ಏಕಜಾತಿಯ ನೆಡುತೋಪು ಪರಿಸರಕ್ಕೆ ಅಪಾಯಕಾರಿ

0
ಲೇಖಕರು: ನಾಗರಾಜ ಕೂವೆ

ಒಂದು ಕಾಲದಲ್ಲಿ, ಪಶ್ಚಿಮ ಘಟ್ಟಗಳಲ್ಲಿನ ಹುಲ್ಲುಗಾವಲುಗಳನ್ನು ‘ಹಸಿರು ಮರುಭೂಮಿ’ ಎಂದು ತೀರ್ಮಾನಿಸಿದ್ದ ಅರಣ್ಯ ಇಲಾಖೆ, ಅಲ್ಲಿ ಅರಣ್ಯೀಕರಣ ಮಾಡಲು ಇನ್ನಿಲ್ಲದ ಪ್ರಯತ್ನ ಮಾಡುತ್ತಲೇ ಇತ್ತು. ಆದರೆ ಇಲಾಖೆಯು ಗಿಡ ನೆಟ್ಟ ಜಾಗದಲ್ಲಿ ಮಳೆಗಾಲದಲ್ಲಿ ಸೊಂಪಾಗಿ ಹುಲ್ಲು ಬೆಳೆದರೆ, ಬೇಸಿಗೆಯಲ್ಲಿ ಬೆಂಕಿ ಬಿದ್ದು ನೆಟ್ಟಿದ್ದ ಸಸಿಗಳೆಲ್ಲಾ ಬೆಂದು ಹೋಗುತ್ತಿದ್ದವು. ಇದರಿಂದಾಗಿ ಪ್ರತಿವರ್ಷದ ಹುಲ್ಲುಗಾವಲಿನ ಅರಣ್ಯೀಕರಣದ ಯಶಸ್ಸು ಶೇಕಡ 10 ಕೂಡಾ ದಾಟುತ್ತಿರಲಿಲ್ಲ. ಇದರಿಂದ ತೀವ್ರ ನಿರಾಶರಾಗಿದ್ದ ಅರಣ್ಯಾಧಿಕಾರಿಗಳಿಗೆ ಅಕೇಶಿಯಾ ವಿಸ್ಮಯದಂತೆ ಕಂಡಿತು.

ಹೆಚ್ಚೆಂದರೆ ಒಂದು ಮೀಟರ್ ಆಳಕ್ಕೆ ಮಾತ್ರ ಬೇರಿಳಿಸುವ, ತಾಯಿ ಬೇರೇ ಇಲ್ಲದ, ಅತೀ ಶೀಘ್ರವಾಗಿ ಬೆಳೆಯುವ ಅಕೇಶಿಯಾ ಎಲ್ಲರಿಗೂ ಸೋಜಿಗದಂತೆ ಕಂಡಿತು. ನೆಟ್ಟ ಸಸಿಗಳೆಲ್ಲಾ ಯಾವುದೇ ಅಡೆತಡೆಗಳಿಲ್ಲದೇ, ಯಾವ ಕಾಲಕ್ಕೂ ಜಗ್ಗದೇ, ಎಲ್ಲಾ ಪ್ರತಿಕೂಲ ಪರಿಸ್ಥಿತಿಯನ್ನು ಹಿಮ್ಮೆಟ್ಟಿಸಿ, ಮರಗಳಾಗುತ್ತಿದ್ದುದನ್ನು ಕಂಡು ಎಲ್ಲರೂ ಅಚ್ಚರಿಪಟ್ಟುಕೊಂಡರು. ಈ ಸಸಿನಾಟಿಯ ನಂತರ ಹುಲ್ಲಿನ ಬೆಳವಣಿಗೆ ನಿಯಂತ್ರಣಕ್ಕೆ ಬಂತು. ಅರಣ್ಯಕ್ಕೆ ಬೆಂಕಿ ಬೀಳುವುದು ಕಡಿಮೆಯಾಯಿತು. ತಮ್ಮ ಇಲ್ಲಿಯವರೆಗಿನ ಎಲ್ಲಾ ಸಮಸ್ಯೆಗಳಿಗೆ ಅಕೇಶಿಯಾ ಒಮ್ಮೆಲೇ ಪರಿಹಾರ ಒದಗಿಸಿತು ಎಂದು ಅರಣ್ಯಾಧಿಕಾರಿಗಳು ಹಿರಿಹಿರಿ ಹಿಗ್ಗಿದರು.

