ತೇಗದ ಎಲೆ ಊಟದ ತಟ್ಟೆ ಆದ್ರೆ ?

1
ಲೇಖಕರು: ಶಿವಾನಂದ ಕಳವೆ

ನಮ್ಮ ರಾಜ್ಯದಲ್ಲಿ ಲಕ್ಷಾಂತರ ಹೆಕ್ಟೇರ್ ತೇಗದ ನೆಡುತೋಪುಗಳಿವೆ.ಅರಸರ ಹಕ್ಕಿನ ಮರ, ರಾಜ ವೃಕ್ಷ ವೆಂದು ಶತಮಾನಗಳಿಂದ ಖ್ಯಾತಿ ಗಳಿಸಿರುವ ಮರ ತೇಗ. ಇಂದು ಖಾಸಗಿ ಕೃಷಿ ಭೂಮಿಯಲ್ಲಿ ತೇಗ ಬೆಳೆದವರು ಲಕ್ಷಾಂತರ ರೈತರು.

ಮರದ ಬೆಲೆ, ಕಟ್ಟಿಗೆ ವಿಶೇಷತೆ ಎಲ್ಲರಿಗೂ ಗೊತ್ತಿದೆ. ವಿಶಾಲ ಈ ತೇಗದ ಎಲೆಯನ್ನು ಊಟೋಪಚಾರದ ಪತ್ರಾವಳಿಯಾಗಿ ಬಳಸಬಹುದೇ? ಯೋಚಿಸಬೇಕಿದೆ. ಪ್ರವಾಸಿ ತಾಣಗಳು ಇಂದು ಬಿಸಾಡಿದ ಕಾಗದ, ಪ್ಲಾಸ್ಟಿಕ್ ತಟ್ಟೆಗಳ ರಾಶಿಯೇ ಇದೆ. ಮಳೆ ಪ್ರವಾಹದಲ್ಲಿ ಹಳ್ಳ ನದಿಯ ತೀರದಲ್ಲಿ ಇವುಗಳ ಜಮಾವಣೆ ಸಾಮಾನ್ಯ.

ಮುತ್ತುಗ ಎಲೆ ಬಳಕೆ ಹಿಂದಿನಿಂದ ಇದೆ. ಅಡಿಕೆ ಹಾಳೆಯ ತಟ್ಟೆ ಎಲ್ಲೆಡೆ ನೋಡ್ತೇವೆ. ಇವತ್ತು ಪ್ಲಾಸ್ಟಿಕ್ ನಿಷೇಧ ಎಂದು ಹೇಳುತ್ತಲೇ ಇದ್ದೇವೆ,ಬಳಕೆ ಮುಂದುವರಿದಿದೆ. ಪ್ರವಾಸಿಗರು ಊಟ ಮಾಡಿ ಎಸೆದ ತಟ್ಟೆಗಳು ಗಾಳಿಯಲ್ಲಿ ಹಾರಾಡುತ್ತ ಇಡೀ ಪರಿಸರ ಮಾಲಿನ್ಯ ಬಿತ್ತುತ್ತಿವೆ. ಇಂಥ ಸಂದರ್ಭದಲ್ಲಿ ತೇಗದ ಎಲೆಗಳ ತಟ್ಟೆ ಬಗ್ಗೆ ಯೋಚಿಸಬೇಕಿದೆ. ತೇಗ ನೇರ ಬೆಳೆಯಲೆಂದು ಟೊಂಗೆ, ಟಿಸಿಲು ಕತ್ತರಿಸುವ ಅಭ್ಯಾಸ ಕೃಷಿಕರಿಗೆ ಇದೆ. ಈ ಅಗಲ ಎಲೆಯನ್ನು ಸರಿಯಾಗಿ ನೆರಳಲ್ಲಿ ಒಣಗಿಸಿ ತಟ್ಟೆ ಮಾಡಲು ಸಾಧ್ಯವೇ? ಯೋಚಿಸಬೇಕು.

ತೇಗ ಯಾವತ್ತೂ ಶ್ರೀಮಂತರ ಮರ, ಹಿಂದೆ ಬ್ರಿಟಿಷರು ಹಡಗು ನಿರ್ಮಾಣ, ರೇಲ್ವೆ ಸ್ಲೀಪರ್,ಶೌಚಾಲಯದ ಹಲಗೆಗೆ ನಮ್ಮ ತೇಗ ಬಳಸಿದವರು. ಕಾಡಿನ ನೈಸರ್ಗಿಕ ತೇಗ ಕೊರತೆ ಆದಾಗ ದಟ್ಟ ಕಾಡು ಕಡಿದು ನೆಡುತೋಪು ಮಾಡಿದವರು ಅವರು.

