ಭಾಗ – 2
ಸಸ್ಯಗಳ ಹಸಿರು ಎಲೆ, ಎಲೆಯ ಕಾಂಡ ಮತ್ತು ಬೇರು ಇವುಗಳ ಮೂಲದಿಂದ ದೊರೆಯುವ ಸಾವಯವ ವಸ್ತುಗಳನ್ನ ಹಸಿರೆಲೆ ಗೊಬ್ಬರವೆಂದು ಕರೆಯುತ್ತಾರೆ. ಹಸಿರೆಲೆ ಗೊಬ್ಬರದಲ್ಲಿ ಎರಡು ವಿಧ. ಮುಖ್ಯ ಭೂಮಿಯಲ್ಲಿ ಹಸಿರೆಲೆ ಗೊಬ್ಬರ ಬೆಳೆದು, ಭೂಮಿಗೆ ಸಮರ್ಪಿಸುವುದು. ಹೊರಗಿನಿಂದ ಸೊಪ್ಪು ತಂದು ಹಸಿರೆಲೆ ಗೊಬ್ಬರವನ್ನಾಗಿ ಭೂಮಿಗೆ ನೀಡುವುದು.
ವೈವಿಧ್ಯ
ಗ್ಲಿರಿಸಿಡಿಯಾ, ಡಯಂಚಾ, ಸೆಣಬು, ಹುರುಳಿ, ಹಲಸಂದಿ, ಸಂತೆಮರ ಗಿಡ, ಎಕ್ಕ, ಪಾರ್ಥೇನಿಯಮ್, ಕಬ್ಬಿನ ರವದಿ, ಭತ್ತದ ಹುಲ್ಲು. ಈ ಎಲ್ಲವನ್ನೂ ಹಸಿರೆಲೆ ಗೊಬ್ಬರವಾಗಿ ಭೂಮಿಗೆ ಸೇರಿಸಿದರೆ ಪೋಷಕಾಂಶದ ಕೊರತೆಯಾಗುವುದಿಲ್ಲ.
ಈ ಮೇಲಿನ ಗಿಡಗಳಿಂದ ಎಷ್ಟು ಪ್ರಮಾಣದಲ್ಲಿ ಸಾರಜನಕ, ರಂಜಕ ಮತ್ತು ಪೊಟ್ಯಾಷ್ ದೊರೆಯುತ್ತದೆ ಎಂಬುವುದನ್ನ ತಿಳಿಯೋಣ.
ಬೇರೆ ಬೇರೆ ವಿಧಾನದಲ್ಲಿ ಹಸಿರೆಲೆ ಗೊಬ್ಬರ ತಯಾರಿಕೆ.
ನವಧಾನ್ಯ ಹಸಿರೆಲೆ ಗೊಬ್ಬರ
ಕೋಲಾರ ಚಿಕ್ಕಬಳ್ಳಾಪುರ ಬೆಂಗಳೂರು ಗ್ರಾಮಾಂತರ ರಾಮನಗರ ಇನ್ನಿತರ ಜಿಲ್ಲೆಗಳಲ್ಲಿ ಸುಸ್ಥಿರ ಕೃಷಿ ಮಾಡುವ ಕೃಷಿಕರು ಯುಗಾದಿ ಹಿಂದೆ- ಮುಂದೆ ಮಾರ್ಚ್ನಲ್ಲಿ ಮೊದಲ ಮಳೆಯಾಗುವ ಮುನ್ನ ಕೃಷಿ ಭೂಮಿ ಉಳುಮೆ ಮಾಡಿ ವೈವಿಧ್ಯ ಪೂರ್ಣ ಬಿತ್ತನೆ (ಏಕದಳ 40% ಏಕದಳ ಅಂದ್ರೆ ಜೋಳ ಸಿರಿಧಾನ್ಯಗಳು. 40% ದ್ವಿದಳ ಧಾನ್ಯಗಳು ಉಳಿದ 20% ಎಣ್ಣೆ & ಸಾಂಬರ್ ಕಾಳು) ಬೀಜಗಳನ್ನು ಒಂದು ಎಕರೆಗೆ ಸುಮಾರು 30 ಕೆಜಿ ಬಿತ್ತನೆ ಬೀಜವನ್ನು ಬಿತ್ತಬೇಕು, ಮಾರ್ಚ್- ಏಪ್ರಿಲ್ ನಲ್ಲಿ ಒಂದೆರಡು ಮಳೆಯಾದರೂ 45 ದಿನದಲ್ಲಿ ಅರ್ಧದಿಂದ ಹಿಡಿದು ಒಂದುವರೆ ಅಡಿಯವರೆಗೂ ಬೆಳೆಯುತ್ತದೆ.
