ಉತ್ತಮ ಜೇನು ಕುಟುಂಬಗಳನ್ನು ಪಡೆಯಲು ಶೀಘ್ರ ಈ ಕ್ರಮ ಅನುಸರಿಸಿ

0
ಲೇಖಕರು: ಶಿರಂಕಲ್ಲು ಕೃಷ್ಣಭಟ್

ಜೇನು ಕೃಷಿಕರು ಡಿಸೆಂಬರ್ ತನಕವೂ ತಮ್ಮಲ್ಲಿರುವ ಕುಟುಂಬಗಳನ್ನು ಪಾಲು ಮಾಡಿ ಕುಟುಂಬಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಬಹುದು. ಅಥವಾ ಆಸಕ್ತ ರೈತರಿಗೆ ಮಾರಾಟ ಮಾಡಬಹುದು.ಡಿಸೆಂಬರ್ ತಿಂಗಳ ಅನಂತರ ಪಾಲು ಮಾಡಿದರೆ ಜೇನುತುಪ್ಪದ ಇಳುವರಿ ಕಡಿಮೆ ಆಗುತ್ತದೆ.
ಮಳೆಗಾಲದಲ್ಲಿ ತೆಂಗಿನ ಮರಗಳು ಹೆಚ್ಚು ಇರುವ ಸ್ಥಳದಲ್ಲಿ ಕುಟುಂಬಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಪರಾಗ ಸಿಗುತ್ತದೆ. ಪುಷ್ಪರಸ ಮಳೆಗಾಲದಲ್ಲಿ ಸಿಗುವುದು ಕಡಿಮೆ. ಅಭಾವ ಕಾಲದಲ್ಲಿ ಸಕ್ಕರೆ ದ್ರಾವಣವನ್ನು ಕೊಡುತ್ತಿದ್ದರೆ ಕುಟುಂಬಗಳು ಬಲಿಷ್ಠವಾಗಿರುತ್ತವೆ. ಮಳೆಗಾಲ ಮುಗಿಯುತ್ತಿದ್ದಂತೆ ಪಾಲು ಮಾಡಲು ಸಿದ್ಧವಾಗಿರುತ್ತವೆ.
ರೋಗನಿರೋಧಕ ಶಕ್ತಿ ಇರುವ, ಹೆಚ್ಚು ಜೇನುತುಪ್ಪ ಮಾಡಿದ, ಸಾಕಷ್ಟು ಮೊಟ್ಟೆ ಮರಿಗಳು ಇರುವ ಅತ್ಯುತ್ತಮ ಕುಟುಂಬವನ್ನು ಮೊದಲು ಆಯ್ಕೆ ಮಾಡಿಕೊಂಡು ಮಳೆ ಕಡಿಮೆ ಇರುವ ಸಂದರ್ಭ ನೋಡಿಕೊಂಡು ಪಾಲು ಮಾಡಬೇಕು. ಈ ರೀತಿ ಆಯ್ಕೆ ಮಾಡಿದ ಕುಟುಂಬದ ರಾಣಿಯನ್ನು ಹುಡುಕಿ ರಾಣಿ ಇರುವ ಎರಿಯೊಂದಿಗೆ ಇತರ ಮೂರು ಎರಿಗಳನ್ನು ಜೇನ್ನೊಣಗಳೊಂದಿಗೆ ಇನ್ನೊಂದು ಜೇನು ಪೆಟ್ಟಿಗೆಗೆ ವರ್ಗಾವಣೆ ಮಾಡಬೇಕು. ಖಾಲಿ ಫ್ರೇಂ ಗಳಿಗೆ ಕಾಲು ಇಂಚು ಅಗಲದ ಮಯಣದ ಹಾಳೆಯನ್ನು ಅಳವಡಿಸಿ, ಕನಿಷ್ಠ ಅರ್ಧ ಕಿಲೋಮೀಟರ್ ದೂರದಲ್ಲಿ ಇಡಬೇಕು.
