ಕೃಷಿಯಲ್ಲಿ ಸಸ್ಯ ಪೋಷಕಾಂಶಗಳ ನಿರ್ವಹಣೆ ಒಂದು ಪ್ರಮುಖ ಅಂಶ. ಬೆಳೆಗಳಿಗೆ ಬೇಕಾಗುವ ಅವಶ್ಯಕ ಪೋಷಕಾಂಶಗಳನ್ನು ರಸಗೊಬ್ಬರ ಹಾಗೂ ಸಾವಯವ ಮೂಲ ಗೊಬ್ಬರಗಳ ಮೂಲಕ ಒದಗಿಸಲಾಗುತ್ತವೆ. ಕೃಷಿ ಆಧುನಿಕ ತಾಂತ್ರಿಕತೆಗಳಾದ ರಸಗೊಬ್ಬರ ಹಾಗೂ ಪೀಡೆನಾಶಕಗಳ ಬಳಕೆ, ಅಧಿಕ ಇಳುವರಿ ನೀಡುವ ಬೆಳೆ ತಳಿಗಳ ಬಳಕೆ, ನೀರಾವರಿ ಕ್ಷೇತ್ರದಲ್ಲಾದ ಹೆಚ್ಚಳ, ಸಾಗುವಳಿ ಕ್ಷೇತ್ರದ ಹೆಚ್ಚಳ ಹಾಗೂ ರೈತರ ಪರಿಶ್ರಮದಿಂದ ನಾವು 1960ರ ದಶಕದಲ್ಲಿ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿದೆವು. ಹಸಿರು ಕ್ರಾಂತಿ ದಿಶೆಯಲ್ಲಿ ರಾಸಾಯನಿಕ ಗೊಬ್ಬರ ಹಾಗೂ ಪೀಡೆನಾಶಕಗಳನ್ನು ಬಳಸಲಾಯಿತು.
ಸಾವಯವ ಗೊಬ್ಬರದ ಬಳಕೆಗೆ ಆಗ ಹೆಚ್ಚು ಗಮನ ನೀಡಲಿಲ್ಲ. ಇದರಿಂದಾಗಿ, ಮಣ್ಣಿನಲ್ಲಿ ಸಾವಯವ ಅಂಶದ ಪ್ರಮಾಣ ಕಡಿಮೆಯಾಗಿ ಕೃಷಿ ಉತ್ಪಾದಕತೆ ಮತ್ತು ಉತ್ಪಾದನೆ ಮೇಲೆ ತೀವ್ರತರ ಪರಿಣಾಮವಾಯಿತು. ತದನಂತರದ ವರ್ಷಗಳಲ್ಲಿಯೂ ಸಾವಯವ ಗೊಬ್ಬರಗಳ ಬಳಕೆಗೆ ಹೆಚ್ಚು ಆದ್ಯತೆ ನೀಡದಿದ್ದರಿಂದ ಮಣ್ಣಿನ ಭೌತಿಕ, ರಾಸಾಯನಿಕ ಗುಣಗಳ ಮೇಲೆ ಮತ್ತು ಸೂಕ್ಷ್ಮಾಣು ಜೀವಿಗಳ ಮೇಲೆ ವ್ಯತಿರಿಕ್ತ ಪರಿಣಾಮವಾಯಿತು ಜೀವಂತ ಮಣ್ಣು ನಿಜೀವವಾಗುತ್ತ, ಅದರ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮವಾಯಿತು. ಈ ಹಿನ್ನಲೆಯಲ್ಲಿ, ನಾವು 1980ರ ದಶಕದಿಂದೀಚೆಗೆ ಕೃಷಿ ಉತ್ಪಾದನೆಯಲ್ಲಿ ಸ್ಥಗಿತತೆ ಅಥವಾ ಇಳಿಮುಖ ಪ್ರವೃತ್ತಿಯನ್ನು ಗಮನಿಸುತ್ತಿದ್ದೇವೆ.
