ಲೇಖಕರು: ಡಾ. ಶ್ರೀಧರ್ ಎನ್.ಬಿ. ಹಿರಿಯ ಪಶುವೈದ್ಯರು

ಗಾಳಿಪುರದ ಗಣೇಶರವರ ದೂರವಾಣಿ. ಅವರ ಮನೆಯ ಹೆಚ್ ಎಫ್ ದನ ಕಳೆದ ನಾಲ್ಕು ದಿನಗಳಿಂದ ಜಪ್ಪಯ್ಯ ಅಂದರೂ ಸಹ ಮೇವು ನೀರು ಮುಟ್ತಿಲ್ಲ. ಸುಡುವ ಜ್ವರವೂ ಇದ್ದ ಹಾಗೇ ಇದೆ. ಹೀಟಾಗಿದೆ ಅಂತ ತಂಪು ಮಾಡಲಿಕ್ಕೆ ರಾಗಿ ಗಂಜಿ ಕುಡಿಸಿದರೂ ಏನೂ ಕಡಿಮೆ ಆಗ್ತಿಲ್ಲ. ಚಿಕಿತ್ಸೆಗೆ ಬರ್ತೀರಾ?. ದೂರವಾಣಿಯಲ್ಲೇ “ದನದ ಮೂತ್ರ ಯಾವ ಬಣ್ಣದ್ದಿದೆ. ಗಮನಿಸಿದ್ದೀರಾ? ಸಾಧ್ಯವಾದರೆ ಅದು ಮೂತ್ರ ಮಾಡುವಾಗ ಸ್ವಚ್ಚ ಬಾಟಲಿಯಲ್ಲಿ ಹಿಡಿದಿಡಿ” ಎಂದೆ. ಅವರು “ಇಲ್ಲ ಸಾರ್ ನೋಡಿ ಹೇಳ್ತೇನೆ” ಎಂದರು. ಇಪ್ಪತ್ತು ನಿಮಿಷ ಬಿಟ್ಟು “ ಮೂತ್ರ ಕೆಂಪಗೇ ಇದೆ” ಎಂದರು. ನಾನು “ಸರಿ ಅದರ ಬಣ್ಣ ಅಡಿಕೆ ತೊಗರಿನ ಅಥವಾ ಕಾಫಿ ಡಿಕಾಕ್ಷನ್ ಹಾಗೇ ಕೆಂಪಗಿದೆಯೋ? ಅಥವಾ ಕುಂಕುಮ ಕದಡಿಡ ಹಾಗೇ ಕೆಂಪಗಿದೆಯೋ? ಎಂದು ಕೇಳಿದೆ. ಅವರು ಅಡಿಕೆ ತೊಗರಿನ ಬಣ್ಣ ಇದೆ ಸಾರ್” ಅಂದರು.
ಕಾಯಿಲೆ ಪತ್ತೆಯಾಗಿ ಹೋಯಿತು ಅನಿಸಿತು. ಇದು ಬೇಸಿಗೆಯಲ್ಲಿ ಉಣುಗು ಅಥವಾ ಉಣ್ಣೆ ಬಾಧೆಯಿಂದ ಉಂಟಾಗುವ ರಕ್ತಕಣಗಳನ್ನು ಒಡೆದು ಬಿಸಾಡಿ ಹಿಮೋಗ್ಲೋಬಿನ್ ಅಂಶವನ್ನು ಮೂತ್ರದಲ್ಲಿ ಹೊರಹಾಕುವ “ಬೆಬೆಸಿಯೋಸಿಸ್” ಎಂಬ ಕಾಯಿಲೆಯಿಂದ ಬಂದ “ಹೀಮೋಗ್ಲೋಬಿನ್ಯುರಿಯಾ” ಎಂಬ ಲಕ್ಷಣ. ಹೀಗೆಯೇ ಅನೇಕ ರೀತಿಯ ಕಾಯಿಲೆಗಳಲ್ಲಿ ಜಾನುವಾರಿನ ಮೂತ್ರವು ಕೆಂಪಗೇ ಅಥವಾ ಕಡು ಕಂದು ಟಿ/ಕಾಫಿ ಡಿಕಾಕ್ಷನ್ ಬಣ್ಣದಲ್ಲಿ ಕಾಣಸಿಗುತ್ತದೆ.


