ಕೃಷಿಯಲ್ಲಿ ಬಯೋಚಾರ್ ಮ್ಯಾಜಿಕ್ ಗೊತ್ತೆ ? ವಿವರ ಇಲ್ಲಿದೆ !

0
ಲೇಖಕರು: ಅಣೆಕಟ್ಟೆ ವಿಶ್ವನಾಥ್, ಖ್ಯಾತ ಕೃಷಿತಜ್ಞರು

ಕೊರೊನಾ ಸಮಯದಲ್ಲಿ ಕುಟುಂಬ ಸಮೇತ ತೋಟ ಸೇರಿಕೊಂಡಿದ್ದೆ. ಅಲ್ಲಿ ತೋಟದಲ್ಲಿ ಏನಾದರೂ ಕೆಲಸ ಮಾಡಬೇಕಲ್ಲ, ನನ್ನಿಷ್ಟದ ತರಕಾರಿಗಳನ್ನು ಬೆಳೆಯುವ ಕೆಲಸದಲ್ಲಿ ತೊಡಗಿದೆ. ತರಕಾರಿ ಬೆಳೆಯಲು ನಾನು ಸಾವಯವ ದಾರಿಯನ್ನು ಆಯ್ದುಕೊಂಡಿದ್ದೆ. ಆ ಸಮಯದಲ್ಲಿ ನಾನೊಂದು ಪ್ರಯೋಗವನ್ನು ಮಾಡಿದ್ದೆ. ಅದರ ಯಶಸ್ಸನ್ನು ಇನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.

ವಿಧಾನಸಭೆಯ ಮಾಜಿ ಸ್ಪೀಕರ್ ಕೃಷ್ಣ ಸರ್ ಅವರು ನನಗೆ ಫೋನ್ ಮಾಡಿದಾಗ ಕೃಷಿಯಲ್ಲಿ ಬಯೋಚಾರ ಬಳಕೆ ವಿಚಾರದ ಬಗ್ಗೆ ಅನೇಕ ಬಾರಿ ಮಾತನಾಡಿದ್ದರು. ಇದರ ಪ್ರಯೋಗವನ್ನು ನಾನು ಮಾಡಬೇಕೆಂದು ನಿರ್ಧರಿಸಿದ್ದೆ. ಈ ಬಯೋಚಾರ್ ತಯಾರಿಸುವುದು ನನಗೆ ತರಬೇತಿಯೇನು ಆಗಿರಲಿಲ್ಲ. ನಮ್ಮೂರಲ್ಲಿ ಇದ್ದಿಲನ್ನು ತಯಾರಿಸುವ ರೀತಿ ತೋಟದ ಕಡ್ಡಿಗಳನ್ನೆಲ್ಲಾ ಹಾಕಿ ಇದ್ದಿಲು ತಯಾರಿಸಿದೆ.

ಈ ಇದ್ದಿಲನ್ನು ಜೀವಾಮೃತದಲ್ಲಿ ನೆನೆಸಿ ಕೃಷಿ ಭೂಮಿಗೆ ಸೇರಿಸಿದೆ. ಇದನ್ನು ಬೀನ್ಸ್, ಬೆಂಡೆ ಇವುಗಳಿಗೆ ಬಳಸಿದೆ. ಬೀನ್ಸ್ ಹುಳದ ಹಾವಳಿಗೆ ತುತ್ತಾಯಿತು. ಈ ಬೆಂಡೆಯು ಬೆಳೆದು ಫಲ ಬಿಟ್ಟ ರೀತಿಯನ್ನು ನಾನು ವರ್ಣಿಸಲು ಕಷ್ಟ. ಅದೆಷ್ಟು ಕಾಯಿ ಮುರಿಯುತ್ತಿದ್ದೆವು ದಿನ ಬೆಳಗಾಗುವುದರಲ್ಲಿ ಕಾಯಿ ಮತ್ತೆ ತುಂಬಿರುತ್ತಿದ್ದವು. ನಮ್ಮ ಗೆಳೆಯ ಗೆಳೆತಿಯರಿಗೆಲ್ಲಾ ನೆಂಟರಿಷ್ಟರಿಗೆಲ್ಲಾ ಕೊಟ್ಟೆವು. ಅದೊಂದು ಮ್ಯಾಜಿಕ್ ರೀತಿ ಅನಿಸುತ್ತಿತ್ತು.

