ಕೇರಳದಲ್ಲಿ ನಿಫಾ ವೈರಸಿಗೆ ಬಲಿಯಾದವರ ಸಂಖ್ಯೆ 16. ಇದು ಬಾವಲಿಗಳಿಂದ ಹರಡುತ್ತದೆ ಎಂದು ಹೇಳಿದ್ದು ಕೇರಳದ ಆರೋಗ್ಯ ಇಲಾಖೆ. ಮೊದಲಿಗೆ ರೋಗ ಕಾಣಿಸಿಕೊಂಡಿದ್ದು ಕೊಜಿಕ್ಕೊಡೈ ಜಿಲ್ಲೆಯಲ್ಲಿ. ನಂತರ ಇದು ಅಲ್ಲಿನ ಮಲ್ಲಪುರಂ ಜಿಲ್ಲೆಯಲ್ಲಿಯೂ ಕಾಣಿಸಿಕೊಂಡಿತು. ಬಾವಲಿಗಳಿಂದ ಈ ರೋಗ ಹರಡುತ್ತದೆ. ಅದು ಕಚ್ಚಿದ ಹಣ್ಣುಗಳನ್ನು ಸೇವಿಸಿದ ಮನುಷ್ಯರಿಗೂ, ಇತರ ಪ್ರಾಣಿಗಳಿಗೂ ಸೋಂಕು ತಗುಲುತ್ತದೆ ಎಂಬ ಭೀತಿ ಹಿನ್ನೆಲೆಯಲ್ಲಿ ರೋಗ ಕಾಣಿಸಿಕೊಂಡ ಸ್ಥಳಗಳಲ್ಲಿದ್ದ ಬಾವಲಿಗಳನ್ನು ಹಿಡಿದು ಕೊಲ್ಲಲಾಯಿತು. ಆದರೆ ಕೆಲವೇ ದಿನಗಳಲ್ಲಿ ಬಾವಲಿಗಳಿಂದ ನಿಫಾ ಹರಡುವುದಿಲ್ಲ ಎಂಬ ಹೇಳಿಕೆಯೂ ಹೊರಬಿತ್ತು.

ಕೊಜಿಕ್ಕೊಡೈ ಜಿಲ್ಲೆಯ ವಿವಿಧ ಭಾಗಗಳಿಂದ ಹಲವಾರು ಬಾವಲಿಗಳನ್ನು ಹಿಡಿದು ಅವುಗಳ ರಕ್ತದ ಮಾದರಿಗಳನ್ನು ಭೋಪಾಲ್ ನಲ್ಲಿರುವ ಪ್ರಾಣಿಜನ್ಯ ರೋಗಗಳ ರಾಷ್ಟ್ರೀಯ ಸಂಶೋಧನಾ ಸಂಸ್ಥೆಗೆ ( NIHSAD) ಕಳಿಸಲಾಯಿತು. ಈ ಪ್ರಕರಣವನ್ನು ಅಲ್ಲಿನ ವಿಜ್ಞಾನಿಗಳು ತುರ್ತು ಆದ್ಯತೆಯಾಗಿ ತೆಗೆದುಕೊಂಡರು. ಬಾವಲಿಗಳ ರಕ್ತದ ಮಾದರಿಗಳನ್ನು ಪರೀಕ್ಷಿಸಿದರು. ಒಂದಲ್ಲ, ಎರಡಲ್ಲ ಅನೇಕ ಬಾರಿ ಪರೀಕ್ಷಿಸಿದರು. ಲಭ್ಯವಿರುವ ಪ್ರಯೋಗಾಲಯಗಳ ಪರೀಕ್ಷೆಗಳ ಮಾದರಿಗಳನ್ನೆಲ್ಲ ಬಳಸಿಕೊಂಡರು. ಯಾವುದೇ ಬಾವಲಿಗಳಲ್ಲಿಯೂ ನಿಫಾ ವೈರಸ್ ಪತ್ತೆಯಾಗಲಿಲ್ಲ .

