ಅವತ್ತು ಆಗಸ್ಟ್ 8, 2008. ಕೊಪ್ಪಳ ಜಿಲ್ಲೆಯ ನಿಟ್ಟಾಲಿ ಗ್ರಾಮದಲ್ಲಿರೋ ಐದೆಕರೆ ಭೂಮಿಯಲ್ಲಿ ಮೊದಲ ಸಸಿ ನೆಟ್ಟ ದಿನ. ಕೆಲವೇ ದಿನಗಳಲ್ಲಿ ಎಲ್ಲ ಸಸಿಗಳು ಗಿಡ, ಮರಗಳಾಗಿ ಬೆಳೆದು ಹಚ್ಚಹಸಿರಾಗಿ ಕಂಗೊಳಿಸಿಬಿಡುತ್ತವೆ ಅನ್ನೋ ಭ್ರಮೆಯಲ್ಲಿದ್ದೆ. ನೀರು, ಮಣ್ಣಿನ ಬಗ್ಗೆ ಏನೂ ಗೊತ್ತಿಲ್ಲದ ನಾನು ಹುಚ್ಚುತನದಲ್ಲಿ ಮುಳುಗಿ, ಮಾವಿನ ಸಸಿಗಳನ್ನು ನೆಟ್ಟಿದ್ದೆ.
ಎರಡು ವರ್ಷಗಳವರೆಗೆ ಬೆಳೆದ ಮಾವಿನ ಗಿಡಗಳು ನಂತರ ಮುರುಟಿ ಹೋದವು. ಮತ್ತೆ ಮತ್ತೆ ಸಸಿಗಳನ್ನು ಎಲ್ಲೆಲ್ಲಿಂದಲೋ ತಂದು ನೆಟ್ಟೆ. ಫಲಿತಾಂಶವೂ ಅದೇ ಆಗಿತ್ತು. ತೋಟದ ಎದುರಿನ ಕಟ್ಟೆಯ ಮೇಲೆ ಕೂತಿದ್ದ ಹಿರಿಯರು, “ಈ ಹೊಲ್ದಾಗ ಮಾವು ಬರಂಗಿಲ್ಲಾರೀ… ನಾವು ನಿಮಗ ಮೊದಲೇ ಹೇಳಿದ್ದೆವು. ನೀವು ಕೇಳಲಿಲ್ಲ…” ಅಂದರು. ಅವರ ಮಾತನ್ನು ಕೇಳಿಸಿಕೊಳ್ಳಲು ನನಗೆ ಸಾವಿರಾರು ರೂಪಾಯಿ ಖರ್ಚು ಮಾಡಿಕೊಳ್ಳೋದಲ್ಲದೇ ಎರಡ್ಮೂರು ವರ್ಷ ಬೇಕಾಯಿತು.
ಬಳಿಕ ಭೂಮಿ, ನೀರಿನ ಬಗ್ಗೆ ಅನೇಕರ ಬಳಿ ತಿಳಿದುಕೊಂಡು ನೇರಳೆ, ಸಪೋಟ ಗಿಡಕ್ಕೆ ಮೊರೆ ಹೋದೆ. ಆದರೆ ಆರಂಭದಲ್ಲಿಯೇ ಸುತ್ತಲೂ ನೆಟ್ಟಿದ್ದ ಸಿಲ್ವರ್ ಓಕ್, ಮಹಾಗನಿ ಬೆಳೆಯುತ್ತಲೇ ಹೋಗಿದ್ದವು. ಇದೇ ವೇಳೆ ಕುಷ್ಟಗಿಯ ಹಿರಿಯ ಜೀವ ದೇವೇಂದ್ರಪ್ಪ ಬಳೂಟಗಿ ಬಂದು ಶ್ರೀಗಂಧ ನಾಟಿ ಮಾಡುವಂತೆ ಸಲಹೆ ಕೊಟ್ಟರು. ಅದೂ ಆಯಿತು. ಆದರೆ ಹಚ್ಚಿದ್ದ ಎಲ್ಲ ಗಂಧದ ಸಸಿಗಳು ಸತ್ತೇ ಹೋಗಿದ್ದವು. ಬೇಸರವೆನಿಸಿ ತಿಂಗಳುಗಟ್ಟಲೇ ತೋಟದ ಕಡೆ ಹಾಯಲೇ ಇಲ್ಲ.