1984 ರಲ್ಲಿ ವಿಶ್ವಬ್ಯಾಂಕ್ ಅರಣ್ಯೀಕರಣಕ್ಕೆಂದು ₹55 ಕೋಟಿ ಮೊತ್ತದ ನೆರವನ್ನು ಕರ್ನಾಟಕ ಸರ್ಕಾರಕ್ಕೆ ನೀಡಿತು. ಅದು ನೀಡುವ ಧನಸಹಾಯದ ಶೇಕಡ 40ರಷ್ಟು ಹಣವನ್ನು ಉಷ್ಣವಲಯದ ನಿತ್ಯಹರಿದ್ವರ್ಣ ಪ್ರದೇಶಗಳಲ್ಲಿ ಕೈಗಾರಿಕಾ ನೆಡುತೋಪು ಬೆಳೆಸಲು ಉಪಯೋಗಿಸಬೇಕೆಂಬ ಷರತ್ತು ಇತ್ತು. ಈ ಧನ ಸಹಾಯದ ಉದ್ದೇಶವೇ ನಗರವಾಸಿಗಳಿಗೆ ಅಗತ್ಯವಾದ ಉರವಲು ಪೂರೈಸಲು ಉಪಯುಕ್ತ ಸಸ್ಯ ಬೆಳೆಸಬೇಕು ಎಂಬುದಾಗಿತ್ತು. ಇದು ಅಕೇಶಿಯಾ ಬೆಳೆಸಲು ಇನ್ನಷ್ಟು ಪ್ರೋತ್ಸಾಹ ಒದಗಿಸಿತು.

ಮೈಸೂರು ಕಾಗದ ಕಾರ್ಖಾನೆಗೆ 1981-83ರಲ್ಲಿ ರಾಜ್ಯ ಸರ್ಕಾರ ಸರಿಸುಮಾರು 22,500 ಹೆಕ್ಟೇರ್ ಪ್ರದೇಶವನ್ನು 40 ವರ್ಷಗಳ ಕಾಲ ನೆಡುತೋಪು ಬೆಳೆಸಲು ಗುತ್ತಿಗೆಗೆ ಕೊಟ್ಟಿತ್ತು. ಅವರು ಹುಲ್ಲುಗಾವಲುಗಳಿಗೆಲ್ಲಾ ಬೆಂಕಿ ಕೊಟ್ಟು, ನೈಸರ್ಗಿಕ ಕಾಡುಗಳನ್ನೆಲ್ಲಾ ಬುಡಮಟ್ಟ ನಾಶಮಾಡಿ, ಅಲ್ಲೆಲ್ಲಾ ಅಕೇಶಿಯಾ ಹಬ್ಬಿಸಿದರು. ಅಂದು ಆ ಜಾಗದಲ್ಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೂಚಿಸಿದ ಗಿಡ ಬೆಳೆಸಬೇಕು, ಉರವಲಿಗಾಗಿ ಶೇಕಡಾ 5ರಷ್ಟು ಹೊಸ ಗಿಡ ನೆಡಬೇಕು, ಎಕರೆಗೆ ಕನಿಷ್ಠ 20 ಶ್ರೀಗಂಧದ ಗಿಡ ಬೆಳೆಸಬೇಕು. ಆ ಜಾಗದಲ್ಲಿ ಗಡಿಕಲ್ಲು ಹುಗಿಯಬೇಕು, ನಿಯಮ ಗಾಳಿಗೆ ತೂರಿ ಚಟುವಟಿಕೆ ಕೈಗೊಳ್ಳಬಾರದು, ಅಪ್ಪಿತಪ್ಪಿ ನಿಯಮ ಮೀರಿದರೆ ಸರ್ಕಾರ ಆ ಭೂಮಿಯನ್ನು ವಾಪಾಸ್ ಪಡೆಯಬಹುದು. ಇಲಾಖೆಯ ಪೂರ್ವಾನುಮತಿ ಇಲ್ಲದೆ ಸ್ಥಳೀಯ ಗಿಡ ಮರಗಳನ್ನು ಕತ್ತರಿಸಬಾರದು ಎಂದೆಲ್ಲಾ ನಿರ್ದೇಶನಗಳೇನೋ ಇದ್ದವು. ಆದರೆ ಹಣದ ಮುಂದೆ ಅವೆಲ್ಲಾ ಬರೀ ಸೂಚನೆಗಳಾಗಿ ಮಾತ್ರ ಉಳಿದವು.

