ನಿರಂತರ ಉಳುಮೆಯಿಂದ ಮಣ್ಣಿನ ರಚನೆಗೆ ಹಾನಿಯಾಗುತ್ತದೆಯೇ

0
ಉಳುಮೆ ಮಾಡಿರದ (ಎಡಕ್ಕೆ) ಮತ್ತು ಉಳುಮೆ ಮಾಡಿರುವ (ಬಲಕ್ಕೆ) ಮಣ್ಣುಗಳ ಚಿತ್ರ

ಕೃಷಿಭೂಮಿಯಲ್ಲಿ ನಿರಂತರವಾಗಿ ಉಳುಮೆ ಮಾಡುವುದರ ಬಗ್ಗೆ ಸಾಕಷ್ಟು ಜಿಜ್ಞಾಸೆಗಳಿವೆ. ಬೆಳೆ ಬೆಳೆಯುವುದಕ್ಕೆ ಉಳುಮೆ ಅಗತ್ಯ ಎಂದು ಹಲವರು ಪ್ರತಿಪಾದಿಸುತ್ತಾರೆ. ಇನ್ನು ಕೆಲವರು ಮಣ್ಣಿಗೆ ನಿರಂತರ ಉಳುಮೆ ಅಗತ್ಯವಿಲ್ಲ ಎನ್ನುತ್ತಾರೆ. ಬಹಳ ಕಡಿಮೆ ಸಂಖ್ಯೆಯಲ್ಲಿ ಮಣ್ಣಿಗೆ ಉಳುಮೆಯೇ ಅಗತ್ಯವೇ ಇಲ್ಲ ಎಂದು ಪ್ರತಿಪಾದಿಸುತ್ತಾರೆ.

ನಾನು ಕೃಷಿ ವಲಯದಲ್ಲಿ ಕೆಲಸ ಮಾಡುವುದರಿಂದ ಈ ವಿಚಾರಗಳು ಜಿಜ್ಞಾಸೆಗೆ ಹಚ್ಚಿವೆ.  ನಿರಂತರ ಅದರಲ್ಲಿಯೂ ಭಾರಿ ತೂಕದ ಯಂತ್ರಗಳಿಂದ ಕೃಷಿಭೂಮಿಯಲ್ಲಿ ಉಳುಮೆ ಮಾಡುವುದರಿಂದ ಲಾಭಕ್ಕಿಂತಲೂ ನಷ್ಟವೇ ಹೆಚ್ಚು ಎಂಬುದನ್ನು ಅನುಭವಗಳಿಂದ ಕಂಡು ಕೊಂಡಿದ್ದೇನೆ. ಮುಂದುವರಿದ ದೇಶಗಳಲ್ಲಿ ಮೆಕ್ಕೆಜೋಳ, ಗೋಧಿ, ಭತ್ತವನ್ನು ಉಳುಮೆ ರಹಿತವಾಗಿ ಮುಚ್ಚಿಗೆ ಮಾಡಿ ಬೆಳೆಯುತ್ತಾರೆಂದು ಕೇಳಿದ್ದೇನೆ. ಹೀಗೆ ಯೋಚಿಸುತ್ತಿರುವಾಗಲೇ ವಾಟ್ಸಪಿನಲ್ಲಿ ಬಂದ ಲೇಖನವೊಂದು ನನ್ನನ್ನು ಮತ್ತಷ್ಟು ಚಿಂತನೆಗೆ ಒಳಪಡಿಸಿದೆ. ಈ ಲೇಖನದ ಕತೃ ಯಾರೆಂಬುದು ತಿಳಿದಿಲ್ಲ. ಆದರೆ ಚಿಂತನೆಗೆ ಯೋಗ್ಯವಾದ ಲೇಖನವಿದು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಆ ಲೇಖನ ಮುಂದಿದೆ -ಎಂ.ಜಿ. ಕರಿಬಸಪ್ಪ

ಈ ಚಿತ್ರ ಏನನ್ನೋ ಹೇಳುತ್ತಿದೆ. ಎಡಕ್ಕಿರುವುದು ಸಡಿಲ ಮೃದುವಾಗಿರುವ ಮಣ್ಣು . ಬಲಕ್ಕಿರುವುದು ಒತ್ತೊತ್ತಾಗಿರುವ ಗಟ್ಟಿ ಮಣ್ಣು. ಎಡಕ್ಕಿರುವ ಮಣ್ಣು ಆರೋಗ್ಯವಾಗಿದೆ. ಈ ಮಣ್ಣಲ್ಲಿ ದೊಡ್ಡ ಪ್ರಮಾಣದ ಹಾಗೂ ಸಣ್ಣ ಪ್ರಮಾಣದ ರಂಧ್ರಗಳಿವೆ. ಮಣ್ಣಿನಾಳಕ್ಕೆ ಇಳಿಯುವ ಗಿಡದ ಬೇರುಗಳು ಹಾಗೂ ಮಣ್ಣೊಳಗೆ ಹರಿದಾಡುವ ಎರೆಹುಳು ಮತ್ತಿತರ ಜೀವಿಗಳು ಈ ರಂಧ್ರಗಳನ್ನು ಸೃಷ್ಟಿಸಿವೆ. ಈ ಜೀವಿಗಳು ಅಂಟಿನಂತಹ ದ್ರವವನ್ನು ಸ್ರವಿಸುತ್ತವೆ. ಈ ಅಂಟು ಮಣ್ಣಿನ ಮರಳು – ಗೋಡು – ಜೇಡಿ ಕಣಗಳನ್ನು ಸಂಯೋಜಿಸುತ್ತವೆ ಅಥವಾ ಬೆಸೆಯುತ್ತವೆ. ಹೀಗೆ ಸಂಯೋಜನೆಗೊಂಡಿರುವ ಮಣ್ಣನ್ನೇ “ಕಳಿತ ಮಣ್ಣು – loamy soil” ಎಂದು ಕರೆಯಲಾಗುತ್ತದೆ.

ಮಣ್ಣಿನಲ್ಲಿರುವ ಈ ದೊಡ್ಡ ಹಾಗೂ ಚಿಕ್ಕ ಗಾತ್ರದ ರಂಧ್ರಗಳ ಮೂಲಕ ಮಣ್ಣೊಳಗೆ ಗಾಳಿ ಮತ್ತು ನೀರು ಸರಾಗವಾಗಿ ಇಳಿಯುತ್ತವೆ. ಗಾಳಿ – ನೀರು – ಸಾವಯವ ಅಂಶ – ಮಣ್ಣಲ್ಲಿನ ಜೀವಿಗಣಗಳು ಸೇರಿ ಸೃಷ್ಟಿಸುವುದೇ “ಪೋಷಕಾಂಶಗಳು”. ಈ ಪೋಷಕಾಂಶಗಳನ್ನು ಗಿಡದ ಬೇರುಗಳು ಹೀರಿಕೊಂಡು ಗಿಡದ ಮೇಲ್ಭಾಗಕ್ಕೆ ರವಾನಿಸುತ್ತವೆ. ಇಂತಹ ಸಜೀವಿ – ಆರೋಗ್ಯಕರ ಮಣ್ಣನ್ನು ಉಳುಮೆ ಮಾಡಿದಾಗ, ಮಣ್ಣಲ್ಲಿರುವ ರಂಧ್ರಗಳು ನಾಶವಾಗುತ್ತವೆ. ರಂಧ್ರಗಳಿರದ ಮಣ್ಣು ಕುಸಿಯುತ್ತದೆ. ಮಣ್ಣಿನ ಕಣಗಳು ಒಂದರ ಮೇಲೊಂದು ಒತ್ತೊತ್ತಾಗಿ ಬಿದ್ದು, ಗಟ್ಟಿಯಾಗುತ್ತವೆ. ಈ ಚಿತ್ರವನ್ನು ಆಳವಾಗಿ ಗಮನಿಸಿದಾಗ, ಇವೆಲ್ಲಾ ವ್ಯತ್ಯಾಸಗಳು ಸ್ಪಷ್ಟವಾಗಿ ಕಾಣುತ್ತವೆ.

