ಕೆಲವೇ ವರ್ಷಗಳ ಹಿಂದಿನ ಮಾತು, ದೇವನಹಳ್ಳಿಯಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಆಗಲಿದೆ ಎಂದು ಅರಿವಾದ ಕೂಡಲೇ ರಿಯಲ್ ಎಸ್ಟೇಟ್ ಕುಳಗಳು ಅಲ್ಲಿಗೆ ಲಗ್ಗೆ ಹಾಕಿದರು. ನೋಡುನೋಡುತ್ತಿದ್ದಂತೆ ಬಹುತೇಕ ರೈತರು ತಮ್ಮತಮ್ಮ ಜಮೀನುಗಳನ್ನು ಮಾರಿದರು. ಕೇಂದ್ರ ಸರ್ಕಾರದ ಸಂಬಂಧಿಸಿದ ಇಲಾಖೆ ಭೂ ಸ್ವಾಧೀನಕ್ಕೆ ಮುಂದಾದಾಗ ರೈತರಿಂದ ಖರೀದಿಸಿದ ಬೆಲೆಗಿಂತ ಹತ್ತಾರು ಪಟ್ಟು ಹೆಚ್ಚಿನ ಬೆಲೆಗೆ ಮಾರಿದರು. ಇತ್ತ ಮೂರ್ನಾಲ್ಕು ವರ್ಷಗಳಲ್ಲಿಯೇ ಭೂಮಿ ಮಾರಿದ್ದ ಸ್ಥಳೀಯರಲ್ಲಿ ಹೆಚ್ಚಿನವರ ಕೈಲಿದ್ದ ಹಣ ಖರ್ಚಾಗಿತ್ತು. ಭೂ ಮಾಲೀಕರಾಗಿದ್ದವರು ಪೇಟೆಯಲ್ಲಿ ಕಾರ್ಮಿಕರಾದರು.
ಇದು ದೇವನಹಳ್ಳಿ ದುರಂತ ಮಾತ್ರವಲ್ಲ. ಕೈಗಾರಿಕೆ, ಅಭಿವೃದ್ಧಿ ಇತ್ಯಾದಿ ಹೆಸರಿನಲ್ಲಿ ಕೃಷಿಭೂಮಿ ಸ್ವಾಧೀನ ಪಡಿಸಿಕೊಳ್ಳುವಾಗೆಲ್ಲ ನಡದ – ನಡೆಯುತ್ತಿರುವ – ನಡೆಯುವ ಕಥೆ – ವ್ಯಥೆ. ಭಾಷಣಗಳಲ್ಲಿ ರೈತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುವ, ರೈತರ ಹೆಸರಿನಲ್ಲಿ ಪ್ರಮಾಣ ವನ ಸ್ವೀಕಾರ ಮಾಡುವ ರಾಜಕೀಯ ನಾಯಕರು ಈಗ ಭೂ ಸುಧಾರಣೆ ಕಾಯಿದೆಗೆ ಭಾರಿ ತಿದ್ದುಪಡಿ ತಂದು ದೊಡ್ಡದೊಂದು ಅನಾಹುತಕ್ಕೆ ಮುನ್ನುಡಿ ಬರೆಯತೊಡಗಿದ್ದಾರೆ.
ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ರಾಜ್ಯದ ಹಳೆಯ ಭೂ ಸುಧಾರಣಾ ಕಾಯಿದೆಗೆ ತಿದ್ದುಪಡಿ ತರಲು ನಿರ್ಧರಿಸಿದೆ. ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸು ಅವರ ಆಶಯಕ್ಕೆ ತದ್ವಿರುದ್ಧವಾಗಿರುವ ಈ ತಿದ್ದುಪಡಿಗಳು ಕಾರ್ಪೊರೇಟ್ ಕುಳಗಳು, ವಾಮಮಾರ್ಗದಲ್ಲಿ ಹಣ ಮಾಡಿದವರು, ಭ್ರಷ್ಟಚಾರದಿಂದ ಸಾವಿರಾರು ಕೋಟಿ ಸಂಪಾದಿಸಿದವರ ತೆಕ್ಕೆಗೆ ರಾಜ್ಯದ ಕೃಷಿಭೂಮಿಯನ್ನು ಚಿನ್ನದ ಹರಿವಾಣದಲ್ಲಿಟ್ಟು ಕೊಡಲು ಹೊರಟಿದೆ.