ರಾಣಿ ಇಲ್ಲದಿರುವ ಕುಟುಂಬದಲ್ಲಿ ರಾಣಿಯ ಅನುಪಸ್ಥಿತಿಯನ್ನು ತಿಳಿದ ಕೆಲಸಗಾರ ನೊಣಗಳು ತುರ್ತಾಗಿ,ನಾಲ್ಕಾರು ದಿನಗಳಷ್ಟು ಬೆಳೆದ ಮರಿಗಳಿಗೆ ಹೆಚ್ಚು ರಾಜಶಾಹಿ ರಸವನ್ನು ಕೊಟ್ಟು, ಕೋಶವನ್ನು ದೊಡ್ಡದು ಮಾಡಿ, ರಾಣಿ ಕಣಗಳನ್ನು ತಯಾರಿಸುತ್ತವೆ.
ಮೊಟ್ಟೆಯಿಂದ ಹೊರಬಂದ ಎಲ್ಲಾ ಮರಿಗಳಿಗೂ ಕೆಲಸಗಾರ ನೊಣಗಳು ಮೂರು ನಾಲ್ಕು ದಿನಗಳ ತನಕ ರಾಜಶಾಹಿ ರಸವನ್ನು ಕೊಟ್ಟು ಅನಂತರ ರಾಜಶಾಹಿ ರಸವನ್ನು ಕಡಿಮೆ ಮಾಡಿ ಪರಾಗ,ಪುಷ್ಪರಸಗಳನ್ನು ಉಣಿಸಿದರೆ ಅದು ಕೆಲಸಗಾರ ನೊಣಗಳಾಗಿಯೂ, ನಾಲ್ಕು ದಿನಗಳ ಅನಂತರವೂ ರಾಜಶಾಹಿ ರಸವನ್ನು ಉಣಿಸಿ, ಕೋಶವನ್ನು ದೊಡ್ಡದು ಮಾಡಿದರೆ ಅದು ರಾಣಿಯಾಗಿಯೂ ಪರಿವರ್ತನೆ ಹೊಂದುತ್ತದೆ.
ಪಾಲು ಮಾಡಿ ಎಂಟನೇ ದಿನ ರಾಣಿ ಇಲ್ಲದ ಕುಟುಂಬದಲ್ಲಿ ಎಷ್ಟು ರಾಣಿ ಕಣಗಳಿವೆ ಎಂದು ನೋಡಿದರೆ ಏಳೆಂಟು ರಾಣಿ ಕಣಗಳಿರುವುದನ್ನು ಕಾಣಬಹುದು.ರಾಣಿಕಣಗಳ ಅಗತ್ಯ ಇಲ್ಲದಿದ್ದರೆ ಒಂದು ಉತ್ತಮ ರಾಣಿಕಣವನ್ನು ಉಳಿಸಿ ಉಳಿದ ಕಣಗಳನ್ನು ನಾಶಪಡಿಸಬೇಕು. ಎಂಟು ಉತ್ತಮ ರಾಣಿ ಕಣಗಳಿದ್ದರೆ ನಮ್ಮಲ್ಲಿರುವ ಬೇರೆ ಏಳು ಕುಟುಂಬಗಳು ಪಾಲು ಮಾಡಲು ಸಿದ್ಧವಾಗಿದ್ದರೆ, ಅವುಗಳನ್ನು ಪಾಲು ಮಾಡಿ, ಮರುದಿನ ರಾಣಿ ಇಲ್ಲದ ಕುಟುಂಬದಿಂದ ಒಂದು ರಾಣಿ ಕಣವನ್ನು ಅದರಲ್ಲೇ ಉಳಿಸಿ,ಉಳಿದ ಏಳು ರಾಣಿ ಕಣಗಳನ್ನು ಅವುಗಳಿಗೆ ಘಾಸಿ ಆಗದಂತೆ ಜಾಗರೂಕತೆಯಿಂದ ರಾಣಿ ಕಣಗಳ ಸ್ವಲ್ಪ ಮೇಲ್ಬಾಗದಿಂದ ಕತ್ತರಿಸಿ ತೆಗೆಯಬೇಕು.