ಜಾನುವಾರುಗಳಲ್ಲಿ ಹಲವಾರು ಬಾರಿ ಮೂತ್ರವನ್ನು ಗಮನಿಸಿದಾಗ ಅವು ಕೆಂಪಗೇ ಅಥವಾ ಕಾಫಿû ಡಿಕಾಕ್ಷನ್ ಬಣ್ಣದ್ದಾಗಿರುತ್ತವೆ. ಇದನ್ನು ರಕ್ತ ಮೂತ್ರ ಅಂತ ಆಡು ಭಾಷೆಯಲ್ಲಿ ಕರೆಯಬಹುದು. ಆದರೆ ತಾಂತ್ರಿಕವಾಗಿ ಅಥವಾ ವೈಜ್ಞಾನಿಕವಾಗಿ ಹೇಳಬೇಕೆಂದರೆ, ರಕ್ತ ಕಣಗಳು ಮೂತ್ರದಲ್ಲಿ ಬರುತ್ತಿದ್ದರೆ ಅದನ್ನು ಹೆಮೆಚೂರಿಯಾ ಎಂದೂ ಹಾಗೂ ರಕ್ತ ಕಣಗಳು ಒಡೆದು ಹಿಮೋಗ್ಲೋಬಿನ್ ಅಂಶ ಮೂತ್ರದಲ್ಲಿ ಬರುತ್ತಿದ್ದರೆ ಅದನ್ನು ಹಿಮೋಗ್ಲೋಬಿನ್ಯುರಿಯಾ ಎಂದು ಕರೆಯುತ್ತಾರೆ. ಹೆಮೆಚೂರಿಯಾದಲ್ಲಿ ಮೂತ್ರವು ಕಡು ಕೆಂಪು ಬಣ್ಣದಲ್ಲಿದ್ದರೆ, ಹಿಮೋಗ್ಲೋಬಿನ್ಯುರಿಯಾದಲ್ಲಿ ಮೂತ್ರವು ಕಾಫಿû ಬಣ್ಣ ಅಥವಾ ಕಡು ಕಂದು ಬಣ್ಣದಲ್ಲಿರುತ್ತದೆ. ಇವೆರಡಕ್ಕೆ ತುಂಬಾ ವ್ಯತ್ಯಾಸವಿದ್ದರೂ ಸಹ ಆಡು ಭಾಷೆಯಲ್ಲಿ ಎರಡಕ್ಕೂ ರಕ್ತ ಮೂತ್ರವೆಂದೇ ಕರೆಯುತ್ತಾರೆ. ಹೆಮೆಚೂರಿಯಾ ಅಥವಾ ಮೂತ್ರದಲ್ಲಿ ರಕ್ತಕಣಗಳು ಬರಲು ಹಲವಾರು ಕಾರಣಗಳಿದ್ದರೂ ಸಹ ಮೂತ್ರಜನಕಾಂಗಕ್ಕೆ ಧಕ್ಕೆಯಾದಾಗ, ಮೂತ್ರನಾಳಗಳು ಒಡೆದು ಹೋದಾಗ, ಮೂತ್ರ ಕೋಶಗಳು ಸೋಂಕಿಗೆ ಒಳಗಾದಾಗ, ಮೂತ್ರಜನಕಾಂಗದ ಯಾವುದೇ ಭಾಗದಲ್ಲಿ ಮೂತ್ರ ಕಲ್ಲುಗಳು ಬೆಳೆದು ಅವು ಧಕ್ಕೆಯುಂಟು ಮಾಡಿದಾಗ ಮೂತ್ರದಲ್ಲಿ ಶುದ್ಧ ರಕ್ತ ಬರುತ್ತದೆ. ಮಯೋಗ್ಲೋಬಿನ್ಯೂರಿಯಾದಲ್ಲಿ ಮೂತ್ರದಲ್ಲಿ ಮಯೋಗ್ಲೋಬಿನ್ ಅಂದರೆ ಮಾಂಸಖಂಡಗಳಿಂದ ಸ್ರಾವವಾದ ತಿಳಿಕಂದು ಬಣ್ಣದ ವಸ್ತು ವಿಸರ್ಜನೆಯಾಗುತ್ತದೆ. ಇದು ಸೆಲೆನಿಯಂ ಅಂಶ ಕಡಿಮೆಯಾದರೂ ಸಹ ಆಗುತ್ತದೆ.


