ಭಾರತೀಯ ಕೃಷಿರಂಗದಲ್ಲಿ ಸಾಮಾನ್ಯವಾಗಿ ಏಕಬೆಳೆ ಪದ್ಧತಿ ಅನುಸರಿಸುತ್ತಿರುವವರೇ ಹೆಚ್ಚು. ಬೆಳೆಗೆ ಕೀಟ ರೋಗ ಬಾಧೆ ಬಂದಾಗ ನಷ್ಟವುಂಟಾಗುತ್ತದೆ. ಬೆಳೆ ಚೆನ್ನಾಗಿ ಬಂದು ಮಾರುಕಟ್ಟೆಯಲ್ಲಿ ಬೆಲೆ ದೊರೆಯದಿದ್ದರೂ ಕಷ್ಟ. ಆದರೆ ಬಹುಬೆಳೆ ಪದ್ಧತಿ ಅನುಸರಿಸಿದಾಗ ಇಂಥ ನಷ್ಟವಾಗುವಿಕ ಇಲ್ಲವೇ ಇಲ್ಲ ಎನ್ನಬಹುದು.
ಈ ತೋಟ ಮಂಗಳೂರು ತಾಲ್ಲೂಕು, ಮೂಡಬಿದ್ರೆಯಿಂದ ಪೂರ್ವಕ್ಕೆ 17 ಕಿಲೋ ಮೀಟರ್ ದೂರದಲ್ಲಿ ಹುಳಿಯಾರು ರಸ್ತೆಯಲ್ಲಿರುವ ದರೆಗುಡ್ಡೆ ಗ್ರಾಮದಲ್ಲಿದೆ. ಇದರ ಮಾಲೀಕರು ರಾಜವರ್ಮ ಬೈಲಂಗಡಿ. ಕೃಷಿಯಲ್ಲಿ ಅಪಾರ ಆಸಕ್ತಿ ಹೊಂದಿದವರು. ನೌಕರಿಯಿಂದ ನಿವೃತ್ತಿಯಾದ ನಂತರ ಪೂರ್ಣ ಪ್ರಮಾಣದಲ್ಲಿ ಕೃಷಿಕರೇ ಆದರು. ಇದಕ್ಕೂ ಮುಂಚೆ ಈ ಕ್ಷೇತ್ರದ ಆಗುಹೋಗುಗಳ ಬಗ್ಗೆ ಆಳವಾದ ಅಧ್ಯಯನ ಮಾಡಿದ್ದರು.
ಬಹುಬೆಳೆ ಪದ್ಧತಿ ಅನುಸರಿಸಲು ನಿರ್ಧಾರ:
ಕೃಷಿಕರು ಎದುರಿಸುತ್ತಿರುವ ಸಮಸ್ಯೆಗೆ ಮೂಲ ಕಾರಣ ಯಾವುದು ಎಂಬುದು ಇವರ ಗಮನಕ್ಕೆ ಬಂದಿತ್ತು. ಆದ್ದರಿಂದ ಪೂರ್ಣ ಪ್ರಮಾಣದಲ್ಲಿ ಕೃಷಿ ಆರಂಭಿಸುವ ಬಗ್ಗೆ ಯೋಚಿಸಿದಾಗ ಬಹುಬೆಳೆ ಪದ್ಧತಿಯನ್ನೇ ಅನುಸರಿಸಬೇಕೆಂದು ನಿರ್ಧರಿಸಿದರು. ಈ ನಿಟ್ಟಿನಲ್ಲಿ ಸಾಕಷ್ಟು ಪೂರ್ವ ತಯಾರಿ ಮಾಡಿದರು. ಬೆಳೆ ಸಂಯೋಜನೆಗಳ ಬಗ್ಗೆ ತಿಳಿದುಕೊಂಡರು. ಬಳಿಕವೇ ವೈವಿಧ್ಯಮಯ ಸಸ್ಯಗಳನ್ನು ತಂದು ನಾಟಿ ಮಾಡಿದರು.
ಕರಾವಳಿ ಪ್ರದೇಶದಲ್ಲಿ ಗೇರುಕೃಷಿ ಸಾಮಾನ್ಯ. ಆದರೆ ಇತ್ತೀಚಿನ ವರ್ಷಗಳಲ್ಲಿ ಇದು ಪ್ರಾಮುಖ್ಯತೆ ಕಳೆದುಕೊಂಡಿತ್ತು. ಈಗಲೂ ಹೆಚ್ಚಿನ ರೈತರು ಇದಕ್ಕೆ ಪ್ರಾಮುಖ್ಯತೆ ಕೊಡುವುದಿಲ್ಲ. ಇದಕ್ಕೆ ಕಾರಣಗಳು ಹಲವಾರು. ಹೆಚ್ಚು ಇಳುವರಿ ಬರುವುದಿಲ್ಲ. ಪೋಷಕಾಂಶ ನೀಡಲು ಹಣ ಖರ್ಚು ಮಾಡುವುದು, ಇದರ ವಿವಿಧ ಕೆಲಸಗಳನ್ನು ಕೃಷಿ ಕಾರ್ಮಿಕರಿಂದ ಮಾಡಿಸಲು ಹಣ ವೆಚ್ಚ ಮಾಡಿದರೆ ಅದು ಲಾಭಾಂಶದಲ್ಲಿ ಹಿಂದಿರುಗಿ ಬರುವುದಿಲ್ಲ ಇತ್ಯಾದಿ. ಆದರೆ ಈ ತೋಟದಲ್ಲಿ ಗೇರು ಫಸಲು ದೊರಕಿದ ಆರಂಭಿಕ ವರ್ಷಗಳಲ್ಲಿಯೇ ಲಾಭದಾಯಕ ಎನಿಸಿದೆ. ಇದಕ್ಕೆ ಕಾರಣಗಳು ಹಲವಾರು. ಈ ತೋಟದಲ್ಲಿ ಮಾವಿನ ಗಿಡಗಳೂ ಇವೆ.
