
“ಪ್ರಯೋಗಗಳಿಲ್ಲದೆ ವಿಜ್ಞಾನವಿಲ್ಲ” (There’s no science without experiments) ಎಂಬ ನಿಲುವನ್ನು ಹೊಂದಿರುವ ಮಿಷನ್ ಮಂಗಳ್ ಅನ್ನುವ ಸಿನೆಮಾ, ಭಾರತೀಯ ಯುವಜನತೆ ಆಚ್ಚರಿಪಡುವಂತೆ ಮಾಡಿದೆ. ಯಾವುದೇ ವಲಯಗಳಲ್ಲಿ ಹೊಸ ಆಲೋಚನೆಗಳಿಗೆ ಆದ್ಯತೆ ಸಿಗುತ್ತದೆ ಎಂದರೆ ಆ ನಾಡು ವೈಜ್ಞಾನಿಕವಾಗಿ ದಾಪುಗಾಲಿಡುತ್ತದೆ. ಭಾರತೀಯ ರೇಷ್ಮೆಕೃಷಿ ತನ್ನದೇ ಆದ ಗಣನೀಯ ಹೆಜ್ಜೆ ಗುರುತನ್ನ ಇಡುವುದರ ಮೂಲಕ 2022ನೇ ಸಾಲಿನಲ್ಲಿ 34903 ಮೆಟ್ರಿಕ್ ಟನ್ ರೇಷ್ಮೆ ಉತ್ಪಾದಿಸುವುದರ ಜೊತೆ ಸರಿಸುಮಾರು 87ಲಕ್ಷ ಜನರಿಗೆ ಬದುಕನ್ನು ಕಲ್ಪಿಸಿಕೊಟ್ಟಿದೆ.
2023-24ರ ವೇಳೆ 48800 ಮೆಟ್ರಿಕ್ ಟನ್ ರೇಷ್ಮೆಉತ್ಪಾದಿಸುವ ಗುರಿ ಇಟ್ಟುಕೊಂಡಿರುವ ಭಾರತೀಯ ರೇಷ್ಮೆ ವಲಯಕ್ಕೆ ರೇಷ್ಮೆ ಮೊಟ್ಟೆಗಳ ತಂತ್ರಜ್ಞಾನ ಪರಿಣಾಮಕಾರಿಯಾಗಿ ಸಹಾಯ ಮಾಡುತ್ತದೆ. ಪ್ರಸ್ತುತ ಕರ್ನಾಟಕದಲ್ಲಿ 575 ಲಕ್ಷ ರೇಷ್ಮೆ ಮೊಟ್ಟೆಗಳನ್ನು ಉತ್ಪಾದಿಸಲಾಗುತ್ತಿದೆ. ಈ ಮೂಲಕ ಭಾರತದಾದ್ಯಂತ ಕರ್ನಾಟಕ ಮುಂಚೂಣಿಯಲ್ಲಿದೆ.
ರೇಷ್ಮೆಕೃಷಿ ಲಭದಾಯಕವಾಗಲು ತಗಲುವ ಖರ್ಚು ತಗ್ಗಿಸುವ ಸಲುವಾಗಿ ರೇಷ್ಮೆಬಿತ್ತನೆ ಕೋಠಿಯಲ್ಲಿ ಹೊಸ ಆಲೋಚನೆಯ ಮಾದರಿಗಳು ಬರಬೇಕಾಗಿವೆ. ಸಾಮಾನ್ಯವಾಗಿ ಇಂದಿನ ದಿನಮಾನಗಳಲ್ಲಿ ಬಿತ್ತನೆಕೋಠಿಯಲ್ಲಿ ಬಳಸಲಾಗುತ್ತಿರುವ ಮೊಟ್ಟೆಹಾಳೆಗಳು ಪುನರ್‌ಬಳಸಲು ಆಗುವುದಿಲ್ಲ. ಪ್ರತಿ ಬಿತ್ತನೆ ಕೋಠಿಯೊಂದರಲ್ಲಿಯೇ ವರ್ಷಕ್ಕೆ ಕೇವಲ ಮೊಟ್ಟೆ ಹಾಳೆಗೆ ತಗಲುವ ವೆಚ್ಚ ಅಪಾರ. ಅಲ್ಲದೆ ಲೂಸ್ ಮೊಟ್ಟೆಹಾಳೆ ತಯಾರಿಸಲು ಮೈದಾಹಿಟ್ಟಿನ ಅಂಟು, ಸೊಂಕು ನಿವಾರಕವಾಗಿ ಬ್ಲೀಚಿಂಗ್ ಪೌಡರ್, ಮೊಟ್ಟೆ ಬಿಡಿಸಲು ಹೆಚ್ಚು ನೀರಿನ ಬಳಕೆ, ಕಾರ್ಮಿಕರಿಗೆ ತಗುಲುವ ವೆಚ್ಚ ಎಲ್ಲವೂ ಸೇರಿ ಕೊನೆಗೆ ಸಾಮಾನ್ಯವಾಗಿ 1 ಡಿ.ಎಫ್.ಎಲ್‌ಗೆ 10 ರೂ ತಗುಲುವವರೆಗೆ ಖರ್ಚುಬರುತ್ತದೆ.
