ವೈಜ್ಞಾನಿಕ ಮಾದರಿಯಲ್ಲಿ ಬೇಸಾಯ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಅತ್ಯಗತ್ಯ. ಇಲ್ಲದಿದ್ದರೆ ಬೇಸಾಯದ ಬದುಕು ಸಂಕಷ್ಟಕ್ಕೀಡಾಗುತ್ತದೆ. ಆದ್ದರಿಂದ ತಜ್ಞರು ಕೃಷಿಕ್ಷೇತ್ರ ಕಾರ್ಯಾಚರಣೆ ಸಂದರ್ಭದಲ್ಲಿ ಕಂಡುಕೊಂಡ ಅನುಭವಗಳನ್ನು ಆಧರಿಸಿದ ಪುಸ್ತಕಗಳನ್ನು ಹೊರ ತರುವುದು ಕೃಷಿಕರಿಗೆ ಅದರಲ್ಲಿಯೂ ಹೊಸದಾಗಿ ಕೃಷಿ ಅನುಭವಕ್ಕೆ ತೆರೆದುಕೊಳ್ಳುವವರಿಗೆ ಅತ್ಯುಪಯುಕ್ತ. ಈ ದಿಶೆಯಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಕೆ. ಶಿವರಾಮು ಅವರ ಸಂಪಾದಕತ್ವದಲ್ಲಿ ಬಂದಿರುವ  ಕೃಷಿಬೆಳೆಗಳ ಸುಧಾರಿತ ಬೇಸಾಯಪದ್ಧತಿಗಳು ಮಾರ್ಗದರ್ಶಕ ಕೃತಿ

ಈ ಕೃತಿಯಲ್ಲಿ  ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಬರುವ ಹತ್ತು ಕೃಷಿ ವಲಯಗಳ ಪರಿಚಯ, ಏಕದಳ ಧಾನ್ಯದ ಬೆಳೆಗಳಾದ ಭತ್ತ, ರಾಗಿ, ಶಕ್ತಿಮಾನ್ ಜೋಳ, ಹಿಂಗಾರಿ ಜೋಳ, ಶಕ್ತಿಮಾನ್ ಮುಸಕಿನಜೋಳ, ಪಾಪ್ ಕಾರ್ನ್, ಬೇಬಿ ಕಾರ್ನ್, ಗೋಧಿ, ಶಕ್ತಿಮಾನ್ ಸಜ್ಜೆ, ನವಣೆ, ಹಾರಕ, ಸಾಮೆ, ಬರಗು ಮತ್ತು ಊದಲು, ಸಮರ್ಥ ಬೆಳೆಯಾದ  ಬೀಜದ ದಂಟು.  ದ್ವಿದಳಧಾನ್ಯದ  ಬೆಳೆಗಳಾದ ತೊಗರಿ, ಹೆಸರು, ಉದ್ದು, ಅಲಸಂದೆ, ಅವರೆ, ಕಡಲೆ ಮತ್ತು ಹುರುಳಿ. ಎಣ್ಣೆಕಾಳು ಬೆಳೆಗಳಾದ ನೆಲಗಡಲೆ, ಸೂರ್ಯಕಾಂತಿ, ಸೋಯಾಅವರೆ, ಹರಳು, ಎಳ್ಳು, ಹುಚ್ಚೆಳ್ಳು ಮತ್ತು ಕುಸುಬೆ. ವಾಣಿಜ್ಯ ಬೆಳೆಗಳಾದ ಕಬ್ಬು, ಹತ್ತಿ ಮತ್ತು ವರ್ಜೀನಿಯಾ ಹೊಗೆಸೊಪ್ಪು ಇತ್ಯಾದಿ ಬೆಳೆಗಳ ಕೃಷಿಪದ್ಧತಿ ಮಾಹಿತಿಯಿದೆ.

ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ನೀಡುವ ಸೌಲಭ್ಯಗಳು ಮತ್ತು ಕೃಷಿ ಮಾಪನಗಳ ಬಗ್ಗೆ ಮಾಹಿತಿಯೂ ಇರುವುದು ವಿಶೇಷ. ವಿವಿಧ  ಬೆಳೆಗಳ ಸುಧಾರಿತ ತಳಿಗಳು, ಮಣ್ಣು, ಸಾವಯವ  ಗೊಬ್ಬರ ಪ್ರಮಾಣ, ರಾಸಾಯನಿಕ ಗೊಬ್ಬರದ ಪ್ರಮಾಣ, ಸಮಗ್ರ ಪೋಷಕಾಂಶಗಳ ನಿರ್ವಹಣೆ, ಸಮಗ್ರ ಪೀಡೆ ನಿರ್ವಹಣೆ, ಸಮಗ್ರ ಕಳೆ ನಿರ್ವಹಣೆ, ಇಳುವರಿ ಮತ್ತು ಕಡಿಮೆ ಖರ್ಚಿನ ಪ್ರಮುಖ ಬೇಸಾಯ ಕ್ರಮಗಳ ಬಗ್ಗೆ ಸಂಪೂರ್ಣ ಮಾಹಿತಿ ಒಳಗೊಂಡಿದೆ.