ವ್ಯವಸ್ಥಿತ ನರ್ಸರಿಯ ಪ್ರಯೋಜನ:
ಪ್ರಗತಿಪರ ಕೃಷಿಕ ರಾಜವರ್ಮ ಬೈಲಂಗಡಿ ಅವರು ಕೃಷಿಯಲ್ಲಿ ಏನೇನು ಮಾಡಿದರೆ ಲಾಭದಾಯಕ. ಏನು ಮಾಡಿದರೆ ನಷ್ಟ ಎಂಬುದರ ಬಗ್ಗೆಯೂ ಆಲೋಚಿಸುತ್ತಿರುತ್ತಾರೆ. ಗುಣಮಟ್ಟದ ಸಸಿಗಳನ್ನು ಮಾರಾಟ ಮಾಡುವುದರಿಂದಲೂ ಹೆಚ್ಚಿನ ಲಾಭಾಂಶ ಗಳಿಸಬಹುದು ಎಂದು ತಿಳಿದ ಕಾರಣ ಈ ನಿಟ್ಟಿನಲ್ಲಿಯೂ ತಮ್ಮನ್ನು ತೊಡಗಿಸಿಕೊಂಡರು. ನರ್ಸರಿ ಮಾಡುವುದರ ಬಗ್ಗೆ ಪ್ರಾಯೋಗಿಕ ಅನುಭವ ಪಡೆದರು. ನಂತರ ವೈವಿಧ್ಯಮಯ ಸಸ್ಯಗಳನ್ನು ಮಾರಾಟ ಮಾಡುವ ವೈಜ್ಞಾನಿಕ ಮಾದರಿ ನರ್ಸರಿ ಆರಂಭಿಸಿದರು.
ಈ ತೋಟ ಸುಮಾರು 12 ಎಕರೆ ವಿಸ್ತೀರ್ಣ ಹೊಂದಿದೆ. ಇಲ್ಲಿನ ಕಿಂಚಿತ್ತೂ ಜಾಗವನ್ನೂ ಇವರು ವ್ಯರ್ಥ ಮಾಡಿಲ್ಲ. ಪ್ರತಿಯೊಂದು ಬೆಳೆಯನ್ನು ಯೋಜನೆ ಮಾಡಿದ್ದಾರೆ. ಎಲೆ ಗೊಬ್ಬರ ಪಡೆಯುವುದಕ್ಕಾಗಿಯೇ ಸುಮಾರು 6 ಎಕರೆಯಲ್ಲಿ ಮರಗಳನ್ನು ಬೆಳೆಸಿದ್ದಾರೆ. ಇಲ್ಲಿ ಸಾಕಣೆ ಮಾಡಿರುವ ಹಸುಗಳನ್ನು ಇಲ್ಲಿ ಹುಲುಸಾಗಿ ಬೆಳೆದ ಹಸಿರು ಹುಲ್ಲು ಮೇಯಲು ಬಿಡುತ್ತಾರೆ. ಇಷ್ಟು ವಿಸ್ತಾರವಾದ ಜಮೀನಿನಲ್ಲಿ ಗಿಡ-ಮರ ಬೆಳೆಸಿರುವುದಕ್ಕೆ ಇನ್ನೂ ಸಾಕಷ್ಟು ಕಾರಣಗಳಿವೆ.