ಆದಷ್ಟು ಬೇಗನೆ ಪಾಲು ಮಾಡಿದ ರಾಣಿ ಇಲ್ಲದ ಪ್ರತಿಯೊಂದು ಕುಟುಂಬದ ಸಂಸಾರ ಕೋಣೆಯ ಚೌಕಟ್ಟುಗಳ ಮೇಲ್ಭಾಗದಲ್ಲಿ ಒಂದೊಂದು ರಾಣಿ ಕಣವನ್ನು ಇಡಬೇಕು. ಮರುದಿನ ಅಂದರೆ ಮೊದಲು ಪಾಲು ಮಾಡಿದ ಹತ್ತನೇ ದಿನ ಅಥವಾ ಹನ್ನೊಂದನೇ ದಿನ ಕಣದಿಂದ ರಾಣಿ ಹೊರಬರುವುದು. ಮೊಟ್ಟೆ ಇಟ್ಟ ಹದಿನಾರನೇ ದಿನ ರಾಣಿಯು ಕಣದಿಂದ ಹೊರಗೆ ಬರುವುದಾದರೂ ಮೂರು ನಾಲ್ಕು ದಿನ ಬೆಳೆದ ಮರಿಗಳನ್ನು ತುರ್ತಾಗಿ ರಾಣಿ ಕಣವಾಗಿ ನಿರ್ಮಾಣ ಮಾಡಿದ ಕಾರಣ ಪಾಲು ಮಾಡಿದ ಹತ್ತು ಅಥವಾ ಹನ್ನೊಂದನೇ ದಿನ ರಾಣಿಯು ಕಣದಿಂದ ಹೊರಗೆ ಬರುವುದು.
ಉತ್ತಮ ಕುಟುಂಬದ ರಾಣಿ ಕಣಗಳನ್ನು ಈ ರೀತಿ ಕೊಡುವುದರಿಂದ ಉತ್ತಮ ಗುಣಮಟ್ಟದ ಕುಟುಂಬಗಳನ್ನು ಹೆಚ್ಚು ಹೆಚ್ಚು ಪಡೆಯಬಹುದು. ಇಲ್ಲಿ ಕೆಲವು ಅಂಶಗಳನ್ನು ನಾವು ಗಮನಿಸಬೇಕು.
1.ರಾಣಿ ಕಣಗಳನ್ನು ರಾಣಿ ಇಲ್ಲದ ಕುಟುಂಬಕ್ಕೆ ಪಾಲು ಮಾಡಿದ ಅರ್ಧ ಗಂಟೆಯ ಅನಂತರ ಕೊಡಬೇಕು.ಮರುದಿನ ಕೊಟ್ಟರೂ ತೊಂದರೆ ಆಗದು. ಮತ್ತೆ ತಡಮಾಡಿದರೆ ಕೆಲಸಗಾರ ನೊಣಗಳು ರಾಣಿಕಣಗಳನ್ನು ತಯಾರಿಸುತ್ತವೆ. ಕೊಟ್ಟ ರಾಣಿಕಣವನ್ನು ಸ್ವೀಕರಿಸಲಾರವು.
2.ರಾಣಿಕಣವನ್ನು ಪೆಟ್ಟಿಗೆಯಿಂದ ತೆಗೆದ ನಂತರ ಹೆಚ್ಚು ಹೊತ್ತು ಹೊರಗಡೆ ಇಡಬಾರದು.ಆದಷ್ಟು ಬೇಗನೆ ಅಗತ್ಯ ಇರುವ ಕುಟುಂಬಕ್ಕೆ ಕೊಡಬೇಕು.
