ಬೆಂಗಳೂರು ನಗರ ಜಿಲ್ಲೆ ಹೆಸರಘಟ್ಟ ಹೋಬಳಿಯ ದೊಡ್ಡವೆಂಕಟಪ್ಪ ಅವರಿಗೆ ಹಳ್ಳಿಕಾರ್ ರಾಸುಗಳನ್ನು ಸಾಕುವ ಖಾಯಷ್. ‘ರಾಸುಗಳು ಚೆನ್ನಾಗಿರಬೇಕಾದರೆ ತಳಿಯೂ ಶುದ್ದವಾಗಿರಬೇಕು’ ಎಂಬುದು ಇವರ ಮಾತು. ಈ ನಿಟ್ಟಿನಲ್ಲಿ ಹಳ್ಳಿಕಾರ್ ತಳಿ ಸಂವರ್ಧನೆ ಪ್ರವೃತ್ತಿ ರೂಢಿಸಿಕೊಂಡಿದ್ದಾರೆ. ಈ ತಳಿಯ ಹೋರಿಗಳು, ಹೈನುರಾಸುಗಳು ಮತ್ತು ಎತ್ತುಗಳು ಇವರಲ್ಲಿವೆ. ಹಳ್ಳಿಕಾರ್ ತಳಿಯ ರಾಸುಗಳು ಕಡಿಮೆಯಾಗುತ್ತಿವೆ. ಬಹಳ ಚೆಂದನೆಯ ರಾಸುಗಳಿವು. ದುಡಿಮೆಗೆ-ಹೊರೆ ಎಳೆಯುವುದಕ್ಕೆ ಇವುಗಳಿಗೆ ಸರಿಸಾಟಿಯಿಲ್ಲ. ಚೆನ್ನಾಗಿ ಸಾಕಾಣಿಕೆ ಮಾಡಿದರೆ ನೋಡುವುದೇ ಒಂದು ಸಂತೋಷ. ಇಂಥ ತಳಿ ಕಣ್ಮರೆಯಾಗಲು ಬಿಡಬಾರದು. ಈ ನಿಟ್ಟಿನಲ್ಲಿ ನನ್ನ ಕೈಲಾದ ಸೇವೆ ಮಾಡಲು ತಳಿ ಸಂವರ್ಧನೆ ಪ್ರವೃತ್ತಿ. ವ್ಯವಸಾಯ ನನ್ನ ಪೂರ್ಣ ವೃತ್ತಿ ಎನ್ನುತ್ತಾರೆ.

ಹಳ್ಳಿಕಾರ್ ಹೋರಿ ಎತ್ತುಗಳನ್ನು ಬೇಸಾಯಕ್ಕೆ-ಸಾರಿಗೆಗೆ ಬಳಸುವುದಿಲ್ಲ. ಇವುಗಳ ಬಳಕೆ ತಳಿ ಸಂವರ್ಧನೆಗೆ ಮಾತ್ರ. ಬಹಳ ಮುತುವರ್ಜಿಯಿಂದ ಹೋರಿಗಳನ್ನು ಸಾಕುತ್ತಾರೆ. ಅದಕ್ಕೆ ನಿತ್ಯ ವಿಶೇಷ ತಿಂಡಿಗಳನ್ನು ನೀಡುತ್ತಾರೆ. ಭತ್ತ-ರಾಗಿ-ಜೋಳದ ಹುಲ್ಲುಗಳನ್ನು ನೀಡುತ್ತಾರೆ. ಹಸಿರು ಹುಲ್ಲು ಕಡ್ಡಾಯವಾಗಿ ನೀಡುತ್ತಾರೆ.