ಒಂದು ದಿನ ಫೋನ್ ಮಾಡಿದ ಬಳೂಟಗಿ ಅವರು, ನಿಮ್ಮಂಥವರೇ ಹೀಗೆ ಮಾಡಿದರೆ ಹೇಗೆ? ಅಂತಾ ದಬಾಯಿಸಿದರು. ಅವರಿಗೆ ಹೆದರಿ ತೋಟಕ್ಕೆ ಹೋದೆ. ಎಲ್ಲೋ ಹುಲ್ಲಿನ ಮಧ್ಯೆ ಕೆಲ ಗಂಧದ ಗಿಡಗಳು ತಲೆ ಎತ್ತಿದ್ದವು. ಆತ್ಮವಿಶ್ವಾಸ ಮತ್ತೆ ಕುದುರಿತು. ಕೃಷಿ ಅಂದರೆ ಅಷ್ಟು ಸುಲಭದ ಮಾತಲ್ಲ ಅನ್ನೋದನ್ನು ತೋರಿಸಿಕೊಟ್ಟ ಇಂಥ ಸಣ್ಣಪುಟ್ಟ ವಿಚಾರಗಳೇ ಇವತ್ತು ನನ್ನ ತೋಟವನ್ನು ಸಂಪೂರ್ಣವಾಗಿ ಹಸಿರುಮಯವನ್ನಾಗಿ ಮಾಡಿವೆ.
08-08-2023ಕ್ಕೆ ಮೊದಲ ಸಸಿ ಹಚ್ಚಿ ಇಂದಿಗೆ ಬರೋಬ್ಬರಿ 15 ವರ್ಷಗಳಾದವು. ಇವತ್ತು ತೋಟದ ತುಂಬೆಲ್ಲಾ ಹಸಿರು. ಮನೆ ಮೇಲಿಂದ ನೋಡಿದರೆ ಮತ್ತೊಂದು ತುದಿ ಕಾಣಸಿಗದು. ಅಷ್ಟೆತ್ತರಕ್ಕೆ ಬೆಳೆದು ನಿಂತಿರೋ ಗಿಡ-ಮರಗಳು. ಸಂಜೆ ಆರರ ನಂತರ ತೋಟದೊಳಗೆ ಹೋಗಲು ಕೂಡ ಭಯವಾಗುವಷ್ಟು ದಟ್ಟವಾಗಿ ಗಿಡ-ಮರಗಳು ಬೆಳೆದು ನಿಂತಿವೆ. ಕರಿಬೇವಿನಿಂದ ಹಿಡಿದು ಸಿಲ್ವರ್ ಓಕ್, ಮಹಾಗನಿವರೆಗೆ ಎಲ್ಲ ಬಗೆಯ ಗಿಡ-ಮರಗಳಿವೆ. ಬಿಸಿಲೂರಿನಲ್ಲಿಯೂ ಮಲೆನಾಡಿನ ಅನುಭವ. ಸಂಜೆಯಾಗುತ್ತಿದ್ದಂತೆಯೇ ಬೀಸೋ ಗಾಳಿಗೆ ಎತ್ತರದ ಮರಗಳು ತೂಗುತ್ತಿದ್ದರೆ, ಅದನ್ನು ನೋಡೋ ಆನಂದವೇ ಬೇರೆ. ತೋಟದಲ್ಲಿ ಎಷ್ಟೊತ್ತು ತಿರುಗಾಡಿದರೂ ಶ್ರಮ ಅನ್ನಿಸೋದೇ ಇಲ್ಲ.
