ಮಣ್ಣಿನ ರಸಸಾರ ತಿಳಿಯದೇ ಮುಂದಡಿಯಿಡಬೇಡಿ

0

ಬೆಳೆಗಳನ್ನು ಉತ್ತಮವಾಗಿ ಬೆಳೆದು, ಅತ್ಯುತ್ತಮ ಇಳುವರಿ ಪಡೆಯಲು ಪ್ರತಿಯೊಬ್ಬ ಕೃಷಿಕರೂ ಶ್ರಮಿಸುತ್ತಾರೆ. ಇದಕ್ಕಾಗಿ ಸಮಯ, ಶ್ರಮ, ಹಣ ವಿನಿಯೋಗಿಸುತ್ತಾರೆ. ಇವರು ಪಟ್ಟ ಕಷ್ಟಕ್ಕೆ ತಕ್ಕ ಪ್ರತಿಫಲ ದೊರೆಯದಿದ್ದಾಗ ಸಹಜವಾಗಿಯೇ ಬೇಸರವಾಗುತ್ತದೆ. ಕೆಲವೊಮ್ಮೆ ಪ್ರಾಕೃತಿಕ ವಿಕೋಪಗಳಾದ ಅತಿವೃಷ್ಟಿ-ಅನಾವೃಷ್ಟಿಗಳಿಂದಲೂ ಬೆಳೆ ಹಾಳಾಗುತ್ತದೆ. ಇದನ್ನು ಹೊರತುಪಡಿಸಿದ ಸಂದರ್ಭಗಳಲ್ಲಿಯೂ ನಿರೀಕ್ಷಿತ ಪ್ರಮಾಣದ ಇಳುವರಿ ದೊರೆಯದಿದ್ದರೆ ಅದು ತೀವ್ರವಾಗಿ ಚಿಂತಿಸಿ, ಸೂಕ್ತಕ್ರಮ ತೆಗೆದುಕೊಳ್ಳಬೇಕಾದ ಸಂಗತಿ.

ಯಾವುದೇ ಬೆಳೆಗಳನ್ನು ಬೆಳೆಯುವ ಮುನ್ನ ಮಣ್ಣಿನ ಗುಣಧರ್ಮ ಅದರ ರಸಸಾರದ ಮಟ್ಟ ತಿಳಿಯುವುದು ಅತ್ಯಗತ್ಯ. ಮಣ್ಣಿನಲ್ಲಿ ಯಾವ ಬಗೆಯ ಪೋಷಕಾಂಶಗಳಿವೆ, ಯಾವುದರ ಕೊರತೆ ಇದೆ ಎಂದು ತಿಳಿಯಬೇಕು.  ಹೀಗೆ ಮಾಡದೇ ಹಣ ಖರ್ಚು ಮಾಡಿ ತಂದು ಪೂರೈಸಿದ ಪೋಷಕಾಂಶಗಳು ಬೆಳೆಗೆ ಮುಳುವಾಗುವ ಸನ್ನಿವೇಶವೂ ಉಂಟಾಗಬಹುದು. ಆದ್ದರಿಂದ ಮಣ್ಣಿನ ರಸಸಾರ ( Ph) ಮಟ್ಟ ತಿಳಿಯುವುದು ಅತ್ಯಗತ್ಯ ಎಂದು ಬ್ಯಾರಿಕ್ಸ್  ಸಂಸ್ಥೆಯ ಹಿರಿಯ ವಿಜ್ಞಾನಿ ಲೋಕೇಶ್ ಮಾಕಮ್ ಅಭಿಪ್ರಾಯಪಡುತ್ತಾರೆ.