ಇವರು ಸಾಕಣೆ ಮಾಡುತ್ತಿರುವ ಹಸುಗಳಿಗೆ ವರ್ಷದಲ್ಲಿ ಸುಮಾರು 6 ತಿಂಗಳು ಹಸಿರುಮೇವಿಗೆ ಕೊರತೆಯಾಗುವುದಿಲ್ಲ. ಮಳೆಗಾಲದಲ್ಲಿ ಅಡಿಕೆ ತೋಟದಲ್ಲಿ ಬೆಳೆಯುವ ಹುಲ್ಲನ್ನು ಮೇಯಲು ಹಸುಗಳನ್ನು ಬಿಡುತ್ತಾರೆ. ಹೆಚ್ಚು ಎತ್ತರಕ್ಕೆ ಹುಲ್ಲು ಬೆಳೆದರೆ ಆಗಾಗ ಕತ್ತರಿಸಿ ಹಾಕುತ್ತಾರೆ. ಹಸಿರುಮೇವು ಪೂರೈಕೆಯಾಗುವ ಕಾರಣ ಹಸುಗಳು ನೀಡುವ ಹಾಲಿನ ಪ್ರಮಾಣವೂ ಹೆಚ್ಚಿಗೆ ಆಗುತ್ತದೆ ಎಂಬುದು ಇವರ ಅಭಿಪ್ರಾಯ
ತೋಟದಲ್ಲಿ ತಂತಾನೆ ಬೆಳೆಯುವ ಸಸ್ಯಗಳನ್ನು ಇವರು ಕಳೆಗಿಡಗಳೆಂದು ಭಾವಿಸುವುದಿಲ್ಲ. ಸಾಮಾನ್ಯವಾಗಿ ಅನೇಕ ರೈತರು ಕಳೆಗಿಡಗಳಿಗೆ ಕಳೆನಾಶಕ ಸಿಂಪಡಿಸಿ ಅದು ನಾಶವಾಗುವಂತೆ ಮಾಡುತ್ತಾರೆ. ಆದರೆ ಹೀಗೆ ಮಾಡುವುದರಿಂದ ಕಳೆನಾಶಕದ ಹಾನಿಕಾರಕ ಅಂಶ ಭೂಮಿಗೆ ಸೇರುತ್ತದೆ. ಬಹು ದೀರ್ಘಕಾಲ ಅದರ ಶೇಷಾಂಶ ಉಳಿಯುತ್ತದೆ. ಅದು ಅಂತರ್ಜಲಕ್ಕೂ ಸೇರ್ಪಡೆಯಾಗುತ್ತದೆ. ಮಳೆ ಬಂದಾಗ ಕೆರೆಕುಂಟೆಗಳಿಗೂ ಸೇರಿ ಮಾಲಿನ್ಯ ಉಂಟು ಮಾಡುತ್ತದೆ. ಜನ-ಜಾನುವಾರು ಕಲುಷಿತ ನೀರನ್ನೇ ಸೇವಿಸಬೇಕಾದ ಪರಿಸ್ಥಿತಿ ಉಂಟಾಗುತ್ತದೆ. ಆದ್ದರಿಂದ ಕಳೆನಾಶಕದ ಬಳಕೆ ಮಾಡಲೇಬಾರದು ಎಂದು ಪ್ರತಿಪಾದಿಸುತ್ತಾರೆ.
ತೋಟದಲ್ಲಿ ತಂತಾನೆ ಸಮೃದ್ಧವಾಗಿ ಬೆಳೆಯುವ ಸಸ್ಯಗಳೂ ಕೃಷಿಗೆ ವರದಾನ. ಅವುಗಳನ್ನು ಆಗಾಗ ಕತ್ತರಿಸಿ ಜಾನುವಾರುಗಳಿಗೆ ಹಾಕಬಹುದು. ಹೆಚ್ಚು ಪ್ರಮಾಣದಲ್ಲಿ ಇದ್ದರೆ ಕಾಂಪೋಸ್ಟ್ ಮಾಡಬಹುದು. ಇದರಿಂದ ಗಿಡಗಳಿಗೆ ಉತ್ತಮ ಪೋಷಕಾಂಶ ದೊರೆಯುತ್ತದೆ.ಇಂದಿನ ದಿನಗಳಲ್ಲಿ ಕೃಷಿಕಾರ್ಮಿಕರ ಕೊರತೆ ಇದೆ. ಆದ್ದರಿಂದ ಇವುಗಳನ್ನು ಬುಡಮಟ್ಟಕ್ಕೆ ಕತ್ತರಿಸಲು ಸಾಕಷ್ಟು ಯಂತ್ರೋಕರಣಗಳಿವೆ. ಅವುಗಳನ್ನು ಬಳಕೆ ಮಾಡಬೇಕು. ಎಂದು ಅಭಿಪ್ರಾಯಪಡುತ್ತಾರೆ.
ಪೋಷಕಾಂಶಗಳ ಖರೀದಿ ಹಣ ಉಳಿತಾಯ:
ಸಾಮಾನ್ಯವಾಗಿ ಕೃಷಿಕರು ಹೆಚ್ಚಿನ ಹಣ ಖರ್ಚು ಮಾಡುವುದು ಪೋಷಕಾಂಶಗಳಿಗಾಗಿ. ರಾಸಾಯನಿಕ ಗೊಬ್ಬರಗಳಿಗೆ ತರುವುದರಿಂದ ಕೃಷಿಯ ಲಾಭಾಂಶವೂ ಕಡಿಕೆಯಾಗುತ್ತಾ ಸಾಗುತ್ತಿದೆ. ಅದೂ ಅಲ್ಲದೇ ವರ್ಷದಿಂದ ವರ್ಷಕ್ಕೆ ತೋಟ-ಗದ್ದೆಗಳಿಗೆ ಅವುಗಳನ್ನು ಪೂರೈಸಬೇಕಾದ ಪ್ರಮಾಣವೂ ಹೆಚ್ಚಾಗುತ್ತಾ ಹೋಗುತ್ತದೆ. ಈ ಸಮಸ್ಯೆಗೆ ರಾಜವರ್ಮ ಬೈಲಂಗಡಿಯವರು ಪರಿಹಾರ ಕಂಡುಕೊಂಡಿದ್ದಾರೆ.