ಗಿಡದಲ್ಲಿ ಹೂವು ಮೊಗ್ಗಾಗುವ ಸಮಯದಲ್ಲಿ ರೋಟೋವೇಟರ್ ಬಳಸಿ ಉಳುಮೆ ಮಾಡಿ ವಾಪಸ್ ಮಣ್ಣಿಗೆ ಸೇರಿಸುತ್ತಾರೆ 45 ದಿವಸದ ಹೊತ್ತಿಗೆ ಕನಿಷ್ಠ ಮೂರು ಟನ್ ಗರಿಷ್ಠ ಏಳರಿಂದ ಎಂಟು ಟನ್ ಹಸಿರೆಲೆ ಗೊಬ್ಬರ ಅಲ್ಲಿ ಉತ್ಪಾದನೆ ಯಾಗುತ್ತದೆ.. ನೀರಾವರಿ ಇರುವ ರೈತರು ತಮ್ಮಲ್ಲಿ ನೀರಿನ ಸಂಪತ್ತು ಇರುವುದರಿಂದ, ವರ್ಷದಲ್ಲಿ ಒಂದೆರಡು ಬಾರಿಯಾದ್ರು ಹಸಿರೆಲೆ ಗೊಬ್ಬರದ ಗಿಡಗಳನ್ನ ಮೇಲಿನ ಕ್ರಮಗಳಂತೆ ಬೆಳೆದು, ಭೂಮಿಗೆ ಒಪ್ಪಿಸಿದರೆ ತಮ್ಮ ಕೃಷಿ ಭೂಮಿ ಫಲವತ್ತಾಗುತ್ತದೆ.
ಹಸಿರೆಲೆ ಗೊಬ್ಬರ ಬೆಳೆಯುವಲ್ಲಿ ಒಂದು ಸರಳವಾಗಿ ಪ್ರಯೋಗವೂ ನಡೆಯುತ್ತೆ ಅದೇನಂದರೆ ಬಿತ್ತಿದ ಅಷ್ಟೂ ಬೀಜಗಳಲ್ಲಿ ಯಾವ ಬೆಳೆ ಆ ಜಮೀನಿನಲ್ಲಿ ಚೆನ್ನಾಗಿ ಬೆಳೆಯುತ್ತೆ ಅನ್ನೊದನ್ನು ಭೂಮಿಯೇ ತಿಳಿಸುತ್ತದೆ.
45 ದಿನಕ್ಕೇ ಭೂಮಿಗೆ ಯಾಕೆ ಸೇರಿಸಬೇಕು?
45ನೇ ದಿನಕ್ಕೆ ಹಸಿರೆಲೆ ಗೊಬ್ಬರದ ಗಿಡಗಳು ಹೂ ಬಿಡುವ ಮುಂಚೆ ಮತ್ತು ಮೃದುವಾಗಿದ್ದಾಗಲೇ ಭೂಮಿಗೆ ಸೇರಿಸಬೇಕು. ಯಾಕಂದ್ರೆ ಕಾಯಿಯಾಗಲು ಬಿಟ್ಟರೆ ಗಿಡದಲ್ಲಿನ ಪೋಷಕಾಂಶ ಕಾಯಿಗಳಲ್ಲಿ ಸಂಗ್ರಹವಾಗಿಬಿಡುತ್ತೆ, ಜೊತೆಗೇ ಆಗ ಭೂಮಿಗೆ ಸೇರಿಸಿದರೆ ಕಡಿಮೆ ಲಾಭ ನಂತರ ಗಿಡಗಳು ಬಲಿತರೆ ಭೂಮಿಯಲ್ಲಿ ಕಳಿಯಲು ಕಷ್ಟವಾಗುತ್ತದೆ. ಹಾಗಾಗಿ ಗಿಡಗಳು ಮೃದುವಿದ್ದಾಗಲೇ ಭೂಮಿಗೆ ಸೇರಿಸಿಬಿಡಬೇಕು.
