ಭಾಗ – 1
ಎಂಥದ್ದೇ ಹವಾಮಾನ ಪರಿಸ್ಥಿತಿಗಳಿರಲಿ; ಒಂದು ಮಳೆಗಾಲದ ಅವಧಿಯಲ್ಲಿ ಸರಾಸರಿ ಪ್ರಮಾಣದ ಮಳೆಯಾಗುತ್ತದೆ. ಕೆಲವು ವಾರ ಅಥವಾ ಒಂದು, ಎರಡು ತಿಂಗಳು ಚೆದುರಿದಂತೆ ಮಳೆಯಾಗಿರಬಹುದು ಅಥವಾ ಕೆಲವು ಪ್ರದೇಶಗಳಲ್ಲಿ ಮಳೆ ಆಗದೇ ಇರಬಹುದು. ಆದರೆ ಒಟ್ಟಾರೆ ಅವಧಿಯಲ್ಲಿ ಸರಾಸರಿ ಆಗಿರುತ್ತದೆ.
ಹೀಗೆ ಬಿದ್ದ ಮಳೆನೀರನ್ನು ದೀರ್ಘಾವಧಿಗೆ ಸಂಗ್ರಹಿಸುವುದು ಅತ್ಯಂತ ಅಗತ್ಯ. ಹೀಗೆ ಸಂಗ್ರಹಿಸುವುದರಲ್ಲಿ ಎರಡು ವಿಧವಿದೆ. ಅಂತರ್ಜಲ ಹೆಚ್ಚಿಸುವುದು; ಕೃಷಿಹೊಂಡ, ಬಾವಿಗಳು, ಸಂಪುಗಳು, ಭೂಗತ ಸಂಗ್ರಹಣಾ ತೊಟ್ಟಿಗಳಲ್ಲಿ ಸಂಗ್ರಹಿಸುವುದು. ಇದರಲ್ಲಿ ಬಹಳ ಪ್ರಾಮುಖ್ಯವಾಗಿರುವುದು ಅಂತರ್ಜಲ ಹೆಚ್ಚಳ.
ಸಾವಯವ ಉಳುಮೆ
ಕೃಷಿಭೂಮಿಯ ಮಣ್ಣಿನ ರಚನೆ ಗಟ್ಟಿಯಾಗಿದ್ದಾಗ ಅಲ್ಲಿ ಬಿದ್ದ ಮಳೆನೀರು ಇಂಗುವುದಿಲ್ಲ. ಬಿದ್ದ ನೀರೆಲ್ಲ ಕೊಚ್ಚಿಕೊಂಡು ಹೋಗುತ್ತದೆ. ಮಣ್ಣು ಗಟ್ಟಿಯಾಗುವುದರ ಹಿಂದೆ ಸಾಕಷ್ಟು ಕಾರಣಗಳಿವೆ. ಭಾರಿತೂಕದ ಟ್ರಾಕ್ಟರ್ ಗಳನ್ನು ಬಳಸಿ ಉಳುಮೆ ಮಾಡಿರುವುದು, ಸತತವಾಗಿ ರಾಸಾಯನಿಕ ಗೊಬ್ಬರಗಳನ್ನು ಮಿಶ್ರಣ ಮಾಡುತ್ತಾ ಬಂದಿರುವುದು. ಇದರಿಂದ ಮಣ್ಣಿನ ರಚನೆಯೇ ಬದಲಾಗುತ್ತದೆ. ಮೇಲ್ನೋಟಕ್ಕೆ ಇದು ತಿಳಿಯುವುದಿಲ್ಲ.
ಮಳೆಬಿದ್ದ ಸಂದರ್ಭದಲ್ಲಿ ಅಧ್ಯಯನ ಮಾಡಿದಾಗ ಮಣ್ಣಿನ ಮೇಲ್ಮದರ ಗಟ್ಟಿಯಾಗಿ ಮಳೆನೀರು ಇಂಗದೇ ಹರಿದು ಹೋಗುತ್ತಿರುವುದು ಗಮನಕ್ಕೆ ಬರುತ್ತದೆ. ಇದನ್ನು ತಡೆಗಟ್ಟಲು ಸಾವಯವ ಉಳುಮೆ ಅಗತ್ಯ. ಇದರಿಂದ ಮಳೆನೀರು ಸಲೀಸಾಗಿ ಭೂಮಿಯೊಳಗೆ ಇಳಿದು ಅಂತರ್ಜಲ ವೃದ್ದಿಯಾಗುತ್ತದೆ.
