ಕೃಷಿ ಪ್ರವಾಸೋದ್ಯಮ,ಏನು? ಹೇಗೆ? ಗೊಂದಲ ಏಕೆ ?

0
ಲೇಖಕರು: ಪ್ರಶಾಂತ್‌ ಜಯರಾಮ್

ಕೃಷಿ ಪ್ರವಾಸೋದ್ಯಮ ಕೃಷಿ ಆಧಾರಿತ ಕಾರ್ಯಾಚರಣೆ ಅಥವಾ ಚಟುವಟಿಕೆಯನ್ನು ಒಳಗೊಂಡಿರುತ್ತದೆ. ಅದು ಸಂದರ್ಶಕರನ್ನು ಕೃಷಿ ಜಮೀನಿಗೆ ಕರೆತರುತ್ತದೆ.ಕೃಷಿ ಜಮೀನಿಗೆ,ರೈತರ ತೋಟದ ಮನೆ,ಹಳ್ಳಿಯ ವಾಸದ ಮನೆಗೆ ಸಂದರ್ಶಕರು ಭೇಟಿ ನೀಡಲು,ಭೇಟಿ ನೀಡುವ ಸಂದರ್ಶಕರು ಮತ್ತು ರೈತರ ಪರಸ್ಪರ ಒಪ್ಪಿಗೆ ಮಾತ್ರ ಸಾಕು. ಬೇರೆ ಯಾವ ಇಲಾಖೆಯ ಅನುಮತಿ ಅಗತ್ಯ ಬರುವುದಿಲ್ಲ.ಸಂದರ್ಶಕರು ವಿದ್ಯಾರ್ಥಿ, ಪ್ರವಾಸಿ,ಆಸಕ್ತರು, ಸಂಶೋಧಕರು, ರೈತರು, ವ್ಯಾಪಾರಿ,… ಹೀಗೆ ಯಾರಾದರೂ ಆಗಿರಬಹುದು.

ಕೃಷಿ ಪ್ರವಾಸೋದ್ಯಮದ ಬಗ್ಗೆ ಹಲವಾರು ಗೊಂದಲಗಳು ಅನಗತ್ಯವಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ಹಲವಾರು ನನ್ನನ್ನು ಸಂಪರ್ಕ ಮಾಡಿ ವಿಚಾರ ಮಾಡಿರುತ್ತಾರೆ. ಕೃಷಿ  ಪ್ರವಾಸೋದ್ಯಮ ನೆಡೆಸಲು ಜಮೀನಿನಲ್ಲಿ ಈ ರೀತಿಯ ಕೊಠಡಿಗಳು ಇರಬೇಕು,ಜಮೀನು ಪರಿವರ್ತನೆ ಮಾಡಿಸಬೇಕು,ಪ್ರವಾಸೋದ್ಯಮ ಇಲಾಖೆಯಿಂದ ಅನುಮತಿ ಪಡೆಯಬೇಕು,ಹೀಗೆ ಇತ್ಯಾದಿಗಳು.

ಕೃಷಿ ಪ್ರವಾಸೋದ್ಯಮ ಹೆಸರಿನಲ್ಲಿ ಇಲಾಖೆ ಮೂಲಕ ಧನ ಸಹಾಯ, ಸಬ್ಸಿಡಿ,ಇತರೆ ನೆರವು ಪಡೆದು ಮಾಡುವವರು ಇಲಾಖೆ ನಿಗದಿಪಡಿಸಿದ ಮಾನದಂಡ ಅನುಸರಿಸಲಿ,ಆದರೆ ರೈತರ ಕೃಷಿ ಜಮೀನಿಗೆ,ಮನೆಗೆ ಭೇಟಿ ನೀಡಲು ಪ್ರವಾಸೋದ್ಯಮದ ಸರ್ಕಾರಿ ಯೋಜನೆಯನ್ನು ತಳಕು ಹಾಕಿಕೊಂಡು ನೋಡುವುದನ್ನು ಬಿಟ್ಟು ಪ್ರತ್ಯೇಕವಾಗಿ ನೋಡಬೇಕು.ಸಂವಿಧಾನ ಬದ್ದವಾಗಿ ಇರುವ ಹಕ್ಕಿನಡಿಯಲ್ಲಿ ವ್ಯಕ್ತಿ ಸ್ವತಂತ್ರದ ಮೂಲಕ ನೆಡೆಸಬಹುದಾದ ಚಟುವಟಿಕೆಗಳನ್ನು ಯಾವುದೋ ಸರ್ಕಾರಿ ಯೋಜನೆಯೊಂದಿಗೆ ತುಲನೆ ಮಾಡಿಕೊಂಡು,ಇರುವ ಅವಕಾಶಗಳಿಗೆ ನಿರ್ಬಂಧ ಹಾಕಿಕೊಳ್ಳುವುದು ಬೇಡ.