ತೇಗದ ತೋಟದ ಹತ್ತಿರದ ಹಳ್ಳಿಗರ ಮನೆಯಲ್ಲಿ ಇಂದಿಗೂ ಇದರ ಖುರ್ಚಿ,ಬೆಂಚ್ ಇಲ್ಲ. ಪ್ಲಾಸ್ಟಿಕ್, ಫೈಬರ್,ಕಬ್ಬಿಣದ ಪೀಠೋಪಕರಣ ನೋಡಬಹುದು. ಈಗಲೂ ಶ್ರೀಮಂತಿಕೆ ಸ್ವತ್ತಾದ ಮರದ ಎಲೆಯನ್ನಾದರೂ ತಟ್ಟೆಯನ್ನಾಗಿ ಬಳಸುವ ಪ್ರಯತ್ನ ನಡೆದರೆ ಶ್ರೀಸಾಮಾನ್ಯರ ಜೊತೆ ಮರದ ದೋಸ್ತಿ ಸಾಧ್ಯ. ಪ್ರವಾಸಿ ತಾಣಗಳ ಕಸದ ರಾಶಿ ಕೂಡಾ ಬದಲಾದೀತು.

ತೇಗದ ಎಲೆ ಊಟದಲ್ಲಿ ಬಳಕೆ ಹಿಂದೆ ಇತ್ತಂತೆ. ಈಗ ಆಯುರ್ವೇದ ವೈದ್ಯರಿಂದ ಇದರ ಊಟದ ತಟ್ಟೆ ಬಳಕೆ ಬಗ್ಗೆ ಆರೋಗ್ಯ ಜ್ಞಾನ ಕೂಡ ಪಡೆಬಹುದು, ಗುಡಿ ಕೈಗಾರಿಕೆ ಮೂಲಕ ತಟ್ಟೆ ತಯಾರಿ ಯೋಜಿಸಬಹುದು.ಮೊದಲ ಒಂದು ವರ್ಷ ಸರಕಾರಿ ಔತಣ ಕೂಟಕ್ಕೆ ಇದನ್ನು ಬಳಸಿ ಜಾಗೃತಿ ಮೂಡಿಸಿದರೆ ಇದಕ್ಕೊಂದು ಘನ ಮಾನ್ಯತೆ ದೊರೆಯಬಹುದು.

ಇಲಾಖೆಯಲ್ಲಿ ಅರಣ್ಯ ಕೈಗಾರಿಕಾ ನಿಗಮ ಇದೆ ಅಲ್ಲವೇ?

ಮೊದಲೇ ಪರಿಸರ ನಾಶ ಆಗ್ತಾ ಇದೆ, ಮತ್ತೇ ತೇಗದ ಎಲೆ ಹರಿಯೋ ಯೋಜನೆ ಹೇಳ್ತೀರಾ? ಎನ್ನಬಹುದು. ತೇಗ ನೆಡುವುದು ಒಳ್ಳೆ ನಾಟ ಸಿಗಲಿ ಎಂದಲ್ಲವೇ? ಮರ ನೇರ ಬೆಳೆದರೆ ಮಾತ್ರ ನಾಟಾ ಎ ” ದರ್ಜೆಯೋ,. ಬಿ ದರ್ಜೆಯೋ ಆಗಿ ಬೆಳೆಯುತ್ತದೆ. ಕಡಿದ ಟೊಂಗೆಯ ಎಲೆ ಉಟದ ತಟ್ಟೆ ಆದ್ರೆ ಮರ ನಿರ್ವಹಣೆ ಮಧ್ಯೇ ಪರಿಸಸ್ನೇಹಿ ನಡುವಳಿಕೆ ಮೂಡಿದಂತೆ ಆಯ್ತು.

ಹೌದು ನೀವು ಏನ್ ಹೇಳ್ತೀರ? ಬಳಸಿ ಬಲ್ಲ ಜ್ಞಾನ ಹೇಳಬಹುದೇ? ಗೂಗಲ್ ನಲ್ಲಿ ಹುಡುಕಿದರೆ ಇದರ ತಟ್ಟೆಯ ವಿಶ್ವ ನೋಟ ನೋಡಬಹುದು. ನಾವು ಮಾಡಿ ಬಳಸುವುದು ಯಾವಾಗ?

ಅಗ್ರಿಕಲ್ಚರ್ ಇಂಡಿಯಾ ವೆಬ್ ತಾಣದಲ್ಲಿ ಸುಸ್ಥಿರ - ಸ್ವಾಭಿಮಾನಿ - ಸಮೃದ್ಧ ಹಾಗೂ ಲಾಭದಾಯಕವಾಗಿ ಕೃಷಿ ಮಾಡಲು ಅಗತ್ಯವಾದ ಮಾಹಿತಿಗಳನ್ನು ನೀಡಲಾಗುತ್ತಿದೆ. ಇನ್ನೂ ಹೆಚ್ಚಿನ ಮಾಹಿತಿಗಳನ್ನು ನೀಡುವ ನಿಟ್ಟಿನಲ್ಲಿ ನೀವೂ ಆರ್ಥಿಕ ನೆರವು ನೀಡಬಹುದು.

1 COMMENT

  1. ತೇಗದ ಎಲೆ ಬಹುಶಃ ಬಲು ಬೇಗ ಹಾಳಾಗುತ್ತದೆ.ಉಪಯೋಗಿಸಿ ನೋಡಿದರೆ ತಿಳಿದೀತು.

LEAVE A REPLY

Please enter your comment!
Please enter your name here