3.ಪಾಲು ಮಾಡಿದ ಒಂಬತ್ತನೇ ದಿನ ರಾಣಿ ಕಣ ಚೆನ್ನಾಗಿ ಬೆಳೆದಿರುತ್ತದೆ. ಆ ದಿನ ಕೊಟ್ಟರೆ ಉತ್ತಮ. ಹತ್ತನೇ ದಿನ ಬೆಳಿಗ್ಗೆ ಆದರೂ ತೊಂದರೆ ಆಗದು. ಹತ್ತನೇ ದಿನ ಹೆಚ್ಚಾಗಿ ರಾಣಿಯು ಕಣದಿಂದ ಹೊರಗೆ ಬರುತ್ತದೆ.
4.ಪಾಲು ಮಾಡಿದ ಒಂಬತ್ತನೇ ದಿನಕ್ಕಿಂತ ಮೊದಲು ರಾಣಿ ಕಣವನ್ನು ತೆಗೆದು ಕೊಟ್ಟರೆ ಅದು ವಿಫಲವಾಗುವ ಸಾಧ್ಯತೆ ಹೆಚ್ಚು.ಯಾಕೆಂದರೆ ಬೆಳೆಯದ ರಾಣಿಕಣವು ಹಾಳಾಗುತ್ತದೆ.
5.ರಾಣಿ ಕಣವನ್ನು ಕೊಟ್ಟು, ಮೂರು ದಿನಗಳ ಅನಂತರ ಸಂಸಾರ ಕೋಣೆಯ ಮೇಲ್ಭಾಗದಲ್ಲಿ ಕೊಟ್ಟ ರಾಣಿ ಕಣವನ್ನು ನೋಡಿದಾಗ ಹೆಚ್ಚಾಗಿ ರಾಣಿಕಣದ ತುದಿಭಾಗ ತೆರೆದುಕೊಂಡಿರುತ್ತದೆ. ಹೀಗೆ ಇದ್ದರೆ ರಾಣಿಯು ಕಣದಿಂದ ಹೊರಗೆ ಬಂದಿದೆ ಎಂದು ತಿಳಿಯಬಹುದು. ಹನ್ನೆರಡು ದಿನಗಳ ಅನಂತರವೂ ರಾಣಿಕಣದ ತುದಿಭಾಗ ತೆರೆದುಕೊಂಡಿಲ್ಲದಿದ್ದರೆ ಆ ರಾಣಿಕಣದೊಳಗೆ ರಾಣಿ ಸತ್ತಿರುತ್ತದೆ. ಅಂತಹಾ ಕುಟುಂಬದಲ್ಲಿ ಅದಾಗಲೇ ಹೊಸ ರಾಣಿಕಣಗಳನ್ನು ಕೆಲಸಗಾರ ನೊಣಗಳು ತಯಾರಿಸಿರುತ್ತವೆ. ಒಂದು ಉತ್ತಮ ರಾಣಿ ಕಣವನ್ನು ಉಳಿಸಿ ಉಳಿದ ರಾಣಿ ಕಣಗಳನ್ನು ನಾಶಪಡಿಸಬೇಕು. ಅಥವಾ ರಾಣಿ ಇಲ್ಲದ ಕುಟುಂಬಕ್ಕೆ ಕೊಡಬಹುದು. ಹೆಚ್ಚಿನ ರಾಣಿ ಕಣಗಳಿದ್ದರೆ ಮತ್ತೆ ಮತ್ತೆ ಪಾಲಾಗಿ ಹೋಗುವ ಸಾಧ್ಯತೆ ಇರುತ್ತದೆ.
6.ರಾಣಿಕಣವನ್ನು ಕೊಟ್ಟರೂ ಕೆಲವು ಕುಟುಂಬಗಳು ಬೇರೆಯೇ ರಾಣಿಕಣಗಳನ್ನು ತಯಾರಿಸುತ್ತವೆ. ಆದ್ದರಿಂದ ರಾಣಿಕಣ ಕೊಟ್ಟು, ಎಂಟು ದಿನಗಳ ಮೊದಲು ಎರಿಗಳನ್ನು ಪರೀಕ್ಷಿಸಿ ರಾಣಿಕಣಗಳಿದ್ದರೆ ತೆಗೆಯಬೇಕು.
