ತೊಗರಿ ಬೆಳೆಯಲ್ಲಿ ಉತ್ಕೃಷ್ಟ ಇಳುವರಿ ಪಡೆಯಲು ಈ ಕ್ರಮ ಅನುಸರಿಸಿ

0
ಡಾ. ನಾಗರಾಜ್‌, ಕೃಷಿ ಯಂತ್ರೋಪಕರಣ ತಜ್ಞರು

ಉತ್ತರ ಕರ್ನಾಟಕದ ಪ್ರಮುಖ ಬೆಳೆಗಳಲ್ಲಿ ದ್ವಿದಳ ಧಾನ್ಯ ತೊಗರಿ ಸಹ ಸೇರಿದೆ. ಇದನ್ನು ಸಾವಯವ ಕೃಷಿ ಕ್ರಮದಲ್ಲಿ ಬೆಳೆಯುವುದರಿಂದ ಮಣ್ಣಿಗೂ, ಬೆಳೆಗೂ, ರೈತರಿಗೂ ಮತ್ತು ಗ್ರಾಹಕರಿಗೂ ಸಾಕಷ್ಟು ಅನುಕೂಲಗಳಿವೆ. ಈ ಹಿನ್ನೆಲೆಯಲ್ಲಿ ನಾನು ಅಧ್ಯಯನಗಳನ್ನು ಮಾಡಿದ್ದೇನೆ. ಹಲವು ವರ್ಷಗಳ ನಿರಂತರ ಅಧ್ಯಯನದಿಂದ ಅಭಿವೃದ್ಧಿಪಡಿಸಿರುವ ಮಾರುತಿ ಕೃಷಿ ಉದ್ಯೋಗ್‌ ಬಹುಪಯೋಗಿ ಅಂತರ ಬೇಸಾಯ ಯಂತ್ರಕ್ಕೆ ಕೂರಿಗೆಯನ್ನೂ ಅಳವಡಿಸಲಾಗಿದೆ. ಇದನ್ನು ಬಳಸಿಕೊಂಡು ತೊಗರಿಯನ್ನು ಸಹ ಬಿತ್ತನೆ ಮಾಡಬಹುದು.

ಅಧ್ಯಯನ

ಈ ಹಿನ್ನೆಲೆಯಲ್ಲಿ ನಾನು ತೊಗರಿಯನ್ನು ಸಹ ಬೆಳೆಯುತ್ತಾ ಬಂದಿದ್ದೇನೆ. ಇದರ ಅಧ್ಯಯನದಿಂದ ಹಲವು ಉಪಯುಕ್ತ ವಿಷಯಗಳು ನನ್ನ ಗಮನಕ್ಕೆ ಬಂದಿವೆ. ಅವುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಇದು ತೊಗರಿ ಬೆಳೆಗಾರರಿಗೆ ವಿಶೇಷವಾಗಿ ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆಯುವವರಿಗೆ ಉಪಯುಕ್ತವಾಗುತ್ತದೆ.

ಏಕಬೆಳೆ – ಮಿಶ್ರಬೆಳೆ

ತೊಗರಿಯನ್ನು ಏಕಬೆಳೆಯಾಗಿಯೂ ಬೆಳೆಯಲಾಗುತ್ತದೆ. ಮಿಶ್ರ ಬೆಳೆಯಾಗಿಯೂ ಬೆಳೆಯಲಾಗುತ್ತದೆ. ಮಿಶ್ರ ಬೆಳೆಯಾಗಿ ಬೆಳೆದಾಗಲೂ ಇದನ್ನೇ ಹೆಚ್ಚು ವಿಸ್ತೀರ್ಣದಲ್ಲಿ ಬೆಳೆಯಲಾಗುತ್ತದೆ. ಕಲಬುರಗಿ ಜಿಲ್ಲೆಯಲ್ಲಿ ಇದನ್ನು ಏಕಬೆಳೆಯಾಗಿ ಬೆಳೆಯುವ ಅಭ್ಯಾಸ ಇದೆ. ಇನ್ನುಳಿದ ಜಿಲ್ಲೆಗಳಲ್ಲಿ ಹೆಸರು, ಉದ್ದು, ಎಳ್ಳು, ಜೋಳ ಮತ್ತು ಸಜ್ಜೆ ಬೆಳೆಗಳಲ್ಲಿ ಅಂತರ ಬೆಳೆಯಾಗಿ ಬೆಳೆಯುತ್ತಾರೆ. ಹೀಗೆ ಅಂತರ ಬೆಳೆ ಬೆಳೆಯುವುದರಿಂದ ಸಾಕಷ್ಟು ಅನುಕೂಲಗಳಿವೆ. ಅದರ ಬಗ್ಗೆ ಬೆಳೆಗಾರರಿಗೆ ಚೆನ್ನಾಗಿ ಗೊತ್ತಿದೆ.