ಬಹುಬೆಳೆ ಕೃಷಿ ಪದ್ಧತಿ ಕಾರ್ಯಕ್ರಮಕ್ಕೆ ಮತ್ತೆ ಸ್ವಾಗತ. ವಿಸ್ತಾರವಾದ ತಮ್ಮ ತೋಟಕ್ಕೆ ಪೋಷಕಾಂಶಗಳನ್ನು ಖರೀದಿಸಿದರೆ ಕಿಂಚಿತ್ತೂ ಲಾಭಾಂಶ ಉಳಿಯುವುದಿಲ್ಲ. ಆದ್ದರಿಂದ ಈ ನಿಟ್ಟಿನಲ್ಲಿ ಸ್ವಾವಲಂಬಿಯಾಬೇಕು ಎಂದು ಚಿಂತಿಸಿದ ರಾಜವರ್ಮ ಬೈಲಂಗಡಿಯವರು ಅದನ್ನು ಸಾಧ್ಯವಾಗಿಸಿದ್ದಾರೆ… ಮಣ್ಣಿಗೆ ಬೇಕಾದ ಪೋಷಕಾಂಶಗಳನ್ನು ಸಾಧ್ಯವಾದಷ್ಟೂ ಮಟ್ಟಿಗೆ ತೋಟದಿಂದಲೇ ಪೂರೈಸಿಕೊಳ್ಳುತ್ತಾರೆ. ಆ ನಿಟ್ಟನಲ್ಲಿ ಇದೊಂದು ಸ್ವಾವಲಂಬಿ ತೋಟ.
ಸಾವಯವ ಪದ್ಧತಿ ಅಳವಡಿಕೆ:
ಕೃಷಿಕರು ಸಾಧ್ಯವಾದಷ್ಟೂ ಮಟ್ಟಿಗೆ ಸಾವಯವ ಕೃಷಿಪದ್ಧತಿಯನ್ನೇ ಅನುಸರಿಸಬೇಕು. ತೀರಾ ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಅತಿ ಅಗತ್ಯವೆನ್ನಿಸಿದ ರಾಸಾಯನಿಕ ಅಂಶಗಳನ್ನು ಬಳಕೆ ಮಾಡಬೇಕು ಎಂಬುದು ರಾಜವರ್ಮ ಬೈಲಂಗಡಿ ಅವರ ನಿಲುವು. ಇತ್ತೀಚಿನ ದಿನಗಳಲ್ಲಿ ಹೊಲ-ಗದ್ದೆ-ತೋಟಗಳಲ್ಲಿನ ಸಾವಯವ ಅಂಶ ಗಮನಾರ್ಹವಾಗಿ ಕುಗ್ಗಿದೆ. ಸಾವಯವ ಪರಿಕರಗಳು ಒದಗದಿರುವುದೇ ಇದಕ್ಕೆ ಕಾರಣ.
ಎಲ್ಲ ಬೆಳೆಗಳಿಗೂ ವರ್ಷದಲ್ಲಿ ಎರಡು ಅಥವಾ ಮೂರು ಬಾರಿ ಪೋಷಕಾಂಶ ನೀಡುವ ಅಗತ್ಯವಿಲ್ಲ. ಒಂದು ಬಾರಿ ಮಾತ್ರ ನೀಡಿದರೂ ಸಾಕು. ಕೆಲವೊಂದು ಬೆಳೆಗಳಿಗೆ ಎರಡು ವರ್ಷಕ್ಕೊಮ್ಮೆ ಪೋಷಕಾಂಶ ಒದಗಿಸುತ್ತಿದ್ದೇನೆ. ಇದರಿಂದ ಇಳುವರಿ ಪ್ರಮಾಣದಲ್ಲಿ ಗಮನಾರ್ಹ ವ್ಯತ್ಯಾಸ ಉಂಟಾಗಿಲ್ಲ. ಕೃಷಿ ಉತ್ಪನ್ನಗಳ ಮಾರಾಟದಿಂದ ಬರುವ ಹಣದಲ್ಲಿ ಹೆಚ್ಚೆಚ್ಚು ಪೋಷಕಾಂಶಗಳನ್ನು ಒದಗಿಸುವುದು ಸಾಧ್ಯವಾಗುವುದಿಲ್ಲ ಕೆಲವೊಂದು ಹಣ್ಣಿನ ಗಿಡಗಳಿಗೂ ಸ್ಥಳೀಯವಾಗಿಯೇ ದೊರಕುವ ತ್ಯಾಜ್ಯಗಳನ್ನಷ್ಟೆ ಪೋಷಕಾಂಶವಾಗಿ ನೀಡುತ್ತಾರೆ. ಮಾವಿನ ಬೆಳೆಗೂ ಪ್ರತಿವರ್ಷ ಗೊಬ್ಬರ ಹಾಕುವುದಿಲ್ಲ.