ಇಲ್ಲಿ ನಾವು ಚರ್ಚೆ ಮಾಡಲು ಹೊರಟಿರುವುದು ಜಾನುವಾರುಗಳಲ್ಲಿ ಬಹಳ ಸಾಮಾನ್ಯವಾದ ಹಿಮೋಗ್ಲೋಬಿನ್ ಅಂಶ ಮೂತ್ರದಲ್ಲಿ ಬರುವ “ಹಿಮೋಗ್ಲೋಬಿನ್ಯುರಿಯಾ” ಇದರ ಬಗ್ಗೆ. ಇದನ್ನು ಜನಸಾಮಾನ್ಯರಿಗೆ ಅರ್ಥವಾಗುವ ಹಾಗೇ “ರಕ್ತ ಮೂತ್ರ”ವೆಂದೇ ಕರೆದು ಇದರ ಬಗ್ಗೆ ಮಾಹಿತಿ ನೀಡೋಣ.
ಏನಿದು ರಕ್ತ ಮೂತ್ರ?
ಹಲವಾರು ಕಾರಣಗಳಿಂದ ಜಾನುವಾರಿನ ಶರೀರದ ಕೆಂಪು ರಕ್ತ ಕಣಗಳು ಒಡೆದು, ಅದರಲ್ಲಿನ ಹಿಮೋಗ್ಲೋಬಿನ್ ಅಂಶವು ಮೂತ್ರದಲ್ಲಿ ವಿಸರ್ಜನೆಗೊಳ್ಳುತ್ತದೆ. ಈ ರೀತಿ ರಕ್ತಕಣಗಳು ಒಡೆದಾಗ ಅವುಗಳಲ್ಲಿನ ಹೀಮೊಗ್ಲೋಬಿನ್ ಅಂಶವು ಮೂತ್ರಕ್ಕೆ ಕಾಫಿ ಬಣ್ಣ ಅಥವಾ ಕಡು ಕಂದು ಬಣ್ಣವನ್ನು ನೀಡುತ್ತದೆ. ಈ ರೀತಿ ರಕ್ತ ಕಣಗಳು ಒಡೆಯಲು ಸೋಂಕು ರೋಗಗಳು, ಪೋಷಕಾಂಶಗಳ ಕೊರತೆ, ವಿವಿಧ ವಿಷ ಬಾಧೆಗಳು ಮತ್ತು ಕೆಲವು ರೀತಿಯ ಔಷಧಿಗಳನ್ನು ನೀಡುವುದು ಪ್ರಮುಖವಾದ ಕಾರಣಗಳಾಗಬಹುದು.
ಅ) ವಿವಿಧ ರೋಗಗಳು ಯಾವವು?
ಬೆಬೆಸಿಯೋಸಿಸ್ ಎಂಬುದು ಮಿಶ್ರತಳಿಯ ಜಾನುವಾರುಗಳಲ್ಲಿ ಅತ್ಯಂತ ಸಾಮಾನ್ಯವಾಗಿ ರಕ್ತ ಮೂತ್ರವನ್ನುಂಟು ಮಾಡುವ ಉಣ್ಣೆಗಳಿಂದ ಹರಡುವ ಒಂದು ಕಾಯಿಲೆ. ಪ್ರಾರಂಭಿಕ ಹಂತದಲ್ಲಿ ತುಂಬಾ ಜ್ವರವಿರುವ ಈ ಕಾಯಿಲೆಯಲ್ಲಿ ಕೆಂಪು ರಕ್ತಕಣವನ್ನು ಸೇರಿಕೊಳ್ಳುವ ರೋಗಾಣುಗಳು ಕೆಂಪು ರಕ್ತ ಕಣದ ಪದರವನ್ನು ತೆಳುಗೊಳಿಸಿ ಅವು ಒಡೆದು ಹೋಗುವ ಹಾಗೇ ಮಾಡುತ್ತವೆ. ಹೀಗೆ ಕೆಂಪು ರಕ್ತ ಕಣಗಳು ಒಡೆದು ಹೋದಾಗ ರಕ್ತ ಕಣದಲ್ಲಿನ ಅಮ್ಲಜನಕವನ್ನು ಹೀರಿಕೊಳ್ಳುವ ಶಕ್ತಿ ಹೊಂದಿರುವ ಹೀಮೋಗ್ಲೋಬಿನ್ ಅಂಶವು ಆಚೆ ಬಂದು ಮೂತ್ರಜನಕಾಂಗದ ಮೂಲಕ ವಿಸರ್ಜಿಸಲ್ಪಟ್ಟು ಮೂತ್ರದಲ್ಲಿ ಬಂದು ಮೂತ್ರಕ್ಕೆ ಕಾಫಿ ಬಣ್ಣವನ್ನು ನೀಡುತ್ತದೆ. ನಂತರ ಈ ಕಾಯಿಲೆಯಲ್ಲಿ ಕಾಮಾಲೆಯಾಗುತ್ತದೆ.
