ಚರ್ಮಗಂಟು ರೋಗದಿಂದ ಜಾನುವಾರುಗಳು ಮೃತಪಟ್ಟ ಪ್ರಕರಣದಲ್ಲಿ ಮಾಲೀಕರುಗಳಿಗೆ ಪರಿಹಾರ ನೀಡಲು ರೂ.2 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಪಶು ಸಂಗೋಪನೆ ಸಚಿವ ಪ್ರಭು ಬಿ.ಚವ್ಹಾಣ್ ತಿಳಿಸಿದ್ದಾರೆ.ಈ ಕುರಿತು ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಚರ್ಮಗಂಟು ರೋಗವು ನೇರವಾಗಿ ಜಾನುವಾರುಗಳ ಉತ್ಪಾದಕತೆಯನ್ನು ಕುಂಠಿತಗೊಳಿಸುವುದರಿಂದ ರೈತರು ಹಾಗೂ ಜಾನುವಾರು ಮಾಲೀಕರ ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರುವುದನ್ನು ತಡೆಗಟ್ಟಲು ಪರಿಹಾರ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಚರ್ಮಗಂಟು ರೋಗದಿಂದ ಉಂಟಾಗುವ ಜಾನುವಾರುಗಳ ಮರಣದಿಂದ ರೈತರ/ಜಾನುವಾರು ಮಾಲೀಕರಿಗೆ ನಷ್ಟವನ್ನು ಭರಿಸಲು 2022ರ ಆಗಸ್ಟ್ 1ನೇ ತಾರೀಖಿನಿಂದ ಅನ್ವಯ ಆಗುವಂತೆ ಪ್ರತಿ ಹೈನು ರಾಸುಗಳಿಗೆ ಗರಿಷ್ಠ ರೂ.20000 ಮತ್ತು ಎತ್ತುಗಳಿಗೆ ರೂ.30000 ಹಾಗೂ ಪ್ರತಿ ಕರುವಿಗೆ ರೂ.5000 ಪರಿಹಾರ ನೀಡಲಾಗುತ್ತಿದೆ ಎಂದು ಅವರು ವಿವರಿಸಿದ್ದಾರೆ.
ರಾಜ್ಯದಲ್ಲಿ ಜಾನುವಾರುಗಳ ಚರ್ಮಗಂಟು ರೋಗವನ್ನು ಹತೋಟಿ ತರಲಾಗುತ್ತಿದೆ. ರಾಜ್ಯಾದ್ಯಂತ 265646 ರಾಸುಗಳಿಗೆ ಲಸಿಕೆ ನೀಡಲಾಗಿದ್ದು, ಲಭ್ಯವಿರುವ 342156 ಡೋಸ್ ಲಸಿಕೆಯನ್ನು ಜಾನುವಾರುಗಳಿಗೆ ನೀಡಲಾಗುತ್ತಿದೆ. ಈ ವಾರ 35000 ಲಸಿಕೆ ಲಭ್ಯವಾಗಲಿದ್ದು, ಚರ್ಮಗಂಟು ರೋಗವನ್ನು ನಿಯಂತ್ರಣಕ್ಕೆ ಬೇಕಾದ ಔಷಧ, ಚಿಕಿತ್ಸೆ ನೀಡಲಾಗುತ್ತಿದೆ. ರೈತರು ಆತಂಕಕ್ಕೆ ಒಳಗಾಗದೇ ಸರ್ಕಾರದೊಂದಿಗೆ ಸಹಕರಿಸುವಂತೆ ಪ್ರಭು ಚವ್ಹಾಣ್ ಮನವಿ ಮಾಡಿಕೊಂಡಿದ್ದಾರೆ.