ಕೃಷಿಕರ ಮನೆಯಲ್ಲಿ  “ಕೃಷಿಬೆಳೆಗಳ ಸುಧಾರಿತ ಬೇಸಾಯಪದ್ಧತಿಗಳು” ಕೃತಿಯಿದ್ದರೆ ಬೇಸಾಯದ ಸಂದರ್ಭಗಳಲ್ಲಿ ತಲೆದೋರುವ ಸಂದೇಹಗಳನ್ನು ಸುಲಭವಾಗಿ ಪರಿಹರಿಸಿಕೊಳ್ಳಬಹುದು. ಕೇವಲ ರಾಸಾಯನಿಕ ಗೊಬ್ಬರಗಳ ಬಗ್ಗೆ ಅಷ್ಟೇ ಅಲ್ಲದೇ ಸಾವಯವ ಗೊಬ್ಬರ, ಸಮಗ್ರ ಪೋಷಕಾಂಶ, ಪೀಡೆ ನಿರ್ವಹಣೆ ಕುರಿತ ಮಾಹಿತಿ ಇರುವುದಂತೂ ಲಾಭದಾಯಕ ಕೃಷಿಗೆ ದಾರಿ.

ಇತ್ತೀಚಿನ ವರ್ಷಗಳಲ್ಲಿ ಮಹಾನಗರಗಳಲ್ಲಿ ನೆಲೆಸಿರುವ ಯುವಜನತೆಯಲ್ಲಿ ಅನೇಕರು ನಗರಗಳ ಜೀವನಶೈಲಿ ಒತ್ತಡದಿಂದ ಬೇಸರಗೊಂಡಿದ್ದಾರೆ. ಕೃಷಿ ಮಾಡಲು ಹಿಂದಿರುಗುತ್ತಿದ್ದಾರೆ. ಇಲ್ಲಿ ನೆಮ್ಮದಿ ಅರಸುತ್ತಿದ್ದಾರೆ. ಅಂಥವರಿಗೂ ಕೂಡ ಇದು ಉಪಯುಕ್ತ ಕೃತಿ.

ಈ ಕೃತಿ ಅಧ್ಯಯನದ ನಂತರವೂ ಸಂದೇಹಗಳು ಉಂಟಾದರೆ ಕೃಷಿ ವಿಸ್ತರಣಾ ನಿರ್ದೇಶನಾಲಯ ಅಥವಾ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಸಂಬಂಧಿಸಿದ ವಿಭಾಗಗಳ ತಜ್ಞರ ಜತೆಗೆ ಚರ್ಚಿಸಬಹುದು. ಈ ನಿಟ್ಟಿನಲ್ಲಿ ಕೃಷಿತಜ್ಞರ ಸಹಕಾರ ಸದಾ ಇರುತ್ತದೆ. ಹೆಚ್ಚಿನ ಇಳುವರಿ ಪಡೆಯಲು ಈ ಕೃತಿ ಸಹಕಾರಿ ಎಂದು ಡಾ. ಕೆ. ಶಿವರಾಮು ತಿಳಿಸುತ್ತಾರೆ.

 ಕೃಷಿಬೆಳೆಗಳ ಸುಧಾರಿತ ಬೇಸಾಯಪದ್ಧತಿಗಳು ಕೃತಿಯಲ್ಲಿ 220 ಪುಟಳಿವೆ. ಇದರ ಬೆಲೆ 200 ಆಗಿದ್ದು ಸಣ್ಣ ರೈತರು ಖರೀದಿಸಿ ಓದಲು ಅನುಕೂಲ. ಇಲ್ಲಿ ಬಳಸಿರುವ ಭಾಷಾ ಶೈಲಿಯೂ ಸರಳವಾಗಿದ್ದು ಎಲ್ಲರಿಗೂ ಸುಲಭವಾಗಿ ಅರ್ಥವಾಗುತ್ತದೆ. ಪುಸ್ತಕ ದೊರೆಯುವ ಸ್ಥಳ: ಕೃಷಿ ತಂತ್ರಜ್ಞಾನ ಮಾಹಿತಿ ಕೇಂದ್ರ, ಕೃಷಿ ವಿಶ್ವವಿದ್ಯಾಲಯ ಜಿ.ಕೆ.ವಿಕೆ. ಬೆಂಗಳೂರು 560 065 ದೂರವಾಣಿ: 080 – 2362 25411

LEAVE A REPLY

Please enter your comment!
Please enter your name here