ಮಣ್ಣು ರಹಿತ ಜಲಕೃಷಿಯ ರೀತಿಗಳು

0

ಮಣ್ಣು ರಹಿತ ಕೃಷಿ ಪ್ರಾತ್ಯಕ್ಷತೆ (ಹೈಡ್ರೋಪೋನಿಕ್ಸ್ ತಂತ್ರಜ್ಞಾನ) ಹೈಡ್ರೋಪೋನಿಕ್ಸ್ ಎನ್ನುವುದು ಪೌಷ್ಟಿಕಾಂಶದ ದ್ರಾವಣಗಳಲ್ಲಿ ಸಸ್ಯಗಳನ್ನು ಬೆಳೆಸುವ ಒಂದು ವಿಧಾನವಾಗಿದೆ. ಇದರಲ್ಲಿ ಯಾಂತ್ರಿಕ ಬೆಂಬಲವನ್ನು ಒದಗಿಸಲು ಜಡ ಮಾಧ್ಯಮಗಳಾದ ಜಲ್ಲಿ, ವರ್ಮಿಕ್ಯುಲೈಟ್, ಪೀಟ್ ಪಾಚಿ, ಗರಗಸ ಧೂಳು, ಕಾಯಿರ್ ಧೂಳು, ತೆಂಗಿನ ನಾರು, ರಾಕ್‌ವೂಲ್‌ನಂತಹ ಪದಾರ್ಥಗಳನ್ನು ಬಳಸಬಹುದಾಗಿದೆ.

ಹೈಡ್ರೋಪೋನಿಕ್ಸ್ ಅನ್ನುವ ಪದವು ಗ್ರೀಕ್ ಪದಗಳಾದ ‘ಹೈಡೊ’ ಎಂದರೆ ನೀರು ಮತ್ತು ‘ಪೊನೊಸ್ ಎಂದರೆ ಶ್ರಮ ಎಂಬ ಈ ಎರಡು ಪದಗಳಿಂದ ಪಡೆಯಲಾಗಿದೆ. ಹೈಡ್ರೋಪೋನಿಕ್ಸ್ ಪದವು 1930 ರ ದಶಕದ ಆರಂಭದಲ್ಲಿ ಪ್ರೊಫೆಸರ್ ವಿಲಿಯಂ ಗೆರಿಕ್ ಅವರಿಂದ ರಚಿಸಲ್ಪಟ್ಟಿತು

1940 ರಲ್ಲಿ ಪರ್ಡ್ಯೂ ವಿಶ್ವವಿದ್ಯಾಲಯದ ಸಂಶೋಧನೆಯಲ್ಲಿ  ಹೈಡ್ರೋಪೋನಿಕ್ಸ್ ವ್ಯವಸ್ತೆಯಲ್ಲಿ ಬೆಳೆಯುವ ಬೆಳೆಗಳಿಗೆ ಬೇಕಾಗುವ ಪೊಷಕಾಂಶ ದ್ರಾವಣವನ್ನು ಅಭಿವೃದ್ಧಿಪಡಿಸಲಾಯಿತು. ನಂತರ 1960 ಮತ್ತು 70 ರ ದಶಕದಲ್ಲಿ ಅರಿಝೋನಾ, ಅಬುಧಾಬಿ, ಬೆಲ್ಜಿಯಂ, ಕ್ಯಾಲಿಫೋರ್ನಿಯಾ, ಡೆನ್ಮಾರ್ಕ್, ಜರ್ಮನ್, ಹಾಲೆಂಡ್, ಇರಾನ್, ಇಟಲಿ, ಜಪಾನ್, ರಷ್ಯಾದ ಒಕ್ಕೂಟ ಮತ್ತು ಇತರ ದೇಶಗಳಲ್ಲಿ ದೊಡ್ಡ ಪ್ರಮಾಣದ ವಾಣಿಜ್ಯ ಹೈಡ್ರೋಪೋನಿಕ್ಸ್ ಫಾರ್ಮ್ಗಳು ತಲೆಯೆತ್ತಿದವು.

ಹೆಚ್ಚಿನ ಹೈಡ್ರೋಪೋನಿಕ್ ವ್ಯವಸ್ಥೆಗಳಲ್ಲಿ ಸಸ್ಯಗಳ ಅಗತ್ಯಕ್ಕೆ ತಕ್ಕ ಹಾಗೆ ನೀರು, ಬೇಳಕು ಮತ್ತು ಪೋಷಕಾಂಶಗಳನ್ನು ಒದಗಿಸಲು ಸ್ವಯಂಚಾಲಿತವಾಗಿ ಕಾರ್ಯನಿರ್ವಹಿಸುವ ವ್ಯವಸ್ಥೆಯಿದೆ. ನಗರೀಕರಣ ಮತ್ತು ಕೈಗಾರಿಕೀಕರಣದಿಂದಾಗಿ ಕೃಷಿಯೋಗ್ಯ ಭೂಮಿ ಕಡಿಮೆಯಾಗುತ್ತಿದೆ. ಮಾತ್ರವಲ್ಲದೆ ಸಾಂಪ್ರದಾಯಿಕ ಕೃಷಿಯಲ್ಲಿ ಕೃಷಿ ರಾಸಾಯನಿಕಗಳ ಅವೈಜ್ಞಾನಿಕ ಬಳಕೆಯಿಂದಾಗಿ ಪರಿಸರದ ಮೇಲೆ ವ್ಯಾಪಕವಾದ ದುಷ್ಪರಿಣಾಮಗಳು ಉಂಟಾಗುತ್ತವೆ.

ಕಳೆದ ಕೆಲವು ದಶಕಗಳಿಂದ ಬೆಳೆಯುತ್ತಿರುವ ಜನಸಂಖ್ಯೆಯನ್ನು ಸಮರ್ಥವಾಗಿ ಪೋಷಿಸಿಲು ಅಗತ್ಯಕ್ಕೆ ತಕ್ಕಂತೆ ಹೆಚ್ಚಿನ ಆಹಾರವನ್ನು ಉತ್ಪಾದಿಸುವ ವಿಧಾನಗಳು ವಿಕಸನಗೊಳ್ಳಬೇಕು. ಹಾಗೂ ಸುಸ್ತೀರ ಬೆಳೆ ಉತ್ಪಾದನೆಗೆ, ಕ್ಷಿಣಿಸುತ್ತಿರುವ ವ್ಯವಸಾಯ ಭೂಮಿಯ ಮತ್ತು ನೀರಿನ ಸಂಪನ್ಮೂಲದ ಸದ್ಭಳಕೆಗೆ ಪರ್ಯಾಯ ಬೆಳೆ ಮಾದ್ಯಮದ ಅನಿವಾರ್ಯತೆ ಇದೆ.

ಪ್ರಸ್ತುತ ಸನ್ನಿವೇಶದಲ್ಲಿ, ಹೈಡ್ರೋಪೋನಿಕ್ಸ್ನಂತಹ ಮಣ್ಣಿನ ರಹಿತ ಕೃಷಿಯ ತಂತ್ರಜ್ಞಾನಗಳು ಆರೋಗ್ಯಕರ ಆಹಾರ ಬೆಳೆಗಳನ್ನು ಬೆಳೆಯಲು ಯಶಸ್ವಿ ಮತ್ತು ಪರ್ಯಾಯ ಆಯ್ಕೆಗಳು ಎಂದು ಪರಿಗಣಿಸಲಾಗಿದೆ

ಮಣ್ಣು ರಹಿತ ಕೃಷಿಯಲ್ಲಿ ಹಲವಾರು ಬಗೆಗಳಿವೆ. ಅವುಗಳೆಂದರೆ ಹೈಡ್ರೋಪೋನಿಕ್ಸ್, ಅಕ್ವಾಪೋನಿಕ್ಸ್ ಮತ್ತು ಏರೋಪೋನಿಕ್ಸ್. ಇವುಗಳಲ್ಲಿ ಹೈಡ್ರೋಪೋನಿಕ್ಸ್ ತಂತ್ರಜ್ಞಾನವು ಇತ್ತಿಚಿನ ದಿನಗಳಲ್ಲಿ ಜನಪ್ರಿಯವಾಗಿದೆ. ಇದಕ್ಕೆ ಪ್ರಮುಖ ಕಾರಣ ಈ ವಿಧಾನದಲ್ಲಿ ಸಂಪನ್ಮೂಲಗಳ ಸಮರ್ಥ ನಿರ್ವಹಣೆ ಮತ್ತು ಆಹಾರದ ಉತ್ಪಾದನೆ ಮಾಡಬಹುದಾಗಿದೆ.

ಈ ವಿಧಾನದಲ್ಲಿ ವಿವಿಧ ವಾಣಿಜ್ಯ ಮತ್ತು ವಿಶೇಷ ಬೆಳೆಗಳನ್ನು ಬೆಳೆಯಬಹುದಾಗಿದೆ. ಅವುಗಳಲ್ಲಿ ಪ್ರಮುಖವಾದ ಬೆಳೆಗಳೆಂದರೆ, ಎಲೆಗಳ ತರಕಾರಿಗಳು, ಟೊಮೆಟೊಗಳು, ಸೌತೆಕಾಯಿಗಳು, ಮೆಣಸುಗಳು, ಸ್ಟ್ರಾಬೆರಿಗಳು, ಮತ್ತು ಇನ್ನೂ ಅನೇಕ ಬೆಳೆಗಳನ್ನು ಹೈಡ್ರೋಪೋನಿಕ್ಸ್ ತಂತ್ರಜ್ಞಾನದಲ್ಲಿ ಬೆಳೆಯಬಹುದಾಗಿದೆ.