ಈ ಕಾಯಿಲೆಗೆ ಪ್ರಾರಂಭಿಕ ಹಂತದಲ್ಲಿ ಉತ್ತಮವಾದ ಚಿಕಿತ್ಸೆಯಿದ್ದು, ತಜ್ಞ ಪಶುವೈದ್ಯರು ಇದನ್ನು ಮಾಡಿ ಕಾಯಿಲೆಯನ್ನು ಗುಣಪಡಿಸಿದರೆ “ರಕ್ತ ಮೂತ್ರ” ವು 2-4 ದಿನಗಳಲ್ಲಿ ಕ್ರಮೇಣ ಕಡಿಮೆಯಾಗುತ್ತಾ ನಂತರ ನಿಂತು ಹೋಗುತ್ತದೆ. ಆದರೆ ಚಿಕಿತ್ಸೆಯನ್ನು ಸೂಕ್ತ ಸಮಯದಲ್ಲಿ ಮಾಡಿಸದೇ ಹೋದರೆ, ಜಾನುವಾರು ತೀವ್ರವಾದ ರಕ್ತ ಹೀನತೆಯಿಂದ ಬಳಲಿ, ಕಾಮಾಲೆಗೆ ಒಳಗಾಗಿ ಸಾವನ್ನಪ್ಪಬಹುದು. ಹೀಮೋಗ್ಲೋಬಿನ್ ಅಂಶವು ತುಂಬಾ ಕಡಿಮೆಯಾದಾಗ ಕೆಲವೊಮ್ಮೆ ರಕ್ತ ವರ್ಗಾವಣೆಯ ಅವಶ್ಯಕತೆಯೂ ಸಹ ಇರುತ್ತದೆ. ತುಂಬು ಗರ್ಭಧರಿಸಿದ ಜಾನುವಾರುಗಳಲ್ಲಿ ಈ ಕಾಯಿಲೆ ಬಹಳ ಮಾರಕ. ಇವುಗಳಿಗೆ ರಕ್ತ ವರ್ಗಾವಣೆಯೊಂದೇ ಸೂಕ್ತವಾದ ಚಿಕಿತ್ಸೆ. ಜಾನುವಾರು ಮಾಲಕರು ಸಹಕರಿಸಿದರೆ ತಜ್ಞ ಪಶುವೈದ್ಯರು ಇದನ್ನು ನೆರವೇರಿಸಬಲ್ಲರು.
ಥೈಲೇರಿಯಾಸಿಸ್ ಸಹ ಉಣ್ಣೆಗಳಿಂದ ಬರುವ ಮತ್ತೊಂದು ಮಾರಕ ಕಾಯಿಲೆ. ಈ ಕಾಯಿಲೆಯಲ್ಲೂ ಸಹ ಪ್ರಾರಂಭಿಕವಾಗಿ 105-1060 ಎಫ್ ಜ್ವರವಿರುತ್ತದೆ. ಇದರಲ್ಲೂ ಸಹ ತೀವ್ರವಾದ ರಕ್ತ ಹೀನತೆಯಿದ್ದು ಆಗಾಗ್ಗೆ ರಕ್ತ ಮೂತ್ರವಾಗಬಹುದು. ಬೆಬೆಸಿಯೋಸಿಸ್ಸಿಗೆ ಹೋಲಿಸಿದರೆ ಈ ಕಾಯಿಲೆಯಲ್ಲಿ ರಕ್ತಮೂತ್ರ ಅಪರೂಪ ಎನ್ನಬಹುದು.


