“ಡಾಕ್ಟ್ರೇ ನಮ್ಮ ಎಮ್ಮೆಗೆ ಮೈತುಂಬಾ ತೊನ್ನು. ಇದು ನಮಗೆ ಬರುತ್ತಾ!? ಇದರ ಹಾಲು ಹಿಂಡಬಹುದಾ? ಇದರ ಹಾಲು ಕುಡಿವ ಕರುವಿಗೂ ಈ ಕಾಯಿಲೆ ಬರುತ್ತಾ?? ಎಂದು ಬಹಳ ರೈತರು ವಿಚಾರಿಸುತ್ತಾ ಇರುತ್ತಾರೆ.
ಇನ್ನು ಕೆಲವರು “ ಈ ತೊನ್ನು ಒಂದು ಅನಿಷ್ಟವಂತೆ.. ಮನೆಲಿ ಏಳ್ಗೆ ಇಲ್ವಂತೆ.. ಈ ಎಮ್ಮೆ ಮಾರಿ ಬಿಡ್ತೀವಿ..ಆದ್ರೂ ಇದನ್ನ ಯಾರು ಕೊಳ್ಳದೇ ಇರುವುದರಿಂದ ಏನು ಮಾಡೋದು ?” ಎಂದು ಅಲವತ್ತು ಕೊಳ್ಳುತ್ತಾ ಇರುತ್ತಾರೆ.
ತೊನ್ನು ಅಥವಾ ವಿಟಿಲಿಗೊ(Vitiligo)ಎನ್ನುವುದು ಚರ್ಮದಲ್ಲಿನ ಮೆಲನಿನ್ ಕಡಿಮೆಯಾಗಿ ಚರ್ಮ ಬಿಳಿಯಾಗುವ ಒಂದು ಕಾಯಿಲೆ. ಎಮ್ಮೆಗಳಲ್ಲಿ ಇದು ಸಾಮಾನ್ಯವಾಗಿ ಕಂಡುಬರುತ್ತದೆ. 2-12 ಸೆಂ.ಮೀ. ಗಾತ್ರದ ಬಿಳಿ ಮಚ್ಚೆಗಳು ಕಣ್ಣಿನ ಸುತ್ತ, ಕುತ್ತಿಗೆಯ ಮೇಲೆ, ಹೊಟ್ಟೆ, ಕೆಚ್ಚಲು ಮತ್ತಿತರ ಭಾಗಗಳಲ್ಲಿ ಕಂಡುಬರುತ್ತದೆ. ಇದಕ್ಕೆ ನಿಖರವಾದ ಕಾರಣ ಗೊತ್ತಿಲ್ಲದೇ ಇದ್ದರೂ ಸಹ ತಾಮ್ರದ ಕೊರತೆ ಈ ಎಮ್ಮೆಗಳಲ್ಲಿ ಇರುತ್ತದೆ ಎನ್ನುವುದು ಸಂಶೋಧನೆಗಳಿಂದ ಖಚಿತವಾಗಿದೆ. ತಾಮ್ರದ ಕೊರತೆ ರಕ್ತದಲ್ಲಿದ್ದಾಗ ಮೆಲನಿನ್ ಪ್ರಮಾಣದಲ್ಲಿ ಏರುಪೇರಾಗುತ್ತದೆ.
ಕಾರಣ ಈ ರೀತಿಯ ಎಮ್ಮೆಗಳಿಗೆ ದಿನಕ್ಕೆ 5 ಗ್ರಾಂ ಮೈಲುತುತ್ತವನ್ನು ಅಂದರೆ ಅರ್ಧ ಟೀ ಚಮಚದಷ್ಟನ್ನು ತಜ್ಞ ಪಶುವೈದ್ಯರ ಮಾರ್ಗದರ್ಶನದಲ್ಲಿ ೪-೮ ವಾರ ನೀಡಬಹುದು. ನಿಧಾನವಾಗಿ ತೊನ್ನು ಕ್ರಮೇಣ ಮಾಯವಾಗುತ್ತದೆ. ಆದರೆ ಮೈಲುತುತ್ತ ವಿಷಕಾರಿಯಾಗಿದ್ದು ಮೈಲುತುತ್ತದ ಪ್ರಮಾಣ ದಿನಕ್ಕೆ 5 ಗ್ರಾಂ ಕಿಂತ ಅಥವಾ ಒಂದು ಟೀ ಚಮಚಕ್ಕಿಂತ ಜಾಸ್ತಿ ಆಗಬಾರದು. ಕೆಲವೊಮ್ಮೆ ಇದಕ್ಕೆ ಗುಣವಾಗದಿದ್ದರೂ ಸಹ ಏನೂ ತೊಂದರೆಯಿಲ್ಲ.
ಎಮ್ಮೆಯ ತೊನ್ನು ಮನುಷ್ಯನಿಗೆ ಬರುವುದಿಲ್ಲ. ಹಾಲಿನಿಂದ ಯಾವುದೇ ತೊಂದರೆ ಇಲ್ಲ. ಕರುವಿಗೆ ಆನುವಂಶೀಯವಾಗಿ ಬರುವ ಸಾಧ್ಯತೆಯೇ ಇಲ್ಲ. ಇದನ್ನು ರೈತರು ಅರಿತುಕೊಳ್ಳುವುದು ಒಳ್ಳೆಯದು.
ಡಾ:ಎನ್.ಬಿ.ಶ್ರೀಧರ
ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗ
ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