ಎಂಟತ್ತು ತಿಂಗಳು ಕಳೆದು ಆಯ್ತು, ಕೋವಿಡ್ ಎಲ್ಲಾ ಮುಗಿದು ಬೆಂಗಳೂರಿಗೆ ವಾಪಸ್ಸಾದೆವು.  ತರಕಾರಿ ಬೆಳೆಯುತ್ತಿದ್ದ ಜಾಗದಲ್ಲಿ ಎರಡು ತೆಂಗಿನ ಮರಗಳಿದ್ದವು. ಆ ತೆಂಗಿನ ಮರಗಳಿಂದ ಒಂದು ದಿನ ಎಳನೀರು ಕಿತ್ತು ಬೆಂಗಳೂರಿಗೆ ತಂದೆ. ಎಳನೀರನ್ನು ಕುಡಿಯಲು ಹೋದಾಗ ಹೆಚ್ಚು ಕಡಿಮೆ ಒಂದು ಚೆಂಬು ಎಳನೀರು ಇದ್ದಂತೆ ಅನಿಸಿತು. ನಾನು ಒಂದು ಎಳನೀರು ಕುಡಿಯಲು ಆಗಲೇ ಇಲ್ಲ.

ಮತ್ತೊಂದು ಎಳನೀರನ್ನು ಕುಡಿಯುವಾಗ ಅಳತೆ ಮಾಡಿದೆನು. ಅದರಲ್ಲಿ 600 ಮಿಲೀ ಗೂ ಅಧಿಕ ಎಳನೀರು ಇತ್ತು. ತೆಂಗಿನ ಬಗ್ಗೆ ಅಧ್ಯಯನ ಮಾಡಿದ ನನಗೆ ಇದು ಕುತೂಹಲವಾಗಿ ಕಂಡಿತು. ಕಾರಣ ಏನೆಂದರೆ, ಹೈಬ್ರಿಡ್ ಕಂಪನಿಯವರು ಎಳನೀರು ಗಿಡಗಳನ್ನು ಹೈಬ್ರಿಡ್ ತೆಂಗಿನ ಸಸಿಗಳನ್ನು ಮಾರಾಟ ಮಾಡುವಾಗ ‘ಇದು 500 ಮಿಲಿ ಎಳನೀರು ನೀಡುತ್ತದೆ’ ಎಂದು ಹೇಳಿಕೊಳ್ಳುತ್ತಾರೆ.

ಹೈಬ್ರಿಡ್ ಗಿಂತಲೂ ಹೆಚ್ಚು ಎಳನೀರು ಈ ತಿಪಟೂರು ಟಾಲ್ ತಳಿಗಳಲ್ಲಿ ಹೇಗೆ ಬಿಟ್ಟಿತೆಂದು ನಾನು ಯೋಚಿಸತೊಡಗಿದೆ. ನನಗೆ ಬಲವಾಗಿ ಅನಿಸಿದ್ದು ಈ ಬಯೋಚಾರ್ ಪ್ರಯೋಗವು ಸಹಕಾರಿಯಾಗಿದೆ. ಇದಲ್ಲದೆ ಅಲ್ಲಿ ಬೇರೇನೂ ಕಾರಣ ಇರಲಿಲ್ಲ. ತರಕಾರಿ ಬೆಳೆಯಲು ತಿಪ್ಪೆಗೊಬ್ಬರ ಬಳಸಿದ್ದೆ, ಮಲ್ಚಿಂಗ್ ಮಾಡಲು ತರಗೆಲೆಗಳ ಹಾಕಿದ್ದೆ. ಜೊತೆಗೆ ಜೀವಾಮೃತ ಹಾಕಿದ್ದೆನು ಅಷ್ಟೆ. ಬೇರೆ ಇನ್ಯಾವ ಮರಗಳಲ್ಲಿಯೂ ನಾನು ಇಷ್ಟು ಗಾತ್ರದ ಎಳನೀರು ನೋಡಿರಲಿಲ್ಲ. ತುಂಬಾ ತೆಳುಗಾತ್ರದ ಸಿಪ್ಪೆ ಹೊಂದಿದ್ದ ಎಳನೀರು ಒಳಗೆ ಚೆಂಬನ್ನು ಹೂತಿಟ್ಟಂತೆ ಅಗಲವಾದ ಚಿಪ್ಪು ಇರುತ್ತಿತ್ತು. ಇದು ಬಯೋಚಾರ್ ಮ್ಯಾಜಿಕ್ ಎಂದು ಹೇಳಲು ನನಗೆ ಯಾವ ಅನುಮಾನವೂ ಉಳಿದಿಲ್ಲ.