ರಾಜ್ಯದಲ್ಲಿ ಈವರೆಗೆ 23784 ರಾಸುಗಳು ಚರ್ಮಗಂಟು ರೋಗದಿಂದ ಬಳಲುತ್ತಿದ್ದು, ಈ ಪೈಕಿ 11494 ರಾಸುಗಳು ಚೇತರಿಕೆಯಾಗಿವೆ. ಇನ್ನುಳಿದ ರಾಸುಗಳಿಗೆ ಸರ್ಕಾರದಿಂದ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಈವರೆಗೆ 680 ಜಾನುವಾರುಗಳು ಮೃತಪಟ್ಟಿರುತ್ತವೆ. ಮೃತಪಟ್ಟ ಜಾನುವಾರುಗಳ ಮಾಲೀಕರಿಗೆ ಪರಿಹಾರ ಧನ ವಿತರಣೆಗೆ ಕ್ರಮ ವಹಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಚರ್ಮಗಂಟು ರೋಗವು ಜಾನುವಾರುಗಳಲ್ಲಿ ಕಂಡು ಬರುವ ಸಾಂಕ್ರಾಮಿಕ ವೈರಸ್ ಕಾಯಿಲೆಯಾಗಿದೆ. ರೋಗಗ್ರಸ್ತ ಪ್ರಾಣಿಗಳಲ್ಲಿ ಪ್ರಾರಂಭಿಕ ಹಂತದಲ್ಲಿ ಜ್ವರ, ತದನಂತರ ಚರ್ಮಗಂಟು ಗಂಟು ಕಾಣಿಸಿ ಕ್ರಮೇಣ ಚರ್ಮ ಗಂಟು, ಹಕ್ಕಳೆ, ತುರಿಗಳಾಗಿ ಜಾನುವಾರುಗಳಲ್ಲಿ ಕಂಡು ಬರುತ್ತದೆ. ರೋಗಗ್ರಸ್ಥ ದನಗಳು ಜ್ವರದಿಂದ ಬಳಲಿ ಮಂಕಾಗಿ ಮೂಗು, ಕಣ್ಣುಗಳಲ್ಲಿ ಸೋರುವಿಕೆ, ಜೊಲ್ಲು ಸೋರುವುದು, ಮೇವು ತಿನ್ನದೆ ಬಡಕಲಾಗುತ್ತವೆ. ರಾಸುಗಳು ಶ್ವಾಸಕೋಶದ ಉರಿಯೂತದಿಂದ ಸಾವನ್ನಪ್ಪುವುದು ಸಾಮಾನ್ಯವಾಗಿದೆ. ರಾಸುಗಳ ಕೊಟ್ಟಿಗೆಯನ್ನು ಸ್ವಚ್ಛವಾಗಿಡಬೇಕು. ರೋಗ ಕಾಣಿಸಿಕೊಂಡ ತಕ್ಷಣ ಸಮೀಪದ ಪಶು ವೈದ್ಯಾಧಿಕಾರಿಗಳನ್ನು ಸಂಪರ್ಕಿಸಿ, ಲಸಿಕೆ ಪಡೆದು ಜಾನುವಾರು ಸಂರಕ್ಷಿಸಿ ಎಂದು ಪ್ರಭು ಚವ್ಹಾಣ್ ರೈತರಲ್ಲಿ ಮನವಿ ಮಾಡಿದ್ದಾರೆ.
ಕೂಡಲೇ ಸ್ಪಂದಿಸಿ:
ಚರ್ಮಗಂಟು ರೋಗ ಕಾಣಿಸಿಕೊಂಡ ಜಾನುವಾರುಗಳ ಆರೋಗ್ಯ ಸಮಸ್ಯೆ ಹೊತ್ತು ಬರುವ ರೈತರು ಹಾಗೂ ದೂರವಾಣಿ ಕರೆಗಳಿಗೆ ಕೂಡಲೇ ಸ್ಪಂದಿಸಿ, ಸೂಕ್ತ ಚಿಕಿತ್ಸೆ ನೀಡಿ, ರೋಗ ಹರಡದಂತೆ ಪಶು ವೈದ್ಯಾಧಿಕಾರಿಗಳು ಮತ್ತು ಪಶುಸಂಗೋಪನೆ ಇಲಾಖೆ ಅಧಿಕಾರಿಗಳು ಶ್ರಮಿಸುವಂತೆ ಸೂಚನೆ ನೀಡಿದ್ದಾರೆ.
ಜನರಿಗೆ ಆರೋಗ್ಯ ಸಮಸ್ಯೆ ಎದುರಾದರೆ ತಮ್ಮ ನೋವನ್ನು ತೋಡಿಕೊಳ್ಳುತ್ತಾರೆ. ಮಾತು ಬಾರದ ಮೂಕ ಪ್ರಾಣಿಗಳು ತಮ್ಮ ನೋವನ್ನು ಹೇಗೆ ವ್ಯಕ್ತಪಡಿಸುತ್ತವೆ ಎನ್ನುವುದನ್ನು ನಿರ್ಲಕ್ಷ್ಯ ಮಾಡದೇ ಕೂಡಲೇ ಜಾನುವಾರುಗಳ ಚಿಕಿತ್ಸೆ ಧಾವಿಸಿ, ಗೋಮಾತೆ ಸಂರಕ್ಷಿಸೋಣ ಎಂದು ಪಶು ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.