ನೀವೇ ಗಮನಿಸಿ. ಎಡಗಡೆಯ ಉಳುಮೆಯನ್ನೇ ಮಾಡಿರದ ಮಣ್ಣಿನಲ್ಲಿ ಅಸಂಖ್ಯಾತ ದೊಡ್ಡ ಪ್ರಮಾಣದ ರಂಧ್ರಗಳು (macrospores) ನಮ್ಮ ಬರಿಗಣ್ಣಿಗೆ ಕಾಣಿಸುತ್ತಿವೆ. ಕೆಲವು ಬಗೆಯ ಮಣ್ಣುಜೀವಿಗಳು ಸ್ರವಿಸಿರುವ ಅಂಟು ಅಥವಾ ಜೈವಿಕ ಅಂಟು (biological glue) ಇರುವ ಕಾರಣ, ಈ ಅಂಟು ಮಣ್ಣಿನ ಕಣಗಳನ್ನು ಪರಸ್ಪರ ಬೆರೆಯುವಂತೆ ಮಾಡಿದೆ. ಈ ಮಣ್ಣಿನ ಕಣಗಳು ಪರಸ್ಪರ ಬೆರೆತಿದ್ದರೂ, ಸಂಯೋಜನೆಗೊಂಡಿದ್ದರೂ, ಈ ಕಣಗಳ ನಡುವೆ ಸ್ವಲ್ಪ ಜಾಗವೂ ಇದೆ. ಈ ಜಾಗವನ್ನೇ ರಂಧ್ರ ಅಥವಾ pores ಎಂದು ಕರೆಯಲಾಗಿದೆ.

ಈ ದೊಡ್ಡಗಾತ್ರದ ರಂಧ್ರಗಳ ಮೂಲಕ ಈ ಮಣ್ಣು ನೀರನ್ನು ಹೀರುವ ಸಾಮರ್ಥ್ಯ ಹೊಂದಿದೆ. ಹಾಗೆಯೇ ಈ ಮಣ್ಣಿನಲ್ಲಿ ತೀರಾ ಚಿಕ್ಕ ಗಾತ್ರದ ರಂಧ್ರಗಳೂ ಇವೆ. ಆದರೆ ಈ ಚಿಕ್ಕರಂಧ್ರಗಳನ್ನು ಬರಿಗಣ್ಣಲ್ಲಿ ನೋಡಲಾಗುವುದಿಲ್ಲ. ಈ ರಂಧ್ರಗಳನ್ನು ನೋಡಲು ನಾವು ಸೂಕ್ಷ್ಮದರ್ಶಕವನ್ನೇ ಅವಲಂಬಿಸಬೇಕು. ಈ ಚಿಕ್ಕ ರಂದ್ರಗಳು sponge ನಂತಿದ್ದು, ನೀರನ್ನು ಹಿಡಿದಿಟ್ಟುಕೊಂಡಿರುತ್ತದೆ. ಹೀಗಾಗಿ ಉಳುಮೆಯನ್ನೇ ಮಾಡಿರದ ಈ ಮಣ್ಣಲ್ಲಿನ ಕಣಗಳು (ಮರಳು – ಗೋಡು – ಜೇಡಿ) ಒತ್ತೊತ್ತಾಗಿರದೆ ಸಡಿಲವಾಗಿರುತ್ತವೆ. ಈ ಬಗೆಯ ಮಣ್ಣು ಗಟ್ಟಿಯಾಗಿರುವುದಿಲ್ಲ .

ಇನ್ನು ಬಲಕ್ಕಿರುವ ಮಣ್ಣನ್ನು ಗಮನಿಸಿದಾಗ, ಅಲ್ಲಿ ದೊಡ್ಡ ಗಾತ್ರದ ಅಥವಾ ಚಿಕ್ಕ ಗಾತ್ರದ ರಂಧ್ರಗಳೇ ಇಲ್ಲ. ಮಣ್ಣಿನ ಕಣಗಳ ನಡುವೆ ಸ್ವಲ್ಪವೂ ಜಾಗವಿರದ ಕಾರಣ, ಈ ಮಣ್ಣು ಒತ್ತೊತ್ತಾಗಿದೆ, ಗಟ್ಟಿಯಾಗಿದೆ. ಸತತ ಉಳುಮೆಯ ಕಾರಣದಿಂದ, ಈ ಮಣ್ಣಲ್ಲಿ ಸಹಜವಾಗಿರಬೇಕಿದ್ದ ಜೈವಿಕ ಅಂಟು ನಾಶವಾಗಿದೆ.

From Jasper County Soil and Water Conservation District.

ಸಂಗ್ರಹ: ಎಂ.ಜಿ. ಕರಿಬಸಪ್ಪ, ಕೃಷಿಕರು ಹಾಗೂ ಕೃಷಿ ಯಂತ್ರೋಪಕರಣ ತಜ್ಞರು

 

LEAVE A REPLY

Please enter your comment!
Please enter your name here