ಯಾರು/ಎಲ್ಲಿ ಈ ಪದ್ಧತಿಯನ್ನು ಅಳವಡಿಸಿಕೊಳ್ಳಬಹುದು

  1. ನೀರಿನ ಲಬ್ಯತೆ ಕಡಿಮೆ ಇರುವ ಜಾಗದಲ್ಲಿ
  2. ಸಮಸ್ಯಾತ್ಮಕ ಮಣ್ಣು ಇರುವ ಪ್ರದೇಶಗಳಲ್ಲಿ
  3. ಕೃಷಿಗೆ ಯೊಗ್ಯವಲ್ಲದ ಭೂಮಿಯಲ್ಲಿ
  4. ಅತಿ ಕಡಿಮೆ ಹಿಡುವಳಿದಾರು ಹೆಚ್ಚು ಲಾಭ ಪಡೆಯಲು
  5. ವಾತಾವರಣ ಏರುಪೆರು ಹೆಚ್ಚು ಇರುವ ಪ್ರದೇಶದಲ್ಲಿ
  6. ಪಟ್ಟಣ ಪ್ರದೇಶದಲ್ಲಿ ಮನೆಯ ತಾರಸಿಯಲ್ಲಿ, ಬಾಲ್ಕನಿಗಳಲ್ಲಿ ಈ ಪದ್ಧತಿಯನ್ನು ಅಳವಡಿಸಿಕೊಳ್ಳಬಹುದು.

ಮಣ್ಣು ರಹಿತ ಕೃಷಿಯ ಪ್ರಯೋಜನಗಳು

  1. ಇಲ್ಲಿ ಮಣ್ಣಿನ ಅವಶ್ಯಕತೆ ಇರುವುದಿಲ್ಲ.
  2. ಈ ಕೃಷಿ ಪದ್ದತಿಯಲ್ಲಿ ಕಡಿಮೆ ಅವಧಿಯಲ್ಲಿ ಶೀಘ್ರ ಬೆಳವಣಿಗೆ
  3. ಇಲ್ಲಿ ನೀರಿನ ಪೊಲಾಗುವಿಕೆ ಅತಿ ಕಡಿಮೆ ಹಾಗಾಗಿ ಶೇ. 90 ಕ್ಕಿಂತ ಹೆಚ್ಚು ನೀರಿನ ಸದ್ಭಳಕೆ ಮಾಡಬಹುದಾಗಿದೆ.
  4. ಕಡಿಮೆ ಸ್ಥಳಾವಕಾಶದಲ್ಲಿ ಹೆಚ್ಚು ಉತ್ಪಾದನೆ ಮಾಡಬಹುದಾಗಿದೆ.
  5. ವರ್ಷಪೂರ್ತಿ ಬೆಳೆ ಬೆಳೆಯಬಹುದು
  6. ಇಲ್ಲಿ ಸಸ್ಯಗಳಿಗೆ ಒದಗಿಸಿದ ಪೊಷಕಾಂಶಗಳು ವ್ಯರ್ಥವಾಗದೆ ಸದ್ಭಳಕೆಯಾಗುತ್ತದೆ
  7. ಕಳೆ ರಹಿತವಾದ ಬೆಳೆ ಬೆಳೆಯಬಹುದು.
  8. ರಾಸಾಯನಿಕಗಳ ಬಳಕೆ ತಗ್ಗಿಸಿ ಪರಿಸರ ಸಂರಕ್ಷಣೆ ಮಾಡಬಹುದು
  9. ಕೀಟ ಮತ್ತು ರೋಗಭಾದೆ ಮುಕ್ತವಾದ ಬೆಳೆ ಇಲ್ಲಿ ಪಡೆಯಬಹುದು.
  10. ಗುಣಮಟ್ಟದ ಆಹಾರ ಉತ್ಪಾದನೆಗೆ ಮಣ್ಣು ರಹಿತ ಕೃಷಿ ಸೂಕ್ತ

ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ನವೆಂಬರ್ 3 ರಿಂದ 6ರ ತನಕ ಜಿಕೆವಿಕೆಯಲ್ಲಿ ಕೃಷಿಮೇಳ ಆಯೋಜಿಸಿದೆ. ಅಲ್ಲಿ ಜಲಕೃಷಿಯ ಪ್ರಾತ್ಯಕ್ಷಿಕೆಗಳನ್ನು ವೀಕ್ಷಿಸಬಹುದು.

LEAVE A REPLY

Please enter your comment!
Please enter your name here