ಭೂಮಿ ಸಿದ್ಧತೆ

ಮೊದಲಿಗೆ ಬೇಸಿಗೆಯಲ್ಲಿ ಟ್ರಾಕ್ಟರಿಗೆ ಪಲ್ಷಿ ನೇಗಿಲು ಅಳವಡಿಸಿಕೊಂಡು ಉಳುಮೆ ಮಾಡಬೇಕು. ಇದರಿಂದ ಆಳವಾದ ಉಳುಮೆ ಆಗುತ್ತದೆ. ಮಣ್ಣು ಚೆನ್ನಾಗಿ ಮಗುಚುವುದರಿಂದ ಕೆಳ ಪದರಗಳಲ್ಲಿರುವ ಕೋಶಾವಸ್ಥೆಯಲ್ಲಿರುವ ಕೀಟಗಳು ಮೇಲೆ ಬಂದು ಹಕ್ಕಿಪಕ್ಷಿಗಳಿಗೆ ಆಹಾರವಾಗುತ್ತದೆ. ಬಿಸಿಲಿಗೆ ಸಿಕ್ಕಿ ಸಾಯುತ್ತವೆ. ಇದರಿಂದ ಅಪಾರ ಪ್ರಮಾಣದಲ್ಲಿ ಕೀಟಗಳ ನಿಯಂತ್ರಣವಾಗುತ್ತದೆ. ಬೇಸಿಗೆಯಲ್ಲಿ ಪಲ್ಟಿ ನೇಗಿಲು ಹೊಡೆಯುವುದರಿಂದ ಆಗುವ ಇನ್ನೊಂದು ಫಾಯಿದೆ ಎಂದರೆ ಭೂಮಿಯಲ್ಲಿ ಬೇಸಿಗೆ ಮಳೆ ಚೆನ್ನಾಗಿ ಇಂಗುತ್ತದೆ. ಇದರಿಂದ ಸುದೀರ್ಘ ಕಾಲ ಮಣ್ಣಿನಲ್ಲಿ ಹಸಿ ಇರುತ್ತದೆ.

ಬೇಸಿಗೆಯಲ್ಲಿ ಪಲ್ಟಿ ನೇಗಿಲು

ಬೇಸಿಗೆಯಲ್ಲಿ ಪಲ್ಟಿ ನೇಗಿಲು ಒಮ್ಮೆ ಹೊಡೆದ ನಂತರ ಮತ್ತೆ ಯಾವುದೇ ಕಾರಣಕ್ಕೂ ಟ್ರಾಕ್ಟರ್‌ ಬಳಸಬಾರದು. ಪದೇಪದೇ ಟ್ರಾಕ್ಟರ್‌ ಬಳಸುವುದರಿಂದ ಮಣ್ಣು ದಮ್ಮಸಾಗುತ್ತದೆ ಅಂದರೆ ಕಠಿಣವಾಗುತ್ತದೆ. ಮೇಲೆ ಮೂರು ಅಂಗುಲ ಧೂಳು ಇರುತ್ತದೆ ಅಷ್ಟೆ !