ಹಸಿರೆಲೆ ಗೊಬ್ಬರದಲ್ಲಿ ಜಮೀನಿಗೆ ಬೇಕಾಗುವ ಸಾರಜನಕ, ರಂಜಕ, ಪೊಟ್ಯಾಶಿಯಂ ಸೇರಿದಂತೆ ಮ್ಯಾಕ್ರೋ ಮತ್ತು ಮೈಕ್ರೋ ಸೂಕ್ಷ್ಮ ಪೋಷಕಾಂಶಗಳು ಜಮೀನಿಗೆ ಸೇರುತ್ತವೆ, ಇದರಿಂದಾಗಿ ಮಣ್ಣಿನಲ್ಲಿ ಸೂಕ್ಷ್ಮಾಣುಜೀವಿಗಳ ಚಟುವಟಿಕೆ ಜಾಸ್ತಿಯಾಗಿ ಮಣ್ಣಿನ ಫಲವತ್ತತೆ ಹೆಚ್ಚು ಮಾಡಲು ಮುಖ್ಯ ಸಹಕಾರಿಯಾಗುತ್ತದೆ. – ಎನ್ನುವುದು ಪ್ರಭಾಕರ್ ಬುಡ್ಡಪ್ಪರವರ ಅನಿಸಿಕೆ.
ಅಂತರ ಬೆಳೆಯಾಗಿ ಹಸಿರೆಲೆ ಗೊಬ್ಬರ:
ಕೃಷಿಕರಿಗೆ ಹಸಿರೆಲೆ ಗೊಬ್ಬರವನ್ನ ಸಂಪೂರ್ಣ ಭೂಮಿಯಲ್ಲಿ ಬೆಳೆಯಲು ಆಗದಿದ್ದಾಗ, ಪ್ರಮುಖ ಬೆಳೆಯ ಮಧ್ಯ ದ್ವಿದಳ ಧಾನ್ಯ ಬೆಳೆ ಬೆಳೆದು, ಭೂಮಿಗೆ ಸೇರಿಸಿ ಪ್ರಮುಖ ಬೆಳೆಗಿರುವ ಸಾರಜನಕದ ಕೊರತೆಯನ್ನ ನೀಗಿಸಬಹುದು.
ಬದುವಿನಲ್ಲಿ ಮರಗಳಿಂದ ಹಸಿರೆಲೆ ಗೊಬ್ಬರ
ಕೃಷಿಕರು ತಮ್ಮ ಜಮೀನಿನ ಬದುಗಳಲ್ಲಿಯೂ ಸಹಿತ ಹಸಿರೆಲೆ ಗೊಬ್ಬರದ ಗಿಡಗಳನ್ನ ಬೆಳೆದು ಭೂಮಿಗೆ ನೀಡಬಹುದು ಅದ್ರಲ್ಲೂ ಗ್ಲಿರಿಸಿಡಿಯಾ ಬೆಳೆಯಲು ಆಯ್ಕೆ ಮಾಡಿಕೊಂಡಿದ್ದೇ ಆದ್ರೆ, ಕೃಷಿ ಭೂಮಿಗೆಎಲ್ಲಾ ಋತುವಿನಲ್ಲೂ ಹಸಿರೆಲೆ ಗೊಬ್ಬರ ಸಿದ್ಧವಾಗಿರುತ್ತದೆ. ಜಮೀನಿನ ಬದುಗಳಲ್ಲಿ ಪೂರ್ವ ಪಶ್ಚಿಮಕ್ಕೆ ಗ್ಲಿರಿಸೀಡಿಯಾ, ಅಗಸೆ ಗಿಡಗಳನ್ನು ಹಾಕಿ ಅವುಗಳ ಅವುಗಳ ಎಲೆಗಳನ್ನು ಬಳಸಿಕೊಂಡು ಫಲವತ್ತಾದ ಗೊಬ್ಬರ ಮಾಡಬಹುದು.
ಸೂಚನೆ:- ರೋಗನಿರೋಧಕ ಶಕ್ತಿ ಮತ್ತು ವಾತಾವರಣಕ್ಕೆ ತಕ್ಕಂತಹ ಬೀಜಗಳನ್ನ ಆಯ್ಕೆ ಮಾಡಿಕೊಂಡು, ಹಸಿರೆಲೆ ಗೊಬ್ಬರ ತಯಾರಿಸಬಹುದು.
