ಬೆಂಗಳೂರು: ಅಕ್ಟೋಬರ್ 06: ರೈತರಿಗೆ ಆರೋಗ್ಯ ಸೌಲಭ್ಯ ನೀಡುವ ‘ಯಶಸ್ವಿನಿ’ ಯೋಜನೆಯನ್ನು 2022ರ ನವೆಂಬರ್ 1 ರಂದು ಚಾಲನೆಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಹೇಳಿದರು.
ಅವರು ಇಂದು ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಆಯೋಜಿಸಿರುವ 50 ಹಾಸಿಗೆ ಸಾಮಥ್ರ್ಯದ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಉಪಕೇಂದ್ರ ಹಾಗೂ ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯ ಮಕ್ಕಳ ತೀವ್ರ ನಿಗಾ ಘಟಕದ ಉಪಕೇಂದ್ರ ಉದ್ಘಾಟಿಸಿ ಮಾತನಾಡಿದರು .
ಆರೋಗ್ಯ ಕ್ಷೇತ್ರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲಾಗಿದೆ. ಪೌಷ್ಟಿಕ ಆಹಾರ ಪೂರೈಸುವ ಜೊತೆಗೆ 4000 ಅಂಗನವಾಡಿಗಳ ಸ್ಥಾಪನೆಗೆ ಕ್ರಮ ವಹಿಸಲಾಗುತ್ತಿದೆ. ಉತ್ತಮ ಆರೋಗ್ಯಕ್ಕೆ ಸ್ವಚ್ಛತೆ ಬಹಳ ಮುಖ್ಯ. ಮುಂದಿನ ಆಗಸ್ಟ್ 15 ರೊಳಗೆ ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯಗಳನ್ನು ನಿರ್ಮಿಸಲಾಗುವುದು ಎಂದರು.
ರಾಜ್ಯದಲ್ಲಿ 430 ರಷ್ಟು ನಮ್ಮ ಕ್ಲಿನಿಕ್ ಗಳನ್ನು ಪ್ರಾರಂಭಿಸಲಾಗುತ್ತಿದೆ. ಇದರಲ್ಲಿ 240 ಕ್ಲಿನಿಕ್ಗಳು ಬೆಂಗಳೂರು ನಗರದ ಪ್ರತಿಯೊಂದು ವಾರ್ಡ್ ಗಳಲ್ಲಿ ಇರಲಿದೆ. 4 ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಬೆಂಗಳೂರಿನಲ್ಲಿ 20 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸುವ ಕಾರ್ಯ ಈಗಾಗಲೇ ಪ್ರಾರಂಭವಾಗಿದೆ ಎಂದರು.
ಸರ್ಕಾರ ಶಿಕ್ಷಣ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಒತ್ತು ನೀಡುತ್ತಿದ್ದು, ಮಾನವನ ಬೆಳವಣಿಗೆಗೆ ಪೂರಕವಾಗಿವೆ. ಆರೋಗ್ಯಕರ ಸಮಾಜವಿದ್ದರೆ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದರು.
ಸಮಾರಂಭದಲ್ಲಿ ಆರೋಗ್ಯ ಸಚಿವ ಡಾ: ಕೆ.ಸುಧಾಕರ್, ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್.ಅಶ್ವತ್ಥ್ ನಾರಾಯಣ್, ಶಾಸಕ ದಿನೇಶ್ ಗುಂಡೂರಾವ್, ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ. ಸಿ.ಎನ್.ಮಂಜುನಾಥ್, ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯ ನಿರ್ದೇಶಕ ಡಾ. ಸಂಜಯ್. ಕೆ.ಎಸ್. ಮತ್ತಿತರರು ಉಪಸ್ಥಿತರಿದ್ದರು.