ಫಲವತ್ತಾದ ಮಣ್ಣು ಎಂದರೆ ಅದು ಸಸ್ಯಗಳಿಗೆ ಅಗತ್ಯವಾದ ಪೋಷಕಾಂಶಗಳನ್ನು ಅವುಗಳಿಗೆ ಅವಶ್ಯಕ ಪ್ರಮಾಣ ಮತ್ತು ರೂಪದಲ್ಲಿ ಪೂರೈಸುವಂತಿರಬೇಕು. ಆದ್ದರಿಂದ ಆಗಾಗ ಮಣ್ಣಿನ ಪರೀಕ್ಷೆಯನ್ನು ಮಾಡಿಸುವುದು ಅದರಲ್ಲಿರುವ ರಾಸಾಯನಿಕ ಅಂಶ ಮತ್ತು ಅವುಗಳು ಇರುವ ಪ್ರಮಾಣವನ್ನು ತಿಳಿಯಲು ಸಹಾಯಕವಾಗುತ್ತದೆ. ಇದೇನೂ ದುಬಾರಿ ವೆಚ್ಚದ ಪರೀಕ್ಷೆಯಲ್ಲ. ಆದ್ದರಿಂದ ಈ ಕಾರ್ಯಕ್ಕೆ ಆದ್ಯತೆ ನೀಡಬೇಕು ಎನ್ನುವುದು ಲೋಕೇಶ್ ಮಾಕಮ್ ಅವರ ಸಲಹೆ.

ಈ ಕಾರ್ಯದಿಂದ ಏಕಕಾಲದಲ್ಲಿ ಮಣ್ಣಿನಲ್ಲಿ ಇರುವ ಪೋಷಕಾಂಶಗಳ ಪ್ರಮಾಣ ತಿಳಿಯುತ್ತದೆ. ಒಂದು ವೇಳೆ ಆಮ್ಲೀಯ ಮಣ್ಣು, ಲವಣಯುಕ್ತ ಮಣ್ಣು ಅಥವಾ ಕ್ಷಾರೀಯ ಮಣ್ಣು ಆಗಿದ್ದರೆ ಅದನ್ನು ಸರಿಪಡಿಸಲು ಕೂಡ ಸಹಾಯಕವಾಗುತ್ತದೆ. ಇದರಿಂದ ಯಾವ ಗೊಬ್ಬರ ಹಾಕಬೇಕು ಅಥವಾ ಹಾಕಬಾರದು, ಪೂರೈಸಬೇಕಾದ ಗೊಬ್ಬರಗಳ ಪ್ರಮಾಣವೆಷ್ಟು ಎಂಬುದು ಸಹ ತಿಳಿಯುತ್ತದೆ. ಈ ಅಂಶಗಳು ಮುಖ್ಯವಾಗಿ ಹಣದ ಉಳಿತಾಯವನ್ನು ಮಾಡುತ್ತವೆ.

ಸಾಮಾನ್ಯವಾಗಿ ಮಣ್ಣಿನ ರಸಸಾರ ೬.೩ ರಿಂದ ೭ ಮಟ್ಟದಲ್ಲಿ ಇದ್ದರೆ ಮಣ್ಣಿನ ರಸಸಾರ ಉತ್ತಮ ಮಟ್ಟದಲ್ಲಿದೆ. ೬.೩ಕ್ಕಿಂತಲೂ ಕಡಿಮೆ ಇದ್ದರೆ ಹುಳಿ ಅಥವಾ ಆಮ್ಲೀಯ ಮಣ್ಣು ಎನ್ನಲಾಗುತ್ತದೆ. ೮.೩ಕ್ಕಿಂತ ಅಧಿಕವಾಗಿದ್ದರೆ ಕ್ಷಾರೀಯ ಮಣ್ಣು ಎಂದು ಅಭಿಪ್ರಾಯಪಡಲಾಗುತ್ತದೆ.

