ್+3 ಗ್ರಾಂ ತಾಮ್ರದ ಆಕ್ಸಿಕ್ಲೋರೈಡ್ ಪ್ರತಿ ಲೀ. ನೀರಿಗೆ ಸೇರಿಸಿ ರೋಗಬಾಧಿತ ಬೆಳೆಗೆ ಸಿಂಪಡಿಸಬೇಕು.
- ಸೂಡೋಮೊನಾಸ್ ಫ್ಲೂರಾಸೆನ್ಸ್ ಅಥವಾ ಬ್ಯಾಸಿಲಸ್ ಸಬಲ್ಟಿಸ್ ಎಂಬ ದುಂಡಾಣು ಜೈವಿಕ ಪರಿಕರಗಳನ್ನು ಪ್ರತಿ ಕೆ.ಜಿ. ಬೀಜಕ್ಕೆ 5-6 ಗ್ರಾಂ ಬೆರಸಿ/ಸೇರಿಸಿ ಬಿತ್ತನೆ ಮಾಡಬೇಕು.
- ರೋಗಬಾಧಿತ ಬೆಳೆಗೆ 1 ಕೆ.ಜಿ. ಜೈವಿಕ ಪರಿಕರಗಳಾದ ಟ್ರೈಕೋಡರ್ಮ/ಸೂಡೋಮೊನಾಸ್ ಫ್ಲೂರಾಸೆನ್ಸ್/ಬ್ಯಾಸಿಲಸ್ ಸಬಲ್ಟಿಸ್ ಯನ್ನು 25 ಕೆ.ಜಿ. ಕೊಟ್ಟಿಗೆ ಗೊಬ್ಬರ/ಎರೆಹುಳು ಗೊಬ್ಬರದಲ್ಲಿ ಬೆರಿಸಿ ನಂತರ ಬಾಧಿತ ಪ್ರದೇಶಕ್ಕೆ ಹಾಕುವುದರಿಂದ ರೋಗದ ಹತೋಟಿಯನ್ನು ಮಾಡುವುದರ ಜೊತೆಗೆ ಬೆಳೆಯ ಸಮೃದ್ಧಿ ಮತ್ತು ಇಳುವರಿಯನ್ನು ಅಧಿಕ ಮಾಡಬಹುದು.
ಲೇಖಕರು: ಶೃತಿ, ಟಿ.ಹೆಚ್, ರಂಜನಾ ಜೋಶಿ, ರಶ್ಮಿ, ವಿ., ಕೃಷಿ ವಿಶ್ವವಿದ್ಯಾಲಯ ರಾಯಚೂರು