ಲೇಖಕರು: ಶೈಲೇಶ್ ಉಜಿರೆ & ಕೃಷ್ಣಪ್ರಶಾಂತ್. ವಿ

ತೋಟಗಳಲ್ಲಿ, ಕಾಡುಗಳಲ್ಲಿ ತನ್ನಷ್ಟಕ್ಕೇ ತಾನೇ ಹುಟ್ಟಿ ಬೆಳೆಯುವ ಈ ಮೆಣಸನ್ನು ಲವಂಗ ಮೆಣಸು, ಚೂರು ಮೆಣಸು, ಗಾಂಧಾರಿ ಮೆಣಸು, ನುಚ್ಚು ಮೆಣಸು, ಸಣ್ಣಮೆಣಸು, ಕಾಂತರಿ ಜೀರಿಗೆ ಮೆಣಸು ಹೀಗೆ ಆಯಾ ಪ್ರದೇಶಕ್ಕೆ ಹೊಂದಿಕೊAಡು ಹಲವಾರು ಹೆಸರುಗಳಿಂದ ಗುರುತಿಸುತ್ತಾರೆ. ಥೈಲಾಂಡ್ ಮೂಲದ ಈ ಮೆಣಸಿನ ವ್ಶೆಜ್ಞಾನಿಕ ಹೆಸರು ‘ಕ್ಯಾಪ್ಸಿಕಂ ಚೈನೀಸ್. ಇಂಗ್ಲೀಷಿನಲ್ಲಿ ಬರ್ಡ್ ಐ ಚಿಲ್ಲಿ ಅಂತಲೂ ಕರೆಯುತ್ತಾರೆ, ೧ ರಿಂದ ೨ ಸೆಂಟಿ ಮೀಟರ್ ನಷ್ಟು ಸಣ್ಣ ಗಾತ್ರ. ಆದರೆ ಬಲು ಖಾರ. ಹಣ್ಣಾದಾಗ ಸುಂದರ ಕೆಂಪು ಬಣ್ಣ. ಈ ಮೆಣಸಿನಕಾಯಿ ಹಳ್ಳಿ ಜನರಿಗಂತೂ ಚಿರ ಪರಿಚಿತ.

ಹಳ್ಳಿಯ ಭಾಗದಲ್ಲಿ ಹೆಚ್ಚಾಗಿ ಬಳಸುತ್ತಿದ್ದ ಈ ಮೆಣಸನ್ನು ಈ ಹಿಂದೆ ಮಾರಾಟ ಮಾಡುತ್ತಿರಲಿಲ್ಲ. ಆದರೆ ಇದರಲ್ಲಿರುವ ಅದ್ಭುತ ಔಷಧೀಯ ಗುಣಗಳನ್ನು ತಿಳಿದ ಮೇಲೆ ಜನರು ಇದನ್ನು ಅಡುಗೆಗೆ ಹೆಚ್ಚಾಗಿ ಬಳಸುತ್ತಿದ್ದು ಇದರ ವಾಣಿಜ್ಯ ಮೌಲ್ಯ ಕೂಡ ಈಗ ಹೆಚ್ಚಾಗಿದೆ. ಮಾರುಕಟ್ಟೆಯಲ್ಲಿ ೧೦೦ ಗ್ರಾಂ ಗಾಂಧಾರಿ ಮೆಣಸಿಗೆ ೬೫೦ರಿಂದ ೭೦೦ ರೂಪಾಯಿ ದರವಿದೆ. ಹೆಚ್ಚಾಗಿ ಗಾಂಧಾರಿ ಮೆಣಸಿನ ಗಿಡಗಳನ್ನು ನೆಟ್ಟು ಬೆಳೆಸುವುದಿಲ್ಲ. ಇದರ ಕೆಂಪು ಬಣ್ಣದ ಹಣ್ಣಿಗೆ ಆಕರ್ಷಿತರಾಗಿ ಬರುವ ಹಕ್ಕಿಗಳು ತಾವು ಹಣ್ಣು ತಿಂದ ನಂತರ ಬೇರೆ ಬೇರೆ ಸ್ಥಳಗಳಲ್ಲಿ ಹಾಕಿದ ಹಿಕ್ಕೆಯಲ್ಲಿನ ಬೀಜಗಳಿಂದ ಸಸಿಗಳು ಹುಟ್ಟುತ್ತವೆ. ನಂತರ ಅದರ ಪಾಡಿಗೆ ಬೆಳೆದು ಸಮೃದ್ಧವಾಗಿ ಕಾಯಿ ಬಿಡುತ್ತವೆ.