ಕಡಿಮೆ ರಸಸಾರದ ಜೊತೆಗೆ ಕಡಿಮೆ ಪ್ರಮಾಣದಲ್ಲಿ ಪೂರೈಕೆಯಾಗುವ ಸೋಡಿಯಂ ಅಂಶವಿದ್ದರೆ ಲವಣ ಅಥವಾ ಚೌಳುಮಣ್ಣು ಎನ್ನಲಾಗುತ್ತದೆ. ಆದ್ದರಿಂದ ಮಣ್ಣಿನ ರಸಸಾರ ೬.೫ ರಿಂದ ೭ ಅಥವಾ ೭.೨ರಲ್ಲಿರಬೇಕು. ಮಣ್ಣು ಸಮಸ್ಯತ್ಮಾಕ ಮಟ್ಟದಲ್ಲಿದ್ದರೆ ಯಾವಯಾವ ಕ್ರಮ ಕೈಗೊಳ್ಳಬೇಕು ಎಂಬುದನ್ನು ಮಣ್ಣುಪರೀಕ್ಷೆ ಫಲಿತಾಂಶದ ನಂತರ ವಿಜ್ಞಾನಿಗಳು ಸಲಹೆ ನೀಡುತ್ತಾರೆ. ಆಗ ಮಣ್ಣಿನ ರಸಸಾರವನ್ನು ಸೂಕ್ತಮಟ್ಟಕ್ಕೆ ತರುವುದು ಸಾಧ್ಯವಾಗುತ್ತದೆ.

ಈ  ನಿಟ್ಟಿನಲ್ಲಿ ಮೊಟ್ಟಮೊದಲನೇಯದಾಗಿ ಮಣ್ಣಿನ ರಸಸಾರದ ಮಟ್ಟವನ್ನು ತಿಳಿಯುವುದು ಅತ್ಯಗತ್ಯ ಏನೇನು ಸಮಸ್ಯೆಗಳಾಗುತ್ತವೆ: ಗುಣಮಟ್ಟದ ಬೀಜಗಳನ್ನು ಬಿತ್ತನೆ ಮಾಡಿದರೂ ಸಹ ಅವುಗಳು ಚೆನ್ನಾಗಿ ಮೊಳಕೆಯೊಡೆಯುವುದಿಲ್ಲ. ಮೊಳಕೆಯೊಡೆದವುಗಳ ಬೆಳವಣಿಗೆಯೂ ಕುಂಠಿತವಾಗಿರುತ್ತದೆ.
ಜೈವಿಕ ಗೊಬ್ಬರಗಳಾದ ರೈಜೋಬಿಯಂ, ಅಜಟೋಬ್ಯಾಕ್ಟರ್, ಅಜೋಸ್ಪೈರಿಲಮ್ ಫಾಸ್ಪೇಟ್ ಸಾಲುಬಲೈಜಿಂಗ್ ಬ್ಯಾಕ್ಟೀರಿಯಾ ಮತ್ತು ಮೈಕೋರೈಜಾ ಚಟುವಟಿಕೆ, ವೃದ್ಧಿಗೆ ಬೇಕಾದ ಪೂರಕ ಅಂಶಗಳು ದೊರೆಯುವುದಿಲ್ಲ.ಸಸ್ಯಗಳ ಬೆಳವಣಿಗೆ: ಮಣ್ಣಿನ ಕಣಗಳ ರಚನೆ ಮೇಲೂ ರಸಸಾರ ಪರಿಣಾಮ ಬೀರುತ್ತದೆ. ರಸಸಾರ ನಿಗದಿತ ಮಟ್ಟದಲ್ಲಿದ್ದರೆ ಸಸ್ಯಗಳ ಬೇರು ಆಳವಾಗಿ ಇಳಿಯಲು, ಮಣ್ಣಿನ ಮೇಲ್ಮೈಯಿಂದಾಚೆಯೂ ಅದು ಉತ್ತಮವಾಗಿ ಬೆಳೆಯಲು ಸಹಾಯಕವಾಗುತ್ತದೆ. ಉತ್ತಮ ಇಳುವರಿಯನ್ನೂ ಸಹ ನಿರೀಕ್ಷಿಸಬಹುದು.