ಹೊರಗಿನಿಂದ ತಂದ ಹಸಿರೆಲೆ ಗೊಬ್ಬರ:
ತಮ್ಮ ಕೃಷಿ ಭೂಮಿಯಲ್ಲಿ ಹಸಿರೆಲೆ ಗೊಬ್ಬರ ತಯಾರಿಸಲಾಗದ ಸಂದರ್ಭದಲ್ಲಿ, ಕೃಷಿಕರು ಹೊರಗಿನಿಂದ ಡಯಂಚಾ, ಗ್ಲಿರಿಸಿಡಿಯಾ, ಹೊಂಗೆ ಸೊಪ್ಪು, ಎಕ್ಕ, ಪಾರ್ಥೇನಿಯಂ ಗಿಡಗಳನ್ನ ತಂದು ಭೂಮಿಗೆ ಸೇರಿಸಬಹದು. ಇದರಿಂದಲೂ ಕೂಡ ಕೃಷಿ ಭೂಮಿಯನ್ನ ಫಲವತ್ತಾಗಿಸಬಹುದು.
ಪ್ರತಿ ಎಕರೆಗೆ ಹಸಿರೆಲೆ ಗೊಬ್ಬರದ ಖರ್ಚು -ವೆಚ್ಚ
ಹಸಿರೆಲೆ ಗೊಬ್ಬರ ಹೊರಗಿನಿಂದ ತಂದು ಹಾಕುವುದು ದುಬಾರಿ ಕರ್ಚಿನ ಕೆಲಸವಾಗುತ್ತದೆ. ಹಾಗಾಗಿ ರೈತ ತನ್ನ ಹೊಲದಲ್ಲಿಯೇ ಮಾಡಿಕೊಳ್ಳುವುದು ಸುಸ್ಥಿರ ವಿಧಾನವಾಗುತ್ತದೆ.
ನಿಮ್ಮ ಭೂಮಿ ಫಲವತ್ತತೆ ಆಗಬೇಕಾದರೇ, ಇಳುವರಿ ಚೆನ್ನಾಗಿ ಬರಬೇಕಾದರೆ, ಕಡಿಮೆ ವೆಚ್ಚದ, ಕಡಿಮೆ ಶ್ರಮ ಬೇಡುವ ಸುಸ್ಥಿರ ಪದ್ಧತಿ ಇದೊಂದೆ ತುಂಬಾ ಉಪಯುಕ್ತವಾದ ಪದ್ಧತಿ ನೀವು ಏಕದಳ 40% ದ್ವಿದಳ 40% ಮತ್ತು 20% ಎಣ್ಣೆಕಾಳುಗಳನ್ನು ಎಕರೆಗೆ 30ಕೆಜಿ ಬಿತ್ತಿ 45ದಿನಗಳ ನಂತರ ರೋಟವೇಟರ್ ಬಳಸಿ ಉಳುಮೆ ಮಾಡಿಬಿಡಿ ಮಣ್ಣಿನ ಸ್ವರೂಪವೇ ಬದಲಾಗಿ ಉತ್ತಮ ಬೆಳೆ ಬೆಳೆಯಲು ಸಾಧ್ಯವಿದೆ”
ಸುಮಾರು 1 ಎಕರೆ ಜಮೀನಿಗೆ ಹಸಿರೆಲೆ ಗೊಬ್ಬರ ಮಾಡಲು ಸುಮಾರು ಬೀಜಕ್ಕೆ 2000, ಉಳುಮೆಗೆ 1000 ಮತ್ತು ಬೆಳೆದ ನಂತರ ಅವುಗಳನ್ನು ರೋಟಾವೇಟರ್ ಬಳಸಿ ಮಣ್ಣಿಗೆ ಸೇರಿಸಬೇಕು ರೋಟಾವೇಟರ್ ಚಾರ್ಜು 1000 ಬಿತ್ತನೆಗೆ ಮತ್ತೆ ಕುಂಟೆ ಹೊಡೆಯೋಕೆ ಸೇರಿ 1000 ಎಲ್ಲವೂ 4-5 ಸಾವಿರದ ಖರ್ಚು ಬರಲಿದೆ ಈ ಹಿಂದೆಯೇ ತಿಳಿಸಿದಂತೆ ಕಡಿಮೆ ಕಡಿಮೆ ಎಂದರೂ ಪ್ರತಿ ಎಕರೆಗೆ 3-5 ಟನ್ ಗೊಬ್ಬರ ಸಿಗಲಿದೆ ಭೂಮಿಯ ಫಲವತ್ತತೆ ಹೆಚ್ಚಿದ್ದರೆ ಇದರ ಪ್ರಮಾಣವೂ ಹೆಚ್ಚಾಗಲಿದೆ. ಇದನ್ನು ಬಿಟ್ಟು ಹೊರಗಿನಿಂದ ಕೊಟ್ಟಿಗೆ ಗೊಬ್ಬರ ತರಬೇಕಾದರೆ ಅದು ದುಬಾರಿ ಬಾಬ್ತು ಆಗಲಿದೆ. ಎನ್ನುವ ಮಾಹಿತಿಯನ್ನು ಕಳೆದ ಹತ್ತಾರು ವರ್ಷಗಳಿಂದ ಹಸಿರೆಲೆ ಗೊಬ್ಬರ ಪ್ರಾಯೋಗಿಕವಾಗಿ ತಯಾರಿಸಿ ತಮ್ಮದೇ ಜಮೀನಿನಲ್ಲಿ ಬಳಸುತ್ತಿರುವ ಪ್ರಭಾಕರ್ ಬುಡ್ಡಪ್ಪ ಪ್ರಗತಿಪರ ಅಕ್ಕಡಿಸಾಲು ಸಾವಯವ ಕೃಷಿಕರು ತೊಂಡಹಳ್ಳಿ ಗ್ರಾಮ ಮುಳಬಾಗಿಲು ತಾಲ್ಲೂಕು ಇವರು ತಮ್ಮ ಅನುಭವವನ್ನು ಈ ಮೇಲಿನ ರೀತಿ ಹೇಳುತ್ತಾರೆ.
ಸಾಯಿಲ್ ವಾಸು ರವರ ಪ್ರಕಾರ ಹಸಿರೆಲೆ ಗೊಬ್ಬರ ಎಂದರೆ ಮಣ್ಣಿಗೆ ಸಾವಯವ ವಸ್ತು ಸೇರಿಸಲೆಂದೆ ಬೆಳೆಸುವ ಬಹುಬಗೆಯ ಚಿಗುರು ಗಿಡಗಳ ಸಮೂಹ ಈ ಹಸಿರೆಲೆ ಯಾಕೆ ಮುಖ್ಯ ಅವುಗಳಿಂದ ಏನೆಲ್ಲಾ ಉಪಯೋಗಗಳಿವೆ ಎನ್ನುವುದಕ್ಕೆ ಅವರು ಕೆಲ ಅಂಶಗಳನ್ನು ಕೊಡುತ್ತಾರೆ.
ಹಸಿರೆಲೆ ಗೊಬ್ಬರ ಸಹಜವಾಗಿದೆ. ಹೊಲದಲ್ಲೇ ಉತ್ಪಾದನೆಯಾಗುವ ಗೊಬ್ಬರವಾಗಿದೆ. ಹಾಗಾಗೀ ಬೇರೆ ಕಡೆಯಿಂದ ರಾಸಾಯನಿಕ ಗೊಬ್ಬರಗಳನ್ನು ಸಾಗಿಸುವಾಗ ಉಂಟಾಗುವ ಕಾರ್ಬನ್ ಫುಟ್ ಪ್ರಿಂಟ್ ಇರುವುದಿಲ್ಲ. ಜೊತೆಗೆ ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ಕಡಿಮೆ ಮಾಡುತ್ತದೆ.
- ಹಸಿರೆಲೆ ಗೊಬ್ಬರವನ್ನ 40 ರಿಂದ 45 ದಿನದಲ್ಲೇ ಭೂಮಿಗೆ ಸೇರಿಸುವುದರಿಂದ ಪೋಷಕಾಂಶ ದೊರೆಯುತ್ತದೆ ಜೊತೆಗೆ ಮಣ್ಣಿನ ರಚನೆ ಬದಲಾಗುತ್ತದೆ.