ಕೃಷಿ ಪ್ರವಾಸೋದ್ಯಮ ಅನ್ನುವ ಬದಲು ಕೃಷಿ ತರಬೇತಿ /ಅಧ್ಯಯನ /ಜ್ಞಾನ/ಕಲಿಕಾ ಕೇಂದ್ರ ಎಂದು ಕರೆಯುವುದು ಸೂಕ್ತ.ಸದರಿ ಕೇಂದ್ರಗಳಲ್ಲಿ ಕೃಷಿ ವಿಚಾರ,ಬೀಜಗಳ ಸಂರಕ್ಷಣೆ ,ಬೆಳೆ ಆಯೋಜನೆ, ಮೌಲ್ಯವರ್ಧನೆ,ಮಾರುಕಟ್ಟೆ, ಮಣ್ಣಿನ ರಕ್ಷಣೆ, ಇನ್ನಿತರೇ ಸುಸ್ಥಿರ ಕೃಷಿ ವಿಚಾರಗಳ ಬಗ್ಗೆ ವಿಚಾರಗೋಷ್ಠಿ, ಚರ್ಚೆ, ಕಲಿಕೆ, ವಿಚಾರ ವಿನಿಮಯ ನೆಡೆಯುವ ಸ್ಥಳ ಅಷ್ಟೇ,ಇದು ಕೂಡ ಕೃಷಿಯ ಒಂದು ಭಾಗ.ರೈತರ ಜಮೀನಿನಲ್ಲಿ,ಮನೆಗಳಲ್ಲಿ ಏರ್ಪಡಿಸುವ ಗೋಷ್ಠಿ,ಚರ್ಚೆ,ತರಬೇತಿಗೆ ಸಂಪನ್ಮೂಲ ವ್ಯಕ್ತಿಗಳನ್ನು ಬರಮಾಡಿಕೊಳ್ಳಲು,ಜಮೀನಿಗೆ ಭೇಟಿ ನೀಡುವವರಿಗೆ ಊಟ ತಿಂಡಿ,ವಾಸ್ತವ್ಯ ವ್ಯವಸ್ಥೆಗೆ ತಗಲುವ ವೆಚ್ಚವನ್ನು ಸಂದರ್ಶಕರಿಂದ ಪಡೆಯುವುದು,ಇದು ಕೃಷಿ ಚಟುವಟಿಕೆಯ ಆಯವ್ಯಯದ ಒಂದು ಭಾಗ ಅಷ್ಟೇ.

ಸಂದರ್ಶಕರಿಂದ ಶುಲ್ಕ ಪಡೆಯುವುದು ಅಥವಾ ಪಡೆಯದೇ ಇರುವುದು, ಶುಲ್ಕ ಅಥವಾ ಶುಲ್ಕ ವಿನಾಯಿತಿ ಕೊಡುವುದು ರೈತರಿಗೆ ಸಂಬಂಧಪಟ್ಟ ವಿಚಾರವಾಗಿರುತ್ತದೆ.

ರೈತರು ತಮ್ಮ ಕೃಷಿ ಜಮೀನಿಗೆ ಹೊರಗಿನವರನ್ನು ಅಹ್ವಾನ ಮಾಡುವುದು ಮತ್ತು ಅವರು ಬರುವುದು ಅವರಿಬ್ಬರ ಪರಸ್ಪರ ಒಪ್ಪಿಗೆಯ ಮೇಲೆ,ಇದಕ್ಕೆ ಯಾವ ಇಲಾಖೆಯ ಅನುಮತಿ ಬೇಡ.ಹೋಟೆಲ್,ರೆಸಾರ್ಟ್, ಆಟೋ,ಬಸ್ ಇನ್ನಿತರೇ ಸೇವೆಗಳು ಜನರಿಗೆ ಮುಕ್ತವಾಗಿರುತ್ತದೆ. ಅವುಗಳು ಜನರ ಸೇವೆಯನ್ನು ನಿಯಮಗಳ ಚೌಕಟಿನಲ್ಲಿ ಪೂರೈಸಬೇಕು.ರೈತರು ತಮ್ಮ ಜಮೀನಿಗೆ ಜನರನ್ನು ಅಹ್ವಾನ ಮಾಡುವುದು ಅಥವಾ ಮಾಡದೇ ಇರುವುದು ರೈತರ ವೈಯಕ್ತಿಕ ಹಿತಾಸಕ್ತಿ,ಒಪ್ಪಿಗೆ ಮೇಲೆ ನಿರ್ಧಾರವಾಗುತ್ತದೆ.