ಹಸು ಸಾಕಣೆ ಉದ್ದೇಶಗಳು:
ರಾಸಾಯನಿ ಗೊಬ್ಬರಗಳಿಂದ ಎಲ್ಲ ರೀತಿಯ ಪೋಷಕಾಂಶಗಳು ಮಣ್ಣಿಗೆ ಬೆಳೆಗೆ ದಕ್ಕುವುದಿಲ್ಲ. ಸಾಮಾನ್ಯವಾಗಿ ಹಸುಗಳನ್ನು ಹಾಲಿಗಾಗಿ ಸಾಕಣೆ ಮಾಡಲಾಗುತ್ತದೆ. ಆದರಿವರು ಕೊಟ್ಟಿಗೆ ಗೊಬ್ಬರದ ಸಲುವಾಗಿಯೇ ಬಹು ಮುತುವರ್ಜಿಯಿಂದ ಸಾಕಣೆ ಮಾಡುತ್ತಿದ್ದಾರೆ. ಮಣ್ಣು ಮತ್ತು ಸಸ್ಯಗಳಿಗೆ ಲಘು-ಘನ ಪೋಷಕಾಂಶಗಳು ಬೇಕು. ರಾಸಾಯನಿಕ ಗೊಬ್ಬರದಲ್ಲಿ ಹದಿನಾರು ಬಗೆಯ ಲಘು ಪೋಷಕಾಂಶಗಳು ಇರುವುದಿಲ್ಲ. ಇದು ಇರುವುದು ಸಾವಯವ ಗೊಬ್ಬರದಲ್ಲಿ. ಆದ್ದರಿಂದ ಉತ್ತಮ ರೀತಿಯಲ್ಲಿ ಕಾಂಪೋಸ್ಟ್ ಮಾಡಿದ ಕೊಟ್ಟಿಗೆ ಗೊಬ್ಬರವನ್ನು ನೀಡಬೇಕು ಎಂದು ಪ್ರತಿಪಾದಿಸುತ್ತಾರೆ.
ವಿದೇಶದ ತಳಿಗಳು ಹೆಚ್ಚಿನ ಪ್ರಮಾಣದ ಹಾಲು ಕೊಡುತ್ತವೆ. ಆದರೆ ಅವುಗಳನ್ನು ಸಾಕಲು ಅಷ್ಟೇ ಪ್ರಮಾಣದ ಹಣ ಖರ್ಚು ಮಾಡಬೇಕಾಗುತ್ತದೆ. ಅವುಗಳ ದೈಹಿಕ ಸ್ಥಿತಿ ಸೂಕ್ಷ್ಮ. ಅವುಗಳನ್ನು ಗಮನಿಸಿಲು ಹೆಚ್ಚಿನ ಜನ ಬೇಕು. ಅವುಗಳಲ್ಲಿ ರೋಗ ನಿರೋಧಕ ಶಕ್ತಿಯೂ ಕಡಿಮೆ. ಇದರಿಂದಾಗಿ ಔಷಧೋಪಚಾರಕ್ಕಾಗಿ ಹೆಚ್ಚಿನ ಹಣ ಖರ್ಚು ಮಾಡಬೇಕಾಗುತ್ತದೆ. ವಿಶೇಷ ಪಶು ಆಹಾರದ ಖರೀದಿಗೂ ಹೆಚ್ಚಿನ ಹಣ ಖರ್ಚು ಮಾಡಬೇಕು. ಆದ್ದರಿಂದ ಈ ಯಾವುದೇ ಉಸಾಬರಿ ಬೇಡವೆಂದು ಸ್ಥಳಿಯ ಗಿಡ್ಡ ತಳಿಗಳು, ಸ್ಥಳೀಯ ತಳಿ ಹಸುಗಳನ್ನೇ ಸಾಕಣೆ ಮಾಡುತ್ತಿದ್ದಾರೆ.
ಇಲ್ಲಿ ಹಾಲಿಗಾಗಿ ಹಸುಗಳನ್ನು ಸಾಕಣೆ ಮಾಡುತ್ತಿಲ್ಲ. ಇವರ ಮುಖ್ಯ ಗುರಿ ಕೊಟ್ಟಿಗೆ ಗೊಬ್ಬರಕ್ಕಾಗಿ ಸೆಗಣಿ ಪಡೆಯುವುದೇ ಆಗಿದೆ. ಹಾಲಿನ ಮಾರಾಟದಿಂದ ಬರುವುದು ಹೆಚ್ಚುವರಿ ಲಾಭ ಅಷ್ಟೆ. ಸಾವಯವ ಕೃಷಿ ಮಾಡಬೇಕು ಎಂದು ಬಯಸುವರು ತಮ್ಮ ಆರ್ಥಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ಹಸುಗಳನ್ನು ಸಾಕಬೇಕು. ವಿದೇಶಿ ತಳಿಗಳಿಗೆ ಮಾರು ಹೋಗುವುದಕ್ಕಿಂತ ಆಯಾ ಸ್ಥಳೀಯ ತಳಿಗಳ ಹಸುಗಳನ್ನೇ ಹೆಚ್ಚಾಗಿ ಸಾಕಣೆ ಮಾಡಬೇಕೆಂದು ಮತ್ತೆಮತ್ತೆ ಪ್ರತಿಪಾದಿಸುತ್ತಾರೆ.