ಜೀವವೈವಿಧ್ಯ ಇರಲಿ ಅನ್ನೋದಕ್ಕೆ ಸಿಕ್ಕ ಎಲ್ಲ ಥರದ ಗಿಡಗಳನ್ನು ನೆಟ್ಟಿದ್ದೇನೆ. ಕೆಲವು ಎಷ್ಟೇ ಕಾಳಜಿ ತೋರಿಸಿದರೂ ಮುನಿಸಿಕೊಂಡು ಸತ್ತಿದ್ದೂ ಇದೆ. ಆಗ ಬೇಸರವೆನಿಸಿದರೂ ಅದೇ ಜಾಗೆಯಲ್ಲಿ ಮತ್ತೊಂದು ಬಗೆಯ ಸಸಿ ನೆಟ್ಟು ಬೇಸರವನ್ನು ಕಡಿಮೆ ಮಾಡಿಕೊಂಡಿದ್ದಿದೆ. ಇದೀಗ ತೋಟದಲ್ಲಿ ಯಾವ ಸಸಿಯನ್ನೂ ಹಚ್ಚಲು ಜಾಗೆ ಇಲ್ಲ. ಆದರೂ ಮತ್ತೆ ಬಗೆ ಬಗೆಯ ಸಸಿಗಳನ್ನು ಒಯ್ಯಲು ಮನಸ್ಸು ಒತ್ತಾಯಿಸುತ್ತಲೇ ಇರುತ್ತೆ.
ಇತ್ತೀಚಿಗೆ ತೋಟದಲ್ಲಿ ಗಿಡ-ಮರ ಬೆಳೆಸಿದ್ದಕ್ಕೆ ಸುತ್ತಮುತ್ತಲಿನ ಕೆಲವರಿಗೆ ತೊಂದರೆಯಾಗುತ್ತಿದೆ ಅನ್ನೋ ಆಕ್ಷೇಪಣೆ ಕೇಳಿ ಬಂತು. ಇನ್ನು ಕೆಲವರಿಗಂತೂ ಗಾಳಿಯೇ ಬಂದ್ ಆಗಿದೆಯಂತೆ. ಹೀಗಾಗಿ ಎಲ್ಲ ಗಿಡ-ಮರಗಳನ್ನು ಕತ್ತರಿಸಲು ಅವರ ಆಗ್ರಹವಂತೆ. ಅಂಥ ಕೆಲವರಿಗೆ ಫೋನ್ ಮಾಡಿ ಮಾತಾಡಿದೆ. ನಿಮಗೆ ಗಿಡ-ಮರಗಳಿಂದ ತೊಂದರೆಯಾದರೆ ಪೊಲೀಸರಿಗೆ, ಅರಣ್ಯ ಇಲಾಖೆಗೆ ದೂರು ನೀಡಿ ಅಂತಾ ಸಿಟ್ಟಿನಿಂದ ಹೇಳಿದೆ. ಬಳಿಕ ಅವರಿಗೆಲ್ಲ ತಿಳಿ ಹೇಳಿ ಫೋನ್ ಇಟ್ಟೆ. ಇದು ಅಲ್ಲಿನ ಕೆಲ ಯುವಕರಿಗೆ ಗೊತ್ತಾಗಿ, ಅವರೂ ಹೋಗಿ ತಿಳಿ ಹೇಳಿ ಬಂದರು. ಕೇಳದೆಯೇ ಇಷ್ಟೊಂದು ಪ್ರಮಾಣದ ಆಮ್ಲಜನಕವನ್ನು ನೀಡುತ್ತಿರೋ ಅಲ್ಲಿನ ಮರಗಳ ತಾಕತ್ತು ಏನು ಅನ್ನೋದು ನಗರ ಪ್ರದೇಶದಲ್ಲಿ ಬದುಕುತ್ತಿರೋ ನಮಗೆಲ್ಲ ಗೊತ್ತು. ಹಳ್ಳಿಗರಿಗೆ ಆ ಸಮಸ್ಯೆ ಇನ್ನೂ ಗಮನಕ್ಕೆ ಬಂದಿಲ್ಲ. ಹೀಗಾಗಿ ಅವರಿಗೆ ತಿಳಿ ಹೇಳಬೇಕಾದ ಅವಶ್ಯಕತೆ ಸಾಕಷ್ಟಿದೆ ಅನ್ನಿಸುತ್ತದೆ, ಇರಲಿ.