ಹಳ್ಳಿಕಾರ್ ಹೈನುರಾಸುಗಳ ಹಾಲು ಏನಿದ್ದರೂ ಅದರ ಕರುವಿಗೆ. ಮನೆಬಳಕೆಗೆ ಈ ಹಾಲು ಬಳಸುವುದಿಲ್ಲ. ತಾಯಿಹಾಲು ಚೆನ್ನಾಗಿ ಕುಡಿದ ಕರುವಿನ ಬೆಳವಣಿಗೆಯೂ ಚೆನ್ನಾಗಿರುತ್ತದೆ. ಹಸುಗಳಿಗೆ ಕ್ರಾಸ್ ಮಾಡಿಸಿದಾಗ ಇಂತಿಷ್ಟೇ ಶುಲ್ಕ ನೀಡಲು ಪೀಡಿಸುವುದಿಲ್ಲ. ಆದರೆ ಇವತ್ತಿನ ಪರಿಸ್ಥಿತಿಯಲ್ಲಿ ಹಳ್ಳಿಕಾರ್ ರಾಸುಗಳನ್ನು ಚೆನ್ನಾಗಿ ಸಾಕಾಣಿಕೆ ಮಾಡುವುದು ದುಬಾರಿ ಎಂದು ರೈತರು ಅರಿತಿರುವುದರಿಂದಲೇ ಕೈ ಹಿಡಿಯದೇ ಹಣ ನೀಡುತ್ತಾರೆ.

ಹೋರಿಗಾಗಿ ರಾಸು ಆಯ್ಕೆಮಾಡುವಾಗ ವಿಶೇಷ ಗುಣಲಕ್ಷಣದ ಕಡೆ ಗಮನನೀಡುತ್ತಾರೆ. ಹೋರಿಗೆ ಎಲ್ಲ ರಾಸುಗಳನ್ನು ಆಯ್ಕೆಮಾಡಲಾಗುವುದಿಲ್ಲ. ಅದರದೇ ಆದ ವಿಶಿಷ್ಟ ಗುಣ-ಲಕ್ಷಣಗಳಿರಬೇಕು. ದಶಕಗಳಿಂದ ರಾಸು ಸಾಕಾಣಿಕೆ ಮಾಡುವುದರಿಂದ ಹಳ್ಳಿಕಾರ್ ಹೈನುರಾಸು ಈದ ಹೋರಿಗಳನ್ನು ಮಾರುವುದಿಲ್ಲ. ಅವುಗಳನ್ನು ಚೆನ್ನಾಗಿ ಸಾಕುತ್ತಾರೆ. ಇದರಲ್ಲಿ ಸೂಕ್ತವೆನ್ನಿಸಿದ ಕರುಗಳನ್ನು ಹೋರಿ ಉದ್ದೇಶಕ್ಕಾಗಿಯೇ ಬಳಸುತ್ತಾರೆ. ಉಳಿದ ಗಂಡುಕರುಗಳನ್ನು ಬೀಜಹೊಡೆದು ವ್ಯವಸಾಯ-ಸರಕು ಸಾಗಾಣಿಕೆ ಉದ್ದೇಶಕ್ಕೆ ಬಳಸುತ್ತಾರೆ ಇಲ್ಲವೇ ಮಾರಾಟ ಮಾಡುತ್ತಾರೆ.

ಹೈನುರಾಸುಗಳನ್ನಂತೂ ಮಾರುವ ಪ್ರಶ್ನೆಯೇ ಇಲ್ಲ ಹೋರಿ ರಾಸುಗಳನ್ನು 18-20 ವಯಸ್ಸಿನವರೆಗೂ ತಳಿ ಸಂವರ್ಧನೆಗೆ ಬಳಸುತ್ತೇವೆ. ಹೋರಿಗಳಿಗೆ ಹೆಚ್ಚು ವಯಸ್ಸಾದಂತೆ ಹುಟ್ಟುವ ಕರುಗಳು ಆರೋಗ್ಯವಾಗಿರುತ್ತವೆ. ರೋಗನಿರೋಧಕತೆ ಹೆಚ್ಚು. ದಷ್ಟ-ಪುಷ್ಟತೆಯೂ ಉಳಿದವುಗಳಿಂತ ಹೆಚ್ಚಾಗಿರುತ್ತದೆ.