ಗಾಂಧಾರಿ ಮೆಣಸು ಹಾಕಿ ಮಾಡುವ ಪದಾರ್ಥದ ಸ್ವಾದ ಇತರ ಮೆಣಸು ಹಾಕಿ ಮಾಡುವ ಅಡುಗೆಗಿಂತ ತುಂಬಾ ಭಿನ್ನವಾಗಿರುತ್ತದೆ. ಹಾಗೆಂದು ಅಡುಗೆಯಲ್ಲಿನ ಇದರ ಪ್ರಮಾಣ ತುಸು ಜಾಸ್ತಿಯಾದರೂ ಖಾರ ನೆತ್ತಿಗೇರುವುದು ನಿಶ್ಚಿತ. ರುಚಿಯಲ್ಲಿ ಎಷ್ಟೇ ಖಾರವಿದ್ದರೂ ದೇಹಕ್ಕೆ ಇದು ಬಲುತಂಪು.

ಇನ್ನು ಗಾಂಧಾರಿ ಮೆಣಸಿನಲ್ಲಿರುವ ಪ್ರಮುಖ ಔಷಧೀಯ ಗುಣಗಳನ್ನು ತಿಳಿಯೋಣ:
ಗಾಂಧಾರಿ ಮೆಣಸು ಜೀರ್ಣಕ್ರಿಯೆಯನ್ನು ವೃದ್ಧಿಸುತ್ತದೆ. ಹಲ್ಲುಗಳ ವಸಡುಗಳನ್ನು ಬಲಪಡಿಸುತ್ತದೆ. ಇದನ್ನು ಹಲ್ಲು ನೋವಿನ ನಿವಾರಣೆಗೆ ಮನೆಮದ್ದಾಗಿ ಬಳಸುತ್ತಾರೆ. ಇನ್ನು ಈ ಮೆಣಸನ್ನು ಮಿತ ಪ್ರಮಾಣದಲ್ಲಿ ಅಡುಗೆಯಲ್ಲಿ ಬಳಸಿ ಸೇವಿಸುವುದರಿಂದ ಸಂಧಿವಾತ, ಸ್ನಾಯು ಸೆಳೆತ ಸಮಸ್ಯೆ ಕಾಡುವುದಿಲ್ಲ. ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುವಲ್ಲಿ ಈ ಮೆಣಸು ಅತ್ಯಂತ ಉಪಕಾರಿ. ಕೈಕಾಲುಗಳಲ್ಲಿ ಊತ, ಗುಳ್ಳೆಗಳು ಸಮಸ್ಯೆ ಕಾಣಿಸಿಕೊಂಡರೆ ಗಾಂಧಾರಿ ಮೆಣಸನ್ನು ಮನೆಮದ್ದಾಗಿ ಬಳಸುತ್ತಾರೆ. ಅದೇ ರೀತಿ ಹೃದಯದ ಆರೋಗ್ಯವನ್ನು ನಿಯಂತ್ರಣದಲ್ಲಿಡಲು ಇದು ಸಹಕಾರಿ. ಬೊಜ್ಜು ಬರುವುದನ್ನು ತಡೆಗಟ್ಟುವಲ್ಲಿ ಕೂಡ ಗಾಂಧಾರಿ ಮೆಣಸು ಸಹಕಾರಿ.

ಸಾಮಾನ್ಯ ಹಸಿ ಮೆಣಸು ಆರೋಗ್ಯಕ್ಕೆ ಅಷ್ಟೊಂದು ಉಪಕಾರಿಯಲ್ಲ. ಆದರೆ ಗಾಂಧಾರಿ ಮೆಣಸನ್ನು ಬಳಸುವಂತೆ ವೈದ್ಯರೂ ಸಲಹೆ ನೀಡುತ್ತಾರೆ. ಆಯುರ್ವೇದದಲ್ಲಿ ಕಾಳುಮೆಣಸಿನ ನಂತರ ಗಾಂಧಾರಿ ಮೆಣಸಿಗೆ ಪ್ರಮುಖ ಸ್ಥಾನವನ್ನು ನೀಡಲಾಗುತ್ತದೆ.

ಗೈಸ್ ಆನ್ ವೀಲ್ಸ್

LEAVE A REPLY

Please enter your comment!
Please enter your name here