ಅನೇಕರು ತೋಟದಿಂದ ಆದಾಯ ಶುರುವಾಗಿದೆಯಾ? ಅಂತಾ ಕೇಳುತ್ತಾರೆ. “ಸಾಕಷ್ಟು…” ಅಂತಾ ಹೇಳಿ ನಗುತ್ತೇನೆ. ಏಕೆಂದರೆ ಇಂಥ ಅರಣ್ಯ ಕೃಷಿಯ ಆದಾಯವನ್ನು ಆರಂಭದಲ್ಲಿ ಹಣದ ರೂಪದಲ್ಲಿ ನೋಡಿದರೆ ಕಷ್ಟ. ಹಾಗೆ ನೋಡದೇ ಇರೋದಕ್ಕೆ ಇವತ್ತು ತೋಟದಲ್ಲಿ ಇಷ್ಟೊಂದು ಗಿಡ-ಮರಗಳು ಬೆಳೆದಿವೆ. ಕಳೆದ ವರ್ಷ ಜೋಡಿ ನವಿಲು ಬಂದು ತೋಟದಲ್ಲಿಯೇ ಮೊಟ್ಟೆ ಇಟ್ಟು, ಮರಿ ಮಾಡಿಕೊಂಡು ಹೋದವು. ಇನ್ನು ತೋಟದಲ್ಲಿ ನಾವು ಯಾವತ್ತೂ ನೋಡದ ಅನೇಕ ಬಗೆಯ ಪಕ್ಷಿಗಳು ಬೀಡು ಬಿಟ್ಟಿವೆ. ಬಗೆ ಬಗೆಯ ಚಿಟ್ಟೆಗಳು ನಲಿದಾಡುತ್ತಿವೆ. ಗಿಳಿ ಹಿಂಡು, ಕೋಗಿಲೆ, ಗೂಬೆ, ಕಾಗೆ, ಗೊರವಂಕ, ಮರಕುಟುಗ, ಮಂಗಟ್ಟೆ ಸೇರಿದಂತೆ ಅನೇಕ ಪಕ್ಷಿಗಳಿಗೆ ತೋಟ ಆಶ್ರಯ ತಾಣವಾಗಿದೆ. ಬೆಳಿಗ್ಗೆ ಏಳುತ್ತಲೇ ಕಾಣುವ ಗುಬ್ಬಿ, ರತ್ನಪಕ್ಷಿಗಳು ಮನಸ್ಸನ್ನು ಉಲ್ಲಾಸಗೊಳಿಸುತ್ತವೆ.
ಇದನ್ನೆಲ್ಲ ನಾವು ಆದಾಯದ ರೂಪದಲ್ಲಿ ನೋಡಿದಾಗ ಉಳಿದೆಲ್ಲವೂ ನಗಣ್ಯ. “ನಿಮಗೇನಪಾ, ಎರಡು ಪಗಾರಾ…” ಅಂತಾ ಅನೇಕ ಸ್ನೇಹಿತರು ಅನ್ನುವುದೂ ಉಂಟು. “ಒಂದು ಪಗಾರಾ ಇಲ್ಲಿಗೆ, ಪತ್ನಿ ಪಗಾರಾ ಮನೆಗೆ” ಅನ್ನದೇ ಬೇರೇನು ಹೇಳಲಿ?
ಇತ್ತೀಚಿಗೆ ಗೂಗಲ್ ಅರ್ಥ್ನಿಂದ ನೋಡಿದಾಗ ತೋಟ ಕಂಡಿದ್ದು ಹೀಗೆ. ನಮ್ಮ ನಿಟ್ಟಾಲಿ ದೇವತೆಗೆ ನಾನು ಉಡಿಸಿದ ಹಸಿರು ಸೀರೆಯಿದು… ಒಣ ಪ್ರದೇಶದ ಮಧ್ಯೆ ಹಚ್ಚಹಸುರಿನ, ಚಚ್ಚೌಕವಾಗಿ ಕಾಣುವ ಈ ಭಾಗ, ನನ್ನ ಪಾಲಿನ ಭಾಗ್ಯವೂ ಹೌದು..! ವೃಕ್ಷೋ ರಕ್ಷತಿ ರಕ್ಷಿತಃ. ಹೇಗಿತ್ತು, ಹೇಗಾಯ್ತು ಗೊತ್ತಾ? ಅಂತಾ ತಿಳಿಯಲು ಹಳೆಯ ಫೋಟೋ ಕೂಡ ಲಗತ್ತಿಸಿದೆ.