ಎಲ್ಲಿಯ ತನಕ ಉಣಲು ಬೇಕಾದ ಅಕ್ಕಿಯನ್ನು ಕೆಸರುಗದ್ದೆ ಮಾಡಿ ಬೆಳೆಯುತ್ತ ಇರುತ್ತೇವೊ ಅಲ್ಲಿಯವರೆಗೆ ಕರ್ನಾಟಕ (Karnataka) ಮತ್ತು ತಮಿಳುನಾಡು (Tamilnadu ನಡುವಿನ ಕಾವೇರಿ ನೀರು ಹಂಚಿಕೆ ವಿವಾದವನ್ನು (Kaveri water dispute) ಬಗೆಹರಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.
ವರ್ಷಪೂರ್ತಿ ನೀರು ನಿಲ್ಲಿಸಿ ಕೆಸರುಗದ್ದೆ (Mudland) ಮಾಡುವುದರಿಂದ ಎರಡೂ ರಾಜ್ಯಗಳ ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ಎಷ್ಟು ವಿಸ್ತೀರ್ಣದ ಮಣ್ಣು ಸವಳಾಗಿದೆ, ಎಕರೆವಾರು ಭತ್ತದ ಇಳುವರಿ ವರ್ಷದಿಂದ ವರ್ಷಕ್ಕೆ ಎಷ್ಟು ಪ್ರಮಾಣದ ಕುಸಿತ ಕಂಡಿದೆ
ಎರಡೂ ರಾಜ್ಯಗಳ ಕೆಸರುಗದ್ದೆಗಳಿಂದ ಎಷ್ಟು ಪ್ರಮಾಣದ ಮಿಥೇನ್ ಅನಿಲ ವಾತಾವರಣಕ್ಕೆ ಹೊಮ್ಮುತ್ತಿದೆ, ತಾಪಮಾನ ಹೆಚ್ಚಳ ಮತ್ತು ಮಳೆ ವರ್ತುಲದ ಮೇಲೆ ಈ ಮಿಥೇನ್ ಅನಿಲವು ಬೀರುತ್ತಿರುವ ಪರಿಣಾಮವೇನು ಎಂಬುದನ್ನು ನಾವು ಎಲ್ಲಿಯವರೆಗೆ ಅರ್ಥ ಮಾಡಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ತಮಿಳುನಾಡು ಮತ್ತು ಕರ್ನಾಟಕದ ನಡುವೆ ಇರುವ ಕಾವೇರಿ ನೀರು ಹಂಚಿಕೆ ವಿವಾದವನ್ನು ಬಗೆ ಹರಿಸಿಕೊಳ್ಳಲು ಸಾಧ್ಯವಾಗುವುದಿಲ್ಲ
ಕೆಸರುಗದ್ದೆ ಮಾಡದೆ,ಭತ್ತದ ಫಸಲಿನಲ್ಲಿ ವರ್ಷಪೂರ್ತಿ ನೀರು ನಿಲಿಸದೆಯೂ ಭತ್ತ ಬೆಳೆಯಬಹುದು ಎಂಬುದನ್ನು ಅರ್ಥ ಮಾಡಿಕೊಳುವ ತನಕ ಎರಡೂ ರಾಜ್ಯಗಳ ನಡುವಿನ ನೀರು ಹಂಚಿಕೆ ವಿವಾದವನ್ನು ಬಗೆಹರಿಸಿಕೊಳ್ಳಲಾಗುವುದಿಲ್ಲ
ಇದಿಷ್ಟೂ ಅರ್ಥವಾಗುವ ತನಕ “ಅವರು ಹಂಗೆ ಮಾಡಿದರೆ ನಾವು ಹಿಂಗೆ ಮಾಡುತ್ತೇವೆ” ಅಂತಾ ಅಂದ್ಕೊಂಡು ಕುಂತಿರುವುದರಿಂದ ಕಾವೇರಿ ನೀರಿನ ಹಂಚಿಕೆ ವಿವಾದ ಬಗೆಹರಿಯುತ್ತಿಲ್ಲ !
ಎರಡೂ ರಾಜ್ಯಗಳ ಅಚ್ಚುಕಟ್ಟು ಪ್ರದೇಶಗಳಲ್ಲಿ ಎಷ್ಟು ವಿಸ್ತೀರ್ಣದ ಮಣ್ಣು ಸವಳಾಗಿದೆ, ಈ ಸವಳಿನ ದೆಸೆ ಭತ್ತದ ಇಳುವರಿ ವರ್ಷದಿಂದ ವರ್ಷಕ್ಕೆ ಎಷ್ಟು ಕುಸಿಯುತ್ತಿದೆ ಎಂಬುದನ್ನು ಅಧ್ಯಯನಕ್ಕೆ ಒಳಪಡಿಸಿದರೆ ,ಸುಖಾಸುಮ್ಮನೆ ಪೊದೆ ಬಡಿಯುವ ಬದಲು ಇರುವ ಸಮಸ್ಯೆಯ ಮೂಲಕ್ಕೆ ಒಂದು ಅಂಗುಲವಾದರೂ ಹತ್ತಿರವಾಗುತ್ತೇವೆ