ತರಕಾರಿ ಕೃಷಿಯ ವಿವಿಧ ಲಾಭಗಳು:
ಕೃಷಿಕರು ತಮ್ಮ ಮನೆಗೆ ಬೇಕಾದ ಹಾಲು, ತರಕಾರಿ ಮತ್ತು ಹಣ್ಣುಗಳನ್ನು ಹೊರಗಿನಿಂದ ಖರೀದಿಸಿ ತರಬಾರದು. ಏಕೆಂದರೆ ಕೃಷಿಕರಿಗೆ ಬರುವ ಲಾಭಾಂಶದ ಪ್ರಮಾಣ ಕಡಿಮೆ. ಆದ್ದರಿಂದ ಹಣವನ್ನು ಜತನದಿಂದ ಖರ್ಚು ಮಾಡಬೇಕು ಎನ್ನುವ ಇವರು ತರಕಾರಿ ಕೃಷಿಯನ್ನು ಮಾಡುತ್ತಿದ್ದಾರೆ. ಇದನ್ನು ಮುಖ್ಯ ಬೆಳೆಗಳ ನಡುವೆ ಹಾಕುತ್ತಾರೆ. ಮನೆ ಅಗತ್ಯ, ತೋಟ ನೋಡಿಕೊಳ್ಳಲು ಸಹಾಯ ಮಾಡುತ್ತಿರುವ ಕೃಷಿಕಾರ್ಮಿಕರ ಮನೆಗಳು ಮತ್ತು ಆತ್ಮೀಯರ ಮನೆಗಳಿಗೆ ಉಚಿತವಾಗಿ ನೀಡಲು ಅಗತ್ಯ ಇರುವಷ್ಟು ಪ್ರಮಾಣದ ತರಕಾರಿ ಬೆಳೆಯುತ್ತಿದ್ದಾರೆ. ಸೂಕ್ತ ಯೋಜನೆ ಮಾಡಿದರೆ ಲಭ್ಯ ಇರುವ ಜಮೀನಿನಲ್ಲಿ ಮಾರುಕಟ್ಟೆಗೆ ಕಳಿಸುವಷ್ಟು ಪ್ರಮಾಣದ ತರಕಾರಿಯನ್ನೂ ಬೆಳೆಯಬಹುದು ಅಂತಾರೆ
ಇಲ್ಲಿ ಭತ್ತದ ಕೃಷಿಯನ್ನು ಮಾಡಲಾಗುತ್ತಿದೆ. ಇಲ್ಲಿಯೂ ವೈಜ್ಞಾನಿಕ ಮಾದರಿಯನ್ನು ಅಳವಡಿಸಿಕೊಳ್ಳಲಾಗಿದೆ. ಶ್ರೀ ಅಥವಾ ಮಡಗಾಸ್ಕರ್ ಪದ್ಧತಿಯಲ್ಲಿ ಭತ್ತ ಬೆಳೆಯುತ್ತಿದ್ದಾರೆ. ಈ ರೀತಿ ಮಾಡುವುದರಿಂದ ಮೂರು ಎಕರೆ ವಿಸ್ತೀರ್ಣದಲ್ಲಿ ಪಡೆಯಬಹುದಾದ ಇಳುವರಿ ಪ್ರಮಾಣವನ್ನು ಒಂದೇ ಎಕರೆಯಲ್ಲಿ ಪಡೆಯಬಹುದು ಎಂಬುದು ಇವರ ಅನುಭವದ ಮಾತು. ಸಸಿಯಿಂದ ಸಸಿಗೆ ಹೆಚ್ಚು ಅಂತರ ನೀಡಬೇಕು. ಇದರಿಂದ ಭತ್ತದ ಸಸ್ಯದಲ್ಲಿ ಅತ್ಯಧಿಕ ತೆಂಡೆಗಳು ಮೂಡುತ್ತವೆ. ನೀರನ್ನು ಅತೀ ಕಡಿಮೆ ಪ್ರಮಾಣದಲ್ಲಿ ನೀಡಿದ ಸಾಕಾಗುತ್ತದೆ ಎನ್ನುತ್ತಾರೆ. ಇಂಥ ವೈಜ್ಞಾನಿಕ ಮಾದರಿ ಕೃಷಿಯ ಬಗ್ಗೆ ಆಕಾಶವಾಣಿಯಲ್ಲಿ ಸಾಕಷ್ಟು ಕಾರ್ಯಕ್ರಮಗಳನ್ನು ನೀಡಿ ಕೃಷಿ ಸಮುದಾಯಕ್ಕೆ ಮಾಹಿತಿ ತಲುಪಿಸುತ್ತಿದ್ದಾರೆ.
ಎಲ್ಲೆಡೆ ದಿನದಿಂದ ದಿನಕ್ಕೆ ಅಂತರ್ಜಲದ ಪ್ರಮಾಣ ಕುಗ್ಗುತ್ತಿದೆ. ಆದ್ದರಿಂದ ಭೂಮಿಯಲ್ಲಿ ನೀರಿಂಗಿಸುವ ಯೋಜನೆಗಳ ಜೊತೆಗೆ ಅತೀ ಕಡಿಮೆ ನೀರು ಸಾಕಾಗುವಂಥ ಮಾದರಿಗಳನ್ನು ಅಳವಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಶ್ರೀ ಅಥವಾ ಮಡಗಾಸ್ಕರ್ ಪದ್ಧತಿ ಅನುಕೂಲಕರ. ತೋಟಕ್ಕೆ ನೀರು ಹಾಯಿಸಲು ಹನಿ ನೀರಾವರಿ ಪದ್ಧತಿ ಅತ್ಯಂತ ಸೂಕ್ತ. ದ್ರವಗೊಬ್ಬರವನ್ನೂ ಹನಿ ನೀರಾವರಿ ಮುಖಾಂತರವೇ ನೀಡಬಹುದು. ಇದರಿಂದ ಹೆಚ್ಚು ವಿಸ್ತೀರ್ಣಕ್ಕೆ ಕಡಿಮೆ ಪೋಷಕಾಂಶ ಸಾಕಾಗುತ್ತದೆ ಎಂದು ತಿಳಿಸುತ್ತಾರೆ.
ತೋಟದ ಅಂಚಿನ ಸುತ್ತಲೂ ಹಣ್ಣಿನ ಗಿಡಗಳನ್ನು ನೆಟ್ಟು ಬೆಳೆಸಬೇಕು. ನಾನು ತೋಟದ ಬಾರ್ಡರ್ ನಲ್ಲಿ ಹಲಸಿನ ಗಿಡಗಳನ್ನು ಹಾಕಿದ್ದೇನೆ. ಇವುಗಳನ್ನು ಅತಿ ಕಡಿಮೆ ಖರ್ಚಿನಲ್ಲಿ ಬೆಳೆಸಬಹುದು. ಹೆಚ್ಚು ಆದಾಯ ಪಡೆಯಬಹುದು. ಇಂದು ಹಲಸು ಮೌಲ್ಯವರ್ಧನೆಗೆ ಹೆಚ್ಚು ಅವಕಾಶಗಳಿವೆ. ದಕ್ಷಿಣ ಕನ್ನಡ ಜಿಲ್ಲೆಯ ಹೆಚ್ಚಿನ ಜನ ಇದರಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಆದ್ದರಿಂದ ಕೃಷಿಕರು ಇಂಥ ಹಣ್ಣಿನ ಮರ ನೆಡಲು ಮರೆಯಬಾರದು ಎನ್ನುತ್ತಾರೆ.
ವಾಣಿಜ್ಯ ಬೆಳೆಗಳನ್ನು ಬೆಳೆಯಬೇಕು. ಇತ್ತೀಚಿನ ವರ್ಷಗಳಲ್ಲಿ ಅಡಿಕೆಗೆ ಉತ್ತಮ ಧಾರಣೆ ದೊರೆಯುತ್ತಿದೆ. ದರೆಗುಡ್ಡದ ತೋಟದಲ್ಲಿ ಅಡಿಕೆ ಕೃಷಿಯನ್ನೂ ಪ್ರಮುಖವಾಗಿ ಮಾಡುತ್ತಿದ್ದಾರೆ. ಇಲ್ಲಿ ಎರಡು ರೀತಿ ಲಾಭ ಪಡೆಯುತ್ತಿದ್ದಾರೆ. ಹೀಗೆ ಮಾಡುವುದರಿಂದ ಸುಸ್ಥಿರ ಕೃಷಿ ಸಾಧ್ಯವಾಗುತ್ತದೆ ಎನ್ನುತ್ತಾರೆ.
ಅಡಿಕೆ ತೋಟದಲ್ಲಿ ಒಂದು ಗಿಡದಿಂದ ಮತ್ತೊಂದು ಗಿಡಕ್ಕೆ 9 ಅಡಿ ಅಂತರ ನೀಡಿದ್ದಾರೆ. ಇಷ್ಟು ಅಂತರ ನೀಡುವುದರಿಂದ ಪೋಷಕಾಂಶ, ನೀರು ಪಡೆಯಲು ಗಿಡಗಳ ಬೇರುಗಳ ನಡುವೆ ಪೈಪೋಟಿ ಉಂಟಾಗುವುದಿಲ್ಲ. ಇಷ್ಟು ಅಂತರ ನೀಡಿದರೆ ಒಂದು ಎಕರೆಯಲ್ಲಿ 500 ಸಸಿಗಳನ್ನು ಕೂರಿಸಲು ಸಾಧ್ಯ
ತೋಟದಲ್ಲಿ ಉತ್ತಮ ತೇವಾಂಶ ಕಾಪಾಡಿಕೊಂಡರೆ ಅಡಿಕೆ ಗಿಡಗಳಿಗೆ ಮೆಣಸಿನ ಬಳ್ಳಿ ಹಬ್ಬಿಸಬಹುದು. ಇವುಗಳತ್ತ ಗಮನ ನೀಡಿದರೆ ಹೆಚ್ಚು ಇಳುವರಿ ಪಡೆಯಲು ಸಾಧ್ಯ. ರೋಗ- ಕೀಟಬಾಧೆಗೆ ಅವಕಾಶ ನೀಡಬಾರದು. ಒಂದು ವೇಳೆ ಅದು ಉಂಟಾದರೆ ತಕ್ಷಣ ನಿವಾರಕ ಕ್ರಮಗಳನ್ನು ತೆಗೆದುಕೊಳ್ಳಬೇಕು