ಬಹುಪಯೋಗಿ ಅಂತರ ಬೇಸಾಯ ಯಂತ್ರ

ಟ್ರಾಕ್ಟರಿನಿಂದ ಪಲ್ಟಿ ನೇಗಿಲು ಹೊಡೆದ ನಂತರ ಮಾರುತಿ ಉದ್ಯೋಗ್‌ ಬಹುಪಯೋಗಿ ಅಂತರ ಬೇಸಾಯ ಯಂತ್ರದಿಂದ ಸಾಲು ಮಾಡುವುದು, ಕೂರಿಗೆ ಅಳವಡಿಸಿಕೊಂಡು ಬಿತ್ತನೆ ಮಾಡುವುದು, ಕಳೆ ತೆಗೆಯುವುದು, ಮಧ್ಯದಲ್ಲಿ ಬೇಸಾಯ ಮಾಡುವುದು ಕಾರ್ಯಗಳನ್ನು ಮಾಡಬಹುದು. ಹೀಗೆ ಮಾಡುವುದರಿಂದ ಮಣ್ಣು ಕಠಿಣವಾಗುವುದಿಲ್ಲ. ಮಣ್ಣಿನ ಪದರಗಳು ಸಡಿಲವಾಗಿದ್ದಾಗ ಮಳೆನೀರು ಚೆನ್ನಾಗಿ ಇಂಗಲು, ದೀರ್ಘಾಕಾಲ ಮಣ್ಣಿನಲ್ಲಿ ತೇವಾಂಶ ಇರಲು ಸಹಾಯಕವಾಗುತ್ತದೆ. ಇವೆಲ್ಲದರಿಂದ ಸಾಮಾನ್ಯವಾಗಿ ಪಡೆಯುವ ಇಳುವರಿಗಿಂತ ಎರಡು ಪಟ್ಟು ಅಥವಾ ಮೂರು ಪಟ್ಟು ಅಧಿಕ ಇಳುವರಿ ಪಡೆಯಲು ಸಹಾಯಕವಾಗುತ್ತದೆ.

ಬಿತ್ತನೆ ಮತ್ತು ಬೀಜೋಪಾಚಾರ

ತೊಗರಿಯ ಬಿತ್ತನೆ ಬೀಜಗಳಲ್ಲಿ ಬರ ನಿರೋಧಕತೆ, ಮೊಳಕೆ ಹೊಡೆಯುವ ಸಾಮರ್ಥ್ಯ ಹೆಚ್ಚಿಸುವುದು ಅಗತ್ಯ. ಇದಕ್ಕಾಗಿ ಸಾವಯವ ದ್ರಾವಣದಲ್ಲಿ ಬೀಜೋಪಚಾರ ಮಾಡಬೇಕು. ಬೀಜೋಪಚಾರ ದ್ರಾವಣದಲ್ಲಿ ಕನಿಷ್ಟ ಒಂದು ತಾಸು ನೆನಸಿ ನಂತರ ನೆರಳಿನಲ್ಲಿ  ಕನಿಷ್ಟ ೭ ತಾಸು ಒಣಗಿಸಬೇಕು. ಯಾವುದೇ ಕಾರಣಕ್ಕೂ ಬಿಸಿಲಿನಲ್ಲಿ ಒಣಗಿಸಬಾರದು.

ಒಂದು ಎಕರೆಗೆ  1.6 ಟನ್‌ ಉತ್ತಮವಾಗಿ ಕಳಿತ ಕೊಟ್ಟಿಗೆ ಗೊಬ್ಬರ ಅಥವಾ 0.8 ಟನ್‌ ಕೊಟ್ಟಿಗೆ ಗೊಬ್ಬರ ಹಾಕಬೇಕು. ಇದರಿಂದಲೂ ಸಹ ಇಳುವರಿ ಪ್ರಮಾಣ ಹೆಚ್ಚಾಗುತ್ತದೆ. ಬೀಜಗಳನ್ನು ಸೂಕ್ತ ಅಂತರ ನೀಡಿ ಬಿತ್ತುವುದು ಬಹಳ ಮುಖ್ಯ

ಅಂತರ ಬೇಸಾಯ

ಮಾರುತಿ ಕೃಷಿ ಉದ್ಯೋಗ್‌ ಬಹುಪಯೋಗಿ ಅಂತರ ಬೇಸಾಯ ಯಂತ್ರದಿಂದ ಸಾಲು ಮಾಡುವುದು, ಮಣ್ಣು ಏರಾಕುವುದು, ಕಳೆ ತೆಗೆಯುವ ಕಾರ್ಯಗಳನ್ನು ಮಾಡುವುದು. ಇದರಿಂದ ಮಣ್ಣಿನ ಕಣಗಳು ಸಡಿಲವಾಗಿ ಗಾಳಿಯಾಡುವ ಪ್ರಮಾಣ ಹೆಚ್ಚಾಗುತ್ತದೆ. ಮಣ್ಣಿನ ಕಣಗಳ ರಚನೆಯೂ ಸುಧಾರಿಸುತ್ತದೆ.