- ಚಿಗುರೆಲೆಗಳಲ್ಲಿನ ಪೋಷಕಾಂಶಗಳು ಮಣ್ಣಿಗೆ ಸಿಕ್ಕು ಮಣ್ಣಿನಲ್ಲಿನ ಸೂಕ್ಷ್ಮಾಣು ಜೀವಿಗಳಿಂದಾಗಿ ಮಣ್ಣಿನಲ್ಲಿ ಜೀವಂತಿಗೆ ಹೆಚ್ಚಾಗಲಿದೆ. ಹಸಿರೆಲೆ ಗೊಬ್ಬರವನ್ನ ಭೂಮಿಗೆ ನೀಡುವುದರಿಂದ ಕೃಷಿ ಭೂಮಿ ಸಾವಯವ ಇದರಿಂದ ಭೂಮಿಯಲ್ಲಿ ಉಪಕಾರಿ ಜೀವಾಣು (ಸೂಕ್ಷಾಣು ಜೀವಿಗಳು ಮತ್ತು ಎರೆಹುಳು)ಗಳಿಗೆ ಉತ್ತಮ ಆಹಾರ ಸಿಗುತ್ತದೆ. ಸೂಕ್ಷ್ಮಾಣು ಜೀವಿಗಳ ಕ್ರಿಯಾಶಿಲ ಚಟುವಟಿಕೆಯಿಂದಾಗಿ ಹಸಿರೆಲೆ ಗೊಬ್ಬರ ಮಣ್ಣಿನಲ್ಲಿ ಕಳೆಯುತ್ತದೆ. ಕಳೆಯುವಾಗ ಆಮ್ಲ ಬಿಡುಗಡೆಯಾಗುತ್ತದೆ. ಇದರಿಂದ ಮಣ್ಣಿನಲ್ಲಿದ್ದ ಅಪಕಾರಿ ಸೂಕ್ಷ್ಮಾಣು ಜೀವಿಗಳ ಸಂಖ್ಯೆ ಕಡಿಮೆಯಾಗುತ್ತದೆ. ಭೂಮಿಯಲ್ಲಿದ್ದ ಕಳೆ ಬೀಜಗಳು ನಾಶವಾಗಿ, ಕಳೆ ನಿಯಂತ್ರಣದಲ್ಲಿರುತ್ತದೆ. ಹಸಿರೆಲೆ ಗೊಬ್ಬರ ಕಳಿತು, ಸಾವಯವ ಇಂಗಾಲವಾಗಿ ಮಾರ್ಪಾಡಾಗುತ್ತದೆ. ಮಣ್ಣಿನ ಗಡಸುತನ ಕಡಿಮೆ ಮಾಡುತ್ತದೆ. ಗುಣಮಟ್ಟ ಹೆಚ್ಚುತ್ತದೆ ಮಣ್ಣಿನ ರಸಸಾರ ಸುಧಾರಿಸುತ್ತದೆ.
ಹಸಿರೆಲೆ ಗೊಬ್ಬರದ ಬಳಕೆಯಿಂದಾಗಿ ಮಣ್ಣಿನ ಕಣಗಳ ಸಂರಚನೆ ಬದಲಾಗುತ್ತದೆ.
ಒಂದು ಎಕರೆಯಲ್ಲಿ ಹಸಿರೆಲೆ ಗೊಬ್ಬರ ಮಾಡಲು ಕಡಿಮೆ ಖರ್ಚು ಹಾಗಾಗಿ ಇದು ಆರ್ಥಿಕವಾಗಿ ಉಪಕಾರಿಯಾಗುತ್ತದೆ.
ನಿರಂತರವಾಗಿ ಹಸಿರೆಲೆ ಗೊಬ್ಬರ ಮಾಡಿಕೊಳ್ಳುವುದರಿಂದ ರಾಸಾಯನಿಕ ಗೊಬ್ಬರಗಳ ಬಳಕೆ ನಿಯಂತ್ರಣ ಮಾಡಬಹುದು.
ಬೆಳೆಗೆ ಬೇಕಾದಂತಹ ಪೋಷಕಾಂಶಗಳನ್ನು ನಿಯಮಿತವಾಗಿ ಪೂರೈಕೆ ಮಾಡಲು ಈ ಹಸಿರೆಲೆ ಗೊಬ್ಬರ ಸಹಕಾರಿ.
ಹಸಿರೆಲೆ ಗೊಬ್ಬರದ ಗಿಡಗಳು ಬೆಳೆಯುವ ಸಮಯದಲ್ಲೇ ಬೇರುಗಳು ಒಳಗೆ ಹೋಗುವುದರಿಂದ ಮಳೆ ನೀರು ಭೂಮಿಯಲ್ಲಿ ಇಂಗಲು ಸಹಾಯಕವಾಗುತ್ತದೆ. .