ಅಕೇಶಿಯಾದ ಬೀಜ ಮೊಳೆತ ಎರಡ್ಮೂರು ವಾರದಲ್ಲಿ ಸಸ್ಯಕ್ಕೆ ಗರಿಯಂತಹ ಎಲೆ ಮೂಡುತ್ತದೆ. ಅದು ಸಾಮಾನ್ಯವಾಗಿ ನಮ್ಮ ‘ಮುಟ್ಟಿದರೆ ಮುನಿ’ ಗಿಡದ ಎಲೆಗಳನ್ನು ಹೋಲುತ್ತದೆ. ಮತ್ತದು ಬರೇ ಒಂದು ತಿಂಗಳೊಳಗೆ ಮಾಯವಾಗಿ ಬಿಡುತ್ತದೆ! ಮುಂದೆ ಆ ಎಲೆಯ ತೊಟ್ಟು ಚಪ್ಪಟೆ ಆಕಾರ ಹೊಂದಿ ಹಸಿರು ಬಣ್ಣ ಬಳಿದುಕೊಂಡು ಎಲೆಯಂತೆ ವರ್ತಿಸುತ್ತದೆ. ನಾವೀಗ ಅಕೇಶಿಯಾ ಎಲೆ ಎಂದು ಏನನ್ನು ಹೇಳುತ್ತೇವೆಯೋ ಅದು ಎಲೆ ತೊಟ್ಟಿನ ಪರಿವರ್ತಿತ ರೂಪವೇ ವಿನಾ ಅದು ಅಸಲು ಅಕೇಶಿಯಾದ ಎಲೆಯಲ್ಲ. ಅಷ್ಟಕ್ಕೂ ನಾವಿಂದು ಎಲ್ಲೆಡೆ ನೋಡುತ್ತಿರುವ ಅಕೇಶಿಯಾ ಮರಕ್ಕೆ ಎಲೆಯೇ ಇಲ್ಲ! ಈಗ ನಾವೇನು ಎಲೆ ಎಂದು ಕರೆಯುತ್ತೇವೆಯೋ ಅವು ಹಸಿರಾಗಿದ್ದು ಎಲೆಯಂತೆ ವರ್ತಿಸುತ್ತದಷ್ಟೇ.

ನೀರು ಬಳಸಿ ಜೀವಿಸುವ ಈ ಗಿಡ, ತನ್ನೊಳಗಿನ ನೀರನ್ನು ವಾತಾವರಣಕ್ಕೆ ಬಿಟ್ಟು ಕೊಡುವುದೇ ಇಲ್ಲ! ಚಪ್ಪಟೆ ತೊಟ್ಟಿನ ಹಸಿರು ಕವಚದ ರಕ್ಷಣೆಯಿಂದ ಇದು ತೀವ್ರ ಬರದಲ್ಲೂ, ಅತೀ ಹೆಚ್ಚು ಉಷ್ಣತೆಯಲ್ಲೂ ಬದುಕುತ್ತದೆ. ಅದರ ಎಲೆ(?) ನಮ್ಮ ಅರಣ್ಯದ ಬೇರೆ ಸಸ್ಯಗಳ ಎಲೆಗಳಿಗಿಂತ ಸಂಪೂರ್ಣ ಭಿನ್ನವಾಗಿದೆ. ಬೇಸಿಗೆಯಲ್ಲಿ ಗಿಡದಿಂದ ನೀರು ದೊಡ್ಡ ಪ್ರಮಾಣದಲ್ಲಿ ಆವಿಯಾಗದಂತೆ ತಡೆಯುವುದರಿಂದ ಅದರ ಬೆಳವಣಿಗೆ ತುಂಬಾ ಸುಲಭವಾಗಿದೆ. ಒಮ್ಮೆ ನೀರು ಸಿಕ್ಕಾಗ ಸಾಧ್ಯವಾದಷ್ಟು ಹೀರಿಕೊಂಡು ಬರದ ಸಂದರ್ಭದಲ್ಲೂ ಬದುಕುತ್ತದೆ. ಎಂತಹ ಬಿಕ್ಕಟ್ಟನ್ನೂ ಮೆಟ್ಟಿ ನಿಲ್ಲುವ ಸಾಮರ್ಥ್ಯ ಇರುವುದರಿಂದ ನೆಟ್ಟ ಬಹುಪಾಲು ಬದುಕಿ ಬೆಳೆಯುತ್ತವೆ.