7.ಮೊದಲಿಗೆ ಪಾಲು ಮಾಡಿದ ರಾಣಿ ಇಲ್ಲದ ಕುಟುಂಬಕ್ಕೆ ಪಾಲು ಮಾಡಿದ ಹದಿನಾಲ್ಕು, ಹದಿನೈದು ದಿನಗಳಲ್ಲಿ ಬೇರೊಂದು ಕುಟುಂಬದಿಂದ ಜೇನ್ನೊಣಗಳನ್ನು ಅದೇ ಕುಟುಂಬಕ್ಕೆ ಬಿಟ್ಟು ನೊಣಗಳಿಲ್ಲದ, ಸಾಕಷ್ಟು ಲಾರ್ವಾಗಳಿರುವ ಒಂದು ಎರಿಯನ್ನು ಕೊಡಬೇಕು. ಇದರಿಂದ ಮೇಟ್ ಗೆ ಹೋದ ರಾಣಿಗೆ ಅಕಸ್ಮಾತ್ ಏನಾದರೂ ತೊಂದರೆ ಆಗಿ ಗೂಡಿಗೆ ಹಿಂತಿರುಗದಿದ್ದರೆ ಹೊಸ ರಾಣಿಯನ್ನು ತಯಾರಿಸಿಕೊಳ್ಳಲು ಅನುಕೂಲ ಮಾಡಿಕೊಟ್ಟಂತಾಗುತ್ತದೆ. ಅಲ್ಲದೇ ರಾಣಿಗೆ ಯಾವುದೇ ತೊಂದರೆ ಆಗದಿದ್ದರೂ ಕುಟುಂಬದಲ್ಲಿ ಮೊಟ್ಟೆ ಮರಿಗಳು ಇರುವಾಗ ಪರಾರಿ ಆಗುವ ಸಾಧ್ಯತೆ ಕಡಿಮೆ.
ಯಾವಾಗಲಾದರೂ ಜೇನುಕುಟುಂಬದಲ್ಲಿ ಮೊಟ್ಟೆ ಮರಿ ಇರುವ ಎರಿಗಳಿಲ್ಲದಿದ್ಧರೆ ಅಥವಾ ರಾಣಿ ಸತ್ತುಹೋಗಿದ್ದರೆ ಮೇಲೆ ಹೇಳಿದಂತೆ ಬೇರೆ ಕುಟುಂಬದಿಂದ ನೊಣ ರಹಿತವಾದ ಮೊಟ್ಟೆ ಮರಿ ಇರುವ ಒಂದು ಎರಿ ಕೊಟ್ಟರೆ ಉತ್ಸಾಹದಿಂದ ಕೆಲಸ ಮಾಡುತ್ತವೆ.ಮತ್ತು ಅಗತ್ಯ ಇದ್ದರೆ ರಾಣಿಕಣವನ್ನು ತಯಾರಿಸಿಕೊಳ್ಳುತ್ತವೆ.
ಹೊಸ ರಾಣಿ ಇರುವ ಕುಟುಂಬದಲ್ಲಿ ರಾಣಿಯು ಮೊಟ್ಟೆ ಇಡಲು ಪ್ರಾರಂಭಿಸಿದಾಗ ಕೆಲಸಗಾರ ನೊಣಗಳು ಹೊಸ ಎರಿ ಕಟ್ಟಲು ಪ್ರಾರಂಭಿಸುತ್ತವೆ. ಹೊಸ ಎರಿ ಕಟ್ಟಲು ಪ್ರಾರಂಭಿಸಿದರೆ ರಾಣಿಕಣ ಸಫಲವಾಗಿದೆ ಎಂದು ತಿಳಿಯಬಹುದು. ಚೆನ್ನಾಗಿ ಪರಾಗ,ಪುಷ್ಪರಸಗಳು ದೊರಕಿದರೆ ಒಂದು ಜೇನುಕುಟುಂಬವನ್ನು ವರ್ಷದಲ್ಲಿ ನಾಲ್ಕೈದು ಬಾರಿ ಪಾಲು ಮಾಡಬಹುದು.