ಈ ಖರ್ಚುವೆಚ್ಚ ತಗ್ಗಿಸುವ ಸಲುವಾಗಿ ವಿದ್ಯಾರ್ಥಿಗಳ ತಂಡ ಸಹಾಯಕ ಪ್ರಾಧ್ಯಾಪಕರ ಮಾಗದರ್ಶನದೊಂದಿಗೆ ಹೊಸ ಆಲೋಚನೆಯಲ್ಲಿ ಕಾರ್ಯನಿರತವಾಗಿದೆ. “Glass Sheet Egg Production Technology” ಅನ್ನುವ ಹೊಸ ಆಯಾಮದಂತೆ, ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು, ರೇಷ್ಮೆಕೃಷಿ ಮಹಾವಿದ್ಯಾಲಯ, ಚಿಂತಾಮಣಿ ಎಂ.ಎಸ್ಸಿ ರೇಷ್ಮೆಕೃಷಿ ವಿದ್ಯಾರ್ಥಿಗಳಾದ ಭುವನೇಶ್ವರ್ ರಾಜೇಶ್ ನಾಯಕ್, ಪ್ರೀತಿಶ್ ಚೌಹಾನ್, ಕೃತಿಕಾ ಎಂ.ಎಸ್. ಮತ್ತು ರಕ್ಷಿತಾ ಎಂ.ಪಿ ಇವರ ಜೊತೆ ಎಂ.ಎಸ್ಸಿ ಬೇಸಾಯಶಾಸ್ತ ವಿದ್ಯಾರ್ಥಿಗಳಾದ ಪ್ರವೀಣ್ ಕುಮಾರ್ ಗೌಡ, ಎನ್.ಎಂ. ಮತ್ತು ರಕ್ಷಿತಾ, ಕೆ.ಆರ್ ಭಾಗಿಯಾಗಿದ್ದಾರೆ.
ಸಹಾಯಕ ಪ್ರಾಧ್ಯಾಪಕ ಡಾ. ಸುನಿಲ್ ಕುಮಾರ್, ಟಿ ಅವರ ಮಾರ್ಗದರ್ಶನದಲ್ಲಿ ಗ್ಲಾಸಿ ಹಾಳೆಯನ್ನು ಬಳಸಿ ರೇಷ್ಮೆಚಿಟ್ಟೆಗಳ ಮೊಟ್ಟೆ ಇರಿಸುವ ಕೆಲಸ ಮಾಡಲಾಗಿದೆ. ನುಣುಪಾದ ಗ್ಲಾಸಿಹಾಳೆಯನ್ನು ಚಿಟ್ಟೆಗಳು ಒಪ್ಪಿಕೊಂಡಿದ್ದು ಗರಿಷ್ಠ ಸಂಖ್ಯೆಯಲ್ಲಿ ಮೊಟ್ಟೆಯನ್ನು ಇರಿಸಿವೆ. ಅಲ್ಲದೆ ಈ ಹಾಳೆಗಳ ಮೇಲೆ ಯಾವುದೇ ರೀತಿಯ ಅಂಟು ದ್ರಾವಣವಾಗಿ ಮೈದಾ, ಮೊಟ್ಟೆ ಬಿಡಿಸಲು ಬ್ಲೀಚಿಂಗ್ ದ್ರಾವಣ, ಗಾಲಿ ಬಳಸದೇ ಮೊಟ್ಟೆ ಇರಿಸುವ ಹೊಸ ಆಲೋಚನೆಗೆ ನಾಂದಿಹಾಕಿದ್ದಾರೆ.