ಇದೇ ಸಂದರ್ಭದಲ್ಲಿ ಹಸುಗಳು, ಹಂದಿಗಳ ರಕ್ತದ ಮಾದರಿಗಳನ್ನು ಪರೀಕ್ಷಿಸಲಾಗಿತ್ತು. ಅವುಗಳಲ್ಲಿಯೂ ನಿಫಾ ವೈರಸ್ ಪತ್ತೆಯಾಗಲಿಲ್ಲ. 2008ರ ಮೇ 30ರ ಒಳಗೆ ಈ ಪರೀಕ್ಷೆಗಳಲ್ಲಿ ನಡೆದು ಫಲಿತಾಂಶ ನೆಗೆಟಿವ್ ಎಂದು ಘೋಷಣೆಯಾಗಿತ್ತು. ಇಷ್ಟರಲ್ಲಾಗಲೇ ಬಾವಲಿಗಳಿಂದಲೇ ಮಾರಣಾಂತಿಕ ವೈರಸ್ ಹರಡುತ್ತದೆ ಎಂಬ ತಪ್ಪು ಮಾಹಿತಿ ಎಲ್ಲೆಡೆ ಹರಡಿತು. ಇದರ ನೇರ ಹೊಡೆತ ಬಿದ್ದಿದ್ದು ಹಣ್ಣಿನ ಬೆಳೆಗಳನ್ನು ಬೆಳೆಯುವ ರೈತರಿಗೆ. ಮಾರುಕಟ್ಟೆಗಳಲ್ಲಿ ಹಣ್ಣುಗಳ ಮಾರಾಟ ತಳಮಟ್ಟಕ್ಕೆ ಕುಸಿಯಿತು. ಅದರಲ್ಲಿಯೂ ಈ ಅವಧಿಯ ಮಾವಿನಹಣ್ಣಿನ ಮಾರಾಟ ನೆಲಕಚ್ಚಿತು. ಉತ್ತಮವಾಗಿ ಬೆಳೆ ಬೆಳೆದರೂ ಕೈಗೆ ಬಂದ ತುತ್ತ ಬಾಯಿಗೆ ಬರಲಿಲ್ಲ.

ಇವೆಲ್ಲದರ ಜೊತೆಗೆ ಬಾವಲಿಗಳನ್ನು ಸಾಮೂಹಿಕವಾಗಿ ಕೊಲ್ಲುವಿಕೆ ಕಾರ್ಯ ಮುಂದುವರಿಯಿತು. ಕೇರಳ, ತಮಿಳುನಾಡು, ಕರ್ನಾಟಕಗಳಲ್ಲಿ ಬಾವಲಿಗಳಿರುವ ಮರಗಳನ್ನು ಕಡಿಯಲಾಗುತ್ತಿದೆ. ನಿಷ್ಪಾಪಿ ಬಾವಲಿಗಳನ್ನು ನಿರ್ದಯವಾಗಿ ಕೊಲ್ಲಲಾಗುತ್ತಿದೆ. ಬಾವಲಿಗಳಿಂದ ರೋಗ ಹರಡುವುದಿಲ್ಲ. ನಿರ್ಭಿತವಾಗಿರಿ ಎಂದು ಸಮರೋಪಾದಿಯಲ್ಲಿ ಪ್ರಚಾರ ಮಾಡಬೇಕಾದ ಆರೋಗ್ಯ ಇಲಾಖೆಗಳ ಧ್ವನಿ ಕ್ಷೀಣವಾಗಿದೆ. ಇದರಿಂದ ಬಾವಲಿಗಳನ್ನು ಕೊಲ್ಲುವಿಕೆ ಮುಂದುವರಿಯುತ್ತಲೇ ಇದೆ.

ಹೀಗೆ ಮಾಡುವುದರ ಮೂಲಕ ನಮ್ಮ ಮೇಲೆ ನಾವೇ ಕಲ್ಲು ಹಾಕಿಕೊಳ್ಳುತ್ತಿದ್ದೇವೆ. ಪರಿಸರದ ಅಸಮತೋಲ ಹೆಚ್ಚಾಗಲು ಕಾರಣವಾಗುತ್ತಿದ್ದೇವೆ. ಈಗಾಗಲೇ ಬಾವಲಿಗಳ ಸಂಖ್ಯೆ ಕಡಿಮೆಯಾಗಿ ಅದರ ಗೈರುಹಾಜರಿಯಿಂದಾದ ದುಷ್ಪರಿಣಾಮ ಎದ್ದು ಕಾಣುತ್ತಿದೆ. ಈಗ ನಿಫಾ ನೆಪದಲ್ಲಿ ಅಳಿದುಳಿದಿರುವ ಬಾವಲಿಗಳನ್ನು ಕೊಂದರೆ ಆಗುವ ಅನಾಹುತ ಅಪಾರ.

ಬಾವಲಿಗಳಿಂದಾಗುವ ಪ್ರಯೋಜನವೇನು?