ಕೀಟಗಳ ಹತೋಟಿ

ತೊಗರಿಗೆ ಕೀಟಗಳ ಬಾಧೆ ಅಧಿಕ. ಇದನ್ನು ಪರಿಣಾಮಕಾರಿಯಾಗಿ ನಿಯಂತ್ರಣ ಮಾಡುವುದು ಅಗತ್ಯ. ನಾನು ತೊಗರಿ ಬೀಜ ಮೊಳಕೆ ಹೊಡೆಯುವುದರಿಂದ ಅದು ಉತ್ತಮವಾಗಿ ಬೆಳೆದು ಕೊಯ್ಲಿಗೆ ಸಿದ್ಧವಾಗುವ ನಾನಾ ಹಂತಗಳನ್ನು ಜಾಗರೂಕತೆಯಿಂದ ಗಮನಿಸಿದ್ದೇನೆ. ಅದು ಹೇಗೆ ಬೆಳವಣಿಗೆಯಾಗುತ್ತದೆ, ನೀರು ಯಾವ ಪ್ರಮಾಣದಲ್ಲಿ ಬೇಕಾಗುತ್ತದೆ, ಆನಂತರ ಯಾವ ಪತಂಗಗಳು ಎಲ್ಲಿ ಬರುತ್ತವೆ. ಮೊಟ್ಟೆಗಳನ್ನು ಎಲ್ಲೆಲ್ಲಿ ಇಡುತ್ತವೆ ಎಂಬುದು ತಿಳಿದಿದೆ. ಪತಂಗಗಳು ಎಲೆಗಳ ತಳಭಾಗದಲ್ಲಿ ಇಡುವ ಮೊಟ್ಟೆಗಳು ಭಾರಿ ಭದ್ರವಾಗಿ ಅಂಟಿಕೊಂಡಿರುತ್ತವೆ. ಬಿರುಗಾಳಿ, ಮಳೆ ಬಂದರೂ ಅವುಗಳು ಕೆಳಗೆ ಬೀಳುವುದಿಲ್ಲ. ಅಂಥ ಅಂಟು ಅವುಗಳಿಗಿರುತ್ತದೆ.

ಹೆಣ್ಣು ಪತಂಗ

ಹೆಣ್ಣು ಪತಂಗ ಅಥವಾ ಚಿಟ್ಟೆಗಳು ತೊಗರಿಯ ಮೊಗ್ಗು, ಕುಡಿ, ಹೂವು, ಎಳೆಕಾಯಿಗಳ ಮೇಲೆ ಮೊಟ್ಟೆಗಳನ್ನು ಇಡುತ್ತವೆ. ಇವುಗಳ ಸಂಖ್ಯೆ ಅಗಾಧ. ಸಾವಿರಕ್ಕೂ ಮೊಟ್ಟೆ ಇರಬಹುದು. ಈ ಮೊಟ್ಟೆಗಳು ಹಳದಿ ಬಣ್ಣದಾಗಿದ್ದು ದುಂಡಗಿರುತ್ತವೆ. ಮೊಟ್ಟೆ ಒಡೆದು ಹೊರಬರುವ ಮರಿಹುಳಗಳು ಮೊದಲಿಗೆ ಹಸಿರುಭಾಗ ಕೆರೆದು ತಿನ್ನಲು ಶುರು ಮಾಡುತ್ತವೆ. ಈ ಬಳಿಕ ಹೂವು, ಮೊಗ್ಗು ಮತ್ತು ಕಾಯಿಗಳನ್ನು ಕೊರೆಯುತ್ತವೆ. ಮೊಗ್ಗು ಮತ್ತು ಹೂವುಗಳನ್ನು ಕೊರೆಯುವುದರಿಂದ  ಕಾಯಿ ಕಟ್ಟುವ ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತದೆ. ಚೆನ್ನಾಗಿ ಬೆಳೆದ ಕೀಟಗಳು ಅವುಗಳ ದೇಹವನ್ನು ಕಾಯಿಯೊಳಗೆ ತೂರಿಸಿ ಒಳಗಿನ ಭಾಗವನ್ನು ತಿನ್ನುತ್ತವೆ. ಇವುಗಳಿಂದಲೇ ಬೆಳೆಯ ಶೇಕಡ 70 ರಷ್ಟು ಭಾಗ ಹಾಳಾಗುತ್ತದೆ.

