ಕಳೆದ ವಾರ ತೋಟದಿಂದ ಒಂದು ಸುದ್ದಿ ಬಂತು. ತೋಟಕ್ಕೆ ಸುಮಾರು 35-40 ನವಿಲುಗಳು ಬಂದಿವೆ. ಎರಡು ದಿನಗಳಿಂದ ಅವು ಅಲ್ಲಿಯೇ ಬಿಡಾರ ಹೂಡಿವೆ. ಯಾರಾದರೂ ನೋಡಲು ಹೋದರೆ ಗಿಡದಲ್ಲಿ ಮಾಯವಾಗಿ ಬಿಡುತ್ತವೆ.
ನನಗೆ ನಿಜಕ್ಕೂ ಅಚ್ಚರಿಯಾಗಿ ಹೋಯಿತು. ಬಹುಶಃ ಅವು ನವಿಲು ಆಗಿರಲಿಕ್ಕಿಲ್ಲ. ಬೇರೆ ಯಾವುದೋ ಪಕ್ಷಿಗೆ ನವಿಲು ಅಂದುಕೊಂಡಿರಬಹುದು ಅಂತಾ ಯೋಚಿಸಿ, ಅಲ್ಲಿದ್ದ ಒಬ್ಬ ಹುಡುಗನಿಗೆ ಫೋಟೋ ಕಳಿಸುವಂತೆ ಹೇಳಿದೆ. ಹತ್ತೇ ನಿಮಿಷಕ್ಕೆ ಅವನು ಫೋನ್ ಮಾಡಿ, “ಹೌದ್ರೀ ಸರ್ರಾ, ಎಲ್ಲಾ ನವುಲು ಅದಾವ. ಎರೆಡು ಗಂಡು ನವುಲು ನಾ ನೋಡಿದೆ. ಪೋಟೋ ತೆಗ್ಯಾಕ ಹೋದ್ರ ಅವು ಪುರ್ ಅಂತಾ ಹಾರಿ ಎಲ್ಲಿಗೆ ಹೋದವೋ ಗೊತ್ತಾಗ್ಲಿಲ್ಲ” ಅಂತಾ ತನ್ನ ಅಸಹಾಯಕತೆಯನ್ನು ವ್ಯಕ್ತಪಡಿಸಿದ. ಊರ ಮುಂದೆಯೇ ಇರುವ ತೋಟಕ್ಕೆ ಅಷ್ಟೊಂದು ನವಿಲುಗಳು ಬಂದಿದ್ದೇಕೆ ಅಂತಾ ಅವತ್ತಿನಿಂದ ಯೋಚಿಸುತ್ತಿರುವಾಗಲೇ ಇವತ್ತು ಪ್ರಜಾವಾಣಿಯಲ್ಲಿ ಬಂದ ಲೇಖನವೊಂದನ್ನು ಓದಿ ಅಚ್ಚರಿಗೊಂಡೆ.
ದಕ್ಷಿಣ ಅಮೇರಿಕಾದ ರೆಡ್ ನಾಟ್ ಅನ್ನೋ ಪಕ್ಷಿಗಳು ಸಂತಾನೋತ್ಪತ್ತಿಗಾಗಿ ಉತ್ತರ ಧೃವಕ್ಕೆ ಹೋಗುತ್ತವೆ. ಸುಮಾರು 28 ಸಾವಿರ ಕಿಲೋಮೀಟರ್‌ಗಳ ಪ್ರಯಾಣವಂತೆ ಅದು. ದಾರಿ ಮಧ್ಯೆ ಕೆನಡಾದಲ್ಲಿ ಒಂದು ಬ್ರೇಕ್ ತೆಗೆದುಕೊಳ್ಳುತ್ತವಂತೆ. ಅಲ್ಲಿ ಅವುಗಳಿಗೆ ಏಡಿಯ ಮೊಟ್ಟೆಗಳೇ ಆಹಾರವಂತೆ. ಅದನ್ನು ತಿಂದು ಮತ್ತೆ ತಮ್ಮ ಪಯಣವನ್ನು ಮುಂದುವರೆಸುತ್ತವೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಹಕ್ಕಿಗಳು ಬರೋ ವೇಳೆ ಏಡಿಗಳು ಮೊಟ್ಟೆಗಳನ್ನೇ ಇಡುತ್ತಿಲ್ಲವಂತೆ. ಇದಕ್ಕೆ ಕಾರಣ ಪರಿಸರದಲ್ಲಿ ಆಗುತ್ತಿರೋ ಬದಲಾವಣೆಯಂತೆ. ಇದನ್ನು ಓದುತ್ತಲೇ ನನ್ನ ತೋಟಕ್ಕೆ ಬಂದ ನವಿಲುಗಳ ನೆನಪಾಯಿತು.
ಬಹುಶಃ ಯಾರದ್ದೂ ಓಡಾಟವಿರದ ಹಾಗೂ ತಿನ್ನಲು ಭೂರೀ ಭೋಜನ ಸಿಗೋ ಕಾರಣಕ್ಕೆ ಎಲ್ಲ ಪ್ರದೇಶ ಬಿಟ್ಟು ನಮ್ಮ ತೋಟಕ್ಕೆ ಬಂದವಾ? ಅನ್ನೋ ಪ್ರಶ್ನೆ ಮೂಡತೊಡಗಿದೆ. ಏಕೆಂದರೆ ಇತ್ತೀಚಿಗೆ ತೋಟದಲ್ಲಿ ಹಾವುಗಳ ಸಂಖ್ಯೆ ಮಿತಿ ಮೀರಿದೆ.ಯಾವ ಕಡೆಗೆ ಹೋದರೂ ಹಾವುಗಳು ತಮ್ಮ ತಮ್ಮ ಪ್ರದೇಶಕ್ಕೆ ನಮ್ಮನ್ನು ಸ್ವಾಗತಿಸಿ ಮರೆಯಾಗುತ್ತವೆ. ಬಹುಶಃ ಅವುಗಳ ನಿಯಂತ್ರಣಕ್ಕಾಗಿ ಪ್ರಕೃತಿ ತನ್ನದೇ ಆದ ರೀತಿಯಲ್ಲಿ ನವಿಲುಗಳನ್ನು ಕಳಿಸಿದೆಯಾ? ಗೊತ್ತಿಲ್ಲ. ಏನೇ ಆಗಲಿ ಕೊಪ್ಪಳದಂಥ ಪ್ರದೇಶದಲ್ಲಿ ಅಪರೂಪವೆನಿಸೋ ನವಿಲುಗಳು ಅಷ್ಟೊಂದು ಸಂಖ್ಯೆಯಲ್ಲಿ ನನ್ನ ತೋಟಕ್ಕೆ ಬಂದಿದ್ದು ನನಗಂತೂ ಸಾಕಷ್ಟು ಖುಷಿ ತಂದಿದೆ. ಇಷ್ಟು ದಿನ ಕಷ್ಟಪಟ್ಟು ಗಿಡ-ಮರಗಳನ್ನು ಬೆಳೆಸಿದ್ದು ಸಾರ್ಥಕ ಅನ್ನಿಸೋದೇ ಇಂಥ ಕ್ಷಣಗಳನ್ನು ನೆನೆದು..!
****
ಎಲ್ಲರಿಗೂ ವಿಶ್ವ ಪರಿಸರ ದಿನದ ಶುಭಾಶಯಗಳು…!