ದ್ವಿದಳ ಧಾನ್ಯ ಬೆಳೆಗಳ ಬೇರಿನಲ್ಲಿರುವ ಗಂಟುಗಳಲ್ಲಿ ರೈಜೋಬಿಯಂ ಸೂಕ್ಷ್ಮಾಣು ಜೀವಿ, ವಾತಾವರಣದಲ್ಲಿರುವ ಸಾರಜನಕವನ್ನ ಹಿಡಿಟ್ಟುಕೊಂಡು ಬೆಳೆಗೆ ನೀಡುತ್ತದೆ ಮಣ್ಣಿನಲ್ಲಿ ಜೈವಿಕ, ಭೌತಿಕ, ರಾಸಾಯನಿಕ ಗುಣ ಅಭಿವೃದ್ಧಿಯಾಗಿ ಮಣ್ಣು ಫಲವತ್ತಾಗುತ್ತದೆ.
ರಾಸಾಯನಿಕ-ಗೊಬ್ಬರಗಳ ಅನಾನುಕೂಲಗಳು
- ಸ್ಥಳಿಯವಲ್ಲದ ಗೊಬ್ಬರ. ಎಲ್ಲೆಲ್ಲಿಂದಲೋ ಸಾಗಣೆ ಮಾಡಿ ತರಬೇಕು
- ದುಬಾರಿ ಬಾಬ್ತಿನ ಖರ್ಚು
- ಪ್ರತೀ ಸೀಸನ್ ನಲ್ಲೂ ಖರೀದಿ ಮಾಡಬೇಕು
- ರಸಾಯನಿಕ ಗೊಬ್ಬರಗಳ ಅವಧಿ ಸೀಮಿತ
- ರಸಾಯನಿಕ ಗೊಬ್ಬರಗಳು ಮಣ್ಣನ್ನು ಗಟ್ಟಿ ಮಾಡುತ್ತವೆ
- ರಾಸಾಯನಿಕ ಗೊಬ್ಬರಗಳು ಕರಗಲು ಅತೀ ಹೆಚ್ಚು ನೀರು ಬೇಡುತ್ತವೆ. ಮಣ್ಣಿಗೆ ಅತೀ ಹೆಚ್ಚು ನೀರು ಕೊಡುವುದೂ ಸಹ ಮೇಲ್ಮಣ್ಣಿನ ಆರೋಗ್ಯಕ್ಕೆ ಒಳ್ಳೆಯದಲ್ಲ.
ಸವಳು ಮಣ್ಣಿನ ಭೂಮಿಗೆ ಫಲವತ್ತತೆ ನೀಡಬಲ್ಲದೇ ಹಸಿರೆಲೆ ಗೊಬ್ಬರ? ಈ ನಿಟ್ಟಿನಲ್ಲಿ ಒಂದು ಪ್ರಾಯೋಗಿಕ ಪ್ರಯತ್ನ
Well Labs,Bangaloŗe Soil Trust Bangalore and Prarambha Raichur ವತಿಯಿಂದ ಫಲವತ್ತತೆ ಇಲ್ಲದ ಸವಳು ಸಮಸ್ಯೆಗೆ ಒಳಗಾಗಿರುವ ಭೂಮಿ ಅಭಿವೃದ್ದಿ ಮಾಡಲು ಸಧ್ಯಕ್ಕೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನಲ್ಲಿ ಒಂದು ಯೋಜನೆ ನಡೆಯುತ್ತಿದ್ದು ಅದರ ಅಡಿಯಲ್ಲಿ ಬಿತ್ತನೆ ಪೂರ್ವ ಚಟುವಟಿಕಗಳ ಭಾಗವಾಗಿ ಸವಳು ಸಮಸ್ಯೆಯಿಂದಾಗಿ ಫಲವತ್ತತೆ ಕಳೆದುಕೊಂಡಿರುವ 50 ಎಕರೆ ಒಂದು ಜಮೀನಿನಲ್ಲಿ ಸದ್ಯ 32 ಮತ್ತು ಕೊಪ್ಪಳದಲ್ಲಿ 3 ಎಕರೆ ಜಮೀನಿನ ಫಲವತ್ತತೆ ಹೆಚ್ಚು ಮಾಡಲು ಈ ಹಸಿರೆಲೆ ಗೊಬ್ಬರದ ಪ್ರಯೋಗ ನಡೆಸಿದ್ದು ಮೊದಲ ಹಂತದಲ್ಲಿ ಬಿತ್ತನೆಯಾಗಿದ್ದ ಅರ್ಧ ಎಕರೆ ಕೃಷಿ ಭೂಮಿಯಲ್ಲಿ ಬಿತ್ತನೆ ಮಾಡಿದ 45 ದಿನದ ನಂತರ ರೋಟಾವೇಟರ್ ಹೊಡೆಸಲಾಗಿದೆ ಸುಮಾರು 2.25 ಟನ್ ಹಸಿರೆಲೆಯ ಬಯೋಮಾಸ್ ಉತ್ಪಾದನೆಯಾಗಿದ್ದು. ಇದು ಭೂಮಿಯ ಫಲವತ್ತತೆ ಹೆಚ್ಚು ಮಾಡಲು ಈ ಸಹಾಯವಾಗುತ್ತಿದೆ. ಈ ರೀತಿಯಲ್ಲಿ ಸುಸ್ಥಿರವಾಗಿ ಭೂಮಿಯ ಫಲವತ್ತತೆ ಹೆಚ್ಚಿಸುವುದನ್ನು ಕಲಿತಿದ್ದು ತುಂಬಾ ಒಳ್ಳೇ ಆಲೋಚನೆ ಅಂತಾರೆ ಕೃಷಿಕ ಶಿವಪ್ಪ. ಇದೇ ಜಮೀನಿನಲ್ಲಿ ಮುಂದೆ ಹತ್ತಿಯೊಂದಿಗೆ ಅಕ್ಕಡಿ ಬೆಳೆಗಳನ್ನೂ ಕೂಡ ಬೆಳೆಯಲು ರೈತರೊಂದಿಗೆ ಯೋಜಿಸಲಾಗಿದೆ.
ಈ ಲೇಖನ ಸರಣಿಯ ಮೊದಲ ಭಾಗ:ಬರಡು ಮಣ್ಣಿಗೆ ಜೀವ ತುಂಬುವ ಹಸಿರೆಲೆ ಗೊಬ್ಬರ
ಈ ಪ್ರಯೋಗದ ಮೇಲ್ವಿಚಾರಣೆ ಮಾಡುತ್ತಿರುವ ತಂಡದ ಕರೀಷ್ಮಾ ಈ ಕುರಿತಾಗಿ ಹೀಗೆ ತಿಳಿಸುತ್ತಾರೆ. ಈ ಪ್ರಯೋಗದ ಮೂಲಕ ಪರಿಮಾಣಾತ್ಮಕ ಮತ್ತು ಗುಣಾತ್ಮಕ ಕ್ರಮಗಳ ಸಂಯೋಜನೆಯನ್ನು ಬಳಸಿಕೊಂಡು ನಾವು ಮಣ್ಣಿನ ಆರೋಗ್ಯದ ಕುರಿತ ಸೂಚಕಗಳನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತೇವೆ. ಪ್ರತಿ ಎಕರೆಗೆ ಇಳುವರಿ, ಪ್ರತಿ ಎಕರೆಗೆ ಉತ್ಪತ್ತಿಯಾಗುವ ಹಸಿರೆಲೆಯನ್ನು ಮಣ್ಣಿನಲ್ಲಿ ಮತ್ತೆ ಮಲ್ಚ್ ಮಾಡಲು, ಪ್ರತಿ ಎಕರೆಗೆ ಬೇಕಿರುವ ಒಳಸುರಿಯ ಅವಶ್ಯಕತೆ ಮತ್ತು ಮಣ್ಣಿನ ಸಾವಯವ ಇಂಗಾಲ. ಮಣ್ಣಿನ ತೇವಾಂಶವನ್ನು ಸುಧಾರಿಸಲು ಮತ್ತು ಹರಿವ ನೀರನ್ನು ತಡೆಹಿಡಿಯಲು ಕಂದಕ ಬದುಗಳನ್ನು ಮಾಡಿದ್ದು ಇವುಗಳೆಲ್ಲವೂ ಸೇರಿ ಮಣ್ಣನ್ನು ಕೊಚ್ಚಿಹೋಗದಂತೆ ತಡೆಯಲಾಗುತ್ತದೆ. ಮಣ್ಣಿನ ತೇವಾಂಶವನ್ನು ಮೇಲ್ವಿಚಾರಣೆ ಮಾಡಲಾಗುತ್ತದೆ. ಜೊತೆಗೆ ಅಕ್ಕಡಿಸಾಲು ವಿಧಾನದಲ್ಲಿ ಹತ್ತಿ ಬೆಳೆಯಲು ರೈತರನ್ನು ಸಿದ್ದ ಮಾಡಲಾಗಿದೆ.