ಸೊಳ್ಳೆ ದೂರವಿರಿಸಲು ಮನೆಮದ್ದುಗಳು

0

ಸೊಳ್ಳೆಗಳು ಕಾಯಿಲೆಗಳನ್ನು ತರುವುದಷ್ಟೇ ಅಲ್ಲ; ನಿದ್ರೆಯನ್ನು ಹಾಳು ಮಾಡುತ್ತವೆ. ಮಲಗುವ ಸ್ಥಳದಲ್ಲಿ ಹೊಕ್ಕ ಒಂದೇ ಒಂದು ಸೊಳ್ಳೆ ಭಾರಿ ಕಿರಿಕಿರಿ ಉಂಟು ಮಾಡುತ್ತದೆ. ಅದರಲ್ಲೂ ಅಸಂಖ್ಯಾತ ಸೊಳ್ಳೆಗಳು ಸೇರಿದರೆ ಪರಿಸ್ಥಿತಿ ಏನಾಗಬೇಡ ? ಸೊಳ್ಳೆಯನ್ನು ದೂರವಿರಿಸಲು ಮಸ್ಕಿಟೋ ಕಾಯಿಲ್ ಗಳು, ಲಿಕ್ವಿಡ್ ಗಳ ಅತಿಯಾದ ಬಳಕೆ ಆರೋಗ್ಯಕ್ಕೆ ಸೂಕ್ತವಲ್ಲವೆಂದು ಹೇಳುತ್ತಾರೆ. ಹಾಗಿದ್ದರೆ ಪರಿಹಾರ ? ಖಂಡಿತ ಮನೆಯಲ್ಲಿಯೇ ಮಾಡಿಕೊಳ್ಳುವ ಪರಿಹಾರಗಳಿವೆ.

ಸಿಟ್ರೊನೆಲ್ಲ ಹುಲ್ಲು

ಸಿಟ್ರೊನೆಲ್ಲ ಹುಲ್ಲು ಎಲ್ಲೆಡೆ ಸಿಗುತ್ತದೆ. ಇವುಗಳ ಬೇರುಗಳ ಕಟಿಂಗ್ ತಂದು ಮನೆಮುಂದಿನ ಕುಂಡದಲ್ಲಿ ನೆಟ್ಟರೂ ಹುಲುಸಾಗಿ ಬೆಳೆಯುತ್ತದೆ.  ಇವುಗಳ ನಾಲ್ಕೈದು ಎಸಳುಗಳನ್ನು ಕತ್ತರಿಸಿ ಮಲಗುವ ಸ್ಥಳದ ಮೂಲೆಯಲ್ಲಿಟ್ಟರೆ ಸೊಳ್ಳೆಗಳು ಅತ್ತ ಸುಳಿಯುವುದಿಲ್ಲ. ಸಿಟ್ರೊನೆಲ್ಲದ ಸುವಾಸನೆ ಇಡೀ ಕೊಠಡಿ ಆವರಿಸುವುದರಿಂದ ಮನಸು ಕೂಡ ಪ್ರಫುಲವಾಗುತ್ತದೆ. ನಿದ್ದೆಯೂ ಚೆನ್ನಾಗಿ ಬರುತ್ತದೆ.

ತೈಲ

ಸಿಟ್ರೊನೆಲ್ಲದ ಭಟ್ಟಿ ಇಳಿಸಿದ ತೈಲದ ಬಳಕೆ ಮತ್ತಷ್ಟೂ ಪರಿಣಾಮಕಾರಿ. ಇದರ ನಾಲ್ಕೈದು ಹನಿಯನ್ನು ಸುಗಂಧ ಪ್ರಸಾರಕದಲ್ಲಿ ಹಾಕಿ. ಸೊಳ್ಳೆಗಳು ಕೊಠಡಿಗಿರಲಿ ಮನೆ ಬಳಿಯೂ ಸುಳಿಯುತ್ತದೆ. ಇದರ ಸುವಾಸನೆ ಅಷ್ಟು ಗಾಢ. ಇದು ಕೂಡ ಮನಸಿನ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ದುಗುಡಗಳು ದೂರವಾಗುತ್ತವೆ. ನಿದ್ದೆಯೂ ಚೆನ್ನಾಗಿ ಬರುತ್ತದೆ.