ಬಯೋಚಾರ್ ಯಾವುದೋ ಹೊಸ ಕೃಷಿ ವಿಧಾನ ಎಂದು ಯೋಚಿಸಬೇಡಿ. ಇದು ಹಳೆಯ ವಿಧಾನವೆ!! ಸಾವಯವ ಕೃಷಿ ಕೂಡ ಹೊಸ ವಿಧಾನವೇನಲ್ಲ. ಈ ಹಿಂದೆ ಮಾಡುತ್ತಿದ್ದ ಕೃಷಿಯನ್ನು ಬಿಟ್ಟು ಅದರಿಂದ ದೂರವಾಗಿರುವುದರಿಂದ ನಾವು ಮತ್ತೆ ಈಗ ಅದರಲ್ಲಿ ಏನೆಲ್ಲಾ ಉಪಯೋಗ ಇವೆ ಎಂದರಿತು ಅದಕ್ಕೆ ವಾಪಸ್ಸು ಮರಳುತ್ತಿದ್ದೇವೆ. ಸ್ಥಳಾಂತರ ಕೃಷಿ ಮಾಡುತ್ತಿದ್ದ ಹಿಂದಿನ ಕಾಲದಲ್ಲಿ ಕಾಡುಗಳನ್ನು ಕಡಿದು ಸುಟ್ಟು ಆ ನೆಲದಲ್ಲಿ ಬೆಳೆ ಬೆಳೆಯುತ್ತಿದ್ದರು. ಅನೇಕ ವರ್ಷ ಫಲವತ್ತಾದ ಮಣ್ಣಿನಲ್ಲಿ ಬೆಳೆಗಳನ್ನು ಬೆಳೆದು ಫಲವತ್ತತೆ ಕಡಿಮೆಯಾದಾಗ ಅವರು ಅಲ್ಲಿಂದ ಬೇರೊಂದು ಜಾಗಕ್ಕೆ ಹೋಗುತ್ತಿದ್ದರು. ಇದ್ದಿಲನ್ನು ಕೃಷಿಯಲ್ಲಿ ಬಳಸುವುದು ಹಳೆಯ ವಿಧಾನವೇ ಆಗಿದೆ.

ಈ ಬಯೋಚಾರ್ ಎಂಬುದು ಹೇಗೆ ಇಷ್ಟೊಂದು ಮ್ಯಾಜಿಕ್ ಮಾಡುತ್ತಿದ್ದೆ ಎಂದು ನಿಮಗನಿಸಬಹುದು. ವೈಜ್ಞಾನಿಕವಾಗಿ, ಈ ಬಯೋಚಾರ್ ತೇವಾಂಶವನ್ನು ಹಿಡಿದಿಡಲು ಸಹಾಯ ಮಾಡುತ್ತದೆ. ನೀರಿನ ಪೂರೈಕೆ ಹೆಚ್ಚು ಕಡಿಮೆ ಆದಾಗಲೂ ಅದು ಗಿಡಗಳಿಗೆ ನೆರವಾಗುತ್ತದೆ. ಅಷ್ಟೇ ಅಲ್ಲ ಇದು ಸೂಕ್ಷ್ಮಾಣು ಜೀವಿಗಳಿಗೆ ಆಶ್ರಯ ತಾಣವಾಗಿ ಕೆಲಸ ಮಾಡುತ್ತದೆ. ಮಣ್ಣಿನಲ್ಲಿ ಪೋಷಕಾಂಶಗಳನ್ನು ಹಿಡಿದಿಡಲು ಮತ್ತು ಗಿಡಗಳಿಗೆ ಬಿಡುಗಡೆ ಮಾಡಲು ಸಹಕಾರಿಯಾಗಿದೆ. ಗಿಡಗಳ ಬೆಳವಣಿಗೆಯಲ್ಲಿ ಮಣ್ಣಿನಲ್ಲಿ ಪ್ರಮುಖ ಪಾತ್ರ ವಹಿಸುವುದು ತೇವಾಂಶ , ಸೂಕ್ಷ್ಮಾಣು ಜೀವಿಗಳ ಚಟುವಟಿಕೆ ಹಾಗೂ ಪೋಷಕಾಂಶಗಳ ಸಮರ್ಥಬಳಕೆ. ಇವು ಬಯೋಚಾರ್ ಬಳಕೆಯಿಂದ ಪರಿಣಾಮಕಾರಿಯಾಗಿ ಕೆಲಸ ಮಾಡುವುದರಿಂದ, ಗಿಡದ ಆರೋಗ್ಯ ಮತ್ತು ಇಳುವರಿಯಲ್ಲಿ ಗಮನಾರ್ಹ ಬದಲಾವಣೆ ಕಾಣಬಹುದು.