ಬೆಳೆ ಸಂರಕ್ಷಣೆಗೆ ಬಾವಲಿಗಳಿಂದಾಗುವ ಪ್ರಯೋಜನ ಅಪಾರ. ಏಕೆಂದರೆ ಎಂಥ ಕೀಟನಾಶಕಗಳಿಗೂ ಜಗ್ಗದ-ಬಗ್ಗದ ಬೆಳೆಗಳಿಗೆ ಹಾನಿಕಾರಕವಾದ ಕೀಟಗಳನ್ನು ಇವುಗಳು ಭಕ್ಷಿಸಿ ರೈತರಿಗೆ ಮಹದುಪಕಾರ ಮಾಡುತ್ತವೆ. ಈಗಾಗಲೇ ಕೀಟ ನಿಯಂತ್ರಣಕ್ಕೆ ಹಲವಾರು ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಿ ರಾಸಾಯನಿಕ ಕೀಟನಾಶಕಗಳನ್ನು ಸಿಂಪಡಿಸಲಾಗುತ್ತಿದೆ. ಜೈವಿಕ ನಿಯಂತ್ರಣದ ಕಾರ್ಯವನ್ನು ಅರ್ಥ ಮಾಡಿಕೊಳ್ಳದೇ ನಿಸರ್ಗದ ಸೂಕ್ಷ್ಮಗಳನ್ನು ನಾಶ ಮಾಡಿದ ಪರಿಣಾಮವಾಗಿ ಇಂಥ ದುಷ್ಪರಿಣಾಮವಾಗುತ್ತಿದೆ. ಹಾನಿಕಾರಕ ರಾಸಾಯನಿಕ ಸಿಂಪಡಿಸಿದ ಬೆಳೆಗಳನ್ನು ನಿರಂತರವಾಗಿ ಸೇವಿಸಿದ, ಸೇವಿಸುವ ಕಾರಣದಿಂದಲೇ ಮನುಷ್ಯರಿಗೆ ರೋಗಗಳ ಸರಮಾಲೆಯೇ ಉಂಟಾಗುತ್ತಿದೆ.

ಹೀಗಿರುವಾಗ ಕೀಟಗಳನ್ನು ಭಕ್ಷಿಸಿ, ಮನುಷ್ಯರನ್ನು ಕಾಯುವ ಅಂದರೆ ಸಂರಕ್ಷಿಸು ಬಾವಲಿಗಳನ್ನು ಕೊಂದರೆ ಅದರಿಂದ ಮತ್ತಷ್ಟೂ ಗಂಡಾಂತರ ಉಂಟಾಗುತ್ತದೆ. ಬಾವಲಿಗಳಿಂದ ರಕ್ಷಣೆಯಾಗುವ ಫಸಲಿನ ಮೌಲ್ಯ ಅಪಾರ. ಇದಕ್ಕೆ ರೂಪಾಯಿಗಳಿಂದ ಬೆಲೆ ಕಟ್ಟಲು ಸಾಧ್ಯವಾಗದು. ಇದರಿಂದ ಕೀಟನಾಶಕಗಳಿಗೆ ವೆಚ್ಚಮಾಡುವ ಹಣವೂ ಉಳಿತಾಯವಾಗುತ್ತದೆ.

ಪ್ರಕೃತಿಯ ಸೂಕ್ಷ್ಮತೆಗಳ ಸಮತೋಲನ ಕಾಪಾಡಲು ಕೃಷಿಕರು ತಮ್ಮತಮ್ಮ ಪ್ರದೇಶಗಳ ಬಾವಲಿಗಳನ್ನು ಸಂರಕ್ಷಿಸಲೇಬೇಕು. ಇವುಗಳ ಗೈರುಹಾಜರಿ ಉತ್ತಮ ಗುಣಮಟ್ಟದ ಫಸಲನ್ನು ಪಡೆಯಲು ಬಹುದೊಡ್ಡ ಅಡ್ಡಿಯಾಗುತ್ತದೆ. ದುರಾದೃಷ್ಟವಶಾತ್ ಬಾವಲಿಗಳು ವಾಸಿಸುವ ಹಳೆಯ ಮರಗಳೆಲ್ಲ ನಾನಾ ನೆಪಗಳಿಂದ ಧರೆಗುರುಳುತ್ತಿವೆ.