ಇದಕ್ಕೆ ಪ್ರಾಣಿ, ಪಕ್ಷಿ, ಕೀಟ, ಹುಳುಗಳ ಕಾಟವಿಲ್ಲ, ರೋಗಭಾದೆಯಂತೂ ಇಲ್ಲವೇ ಇಲ್ಲ. ಅದು ಅರಣ್ಯ ಇಲಾಖೆಯನ್ನು ಇನ್ನಿಲ್ಲದಂತೆ ಆಕರ್ಷಿಸಿ, ಅರಣ್ಯೀಕರಣ ಎಂದ ತಕ್ಷಣ ಅಕೇಶಿಯಾ ಎಂಬ ತೀರ್ಮಾನಕ್ಕೆ ಬರುವಂತೆ ಮಾಡಿದೆ.

ಅಕೇಶಿಯಾ ಮಾತ್ರವಲ್ಲ ಯಾವುದೇ ಏಕಜಾತಿಯ ನೆಡುತೋಪು ಕೂಡಾ ಪರಿಸರಕ್ಕೆ ಅಪಾಯಕಾರಿ. ಪಶ್ಚಿಮ ಘಟ್ಟದಲ್ಲದ ಗಿಡಗಳನ್ನು ಇಲ್ಲಿ ತೋಪಿನ ರೂಪದಲ್ಲಿ ಬೆಳೆಸುವುದು ಕೂಡಾ ಹೊಸ ಸಮಸ್ಯೆಗಳನ್ನು ಆಹ್ವಾನಿಸುತ್ತದೆ. ನೆಡುತೋಪು ಹಣ್ಣಿನ ಗಿಡದ್ದೇ ಆಗಿರಲಿ ಅದು ಎಂದಿಗೂ ಸಹಜ ಕಾಡಿಗೆ ಪರ್ಯಾಯ ಆಗಲಾರದು. ಕಾಡು ಎಂದರೆ ವೈವಿಧ್ಯ. ಎಲ್ಲಾ ವನ್ಯಜೀವಿಗಳು ಅಲ್ಲಿನ ಅವಿಭಾಜ್ಯ ಅಂಗ ಎಂಬುದು ಮನುಷ್ಯ ಕೇಂದ್ರಿತ ದೃಷ್ಟಿಕೋನದಲ್ಲಿ ಕಾಡನ್ನು ಕಾಣುವವರಿಗೆ ಅರ್ಥವಾಗಬೇಕಾದದ್ದು ಇಂದಿನ ಜರೂರತ್ತು.

ಮೈಸೂರು ಕಾಗದ ಕಾರ್ಖಾನೆ ಈಗ ಮುಚ್ಚಿದೆ. ಭೂಮಿಯ ಗುತ್ತಿಗೆ ಅವಧಿಯೂ ಮುಗಿದಿದೆ. ಹಿಂದೆ ಗುತ್ತಿಗೆ ನೀಡಿದ ಭೂಮಿಯನ್ನು ಈಗ ಅರಣ್ಯ ಇಲಾಖೆಗೆ ಹಸ್ತಾಂತರಿಸಿ ಅಲ್ಲಿ ಸಹಜ ಕಾಡು ಬೆಳೆಯಲು ಅನುವು ಮಾಡಿಕೊಡಬೇಕು ಎಂಬುದು ಮಲೆನಾಡಿನ ಗಟ್ಟಿ ಜನಾಭಿಪ್ರಾಯ. ಸರ್ಕಾರ ಇದನ್ನು ಗೌರವಿಸಲಿ ಎಂದು ಆಶಿಸೋಣ.

ಲೇಖಕರು ಪರಿಸರ ಸಂರಕ್ಷಣೆಯಲ್ಲಿ ಕಟಿಬದ್ಧವಾಗಿ ತೊಡಗಿಸಿ ಕೊಂಡಿದ್ದಾರೆ. ವಿಶೇಷವಾಗಿ ಶಾಲಾಕಾಲೇಜು ವಿದ್ಯಾರ್ಥಿಗಳಲ್ಲಿ ಇದರ ಅರಿವು ಮೂಡಿಸಲು ಯತ್ನಿಸುತ್ತಿದ್ದಾರೆ. ಇದಕ್ಕಾಗಿ ಇವರು ಮತ್ತು ಸಮಾನಮನಸ್ಕರು ಸೇರಿ ಬೀಸ್ ಸೆಂಟರ್(BEAS Centre) ಸ್ಥಾಪಿಸಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿಗೆ ಸಂಪರ್ಕ ಸಂಖ್ಯೆ: 8431604877

LEAVE A REPLY

Please enter your comment!
Please enter your name here