ಸಾವಯವ ಗೊಬ್ಬರಗಳ ಪಾತ್ರ ಹಾಗೂ ಉಪಯೋಗಗಳು:
ಸಾವಯವ ಗೊಬ್ಬರಗಳು ಮಣ್ಣಿನ ಭೌತಿಕ, ರಾಸಾಯನಿಕ ಮತ್ತು ಜೈವಿಕ ಗುಣಗಳನ್ನು ಉತ್ತಮಗೊಳಿಸುತ್ತವೆ. ಬೆಳೆಗಳ ರೋಗ ನಿರೋಧಕತೆಯನ್ನು ಹೆಚ್ಚಿಸಿ ಪೀಡೆ ಹಾಗೂ ರೋಗಗಳ ಹಾವಳಿಯನ್ನು ಕಡಿಮೆಗೊಳಿಸುತ್ತವೆ.
ಭೌತಿಕ ಗುಣಗಳು:
*ಮಣ್ಣಿನ ರಚನೆ (ಕಣಗಳ ಜೋಡಣೆ) ಉತ್ತಮಗೊಂಡು ಮಣ್ಣಿನಲ್ಲಿ ಗಾಳಿ ಮತ್ತು ನೀರಿನ ಚಲನೆಗೆ ಅನುಕೂಲವಾಗುತ್ತದೆ
*ನೀರು, ಪೋಷಕಾಂಶಗಳು ಮಣ್ಣಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಶೇಖರಣೆಯಾಗುತ್ತವೆ
*ಜೇಡಿಯುಕ್ತ ಮಣ್ಣಿನಲ್ಲಿ, ಮಣ್ಣಿನ ಕಣಗಳ ನಡುವಣ ಅಂತರವನ್ನು ಮತ್ತು ರಂಧ್ರಗಳ ಪ್ರಮಾಣವನ್ನು ಹೆಚ್ಚಿಸಿ ಬೇರುಗಳು ಸುಲಭವಾಗಿ ಬೆಳೆಯಲು ಅನುವು ಮಾಡಿಕೊಡುವುದಲ್ಲದೆ ಗಾಳಿಯಾಡುವಿಕೆಯನ್ನು ಸುಧಾರಿಸುತ್ತದೆ
* ಮಣ್ಣಿನಲ್ಲಿ ಮಳೆ ನೀರು ಇಂಗುವಿಕೆ ಪ್ರಮಾಣ ಮತ್ತು ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ ಹಾಗೂ ಮಣ್ಣಿನ ಸವಕಳಿಯನ್ನು ಕಡಿಮೆಗೊಳಿಸುತ್ತವೆ
* ಕೆಂಪು ಮಣ್ಣಿನಲ್ಲಿ, ಮಣ್ಣಿನ ಹೆಪ್ಪುಗಟ್ಟುವಿಕೆಯು ಕಡಿಮೆಯಾಗಿ ಮೊಳಕೆಯೊಡೆಯುವಿಕೆಯ ಪ್ರಮಾಣ ಉತ್ತಮಗೊಳ್ಳುತ್ತದೆ
ರಾಸಾಯನಿಕ ಗುಣಗಳು:
* ಬೆಳೆಗಳಿಗೆ ಬೇಕಾಗುವ ಪೋಷಕಾಂಶಗಳನ್ನು ನಿಧಾನವಾಗಿ, ನಿರಂತರವಾಗಿ ಮತ್ತು ಅಗತ್ಯಕ್ಕನುಗುಣವಾಗಿ ಒದಗಿಸುತ್ತವೆ
* ಸಾವಯವ ಗೊಬ್ಬರಗಳ ಬಳಕೆಯಿಂದ ಉತ್ಪತ್ತಿಯಾಗುವ ಹ್ಯೂಮಿಕ್ ಮತ್ತು ಫೆÀಲ್ವಿಕ್ ಆಮ್ಲಗಳಲ್ಲದೆ ಬೇರೆ ಸಾವಯವ ಸಂಯುಕ್ತಗಳ ಪೋಷಕಾಂಶಗಳನ್ನು ಹಿಡಿದಿಟ್ಟುಕೊಳ್ಳಲು ಸಹಕಾರಿಯಾಗುತ್ತವೆ ಮತ್ತು ಅವು ಸಸ್ಯಗಳಿಗೆ ಸುಲಭವಾಗಿ ದೊರಕುವಂತೆ ಮಾಡುತ್ತವೆ