ಲೆಪ್ಟೋಸ್ಪೈರೋಸಿಸ್ ಅಥವಾ ಇಲಿಜ್ವರ ಕಾಯಿಲೆಯೂ ಸಹ ಜಾನುವಾರುಗಳಲ್ಲಿ ರಕ್ತ ಮೂತ್ರವನ್ನುಂಟು ಮಾಡುವ ಸಾಂಕ್ರಾಮಿಕ ಕಾಯಿಲೆಗಳಲ್ಲಿ ಒಂದು. ಆದರೆ ಬೆಬೆಸಿಯೋಸಿಸ್ಗೆ ಹೋಲಿಸಿದರೆ ಇದರ ಪಾತ್ರ ರಕ್ತ ಮೂತ್ರವನ್ನುಂಟು ಮಾಡುವಲ್ಲಿ ಕಡಿಮೆ. ಈ ಕಾಯಿಲೆಯಲ್ಲೂ ಸಹ ರೋಗಾಣುಗಳು ಕೆಂಪು ರಕ್ತ ಕಣಕ್ಕೆ ಹಾನಿಯನ್ನುಂಟು ಮಾಡಿ ಅದನ್ನು ಒಡೆದು ಅದರಲ್ಲಿನ ಹೀಮೋಗ್ಲೋಬಿನ್ ಅಂಶ ರಕ್ತದಲ್ಲಿ ಬರುವ ಹಾಗೆ ಮಾಡುತ್ತವೆ. ಈ ಕಾಯಿಲೆಗೂ ಸಹ ಸೂಕ್ತ ಚಿಕಿತ್ಸೆಯಿದ್ದು ನಿಗದಿತ ಸಮಯದಲ್ಲಿ ಮಾಡಿಸಬೇಕು. ಮುಖ್ಯವಾದ ಅಂಶವೆಂದರೆ, ಈ ಕಾಯಿಲೆ ಮನುಜನಿಗೂ ಬರುವ ಸಾಧ್ಯತೆ ಇದ್ದು, ಈ ಕುರಿತು ಎಚ್ಚರ ವಹಿಸಬೇಕು.
ಬ್ಯಾಸಿಲ್ಲರಿ ಹಿಮೋಗ್ಲೋಬಿನ್ಯುರಿಯಾ ಈ ಕಾಯಿಲೆಯೂ ಸಹ ಜಾನುವಾರುಗಳಲ್ಲಿ ಮಾರಕವಾದ ಕಾಯಿಲೆಯಾದರೂ ಸಹ ರಕ್ತ ಮೂತ್ರವನ್ನುಂಟು ಮಾಡುವಲ್ಲಿ ಇದರ ಪಾತ್ರ ಅಷ್ಟಿಲ್ಲ.
ಆ) ಪೌಷ್ಟಿಕಾಂಶಗಳ ಪಾತ್ರವೇನು?
ವಿವಿಧ ರೀತಿಯ ಪೌಷ್ಟಿಕಾಂಶಗಳ ಕೊರತೆ ರಕ್ತ ಮೂತ್ರಕ್ಕೆ ಕಾರಣವಾಗಬಹುದು. ಅದರಲ್ಲಿ ಪ್ರಮುಖವಾದದ್ದು ರಂಜಕದ ಕೊರತೆ. ಜೊತೆಯಲ್ಲೇ ತಾಮ್ರದ ಅಂಶದ ಕೊರತೆಯಿದ್ದರಂತೂ ರಕ್ತ ಮೂತ್ರದ ಪ್ರಮಾಣ ಜಾಸ್ತಿಯಾಗಬಹುದು. ಈ ರೀತಿಯ ಕೊರತೆ ಮಿಶ್ರತಳಿಯ ಜಾನುವಾರುಗಳಿಗೆ ಹೋಲಿಸಿದರೆ ಎಮ್ಮೆಗಳಲ್ಲಿ ಜಾಸ್ತಿ ಎನ್ನಬಹುದು. ರಂಜಕ ಮತ್ತು ತಾಮ್ರದ ಅಂಶವನ್ನು ಹೊಂದಿದ ಉತ್ತಮ ಖನಿಜ ಮಿಶ್ರಣವನ್ನು ನೀಡುವುದರಿಂದ ಇದನ್ನು ತಡೆಗಟ್ಟಬಹುದು.