ಡಿಸೆಂಬರ್ ತಿಂಗಳಿನ ಅನಂತರ ಜೇನುಕುಟುಂಬಗಳು ಪಾಲಾದರೆ ಆ ವರ್ಷ ಜೇನುತುಪ್ಪ ಸಿಗಲಾರದು.ಪಾಲಾಗದಂತೆ ಮಾಡಲು ಹಚ್ಚಿನ ಜೇನುಕೋಣೆಗಳನ್ನು ಕೊಟ್ಟು ಪೆಟ್ಟಿಗೆಯೊಳಗೆ ಹೆಚ್ಚು ಸ್ಥಳಾವಕಾಶವನ್ನು ಮಾಡಿಕೊಡಬೇಕು. ಗಂಡು ಮೊಟ್ಟೆ ಇರುವ ಎರಿಯನ್ನು ಕತ್ತರಿಸಿ ತೆಗೆಯಬೇಕು. ರಾಣಿಕಣಗಳಿದ್ದರೆ ಏಳು ದಿನಗಳಿಗೊಮ್ಮೆ ಪರೀಕ್ಷಿಸುತ್ತಾ ರಾಣಿಕಣಗಳನ್ನು ಕಿತ್ತು ತೆಗೆಯಬೇಕು.
ಜೇನುಕುಟುಂಬಗಳಿಂದ ಪ್ರತ್ಯಕ್ಷ ಲಾಭ ಜೇನುತುಪ್ಪವಾದರೆ ಪರೋಕ್ಷ ಲಾಭವಾದ ಪರಾಗಸ್ಪರ್ಶದಿಂದ ಅದಕ್ಕಿಂತಲೂ ಹೆಚ್ಚಿನ ಲಾಭವಿದೆ. ಆದ್ದರಿಂದ ಕೃಷಿಕರೆಲ್ಲರೂ ಜೇನುಕುಟುಂಬಗಳನ್ನು ಸಾಕುವುದು ಒಳ್ಳೆಯದು. ಸಾಕಲಾಗದಿದ್ದರೆ ತಮ್ಮ ಪರಿಸರದಲ್ಲಿ ಜೇನುಕುಟುಂಬಗಳಿಗೆ ವಾಸಿಸಲು ಅನುಕೂಲ ಮಾಡಿಕೊಡಬೇಕು. ಸತ್ತುಹೋದ ಅಡಿಕೆಮರ,ಈಚಲುಮರ ಮೊದಲಾದವುಗಳನ್ನು ಕಡಿಯದೆ ಇದ್ದರೆ ಅವುಗಳ ಪೊಟರೆಗಳಲ್ಲಿ ಜೇನುಕುಟುಂಬಗಳು ತಾವಾಗಿಯೇ ಬಂದು ನೆಲೆಸುತ್ತವೆ. ಜೇನುತಪ್ಪವನ್ನು ತೆಗೆದ ಅನಂತರ ಅವುಗಳ ವಾಸಸ್ಥಾನವನ್ನು ಮೊದಲಿದ್ದಂತೆ ಮುಚ್ಚಿ ಇಟ್ಟರೆ ಮತ್ತೆ ಅದರಲ್ಲಿ ಜೇನುಕುಟುಂಬ ಬಂದು ನೆಲೆಸುತ್ತದೆ. ಮಡಕೆಗೆ ಜೇನುಮಯಣ ಸವರಿ ತಂಪಾದ ಸ್ಥಳದಲ್ಲಿ ಇಟ್ಟರೆ ಜೇನುಕುಟುಂಬಗಳು ತಾವಾಗಿಯೇ ಬಂದು ಸೇರಿಕೊಳ್ಳುತ್ತವೆ.
ಶಿರಂಕಲ್ಲು ಕೃಷ್ಣ ಭಟ್
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 7975159138

LEAVE A REPLY

Please enter your comment!
Please enter your name here