ಮಿತ್ರ ಕೀಟಗಳು ಮತ್ತು ಪಕ್ಷಿಗಳು

ಕೀಟಗಳನ್ನು ಹತೋಟಿ ಮಾಡಲು ಬೇರೆಬೇರೆ ಸಾವಯವ ಕೀಟನಾಶಕಗಳಿವೆ. ಇವುಗಳಲ್ಲಿ ಕೆಲವನ್ನು ನಾವೇ ರೈತರು ತಯಾರು ಮಾಡಿಕೊಳ್ಳಬಹುದು. ಇದರ ಜೊತೆಗೆ ಮತ್ತಷ್ಟು ಪರಿಣಾಮಕಾರಿಯೆಂದರೆ ಮಿತ್ರಕೀಟಗಳು ಇರುವ ವಾತಾವರಣ ನಿರ್ಮಿಸುವುದು, ಇದರಿಂದ ಅವುಗಳ ಸಂಖ್ಯೆ ಹೆಚ್ಚಾಗುತ್ತದೆ. ಇವುಗಳು ಹಾನಿಕಾರಕ ಕೀಟಗಳ ಮೊಟ್ಟೆಗಳನ್ನು ತಿನ್ನುತ್ತವೆ. ಸಾಲಿನಿಂದ ಸಾಲಿಗೆ ಹೆಚ್ಚು ಅಂತರ ನೀಡಿದಾಗ ಬಿಸಿಲು ಮಣ್ಣಿಗೆ ಬೀಳುತ್ತಿರುತ್ತದೆ. ಮೊಟ್ಟೆಯೊಡೆದು ಹೊರಬಂದ ಕೀಟಗಳನ್ನು ಪಕ್ಷಿಗಳು ಹೆಕ್ಕಿ ತಿನ್ನಲು ಸುಲಭವಾಗುತ್ತದೆ.

ರೈತಸ್ನೇಹಿ ಗುಲಗಂಜಿ ಹುಳುಗಳು ಹಾನಿಕಾರಕ ಕೀಟಗಳನ್ನು ತಿನ್ನುತ್ತಿರುವ ದೃಶ್ಯ

ಗುಲಗಂಜಿ ಹುಳುಗಳು

ಗುಲಗಂಜಿ ಹುಳುಗಳು ಎಲೆಗಳ ಮೂಲೆಮೂಲೆಯನ್ನೂ ಹುಡುಕಿ ಹಾನಿಕಾರಕ ಕೀಟಗಳ ಮೊಟ್ಟೆಗಳನ್ನು ಭಕ್ಷಿಸುತ್ತವೆ. ಆದ್ದರಿಂದ ಗುಲಗಂಜಿ ಹುಳ ಸೇರಿದಂತೆ ಮೊಟ್ಟೆಗಳನ್ನು ಭಕ್ಷಿಸುವ ಇರುವೆ, ಗೊದ್ದಗಳು ಇನ್ನಿತರ ಮಿತ್ರಕೀಟಗಳು ಹೊಲದ ವಾತಾವರಣದಲ್ಲಿ ಇರುವ ಪರಿಸರ ನಿರ್ಮಿಸುವುದು ಬಹಳ ಅಗತ್ಯ. ಮಿತ್ರಕೀಟಗಳು ಸ್ಥಳೀಯವಾಗಿಯೇ ಇದ್ದು ಅಭಿವೃದ್ಧಿಯಾಗುತ್ತವೆ. ಹಾನಿಕಾರಕ ಕೀಟಗಳು ಬೇರೆಡೆಯಿಂದ ವಲಸೆ ಬರುತ್ತವೆ. ಬಂದ ಬಳಿಕ ಸಂತಾನಾಭಿವೃದ್ಧಿಗೆ ತೊಡಗುತ್ತವೆ. ಬಹಳ ಬೇಗ ಇವುಗಳ ಬೆಳವಣಿಗೆಯಾಗುತ್ತದೆ.