ಇ) ವಿವಿಧ ವಿಷಬಾಧೆಗಳಾವವು?
ತಾಮ್ರದ ಪ್ರಮಾಣ ಶರೀರದಲ್ಲಿ ಜಾಸ್ತಿಯಾದಾಗಲೂ ಸಹ ರಕ್ತ ಕಣಗಳು ಒಡೆಯುತ್ತವೆ. ಜಾನುವಾರಿಗೆ ಅಕಸ್ಮಾತ್ತಾಗಿ ಮೈಲುತುತ್ತದ ವಿಷಬಾಧೆಯಾದಾಗಲೂ ಸಹ ಕೆಂಪು ರಕ್ತ ಕಣಗಳು ಒಡೆದು ರಕ್ತ ಮೂತ್ರವಾಗಬಹುದು. ಅಲ್ಲದೇ ಕೆಲವು ಇಲಿ ಪಾಷಾಣಗಳನ್ನು ಜಾನುವಾರು ಅಕಸ್ಮಾತ್ತಾಗಿ ಸೇವಿಸಿ ವಿಷಬಾಧೆಗೆ ಒಳಗಾದಾಗಲೂ ಸಹ ರಕ್ತ ಮೂತ್ರವಾಗಬಹುದು. ಅಲ್ಲದೇ ನೈಟ್ರೇಟ್ ಅಂಶ ಹೊಂದಿದ ಗಿಡಗಳನ್ನು ಸೇವಿಸಿದಾಗಲೂ ಸಹ ರಕ್ತ ಮೂತ್ರವಾಗಬಹುದು. ವಿಚಿತ್ರವೆಂದರೆ, ಎಳೆ ಕರುಗಳಿಗೆ ಎಷ್ಟು ಪ್ರಮಾಣದಲ್ಲಿ ನೀರು ಕುಡಿಯ ಬೇಕೆಂಬ ಅರಿವಿರುವುದಿಲ್ಲ. ಅಕಸ್ಮಾತ್ತಾಗಿ ಅವುಗಳಿಗೆ ಹೆಚ್ಚಿನ ನೀರು ದೊರೆತು ಅವು ಕುಡಿದರೆ, ಅವುಗಳ ರಕ್ತ ಕಣಗಳು ಒಡೆದು ರಕ್ತ ಮೂತ್ರವಾಗಿ, ರಕ್ತ ಹೀನತೆಯಾಗಿ ಕರುಗಳು ಮರಣವನ್ನಪ್ಪಬಹುದು.
ಕೆಲವೊಬ್ಬರಿಗೆ ಜಾನುವಾರಿಗೆ ಈರುಳ್ಳಿ ನೀಡಿದರೆ ಒಳ್ಳೆಯದು ಎಂಬ ಭಾವನೆ ಇದೆ. ಅತಿಯಾದರೆ ಔಷಧಿಯೂ ಸಹ ವಿಷ. ಜಾನುವಾರುಗಳಿಗೆ ಕೆಜಿಗಟ್ಟಲೇ ಈರುಳ್ಳಿ ತಿನ್ನಿಸಿದಾಗ ಸಹ ರಕ್ತ ಕಣಗಳು ಒಡೆದು ರಕ್ತಮೂತ್ರವಾಗಬಹುದು. ಸಂತೆಯ ಮಾರುಕಟ್ಟೆಯಲ್ಲಿ ಬೀಡಾಡಿ ಅಲೆಯುವ ದನಗಳು ಅಕಸ್ಮಾತ್ತಾಗಿ ಬಾಯಿಗೆ ಸಿಕ್ಕ ಈರುಳ್ಳಿ ರಾಶಿಯನ್ನೇ ಮೆದ್ದು ನಂತರ ನಮ್ಮಲ್ಲಿ ಚಿಕಿತ್ಸೆಗೆ ಬಂದಿದ್ದಿದೆ.
ಇ) ಔಷದಗಳು ರಕ್ತ ಮೂತ್ರವನ್ನುಂಟು ಮಾಡುತ್ತವೆಯೇ?