ಎಳೆಯ ಹೋರಿಗಳಿಂದ ಹೋರಿ ಕೊಡಿಸುವುದಕ್ಕಿಂತಲೂ ವಯಸ್ಸಾದ ಹೋರಿಗಳಿಂದ ಹೈನುರಾಸಿಗೆ ಕ್ರಾಸ್ ಮಾಡಿಸುವುದು ಹೆಚ್ಚು ಫಲದಾಯಕ ಎನ್ನುತ್ತಾರೆ.

ಇಬ್ಬಂದಿ: ಸುತ್ತಮುತ್ತಲ ಗ್ರಾಮಗಳವರು ಬೆದೆಗೆ ಬಂದ ಸೀಮೇಹಸುಗಳನ್ನು ಕರೆತಂದು ಹಳ್ಳಿಕಾರ್ ಹೋರಿಯಿಂದ ಕ್ರಾಸ್ ಮಾಡಿಸುತ್ತಾರೆ. ಕೃತಕ ಗರ್ಭಧಾರಣೆಗಿಂತ ಇದು ಸೂಕ್ತ ಎಂಬುದು ಇಂಥವರ ಅಭಿಪ್ರಾಯ. ಹಳ್ಳಿಕಾರ್ ಹೋರಿ ಮತ್ತು ಸೀಮೇಹಸು ಸಂಗಮದಿಂದ ಹುಟ್ಟುವ ರಾಸುಗಳಿಗೆ ‘ಇಬ್ಬಂದಿ’ ಎನ್ನುತ್ತಾರೆ. ಇವು ಎರಡೂ ತಳಿಯ ಗುಣ-ಲಕ್ಷಣಗಳನ್ನು ಹೊಂದಿರುತ್ತವೆ. ಇಂಥ ಹೈನುರಾಸುಗಳು ಕೊಡುವ ಹಾಲಿನ ಪ್ರಮಾಣವೂ ಹೆಚ್ಚು ಎನ್ನುವುದು ದೊಡ್ಡವೆಂಕಟಪ್ಪ ಅವರ ಮಾತು ‘ಹಳ್ಳಿಕಾರ್ ತಳಿ ರಾಸುಗಳನ್ನು ಕಾಪಾಡುವ ಹೊಣೆಗಾರಿಕೆ ರೈತಾಪಿಗಳ ಮೇಲಿದೆ. ಅವರು ಟ್ರಾಕ್ಟರ್-ಟಿಲ್ಲರ್ ಯಾವುದನ್ನೇ ಇಟ್ಟುಕೊಂಡಿರಲಿ. ಅವರ ಹಟ್ಟಿಗಳಲ್ಲಿ ಒಂದು ಜೊತೆ ಹಳ್ಳಿಕಾರ್ ತಳಿಯ ರಾಸುಗಳು-ಒಂದು ಹೈನು ರಾಸು ಇರಲೇಬೇಕು. ಇದು ರೈತರ ಮನೆಗೆ ಲಕ್ಷಣ. ಇವುಗಳ ಗೊಬ್ಬರದಿಂದ ಫಸಲು ಚೆನ್ನಾಗಿರುತ್ತದೆ’ ಇದು ದೊಡ್ಡ ವೆಂಕಟಪ್ಪ ಅವರ ಮಾತು.

2 COMMENTS

  1. Can u Provide the Details of Dodda Venkatappa Ie Phone or Village Name , So that We Can Contact Him , If Possible I Can Take Few Cattles From Him . Regards Lakshmisha . U Can Msg Me on My WhatsApp No 6361190772.

    • ವಿವರಗಳನ್ನು ನಿಮ್ಮ ವಾಟ್ಸಪ್ ನಂಬರಿಗೆ ಕಳಿಸುತ್ತೇವೆ

LEAVE A REPLY

Please enter your comment!
Please enter your name here