ಮಿತ್ರಕೀಟಗಳು, ಪಕ್ಷಿಗಳು ಇರುವಂಥ ವಾತಾವರಣ ನಿರ್ಮಿಸದಿದ್ದರೆ ಭೂಮಿಯ ಫಲವತ್ತತೆ ಮೇಲೆ ದುಷ್ಪರಿಣಾಮ ಬೀರುವ ಜೊತೆಗೆ ಪರಿಸರದಲ್ಲಿರುವ ಮಿತ್ರಕೀಟಗಳನ್ನು ಬಲಿ ತೆಗೆದುಕೊಳ್ಳುವ ಹಾನಿಕಾರಕ ರಾಸಾಯನಿಕ ದ್ರಾವಣಗಳನ್ನು ಪದೇಪದೇ ಸಿಂಪಡಿಸುತ್ತಾ ಇರಬೇಕಾಗುತ್ತದೆ. ಆದ್ದರಿಂದ ಸಾವಯವ ಕೀಟನಾಶಕಗಳ ಬಳಕೆ, ಪರಿಸರದಲ್ಲಿ ಮಿತ್ರ ಕೀಟಗಳು, ಪಕ್ಷಿಗಳು ಇರುವಂಥ ವಾತಾವರಣ ನಿರ್ಮಿಸುವುದರಿಂದ ಭಾರಿ ಉಪಯೋಗಗಳು ಆಗುತ್ತವೆ.

ಜೀವಂತ ಬೇಲಿ

ತೊಗರಿ ಬೆಳೆಯಾಗಲಿ ಅಥವಾ ಇನ್ನಿತರ ಯಾವುದೇ ಬೆಳೆಗಳಾಗಲಿ ಜೀವಂತ ಬೇಲಿ ಬಹಳ ಅಗತ್ಯ. ಏಕೆಂದರೆ ಮಿತ್ರ ಕೀಟಗಳಾದ ಗುಲಗಂಜಿ ಹುಳು, ಇರುವೆ, ಗೊದ್ದ ಇತ್ಯಾದಿಗಳ ಸಂಖ್ಯೆ ಹೆಚ್ಚಾದ ನಂತರ ಅವುಗಳು ಸದಾಕಾಲ ಇರುವ ವಾತಾವರಣ ನಿರ್ಮಿಸುವುದು ಅಗತ್ಯ. ತೊಗರಿ ಬೆಳೆ ಕಟಾವು ಆದ ನಂತರ ಬಟ್ಟಾ ಬಯಲಿನಲ್ಲಿ ಅವುಗಳ ಇರುವಿಕೆಗೆ ಆಸ್ಪದವಾಗುವುದಿಲ್ಲ. ಸುಮಾರು ೪೦ ರಿಂದ ೫೦ ವರ್ಷಗಳ ಹಿಂದೆ ಇಡೀ ಕೃಷಿಭೂಮಿಯನ್ನು ಉಳುಮೆ ಮಾಡುತ್ತಿರಲಿಲ್ಲ. ಒಂದಷ್ಟು ಗಿಡಗಂಟೆಗಳು ಇರುವಂತೆ ನೋಡಿಕೊಳ್ಳುತ್ತಿದ್ದರು. ಇದರಿಂದ ಮಿತ್ರಕೀಟಗಳು ಸದಾಕಾಲ ಇರುವ ವಾತಾವರಣ ನಿರ್ಮಾಣವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ತೊಗರಿ ಬೆಳೆಗಾರರು ಜೀವಂತ ಬೇಲಿ ನಿರ್ಮಾಣ ಮಾಡಿಕೊಳ್ಳುವುದು ಅತ್ಯಗತ್ಯ.