ಈ ಗ್ಲಾಸೀ ಹಾಳೆಗಳನ್ನ ಪುನರ್ ಬಳಸಬಹುದಾಗಿದ್ದು ಖರ್ಚುವೆಚ್ಚದಲ್ಲಿ ಉಳಿತಾಯ ಆಗುತ್ತದೆ. ಅಲ್ಲದೇ ಮೊಟ್ಟೆ ಇಟ್ಟ 7ನೇ ದಿನಕ್ಕೆ ಮೊಟ್ಟೆಭರಿತ ಗ್ಲಾಸಿಹಾಳೆಗೆ ಸ್ವಲ್ಪ ಉಷ್ಣಾಂಶದ ಉಪಚಾರ ಮಾಡಿದರೆ ಮೊಟ್ಟೆಗಳು ತಾನಾಗಿಯೇ ಹಾಳೆಯಿಂದ ಬೇರ್ಪಡುತ್ತದೆ ಎಂಬುದನ್ನು ಪ್ರಯೋಗದಲ್ಲಿ ಕಂಡುಕೊಳ್ಳಲಾಗಿದೆ.

ಈ ಮಾದರಿಯ ಬಗ್ಗೆ ವಿವಿಧ ವಿಜ್ಞಾನ ಶಾಖೆಯ ವಿದ್ಯಾರ್ಥಿಗಳೂ ಗಮನಹರಿಸಿ ಹೊಸ ಮಾದರಿಯೊಂದು ತಯಾರಿಸಲು ಸ್ವಾಗತ ಕೋರಲಾಗಿದೆ. ರೇಷ್ಮೆಕೃಷಿ ಮಹಾವಿದ್ಯಾಲಯ, ಚಿಂತಾಮಣಿಯ ಡೀನ್ ರವರಾದ ಡಾ.ವೆಂಕಟಪರವಣ, ಪಿ., ರವರು ಮತ್ತು ರೇಷ್ಮೆಕೃಷಿ ವಿಭಾಗದ ಮುಖ್ಯಸ್ಥರಾದ ಡಾ. ರಾಮಕೃಷ್ಣನಾಯ್ಕರವರು ರೇಷ್ಮೆ ಬೀಜೋತ್ಪಾದನೆ ಪ್ರಯೋಗಾಲಯಕ್ಕೆ ಭೇಟಿ ನೀಡಿ ವಿದ್ಯಾರ್ಥಿ ಮಿತ್ರರು ಮತ್ತು ಸಹಾಯಕ ಪ್ರಾಧ್ಯಾಪಕರ ಹೊಸ ಆಲೋಚನೆಗೆ ಬೆನ್ನುತಟ್ಟುವುದರ ಮೂಲಕ ಇನ್ನೂ ಮರುಸಂಶೋಧನೆಯಲ್ಲಿ ಮುನ್ನಡೆಯಲು ಪ್ರೋತ್ಸಾಹ ನೀಡಿರುತ್ತಾರೆ.
“ವೈಜ್ಞಾನಿಕ ಆಲೋಚನೆಗಳ ಆಧಾರಿತ ಪ್ರಯೋಗದಿಂದ ಉತ್ತಮ ವಿಜ್ಞಾನ ನಿಲ್ಲಬಲ್ಲದು ಎಂಬ ನೆಲೆಗಟ್ಟಿನಲ್ಲಿ ಈ ಪ್ರಯೋಗ ಸಾಗಬೇಕಿದೆ. ಈ ಮಾದರಿಗೆ ಹೊಸ ಆಲೋಚನೆಯನ್ನು ಜೋಡಿಸುವ ಮನಸುಗಳು ಜೊತೆಗೂಡಿದರೆ ಖಂಡಿತ “Glass Sheet Egg Production Technology” ಭರವಸೆಯನ್ನು ಮೂಡಿಸುವ ಮಾದರಿಯಾಗಿ ಮುಂದಿನ ದಿನಗಳಲ್ಲಿ ಬರಲಿದೆ.
ಲೇಖಕರು: ಡಾ. ಸುನಿಲ್ ಕುಮಾರ್, ಟಿ ಮತ್ತು ಎಂ.ಎಸ್ಸಿ ರೇಷ್ಮೆಕೃಷಿ ವಿದ್ಯಾರ್ಥಿಗಳಾದ ಭುವನೇಶ್ವರ್ ರಾಜೇಶ್ ನಾಯಕ್, ಪ್ರೀತಿಶ್ ಚೌಹಾನ್, ಕೃತಿಕಾ ಎಂ.ಎಸ್. ಮತ್ತು ರಕ್ಷಿತಾ ಎಂ.ಪಿ ಇವರ ಜೊತೆ ಎಂ.ಎಸ್ಸಿ ಬೇಸಾಯಶಾಸ್ತç ವಿದ್ಯಾರ್ಥಿಗಳಾದ ಪ್ರವೀಣ್ ಕುಮಾರ್ ಗೌಡ, ಎನ್.ಎಂ. ಮತ್ತು ರಕ್ಷಿತಾ, ಕೆ.ಆರ್.