ದರೆಗುಡ್ಡೆಯ ಈ ತೋಟದಲ್ಲಿ ಅನಾನಸ್ ಕೂಡ ಪ್ರಮುಖ ಬೆಳೆ. ಇತ್ತೀಚಿನ ವರ್ಷಗಳಲ್ಲಿ ಅನಾನಸ್ ಹಣ್ಣಿನ ಮೌಲ್ಯವರ್ಧನೆ ಅಪಾರ ಪ್ರಮಾಣದಲ್ಲಿ ನಡೆಯುತ್ತಿದೆ. ಸ್ಥಳೀಯ, ಜಿಲ್ಲಾ, ರಾಜ್ಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಮಾರುಕಟ್ಟೆಯಿದೆ. ಇದರ ಕೃಷಿಯನ್ನು ಮಾಡಲು ತಗುಲುವ ವೆಚ್ಚವೂ ಕಡಿಮೆ. ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡರೆ ಕೀಟ-ರೋಗಬಾಧೆ ಕೂಡ ಇರುವುದಿಲ್ಲ
ಅನಾನಸಿಗೆ ಅಧಿಕ ಕೃಷಿಕಾರ್ಯಗಳ ಅಗತ್ಯ ಬೀಳುವುದಿಲ್ಲ. ಸುತ್ತಲೂ ಮುಳ್ಳುಗಳಿರುವ ಕಾರಣ ಜಾನುವಾರುಗಳೂ ಸಾಮಾನ್ಯವಾಗಿ ಇದಕ್ಕೆ ಬಾಯಿ ಹಾಕುವುದಿಲ್ಲ. ವರ್ಷದ ಎಲ್ಲ ದಿನಗಳಲ್ಲಿಯೂ ಈ ಹಣ್ಣಿಗೆ ಬೇಡಿಕೆ ಇರುತ್ತದೆ. ವಿಶೇಷವಾಗಿ ಜ್ಯೂಸ್ ಮಾಡಲು ಬಳಸುತ್ತಾರೆ. ಹಣ್ಣಿನ ಸ್ಲೈಸ್ ಗಳು ವಿಶೇಷ ಡಬ್ಬಗಳಲ್ಲಿ ಪ್ಯಾಕ್ ಆಗಿ ರವಾನೆಯಾಗುತ್ತವೆ. ಜಾಮ್, ಜೆಲ್ಲಿ ತಯಾರಿಕೆಗೂ ಈ ಹಣ್ಣನ್ನು ಹೆಚ್ಚಾಗಿ ಬಳಸುತ್ತಾರೆ
ಕೃಷಿಕರು ಬೆಳೆದ ಬೆಳೆಗಳಿಗೆ ಮಾರುಕಟ್ಟೆ ಅಗತ್ಯ. ಹತ್ತಿರದಲ್ಲಿಯೇ ಮಾರುಕಟ್ಟೆ ದೊರಕಿದರೆ ಸಾಗಣೆ ಖರ್ಚು ಉಳಿತಾಯವಾಗುತ್ತದೆ. ಈ ನಿಟ್ಟಿನಲ್ಲಿ ರಾಜವರ್ಮ ಬೈಲಂಗಡಿಯವರು ಸಾಕಷ್ಟು ಶ್ರಮಿಸಿದ್ದಾರೆ. ಇವರು ಮತ್ತು ಇವರ ಕೃಷಿ ಸಂಗಾತಿಗಳ ಪರಿಶ್ರಮ-ಸಹಕಾರದಿಂದ ಸ್ಥಳೀಯವಾಗಿಯೇ ಅತ್ಯುತ್ತಮ ಮಾರುಕಟ್ಟೆ ಅಭಿವೃದ್ಧಿಯಾಗಿದೆ.
ದರೆಗುಡ್ಡೆಯ ಈ ತೋಟದಲ್ಲಿ ಸಮೃದ್ಧಕೃಷಿ ನಡೆಯುತ್ತಿದೆ. ಇದಕ್ಕೆ ಕಾರಣ ರಾಜವರ್ಮ ಬೈಲಂಗಡಿಯವರ ಉತ್ಸಾಹ ಮತ್ತು ಇಲ್ಲಿಯೇ ಇರುವ ಕೃಷಿ ಕಾರ್ಮಿಕರಾದ ಚಂದ್ರಪ್ಪ ಮತ್ತು ಚಂದ್ರಮ್ಮ ಮತ್ತು ಮಕ್ಕಳ ಬದ್ಧತೆಯೂ ಕಾರಣವಾಗಿದೆ. ಇವರ ಬಗ್ಗೆ ಬೈಲಂಗಡಿಯವರು ಬಹಳ ಪ್ರಶಂಸೆ ಮಾತುಗಳನ್ನಾಡುತ್ತಾರೆ. ಇವರೆಲ್ಲರ ಪರಿಶ್ರಮದಿಂದ ಇತರ ಕೃಷಿಕರು ಬಂದು ಅಧ್ಯಯನ ಮಾಡುವ ಮಟ್ಟಿಗೆ ಇದೊಂದು ಮಾದರಿ ತೋಟವಾಗಿದೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 9845276622