ಕೃಷಿ ಇಲಾಖೆಯವರು, ರೈತರು, ವಿದ್ಯಾರ್ಥಿಗಳನ್ನು ಪ್ರವಾಸಕ್ಕೆ ಮತ್ತು ವಿವಿಧ ತರಬೇತಿಗಳಿಗೆ ಕರೆದುಕೊಂಡು ಹೋಗುತ್ತಾರೆ,ಕೆಲವೆಡೆ ವಾಸ್ತವ್ಯ ಹೂಡುತ್ತಾರೆ,ಇವರುಗಳು ಯಾರಿಂದ ಅನುಮತಿ ಪಡೆದಿರುತ್ತಾರೆ?ಜಮೀನಿನಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಮತ್ತು  ಜಮೀನಿನಲ್ಲಿ ವಾಸವಾಗಿರುವ ಕೃಷಿ ಕಾರ್ಮಿಕರಿಗೆ ರೈತರ ಜಮೀನಿನಲ್ಲಿ ಕೆಲಸ ಮಾಡಲು ಮತ್ತು ವಾಸ್ತವ್ಯ ಮಾಡಲು ಅನುಮತಿ ಪಡೆಯಲಾಗುತ್ತದೆಯೇ?ಇವರಿಗೆ ಕೊಡುವ ಕೂಲಿ/ಸಂಬಳದ ಮಾಹಿತಿಯನ್ನು ಯಾರು ಕೇಳುತ್ತಾರೆ. ರೈತರು ತೆಗೆದುಕೊಳ್ಳುವ ಶುಲ್ಕ/ಸಂಭಾವನೆಯನ್ನು ತಿಳಿಸುವ ಅಗತ್ಯವಿರುವುದಿಲ್ಲ.

ಸರ್ಕಾರದಿಂದ ಯಾವುದೇ ರೀತಿಯ ಸೇವೆ ಕೊಟ್ಟಾಗ ಅದಕ್ಕೆ ಪ್ರತಿಯಾಗಿ ತೆರಿಗೆ ಕಟ್ಟಬೇಕು,ಸರ್ಕಾರದ ಯಾವುದೇ ನೆರವು ಅಥವಾ ಸೇವೆ ಇಲ್ಲದ ಮೇಲೆ ಕೃಷಿ ಪ್ರವಾಸೋದ್ಯಮಕ್ಕೆ ತೆರಿಗೆ ವಿನಾಯತಿ ಕೊಡಿ ಎಂದು ಕೇಳುವುದು ಸೂಕ್ತವಾಗುವುದಿಲ್ಲ.ಸರ್ಕಾರದ ಯೋಜನೆ ಅನ್ವಯ ಮಾಡುವವರು ಉದ್ಯಮಕ್ಕೆ ಪೂರಕವಾದ ನೆರವು ಬಯಸಬಹುದು.ನಮ್ಮ ಮನೆಗಳಲ್ಲಿ ನಮ್ಮ ಒಪ್ಪಿಗೆಯ ಮೇಲೆ ಹೇಗೆ ನಮ್ಮ ಸಂಬಂಧಿಕರು,ಸ್ನೇಹಿತರು,ಪರಿಚಿತರು ಬಂದು ಹೋಗುತ್ತಾರೆ ಅಥವಾ ವಾಸ್ತವ್ಯ ಮಾಡುತ್ತಾರೆ ಅದೇ ರೀತಿ ರೈತರ ಜಮೀನಿಗೆ ಬಂದು ಹೋಗಲು ಮತ್ತು ವಾಸ್ತವ್ಯ ಮಾಡಲು ಯಾರ ಅನುಮತಿಯ ಅಗತ್ಯ ಬರುವುದಿಲ್ಲ.ರೈತರ ಮನೆ,ಜಮೀನು ವಾಣಿಜ್ಯ ಕೇಂದ್ರವಲ್ಲ,ಅದು ಕೃಷಿ ಚಟುವಟಿಕೆಯ ಒಂದು ಭಾಗ ಅಷ್ಟೇ.

ರೈತರು  ಸಂದರ್ಶಕರನ್ನು ತಮ್ಮ ಜಮೀನಿಗೆ ಅಹ್ವಾನ ನೀಡಿ ಅವರಲ್ಲಿ ಲಭ್ಯವಿರುವ ವ್ಯವಸ್ಥೆ ನೀಡಿ ಸೂಕ್ತ ಶುಲ್ಕ /ಸಂಭಾವನೆ ಪಡೆದು ತಮ್ಮ ಕೃಷಿ ಜ್ಞಾನವನ್ನು ಹಂಚುವುದರ ಜೊತೆಗೆ ಆರ್ಥಿಕವಾಗಿ ಗಳಿಸುವ ಅವಕಾಶಗಳನ್ನು ಉಪಯೋಗ ಮಾಡಿಕೊಳ್ಳಲಿ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 9342434530

LEAVE A REPLY

Please enter your comment!
Please enter your name here