*ಮಣ್ಣಿನ ಧನ ಅಯಾನು ವಿನಿಮಯ ಸಾಮರ್ಥ್ಯ(ಸಿಇಸಿ) 2 ರಿಂದ 30 ಪಟ್ಟು ಹೆಚ್ಚಾಗುವುದರಿಂದ ಬೆಳೆಗಳಿಗೆ ಪೋಷಕಾಂಶಗಳ ಪೂರೈಕೆಯ ಸಾಮರ್ಥ್ಯವು ಅಧಿಕಗೊಳ್ಳುತ್ತದೆ
* ಅನೇಕ ಸೂಕ್ಷ್ಮ ಪೋಷಕಾಂಶಗಳು ವಿಷಕಾರಿಯಾಗಿ ಪರಿಣಮಿಸಬಲ್ಲ ಪ್ರಮಾಣದಲ್ಲಿದ್ದಾಗ ಸಾವಯವ ವಸ್ತುಗಳೊಡನೆ ಸಂಕೀರ್ಣ ಹೊಂದಿ ಕರಗದ ರೂಪಕ್ಕೆ ತಿರುಗುತ್ತವೆ. ಇದರಿಂದ ಅವುಗಳಿಂದಾಗುವ ಅಪಾಯವು ತಪ್ಪುತ್ತದೆ
*ಸಾವಯವ ಗೊಬ್ಬರಗಳು ಕಳಿಯುವಾಗ ಬಿಡುಗಡೆಯಾಗುವ ಆಮ್ಲಗಳು ಹಾಗೂ ಇಂಗಾಲದ ಡೈಆಕ್ಸೆöÊಡ್ ಮಣ್ಣಿನ ಕ್ಷಾರತೆಯನ್ನು ಕಡಿಮೆ ಮಾಡಲು ಸಹಾಯವಾಗುತ್ತವೆ
*ಸಸ್ಯ ಪ್ರಚೋದಕಗಳು ಅಕ್ಸಿನ್ ಮತ್ತು ಜೀವ ನಿರೋಧಕಗಳ ಕಾರ್ಯ ದಕ್ಷತೆಯನ್ನು ಹೆಚ್ಚಿಸುತ್ತವೆ
ಜೈವಿಕ ಗುಣಗಳು:
• ಮಣ್ಣಿನಲ್ಲಿರುವ ಸೂಕ್ಷ್ಮಾಣು ಜೀವಿಗಳಿಗೆ ಬೇಕಾಗುವ ಇಂಗಾಲ ಮತ್ತು ಮಣ್ಣಿನಲ್ಲಿರುವ ಅನೇಕ ಜೀವಿಗಳಿಗೆ ಬೇಕಾದ ಪೋಷಕಾಂಶಗಳು ದೊರೆಯುತ್ತವೆ
• ಮಣ್ಣಿನಲ್ಲಿ ನಡೆಯುವ ಜೈವಿಕ ಚಟುವಟಿಕೆಗಳಾದ ಸಾರಜನಕ ಸ್ಥೀರಿಕರಣ, ರಂಜಕದ ಲಭ್ಯತೆ ಮತ್ತು ಇತರೆ ಪೋಷಕಾಂಶಗಳ ಬಿಡುಗಡೆ ಹಾಗೂ ಜೈವಿಕ ಚಟುವಟಿಕೆಗಳು ತೀವ್ರಗೊಳ್ಳುತ್ತವೆ
• ಸಾವಯವ ಅಂಶ ಹೆಚ್ಚಿನ ಪ್ರಮಾಣದಲ್ಲಿರುವ ಮಣ್ಣಿನಲ್ಲಿ ಎರೆಹುಳುಗಳ ಸಂಖ್ಯೆ ಹೆಚ್ಚಾಗುವುದಲ್ಲದೆ, ಹೆಚ್ಚು ಕಾರ್ಯ ಚಟುವಟಿಕೆಯಿಂದ ಕೂಡಿರುತ್ತವೆ
ಲೇಖಕರು: ಡಾ. ಎನ್. ದೇವಕುಮಾರ್, ಡಾ. ಕೆ. ಮುರುಳಿ, ಜಿ.ಎಸ್. ನವೀನ್ ಕುಮಾರ್