ಎರೆಹುಳುಗಳ ಚಟುವಟಿಕೆ: ಮಣ್ಣಿನ ರಸದಾರ ನಿಗದಿತ ಮಟ್ಟದಲ್ಲಿ ಇರದಿದ್ದರೆ ಅಲ್ಲಿ ಮಣ್ಣಿನ ಫಲವತ್ತತೆ ಹೆಚ್ಚಿಸಲು ನಿರಂತರವಾಗಿ ದುಡಿಯುವ ಎರೆಹುಳುಗಳ ಸಂಖ್ಯೆ ಗಣಮೀಯವಾಗಿ ಕುಂಠಿತವಾಗುತ್ತದೆ. ಈ ಎಲ್ಲ ಅಂಶಗಳು ಮಣ್ಣಿನ ಆರೋಗ್ಯ ಮತ್ತು ಬೆಳೆಯ ಬೆಳವಣಿಗೆ ಮೇಲೆ ಅನಾನುಕೂಲಕರ ಪರಿಸ್ಥಿತಿ ಉಂಟು ಮಾಡುತ್ತವೆ ಎಂದು ಲೋಕೇಶ್ ಮಾಕಮ್ ತಿಳಿಸುತ್ತಾರೆ.

ಅನೇಕ ಕಾರಣಗಳು: ಹುಳಿಮಣ್ಣಾಗುವುದಕ್ಕೆ ಅನೇಕ ಕಾರಣಗಳಿವೆ. ಈ ರೀತಿಯ ಮಣ್ಣಿನ ರಸಸಾರವನ್ನು ನಿಗದಿತ ಮಟ್ಟಕ್ಕೆ ತರಲು ಅಗತ್ಯವಾದ ಕ್ರಮಗಳನ್ನು ಅನುಸರಿಸಬೇಕು. ಮೊದಲೇ ಹೇಳಿದ ಹಾಗೆ ಮಣ್ಣಿನ ಮಾದರಿ ತೆಗೆದು ಪರೀಕ್ಷೆ ಮಾಡಿಸುವುದು, ಮಣ್ಣಿಗೆ ಅಗತ್ಯವಾದ ಸುಣ್ಣದ ಪ್ರಮಾಣವನ್ನು ತಿಳಿಯುವುದು. ಬಿತ್ತನೆ/ನಾಟಿ ಮಾಡುವುದಕ್ಕೆ ಕನಿಷ್ಟ ೩ ರಿಂದ ೪ ವಾರ ಮುಂಚಿತವಾಗಿ ಸುಣ್ಣ ಹಾಕಬೇಕು. ತಜ್ಞರು ಶಿಫಾರಸು ಮಾಡಿದ ಪ್ರಮಾಣದಷ್ಟು ಸುಣ್ಣವನ್ನು ಮಾತ್ರ ಪುಡಿ ಮಾಡಬೇಕು. ಮಣ್ಣು ತೇವಾಂಶದಿಂದ ಕೂಡಿರುವಾಗ ಜಮೀನಿನ ಮೇಲೆ ಹರಡಬೇಕು. ನಂತರ ಉಳುಮೆ ಮಾಡಿ ಮಣ್ಣಿನಲ್ಲಿ ಮಿಶ್ರಣವಾಗುವಂತೆ ಮಾಡಬೇಕು. ಮಳೆಯಾಶ್ರಿತ ಸುಣ್ಣ ಹಾಕಿದ ಬಳಿಕ  ಪ್ರದೇಶವಾಗಿದ್ದರೆ ೨ ರಿಂದ ೩ ಸಲ ಮಳೆಯಾದ ಮೇಲೆ ಬಿತ್ತನೆ/ನಾಟಿ ಮಾಡುವುದು ಅತ್ಯಗತ್ಯ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 99008 00033

LEAVE A REPLY

Please enter your comment!
Please enter your name here