ಇದರ ತಯಾರಿಕೆಯನ್ನು ನಾವು ಕಲಿಯಲೇಬೇಕು. ಬಯೋಚಾರ್ ಎಂದರೆ ಬರೀ ಇದ್ದಿಲಲ್ಲ. ಅದು ಆಮ್ಲಜನಕ ನಿಯಂತ್ರಿತ ಜಾಗದಲ್ಲಿ ವೈಜ್ಞಾನಿಕವಾಗಿ ಇದ್ದಿಲಾಗಿಸಿದ್ದು. ಅಂದರೆ 500 ಡಿಗ್ರಿ ಉಷ್ಣಾಂಶದಲ್ಲಿ ಇದ್ದಿಲನ್ನು ತಯಾರಿಸಬೇಕು. ಆಗ ಆ ಇದ್ದಿಲಿನಲ್ಲಿ ಸೂಕ್ಷ್ಮ ರಂದ್ರಗಳು ಹೆಚ್ಚಾಗಿರುತ್ತವೆ. ಇದು ಪರಿಣಾಮಕಾರಿಯಾಗಿರುತ್ತದೆ. ಅದೇ ರೀತಿ ಬಯೋಚಾರ್ ಒಳಗೆ ಪೋಷಕಾಂಶ ಮತ್ತು ಸೂಕ್ಷ್ಮಾಣು ಜೀವಿಗಳನ್ನು ತುಂಬಬೇಕು. ಇದೆಲ್ಲವನ್ನು ತರಬೇತಿ ಮೂಲಕ ಕಲಿಯಬೇಕು.

ಬಯೋಚಾರ್ ತಯಾರಿಸಲು ದೊಡ್ಡ ದೊಡ್ಡ ಯಂತ್ರಗಳೇ ಬೇಕಿಲ್ಲ. ಆದರೆ ಅದನ್ನು ಸರಳವಾಗಿ ರೈತರೇ ಮಾಡಿಕೊಳ್ಳುವಂತೆ ಮಾಡಲು ತಂತ್ರಜ್ಞಾನ ಲಭ್ಯ ಇವೆ. ಇವುಗಳ ಕುರಿತು ತರಬೇತಿ ಅತ್ಯಗತ್ಯ. ನಿಮಗೆ ಬಯೋಚಾರ್ ನಿಮ್ಮ ತೋಟದಲ್ಲೇ ತಯಾರಿಸುವುದು ಹೇಗೆ? ಅದನ್ನು ಕೃಷಿಯಲ್ಲಿ ಬಳಸುವುದು ಹೇಗೆ? ಇದನ್ನು ಕಲಿಯಲಿಕ್ಕಾಗಿ ಆನೇಕಲ್ ನಲ್ಲಿ ಇದೇ ಸೆಪ್ಟಂಬರ್ 7 ನೇ ತಾರೀಖು ತರಬೇತಿ ಮಾಡುತ್ತಿದ್ದೇವೆ. ಈ ತರಬೇತಿಗೆ ನೀವು ಬಂದು ಕಲಿಯಬಹುದು. ಆದರೆ ಪೂರ್ವ ನೋಂದಣಿ ಕಡ್ಡಾಯ. ಕರೆಮಾಡಿ 8088890138

LEAVE A REPLY

Please enter your comment!
Please enter your name here