ಕೊಬ್ಬರಿ ಎಣ್ಣೆ ಜೊತೆ ಮಿಶ್ರಣ

ನಾಲ್ಕೈದು ಹನಿ ಕೊಬ್ಬರಿ ಎಣ್ಣೆ ಮತ್ತು ನಾಲ್ಕೈದು ಹನಿ ಸಿಟ್ರೊನೆಲ್ಲ ಮಿಶ್ರಣ ಮಾಡಿ ಚರ್ಮಕ್ಕೆ ನಯವಾಗಿ ಸವರಿಕೊಳ್ಳಿ. ಈ ವಿಧಾನದಿಂದಲೂ ಸೊಳ್ಳೆಗಳನ್ನು ದೂರವಿರಿಸಿ ನಮ್ಮ ಆರೋಗ್ಯ, ಮನೆಮಂದಿಯ ಆರೋಗ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳಬಹುದು.

ಆಲ್ಲೋಹಾಲ್ ಜೊತೆ ಮಿಶ್ರಣ

ನಾಲ್ಕೈದು ಹನಿ ಆಲ್ಕೋಹಾಲ್ ನೊಂದಿಗೆ ನಾಲ್ಕೈದು ಹನಿ ಸಿಟ್ರೊನೆಲ್ಲ ಮಿಶ್ರಣ ಮಾಡಿ. ಮನೆ ಒರೆಸುವಾಗ ನೆಲಕ್ಕೆ ಇದನ್ನು ಹಾಕಿ ಒರೆಸುವುದರಿಂದಲೂ ಇದರ ಘಮ ಮನೆಯಲ್ಲಿ ಹರಡುತ್ತದೆ. ಇದರಿಂದಲೂ ಸೊಳ್ಳೆಗಳನ್ನು ದೂರವಿರಿಸಬಹುದು

ಮುನ್ನೆಚ್ಚರಿಕೆ

ನಿತ್ಯವೂ ಒಂದೇ ವಿಧಾನದ ಸುವಾಸನೆ ಇದ್ದರೆ ಕ್ರಮೇಣ ಸೊಳ್ಳೆಗಳು ಅವುಗಳಿಗೂ ಹೊಂದಿಕೊಳ್ಳಬಹುದು. ಆದ್ದರಿಂದ ಆಗಾಗ ನಿಂಬೆಹುಲ್ಲಿನ ಬಳಕೆಯೂ ಇರಲಿ.ಕೆಲವು ಸಲ ಟ್ರೀ ಟೀ ತೈಲ,ಲವಂಗ ಚಕ್ಕೆ ಎಣ್ಣೆಗಳು, ನೀಲಗಿರಿ, ರೋಸ್ಮೆರಿಯ ಬಳಕೆ ಮಾಡಿ.

ಅತಿ ಬಳಕೆ ಬೇಡ

ಯಾವುದನ್ನೇ ಆಗಲಿ ಅತಿಯಾಗಿ ಬಳಸುವುದು ಸೂಕ್ತವಲ್ಲ. ಮಲಗುವಾಗ ಸೊಳ್ಳೆ ಪರದೆಯ ಬಳಕೆಯೂ ಇರಲಿ.ಮಿತವಿದ್ದಲ್ಲಿ ಹಿತವೂ ಇರುವುದು, ಗಿಡ-ತೈಲ ಬೇಕಿದ್ದಲ್ಲಿ ನಾವಿದ್ದೇವೆ.

ಲೇಖಕರು: ಡಾ. ಹರೀಶ್ ಬಿ.ಎಸ್.

LEAVE A REPLY

Please enter your comment!
Please enter your name here