ಜರ್ಮನಿಯ ರಾಸಾಯನಿಕ ಶಾಸ್ತ್ರದ ವಿಜ್ಞಾನಿ ಜಸ್ಟಸ್ ವಾನ್ ಲೀಬಿಗ್,ಸಸ್ಯಗಳಿಗೆ ರಾಸಾಯನಿಕ ಗೊಬ್ಬರ ಪ್ರಯೋಗ ಮಾಡಿದ ಮೊದಲಿಗ.ನಂತರ ರಸಗೊಬ್ಬರ ಮಣ್ಣಿನ ಮೇಲೆ ಉಂಟುಮಾಡುವ ಪರಿಣಾಮಗಳ ಬಗ್ಗೆ ಅವರು ಅಧ್ಯಯನ ಮಾಡುತ್ತಾರೆ ‘ರಾಸಾಯನಿಕ ಗೊಬ್ಬರ ಸೂಕ್ಷ್ಮಜೀವಿಗಳು ಮತ್ತು ಎರೆಹುಳುಗಳನ್ನು ಕೊಲ್ಲುತ್ತದೆ’ ಎಂದು ತಿಳಿದು ಬರುತ್ತದೆ.ಆಗ ಆತ ಚರ್ಚ್ ನಲ್ಲಿ ದೇವರ ಮುಂದೆ ಮಂಡಿಯೂರಿ ‘ನಾನು ಗೊತ್ತಿಲ್ಲದೇ ತಪ್ಪು ಮಾಡಿಬಿಟ್ಟೆ, ಆ ಕೆಲಸ ಮಾಡಬಾರದಿತ್ತು.ಈಗ ನನ್ನ ಮಾತನ್ನು ಯಾರು ಕೇಳುತ್ತಿಲ್ಲ,ದಯಮಾಡಿ,ನನ್ನನ್ನು ಕ್ಷಮಿಸು’ ಎಂದು ಪಶ್ಚಾತಾಪದ ಬೇಗೆಯಲ್ಲಿ ಬೆಂದು ಹೋಗುತ್ತಾರೆ.
*’ಕೃಷಿ ಭೂಮಿ ತಂತಾನೇ ಸ್ವಾಲಂಬನೆ ಸಾಧಿಸಬೇಕು.ಹೊರಗಿನಿಂದ ಯಾವುದೇ ಒಳಸುರಿ ತರಬಾರದು,ತಂದದ್ದೇ ಆದರೆ ಅದು ಹೊಸ ಜಾತಿಯ ಬೀಜ ಮತ್ತು ಗಿಡ ಮಾತ್ರ ಆಗಿರಲಿ’ ಈ ಮಾತನ್ನು ರೈತರು ಪ್ರತಿದಿನ ಮಂತ್ರದಂತೆ ಮನಸ್ಸಿನಲ್ಲಿ ಪಠಿಸಬೇಕು.
*ನಮ್ಮ ದೇಶದಲ್ಲಿ ರಾಸಾಯನಿಕ ಕೃಷಿ ಪ್ರಾರಂಭ ಮಾಡುವ ಮೊದಲು,ಅಂದರೆ 1960 ಕ್ಕೂ ಮೊದಲು,ನಮ್ಮ ಮಣ್ಣಿನಲ್ಲಿ ಸಾವಯವ ಇಂಗಾಲ ಶೇ 3 ರಷ್ಟು ಇತ್ತು.ಈಗ 90 ರಷ್ಟು ಕಳೆದುಕೊಂಡು ಶೇ 0.3 ಕ್ಕೆ ಬಂದಿದೆ.ಆಗ 20 ಅಡಿ ಆಳದಲ್ಲಿ ಸಿಗುತ್ತಿದ್ದ ನೀರು ಈಗ 1200 ಅಡಿಗೆ ಹೋಗಿದೆ.’ಒಂದು ದೇಶದ ಶ್ರೀಮಂತಿಕೆ ಅಲ್ಲಿನ ಭೂಮಿಯ ಮಣ್ಣನ್ನು ಅವಲಂಬಿಸಿದೆ’.ನಾವು ಭೂಮಿಗೆ ವಿಷ ಹಾಕಿ ಅಭಿವೃದ್ಧಿ ಮಾಡುತ್ತ ಇದ್ದೇವೆ ಎನ್ನುವ ಹುಚ್ಚು ಭ್ರಮೆಯಲ್ಲಿದ್ದೇವೆ.
*ಕುಲಾಂತರಿ ಬೀಜಗಳು ಉತ್ತಮ ಇಳುವರಿ ಕೊಡುತ್ತವೆ ಎಂದು ಬಿಂಬಿಸುತ್ತಿದ್ದಾರೆ ಇವೆಲ್ಲಾ ಸಂತಾನೋತ್ಪತ್ತಿ ಸಾಮರ್ಥ್ಯ ಕಳೆದುಕೊಂಡ ಬೀಜಗಳು.ಇಂತಹ ದುರ್ಬಲ ಬೀಜಗಳಿಂದ ಬರುವ ಆಹಾರವನ್ನು ತಿನ್ನುವುದರಿಂದ ನಾವೆಷ್ಟು ದುರ್ಬಲರಾಗಬೇಕು?
*ಒಂದು ಮೂಟೆ(50 ಕೆಜಿ) ಯೂರಿಯದಲ್ಲಿ 23.5 ಕೆಜಿ ಸಾರಜನಕ ಇರುತ್ತದೆ.ಅದನ್ನು ಭೂಮಿಗೆ ಹಾಕಿದಾಗ 5.5 ಕೆಜಿ ಮಾತ್ರ ಬೆಳೆಗಳಿಗೆ ