ಮಣ್ಣು ಸಂರಕ್ಷಣಾ ನೀತಿ ಅಗತ್ಯ

0
ಲೇಖಕರು: ಸಾಯಿಲ್‌ ವಾಸು, ಕೃಷಿತಜ್ಞರು

ಮಣ್ಣು ಕುರಿತ ನಮ್ಮಲ್ಲಿರುವ ದೃಷ್ಟಿಕೋನವನ್ನು ಬದಲಿಸಬೇಕಾದ ಕಾಲಘಟ್ಟಕ್ಕೆ ನಾವಿಂದು ತಲುಪಿದ್ದೇವೆ.  ಆದರೆ ಈ ಬಗೆಯ ಬದಲಾವಣೆ ಅಷ್ಟು ಸುಲಭವಲ್ಲ. ಶೀಘ್ರವಾಗಿಯೂ ಸಾಧ್ಯವಿಲ್ಲ.

ಮೊದಲಿಗೆ ನಿಸರ್ಗ ಸಹಜ ಸಂಪನ್ಮೂಲಗಳಲ್ಲಿ ಮಣ್ಣು ಪ್ರಮುಖವೆಂದು ಪರಿಗಣಿಸಬೇಕು. ನಮ್ಮಲ್ಲಿನ ಉತ್ಪಾದಕ ಮಣ್ಣಿನ ಸ್ಥಿತಿ-ಗತಿಯನ್ನು ಆಳವಾಗಿ ಗಮನಿಸಬೇಕು. (ಸ)ಜೀವಿ ಮಣ್ಣಿಂದ ನಮ್ಮ ಸಮುದಾಯಗಳಿಗೆ ಆಗುತ್ತಿರುವ ಪ್ರಯೋಜನಗಳ ಕುರಿತು ಅರ್ಥಮಾಡಿಕೊಳ್ಳಬೇಕು.  ಇಡಿಯ ಭೂಮೇಲಿನ ಜೀವಜಗತ್ತಿಗೆ ಕಾಲಡಿಯ ಮಣ್ಣುಲೋಕದಲ್ಲಿನ ಜೀವಿ-ಜೀವಾಣುಗಳೇ ಆಧಾರ ಎನ್ನುವುದನ್ನು ಮನಗಾಣಬೇಕು.

ನಾವಷ್ಟೇ ಅಲ್ಲ. . . ನಮ್ಮ ಮುಂದಿನ ಪೀಳಿಗೆಯ ಬದುಕಿಗೂ – ಬಾಳುವೆಗೂ ಸಜೀವಿ ಮಣ್ಣೇ ಮೂಲ . . ಸಜೀವಿ ಮಣ್ಣೇ ಎಲ್ಲ ಎಂಬುದನ್ನು ಸಕಲರಿಗೂ ತಿಳಿಹೇಳಬೇಕು. ಇನ್ನು ಮಣ್ಣೊಳಗಿನ ಜೀವಸಂಕುಲ / ಜೀವಮಂಡಲ / ಜೀವವೈವಿಧ್ಯ ಗಳನ್ನು ಸಂರಕ್ಷಿಸುವ ಹಾಗೂ ನೋಡಿಕೊಳ್ಳುವ ನೀತಿ-ನಿಯಮಗಳೇನಾದರೂ ಇದ್ದಲ್ಲಿ,  ಅದನ್ನು ಮೊದಲಿಗೆ ಪರಿಶೀಲಿಸಬೇಕು.