ಎತ್ತುಗಳ ಸಹಾಯದಿಂದ ಉಳುಮೆ

ಟ್ರಾಕ್ಟರ್‌ ಬಂದ ಮೇಲೆ ಹಲವರು ಬದುಗಳಿಗೂ ಆಸ್ಪದ ಇಲ್ಲದಂತೆ ಉಳುಮೆ ಮಾಡುವ ಅಭ್ಯಾಸ ಮಾಡಿಕೊಂಡಿದ್ದಾರೆ. ಹಿಂದೆ ಎತ್ತುಗಳ ಸಹಾಯದಿಂದ ಉಳುಮೆ ಮಾಡುತ್ತಿದ್ದಾಗ ಹೊಲದ ಒಂದಷ್ಟು ಭಾಗದಲ್ಲಿ ಉಪಯುಕ್ತವಾದ ಗಿಡಗಳನ್ನು ಹಾಕುವ ಅಭ್ಯಾಸ ಇತ್ತು. ಅದು ಇತ್ತೀಚೆಗೆ ತಪ್ಪಿ ಹೋಗಿದೆ. ರೈತರಿಗೂ ಉಪಯುಕ್ತವಾದ ಗಿಡಗಳು ಯಾವುದೇ ಇರಲಿ ಅವುಗಳನ್ನು ಬೆಳೆಸಿದಾಗ ಮಿತ್ರಕೀಟಗಳು ವಾಸಿಸಲು ಅನುಕೂಲವಾಗುತ್ತದೆ. ಇದರ ಪ್ರಯೋಜನ ಬೆಳೆಗಳಿಗೆ ಆಗುತ್ತದೆ.

ಪರತಂತ್ರ ಕೀಟಗಳನ್ನು ತರುವುದು ಎಲ್ಲಿಂದ ?

ನಿರಂತರ ರಾಸಾಯನಿಕ ಕೀಟಗಳ ಬಳಕೆಯಿಂದ ಬಹಳಷ್ಟು ಕಡೆ ಪರತಂತ್ರ ಜೀವಿಗಳೇ ಇಲ್ಲದ ವಾತಾವರಣ ಸೃಷ್ಟಿಯಾಗಿದೆ. ಆದ್ದರಿಂದ ಹೊರಗಿನಿಂದ ಮಿತ್ರಕೀಟಗಳನ್ನು ತರುವುದು ಅವಶ್ಯಕ. ನೀವು ನಿಮ್ಮ ಜಿಲ್ಲೆಯ ಕೃಷಿ ವಿಜ್ಞಾನ ಕೇಂದ್ರ (ಕೆ.ವಿ.ಕೆ)ಕ್ಕೆ ಭೇಟಿ ನೀಡಿದರೆ ಮಿತ್ರಕೀಟಗಳನ್ನು ನೀಡುತ್ತಾರೆ. ಇದರ ಬಗ್ಗೆ ಹತ್ತಿರದ ರೈತ ಸಂಪರ್ಕ ಕೇಂದ್ರಗಳಲ್ಲಿಯೂ ವಿಚಾರಿಸಿ. ನಿಮಗೆ ಹತ್ತಿರದ ಯಾವ ಸ್ಥಳದಲ್ಲಿ ಅವುಗಳು ಲಭ್ಯವಾಗುತ್ತವೆ ಎಂಬ ಮಾಹಿತಿ ನೀಡುತ್ತಾರೆ. ಅಲ್ಲಿಂದ ತರಬಹುದು.

ಸಾವಯವ ಕ್ರಮದಲ್ಲಿ ತೊಗರಿ ಕೃಷಿ ಮಾಡುವ ಬೆಳೆಗಾರರು ಉತ್ತಮವಾದ ರೀತಿ ಜೇನು ಸಾಕಣೆ ಕೂಡ ಮಾಡಬಹುದು. ಇದರಿಂದಲೂ ಹೆಚ್ಚುವರಿ ಆದಾಯ ಪಡೆಯಬಹುದು. ಇದರತ್ತಲೂ ಹೆಚ್ಚಿನ ರೈತರು ಗಮನ ನೀಡುವ ಅಗತ್ಯವಿದೆ ಎಂಬುದು ನನ್ನ ಅಭಿಪ್ರಾಯ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 8618693986

LEAVE A REPLY

Please enter your comment!
Please enter your name here