ಸಾಗಾಟಕ್ಕೆ ಸಾಧ್ಯವಿಲ್ಲದ ಹಣ್ಣುಗಳನ್ನಷ್ಟೆ ಸೇವಿಸುತ್ತವೆ:

ಹಿಂಡುಗಟ್ಟಲೆ ಬಾವಲಿಗಳು ವಿಶ್ರಮಿಸುವ ಹಳೆಯ ಮರಗಳನ್ನು ಕಡಿಯಲೇಬಾರದು. ತೋಟದಲ್ಲಿ ರೆಂಬೆ-ಕೊಂಬೆಗಳನ್ನು ವಿಶಾಲವಾಗಿ ಚಾಚಿಕೊಂಡ ಮರಗಳಿದ್ದರೆ ಅವುಗಳನ್ನು ಉಳಿಸಿಕೊಳ್ಳಬೇಕು. ಬಾವಲಿಗಳು ತೀರಾ ಕಳಿತ, ಕೊಯ್ಲು ಮಾಡಿ, ಸಾಗಾಟ ಮಾಡಲು ಅಸಾಧ್ಯವಾದ ಹಣ್ಣುಗಳನ್ನಷ್ಟೆ ಆಯ್ಕೆಮಾಡಿ ತಿನ್ನುತ್ತವೆ. ಇಂಥ ಆಹಾರ ಮೂಲಗಳಿಗೆ ಧಕ್ಕೆ ಉಂಟು ಮಾಡಬಾರದು. ಕೃಷಿಭೂಮಿಗಳಲ್ಲಿ ಕೀಟ ನಿಯಂತ್ರಣಕ್ಕೆಂದು ಬಳಸುವ ರಾಸಾಯನಿಕಗಳ ದುರ್ವಾಸನೆ ಇವುಗಳಿಗಾಗದು. ಬಾವಲಿಗಳು ಮನುಷ್ಯರಿಗಿಂತ ಹೆಚ್ಚು ಸೂಕ್ಷ್ಮ ಸಂವೇದಿಗಳು.

ವ್ಯವಸ್ಥಿತ ಸಾಕಣೆ:

ಸಾವಯವ ಕೃಷಿಗೆ ಬಾವಲಿಗಳಿಂದುಂಟಾಗುವ ಪ್ರಯೋಜನ ಅರಿತ ಸೆಂಟ್ರಲ್ ಕ್ಯಾಲಿಪೋರ್ನಿಯಾ ಮತ್ತು ಸಾಂತಕ್ರೂಜ್ ಕೃಷಿಕರು ಅವುಗಳನ್ನು ವ್ಯವಸ್ಥಿತವಾಗಿ ಸಾಕಣೆ ಮಾಡುತ್ತಿದ್ದಾರೆ. ಈ ನಿರ್ಧಾರದ ಹಿಂದೆ ಕ್ಯಾಲಿಪೋರ್ನಿಯಾ ವಿಶ್ವವಿದ್ಯಾಲಯದ (YOLO COUNTRY) ಕೃಷಿವಿಜ್ಞಾನಿಗಳಿದ್ದರು. 2000ದ ಇಸವಿಯಲ್ಲಿ ಇವರು ಮೊದಲ ಹಂತದ ಪ್ರಯೋಗಗಳನ್ನು ಕೈಗೊಂಡರು. ಪರಿಕ್ಷಾರ್ಥವಾಗಿ ಹತ್ತು ಮಂದಿ ಸಾವಯವ ಕೃಷಿಕರ ಹೊಲ-ಗದ್ದೆ-ತೋಟಗಳಲ್ಲಿ ಬಾವಲಿ ಸಾಕಣೆ ಕೇಂದ್ರಗಳನ್ನು ಸ್ಥಾಪಿಸಿದರು.

ಸಮಗ್ರ ಕೀಟ ನಿಯಂತ್ರಣಕ್ಕೆ ಬಾವಲಿಗಳಿಂದಾಗುವ ಉಪಯೋಗ ತಿಳಿಯುವುದಕ್ಕಾಗಿ ಈ ಪರೀಕ್ಷೆ ಆರಂಭಿಸಿದ್ದರು. ಆಯ್ಕೆಮಾಡಿದ ಹತ್ತು ಸ್ಥಳಗಳಲ್ಲಿನ ಐದರಲ್ಲಿ ಸಣ್ಣ ಮತ್ತು ಮಧ್ಯಮ ಪ್ರಮಾಣದ ಬಾವಲಿ ಸಾಕಣೆ ಕೇಂದ್ರಗಳು, ಇನ್ನುಳಿದ ಐದರಲ್ಲಿ ದೊಡ್ಡ ಪ್ರಮಾಣದಲ್ಲಿ ಬಾವಲಿ ಸಾಕಣೆ ಮಾಡುವ ಕೇಂದ್ರ ಸ್ಥಾಪಿಸಿದರು.