ಈ ನೀತಿ-ನಿಯಮಗಳನ್ನು ರೂಪಿಸುವಲ್ಲಿ ಕಾರಣವಾದ ಚಾರಿತ್ರಿಕ ಘಟನೆಗಳನ್ನು ಕಲೆಹಾಕಿ, ಅವಲೋಕಿಸಬೇಕು. ನಮ್ಮ ಹಿರಿಯರು ಮಣ್ಣು ಸಂರಕ್ಷಣೆಯತ್ತ ಕೈಗೊಳ್ಳುತ್ತಿದ್ದ ಕ್ರಮಗಳನ್ನು ತಿಳಿದುಕೊಳ್ಳಬೇಕು.  ಆಗಿನಿಂದ ಈವರೆಗೂ ಇದ್ದ ಕಾಲಘಟ್ಟದಲ್ಲಿ  ಸಜೀವಿ ಮಣ್ಣನ್ನು ನೋಡುವ – ವ್ಯವಹರಿಸುವ – ಸಂರಕ್ಷಿಸುವ – ನಿರ್ವಹಿಸುವ ವಿಧಾನಗಳು ಹೇಗೆ ಕ್ರಮೇಣ ಬದಲಾಗತೊಡಗಿದವು ಎಂಬುದನ್ನು ಆಳವಾಗಿ ಆಭ್ಯಸಿಸಬೇಕು.

ಪ್ರಾರಂಭದಲ್ಲಿ  ಮಣ್ಣೊಂದಿಗೆ ನೇರ ಸಂಬಂಧ ಹೊಂದಿದ್ದ ಮಾನವ ಕಾಲಕ್ರಮೇಣ ಮಣ್ಣೊಂದಿಗಿದ್ದ ಸಂಬಂಧವನ್ನು ಕಳಚಿಕೊಳ್ಳುತ್ತಾ ಬಂದ ಪರಿಯನ್ನೂ ಸಹ ಗಂಭೀರವಾಗಿ ಅವಲೋಕಿಸಬೇಕು. ಮಣ್ಣೊಂದಿಗೆ ಸಂಬಂಧವನ್ನು ಮುಂದುವರೆಸಿಕೊಂಡುಹೋಗುವ ವಿಧಾನವನ್ನು ಒಂದೊಂದಾಗಿ ಅಳವಡಿಸಿಕೊಳ್ಳಬೇಕು.

ಅಂದರೆ ಮಣ್ಣು ಜೀವಿಗಳ ಕುರಿತ ನಮ್ಮಲ್ಲಿರುವ ಜ್ಞಾನ – ತಿಳುವಳಿಕೆ ಸುಧಾರಿಸಬೇಕು. ಈ ಹಂತದಲ್ಲೇ ಮಣ್ಣು – ಮಣ್ಣುಜೀವಾಣುಗಳು – ಅವುಗಳ ಪಾತ್ರ – ಸೇವೆ ಕುರಿತು ಮಾಹಿತಿ / ಶಿಕ್ಷಣ ಅಗತ್ಯ.  ಮಣ್ಣುಜೀವಿಗಳ ಪಾತ್ರ – ಸೇವೆ  ಕುರಿತ ಮಾಹಿತಿ ವಿಶೇಷವಾಗಿ ನಮ್ಮ ಮಕ್ಕಳಿಗೆ – ವಿದ್ಯಾರ್ಥಿಗಳಿಗೆ – ಯುವ ರೈತರಿಗೆ ಪ್ರಾತ್ಯಕ್ಷಿಕವಾಗಿ ದೊರಕಬೇಕು. ಇಂದು ಮಕ್ಕಳಲ್ಲೂ – ವಿದ್ಯಾರ್ಥಿಗಳಲ್ಲೂ – ರೈತ ಸಮುದಾಯದಲ್ಲೂ ಮಣ್ಣುಜೀವಿಗಳ ಕುರಿತು ಇರುವ ನಿರ್ಲ್ಯಕ್ಷ್ಯ ಧೋರಣೆ ಬದಲಾಗಬೇಕು.

ಪ್ರತಿಯೊಬ್ಬ ಪ್ರಜೆಯೂ ತಾನಿರುವ ಸಮುದಾಯದಲ್ಲಿನ ಮಣ್ಣಲ್ಲಿರುವ ಜೀವಿಗಳನ್ನು ಗುರುತಿಸಬೇಕು – ಅವುಗಳನ್ನು ಕಾಪಾಡುವತ್ತ ಸಂಕಲ್ಪ ಮಾಡಬೇಕು.

LEAVE A REPLY

Please enter your comment!
Please enter your name here