ಹೌದು. ಕೆಲವೊಮ್ಮೆ ರೋಗ ಚಿಕಿತ್ಸೆಗೆ ಬಳಸುವ ಔಷಧಗಳ ಅಲರ್ಜಿಯಾದಾಗ ಅಥವಾ ಆಕ್ಸಿಟೆಟ್ರಾಸೈಕ್ಲಿನ್ ಇತ್ಯಾದಿ ಔಷಧಿಗಳನ್ನು ನೀಡಿದಾಗ ಸಹ ರಕ್ತಕಣಗಳು ಒಡೆದು ರಕ್ತ ಮೂತ್ರವಾಗಬಹುದು.
ಚಿಕಿತ್ಸೆಯೇನು?
ರಕ್ತ ಮೂತ್ರ ಕಾಣಿಸಿಕೊಂಡ ಕೂಡಲೇ ಅದನ್ನು ಗಾಜಿನ ಬಾಟ್ಲಿಯಲ್ಲಿ ಸಂಗ್ರಹಿಸಿ ತಜ್ಞ ಪಶುವೈದ್ಯರ ಗಮನಕ್ಕೆ ತರಬೇಕು. ಇದು ಬಹಳ ಮುಖ್ಯ. ಅಥವಾ ಇತ್ತೀಚೆಗೆ ಮೊಬೈಲುಗಳಲ್ಲಿ ಉತ್ತಮ ಚಾಯಾಗ್ರಹಣ ಸೌಲಭ್ಯವಿರುವುದರಿಂದ ಮೂತ್ರದ ಚಿತ್ರ ತೆಗೆದು ಪಶುವೈದ್ಯರಿಗೆ ತೋರಿಸಿದರೆ ಅವರು ಇದಕ್ಕೆ ಮೂಲ ಕಾರಣ ಪತ್ತೆ ಮಾಡಿ ತಕ್ಕ ಚಿಕಿತ್ಸೆ ನೀಡಬಲ್ಲರು.ಕೆಲವೊಮ್ಮೆ ರಂಜಕದ ಕೊರತೆಯಾದಾಗಲೂ ಸಹ ಹಿಮೊಗ್ಲೋಬಿನ್ಯುರಿಯಾ ಆಗುವ ಸಾಧ್ಯತೆ ಇರುವುದರಿಂದ ಪ್ರಥಮ ಚಿಕಿತ್ಸೆಯಾಗಿ ರೈತರು ಜಾನುವಾರುಗಳಲ್ಲಿ ಮೂತ್ರವು ಕಾಫಿ ಬಣ್ಣಕ್ಕೆ ತಿರುಗಿದಾಗ ಜಾನುವಾರಿಗೆ ಸುಮಾರು 50 ಗ್ರಾಂ ನಷ್ಟು ಅಡುಗೆ ಸೋಡಾವನ್ನು ಅಹಾರದಲ್ಲಿ ನೀಡಬಹುದು. ಸಾಮಾನ್ಯವಾಗಿ ಹಿಮೋಗ್ಲೋಬಿನ್ ಅಂಶವು ಮೂತ್ರಜನಕಾಂಗದಿ೦ದ ವಿಸರ್ಜಿಸಲ್ಪಡುವಾಗ ಮೂತ್ರಜನಕಾಂಗದ ಸಣ್ಣ ನಾಳಗಳನ್ನು ಕಟ್ಟಿಕೊಂಡು ಹಾಳುಗೆಡಹಬಹುದು. ಅಡುಗೆ ಸೋಡಾವನ್ನು ನೀಡುವುದರಿಂದ ಮೂತ್ರವು ಕ್ಷಾರತೆಗೊಂಡು, ಸುಲಭವಾಗಿ ವಿಸರ್ಜಿಸಲ್ಪಡುತ್ತದೆ. ಮುಖ್ಯವಾಗಿ ರೈತರು ಅವರ ಜಾನುವಾರುಗಳ ಮೂತ್ರದ ಬಣ್ಣದ ಕಡೆ ನಿತ್ಯ ಒಂದು ಸಾರಿ ಗಮನ ಹರಿಸಿದಿರೆ, ಈ ರಕ್ತ ಮೂತ್ರವನ್ನು ತಡೆಗಟ್ಟಿ ಜೀವ ಉಳಿಸಿಕೊಳ್ಳುವುದು ಕಷ್ಟವೇನಲ್ಲ.

LEAVE A REPLY

Please enter your comment!
Please enter your name here