ಬಾವಲಿಗಳ ಚಲನವಲನ ಅಭ್ಯಸಿಸಿದರು. ಇವುಗಳ ಸಾಕಣೆ ಕೇಂದ್ರ ಆರಂಭಿಸುವುದಕ್ಕೂ ಮೊದಲೇ ಆಯ್ಕೆ ಮಾಡಿದ್ದ ಕೃಷಿಭೂಮಿಗಳಲ್ಲಿ ಬರುತ್ತಿದ್ದ ವಿವಿಧ ಬೆಳೆಗಳ ಫಸಲಿನ ಪ್ರಮಾಣ ದಾಖಲಿಸಿದ್ದರು. ಬಾವಲಿಗಳನ್ನು ಸಾಕಣೆ ಮಾಡಲು ಆರಂಭಿಸಿದ ನಂತರ ಕಟಾವು ಆಗತೊಡಗಿದ ಫಸಲಿನ ಪ್ರಮಾಣವನ್ನು ದಾಖಲಿಸಿಕೊಳ್ಳತೊಡಗಿದರು. ಆಗ ಅಚ್ಚರಿಯ ಫಲಿತಾಂಶ ಕಾಣತೊಡಗಿತು. ಬಾವಲಿಗಳು ಇದ್ದ ಕೃಷಿಭೂಮಿಗಳ ಬೆಳೆಯ ಇಳುವರಿ ಬೆಳೆಯಿಂದ ಬೆಳೆಗೆ ಹೆಚ್ಚಿತ್ತು. ಅದರಲ್ಲಿಯೂ ಹೆಚ್ಚು ಸಂಖ್ಯೆಯಲ್ಲಿ ಬಾವಲಿಗಳು ಇದ್ದ ಕೃಷಿಭೂಮಿಗಳ ಇಳುವರಿ ಪ್ರಮಾಣ ಬಹಳ ಹೆಚ್ಚಿತ್ತು.

ಈ ಎಲ್ಲ ಫಲಿತಾಂಶಗಳು ಪ್ರಕಟವಾದ ನಂತರ ಅಲ್ಲಿ ಬಾವಲಿಗಳನ್ನು ಸಂರಕ್ಷಿಸುವ, ಅವುಗಳು ಇಲ್ಲದೇ ಇರುವ ಪ್ರದೇಶದಲ್ಲಿ ತಂದು ಸಾಕಣೆ ಮಾಡುವ ಪ್ರವೃತ್ತಿ ಬೆಳೆದಿದೆ. ಕೇರಳ, ಕರ್ನಾಟಕ, ತಮಿಳುನಾಡಿನ ಹಲವಾರು ಗ್ರಾಮಗಳಲ್ಲಿಯೂ ಬಾವಲಿಗಳನ್ನು ಸಂರಕ್ಷಣೆ ಮಾಡುವ ಪ್ರವೃತ್ತಿಯಿದೆ. ನಿಫಾ ನೆಪ ಈಗ ಅದಕ್ಕೆ ಕುತ್ತು ತರುತ್ತಿದೆ.

ಕೃಷಿಕರು ಅನಗತ್ಯ ಭಯ ತೊರೆದು ಬಾವಲಿಗಳನ್ನು ಸಂರಕ್ಷಿಸಬೇಕು. ಅವುಗಳನ್ನು ನಾವು ಸಂರಕ್ಷಿಸಿದರೆ ನಾವು ಸೇವಿಸುವ ಬೆಳೆಗಳನ್ನು ಭಕ್ಷಿಸುವ ಕೀಟಗಳನ್ನು ನಿಯಂತ್ರಿಸಿ ನಮ್ಮನ್ನು ಸಂರಕ್ಷಿಸುತ್ತವೆ. ಜೈವಿಕ ರೀತಿಯಲ್ಲಿ ಸಮರ್ಥ ರೀತಿಯಲ್ಲಿ ಹಾನಿಕಾರಕ ಕೀಟಗಳನ್ನು ನಿಯಂತ್ರಿಸಿ ಮನುಕುಲಕ್ಕೆ ಒಳಿತು ಮಾಡುತ್ತವೆ.

LEAVE A REPLY

Please enter your comment!
Please enter your name here