ಪೋಷಕಾಂಶಗಳ ಬಳಕೆ
ಮಳೆನೀರಿನಲ್ಲಿ ಪ್ರಾಕೃತಿಕ ಖನಿಜಾಂಶಗಳಿವೆ. ಇದನ್ನು ಹಣದಿಂದ ಅಳೆಯಲಾಗುವುದಿಲ್ಲ. ಬೆಲೆಯನ್ನಂತೂ ಕಟ್ಟಲಾಗುವುದಿಲ್ಲ. ಇದನ್ನು ಬಳಸುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚುತ್ತದೆ. ಉಪಯುಕ್ತ ಸೂಕ್ಷ್ಮಾಣುಜೀವಿಗಳ ಸಂಖ್ಯೆ ಹೆಚ್ಚಾಗಿ ಅವುಗಳ ಚಟುವಟಿಕೆಯೂ ವೃದ್ದಿಸುತ್ತದೆ. ಮಣ್ಣಿಗೆ ಪೂರೈಸಬೇಕಾದ ಸಾವಯವ ಪೋಷಕಾಂಶಗಳ ಬಳಕೆ ಕಡಿಮೆ ಮಾಡಬಹುದು, ಸಸ್ಯಗಳ ಬೆಳವಣಿಗೆ ಉತ್ತಮವಾಗುತ್ತದೆ. ವೇಗವೂ ಆಗುತ್ತದೆ. ಇದು ಇಳುವರಿ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಕ್ಷೇತ್ರಬೆಳೆಗಳು ಅಂದರೆ ಭತ್ತ, ರಾಗಿ, ಜೋಳ, ಗೋಧಿ ಇತ್ಯಾದಿ ಜೊತೆಗೆ ತೋಟಗಾರಿಕೆ ಬೆಳೆಗಳ ಮೇಲೂ ಮಳೆನೀರು ಅತ್ಯುತ್ತಮ ಪರಿಣಾಮ ಬೀರುತ್ತದೆ.
ದೀರ್ಘಾವಧಿ ತೇವಾಂಶ
ಬಿದ್ದ ಮಳೆನೀರು ಕೃಷಿಭೂಮಿಯಲ್ಲಿಯೇ ಇಂಗುವಂತೆ ಮಾಡುವುದರಿಂದ ಮಣ್ಣಿನಲ್ಲಿ ದೀರ್ಘಾವಧಿ ತೇವಾಂಶವಿರುತ್ತದೆ. ಮಣ್ಣು ಸಡಿಲವಾಗಿರುವುದರಿಂದ ಸಸ್ಯಗಳ ಬೇರು ಆಳಕ್ಕೆ ಇಳಿದು ಅಲ್ಲಿನ ತೇವಾಂಶ ಹೀರಿಕೊಳ್ಳಲು ಸಹಾಯಕವಾಗುತ್ತದೆ. ಅಂತರ್ಜಲ ಉತ್ತಮವಾಗಿದ್ದಾಗ ಮಳೆ ಬೀಳುವ ಅವಧಿ ವ್ಯತ್ಯಯವಾದರೂ ಸಸ್ಯಗಳು ಬೇಗನೇ ಒಣಗುವುದಿಲ್ಲ. ಮತ್ತೊಂದು ಮಳೆ ಬೀಳುವ ತನಕವೂ ಜೀವ ಕಾಪಾಡಿಕೊಂಡಿರುತ್ತವೆ.
ಮಳೆನೀರು ಮೃದು
ಎಲ್ಲ ಕೊಳವೆಬಾವಿಗಳ ನೀರು ಮೃದುವಾಗಿರುವುದಿಲ್ಲ. ಬಹುತೇಕ ಕೊಳವೆಬಾವಿಗಳ ನೀರು ಕಠಿಣವಾಗಿರುತ್ತದೆ. ಕಠಿಣ ಲವಣಾಂಶಗಳಿಂದ ಕೂಡಿರುತ್ತದೆ.ಪ್ಲೋರೈಡ್ ಯುಕ್ತವಾಗಿರುತ್ತದೆ. ಇದನ್ನು ಸಂಸ್ಕರಣೆ ಮಾಡಿ ಸಸ್ಯಗಳಿಗೆ ಪೂರೈಸುವುದು ಶ್ರಮದಾಯಕ ಜೊತೆಗೆ ದುಬಾರಿ ಸಹ. ಆದರೆ ಮಳೆನೀರು ಅತ್ಯಂತ ಮೃದು. ಇದು ಸಸ್ಯಗಳ ಬೆಳವಣಿಗೆಗೆ ಪೂರಕ. ಮಗುವಿಗೆ ತಾಯಿಹಾಲು ಹೇಗೆ ಶ್ರೇಷ್ಠವೂ ಹಾಗೆ ಕೃಷಿಭೂಮಿಯ ಸಸ್ಯಗಳಿಗೂ ಮಳೆನೀರು ಅತ್ಯುತ್ತಮ
ಮುಂದುವರಿಯುತ್ತದೆ