ಈ ಹಿಂದಿನ ಭೂ ಸುಧಾರಣೆ ಕಾಯಿದೆಯ 79 ಎ, ಬಿ, ಸಿ, ಸೆಕ್ಷನ್ 63ರ ಮುಖ್ಯ ಅಂಶಗಳನ್ನು ರದ್ದು ಮಾಡುವುದಷ್ಟೇ ಅಲ್ಲ, ಅದು ಪೂರ್ವಾನ್ವಯವಾಗುವಂತೆ ರದ್ದು ಮಾಡಲು ಮುಂದಾಗಿದೆ. ಇದರಿಂದ ಈಗಾಗಲೇ ನ್ಯಾಯಾಲಯಗಳಲ್ಲಿ ಇರುವ ಭೂ ಸಂಬಂಧಿತ ಪ್ರಕರಣಗಳನ್ನು ವಜಾ ಮಾಡಿಸುವ ದುರುದ್ದೇಶ ಇದರ ಹಿಂದೆದೆ ಎಂದು ತಜ್ಞರು ಹೇಳುತ್ತಾರೆ.
ಭಾರತದಲ್ಲಿ ಕೃಷಿ ಎಂದರೆ ಬದುಕುವ ಜೀವನಶೈಲಿ. ಆದರೆ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರ ತರಾತುರಿಯಲ್ಲಿ ತರಲು ಮುಂದಾಗಿರುವ ತಿದ್ದುಪಡಿ ಕೃಷಿಭೂಮಿಯನ್ನು ಒಂದು ಆರ್ಥಿಕ ಸರಕಕಾಗಿ ಮಾತ್ರ ನೋಡಿದೆ. ಇದರ ಮೂಲಕವಾಗಿ ಕೃಷಿಯ ಪಾರಾಂಪಾರಿಕ ಮೌಲ್ಯಗಳನ್ನು ಗಾಳಿಗೆ ತೂರಿದೆ. ಕಾಯಿದೆ ಜಾರಿಗೆ ಬಂದ ಕೂಡಲೇ ಗೋಚರವಾಗುವ ಇದರ ಅನಾಹುತಗಳು ಕೇವಲ ಐದಾರು ವರ್ಷಗಳಲ್ಲಿ ಭಾರಿ ಭೀಕರ ಪರಿಣಾಮ ಉಂಟು ಮಾಡುತ್ತವೆ. ಹಳ್ಳಿಗಳು ಅಕ್ಷರಶಃ ನರಕದ ಕೂಪಗಳಾಗುತ್ತವೆ. ಇದ್ಯಾವುದರ ಚಿಂತೆಯೂ ಇಲ್ಲದಂತೆ ತಿದ್ದುಪಡಿಗೆ ಮುಂದಾಗಿರುವುದು ಆಶ್ಚರ್ಯಕರ.
ದೇವರಾಜ ಅರಸು ಅವರು ರೂಪಿಸಿದ್ದ ಭೂ ಸುಧಾರಣಾ ಕಾಯಿದೆಯಲ್ಲಿ ಕೃಷಿಕರಲ್ಲದವರು ಕೃಷಿಭೂಮಿ ಖರೀದಿಸಲು ಅವಕಾಶವೇ ಇರುತ್ತಿರಲಿಲ್ಲ. ಇದು ಗ್ರಾಮೀಣ ಪ್ರದೇಶಕ್ಕೂ ರಿಯಲ್ ಎಸ್ಟೇಟ್ ದಂಧೆ ಚಾಚದಂತೆ ತಡೆದಿತ್ತು. 79 ಬಿ ಸೆಕ್ಷನ್ ಕೃಷಿಕರಲ್ಲದವರು ಭೂಮಿ ಖರೀದಿಸಲು ನಿರ್ಬಂಧ ವಿಧಿಸಿತ್ತು. ಈ ಬಳಿಕ ಸಿದ್ದರಾಮಯ್ಯ ನೇತೃತ್ವದ ಸರ್ಕಾರ 79 ಎ ಕಾಯಿದೆಗೆ ತಿದ್ದುಪಡಿ ತಂದು ಭೂಮಿ ಖರೀದಿಸಲು ಇದ್ದ ಆದಾಯ ಮಿತಿಯನ್ನು 25 ಲಕ್ಷಕ್ಕೆ ಏರಿಸಿತು. 79 ಸಿ ಕಾಯಿದೆ ಪ್ರಕಾರ ಭೂಮಿ ಖರೀದಿಯನ್ನು ಘೋಷಣೆ ಮಾಡದೇ ಇದ್ದರೆ ಭಾರಿ ದಂಡ ವಿಧಿಸಲು ಅವಕಾಶವಿತ್ತು. ಕಾಯಿದೆ 80 ಕೃಷಿಕರಲ್ಲದವರಿಗೆ ಕೃಷಿಭೂಮಿ ವರ್ಗಾವಣೆ ಮಾಡುವುದಕ್ಕೆ ನಿರ್ಬಂಧ ವಿಧಿಸಿತ್ತು. ಕಾಯಿದೆ 63 ರ ಪ್ರಕಾರ ಭೂ ಮಾಲಿಕತ್ವಕ್ಕೆ ಮಿತಿ ವಿಧಿಸಿತ್ತು. ಇದನ್ನು ಮೀರಿದರೆ ಮೊಕದ್ದಮೆ ಹೂಡಿ ಭೂಮಿ ವಶಪಡಿಸಿಕೊಳ್ಳುವ ಅವಕಾಶ ನೀಡಲಾಗಿತ್ತು. ಈಗ ಈ ಎಲ್ಲ ಆಶಯಗಳಿಗೂ ಇತಿಶ್ರೀ ಹಾಡಲು ರಾಜ್ಯ ಸರ್ಕಾರ ಮುಂದಾಗಿರುವುದು ಶೋಚನೀಯ.
ತಿದ್ದುಪಡಿ ನಂತರ ಬರಲಿರುವ ಕಾಯಿದೆಯು ಭೂ ವ್ಯವಹಾರ ನಡೆಸುವ ಕುಳಗಳಿಗೆ ವರದಾನವಾಗುವುದರಲ್ಲಿ ಯಾವುದೇ ಸಂಶಯವೂ ಇಲ್ಲ. ಓರ್ವ ವ್ಯಕ್ತಿ ಅಥವಾ ಒಂದು ಕುಟುಂಬದ ಭೂ ಖರೀದಿ ಪರಿಮಿತಿಯನ್ನು ಹೊಸ ಕಾಯಿದೆಯು 10 ಯೂನಿಟ್ ನಿಂದ 20 ಯೂನಿಟ್ ಗೆ ಏರಿಸುತ್ತದೆ. ಭೂಮಿ ಖರೀದಿಗೆ ಮುಂದಾಗುವ ಕೃಷಿಕರಲ್ಲದ ಕುಟುಂಬದಲ್ಲಿ 5 ಕ್ಕಿಂತ ಹೆಚ್ಚು ಸದಸ್ಯರಿದ್ದರೆ 20 ಯೂನಿಟ್ ನಿಂದ 40 ಯೂನಿಟ್ ತನಕ ಏರಿಕೆ ಮಾಡಲಾಗುತ್ತದೆ. 10 ಯೂನಿಟ್ ಅಂದರೆ ಪಹಣಿಯಲ್ಲಿ ಮಳೆಯಾಶ್ರಿತ ಪ್ರದೇಶವೆಂದು ನಮೂದಾಗಿರುವ ಭೂಮಿ 54 ಎಕರೆ ತನಕ, ನೀರಾವರಿ ಭೂಮಿ ಆದರೆ 20 ಎಕರೆ ತನಕ, ತೋಟವಾದರೆ 13 ಎಕರೆ ತನಕ ಖರೀದಿ ಮಾಡಬಹುದು. ಐದು ಜನರಿಗಿಂತ ಹೆಚ್ಚು ಮಂದಿ ಇರುವ ಕುಟುಂಬವೊಂದು ನೀರಾವರಿ ಸೌಲಭ್ಯ ಇಲ್ಲದ 216 ಎಕರೆ ಕೃಷಿಭೂಮಿಯನ್ನು ನಿರಾತಂಕವಾಗಿ ಖರೀದಿ ಮಾಡಬಹುದು.

ಈಗಾಗಲೇ ವರ್ಷದಿಂದ ವರ್ಷಕ್ಕೆ ಆಹಾರ ಉತ್ಪಾದನೆ ಪ್ರಮಾಣ ಕುಗ್ಗುತ್ತಿದೆ. ನಗರ ಪ್ರದೇಶಗಳಲ್ಲಿರುವ ಕಾರ್ಪೊರೇಟ್ ಕಂಪನಿಗಳವರು, ಭಾರಿ ಉದ್ಯಮಿಗಳು, ಭ್ರಷ್ಟಾಚಾರದಿಂದ ಹಣ ಸಂಪಾದಿಸಿರುವ ರಾಜಕಾರಣಿಗಳು- ಅಧಿಕಾರಿಗಳು ಪ್ರವಾಹೋಪಾದಿಯಲ್ಲಿ ಕೃಷಿಭೂಮಿ ಖರೀದಿ ಮಾಡಿದರೆ ಆಹಾರ ಭದ್ರತೆಗೆ ನಿಶ್ಚಿಂತವಾಗಿ ಕಂಟಕ ಎದುರಾಗುತ್ತದೆ. ಇಷ್ಟೇ ಅಲ್ಲ; ಬರುವ ಹಣವನ್ನು ಹಂಚಿಕೊಳ್ಳುವ ಬಹುತೇಕ ಕೃಷಿಕ ಕುಟುಂಬಗಳು ಅಕ್ಷರಶಃ ಬೀದಿಗೆ ಬರುತ್ತವೆ. ಇದು ಭೂ ಸುಧಾರಣೆ ಕಾಯಿದೆ ತಿದ್ದುಪಡಿ ಮೂಲಕ ಸರ್ಕಾರ ರೈತರ ಕತ್ತು ಹಿಚುಕಲು ಹೊರಟಿದೆಯೇ ಎಂಬ ಪ್ರಶ್ನೆಯನ್ನು ಕೇಳುವಂತೆ ಮಾಡಿದೆ.

2 COMMENTS

    • ಮಾಹಿತಿ ಸರಿಯಾಗಿದೆ. ಉದ್ದೇಶಿತ ಭೂ ಸುಧಾರಣೆ ಕಾಯಿದೆ ತಿದ್ದುಪಡಿ ಕಾನೂನು ಜಾರಿಗೆ ಬಂದರೆ ಪಾರಂಪಾರಿಕ ಕೃಷಿ ವ್ಯವಸ್ಥೆ – ಆಹಾರ ಭದ್ರತೆಗೆ ಕಂಟಕವಾಗುತ್ತದೆ.

LEAVE A REPLY

Please enter your comment!
Please enter your name here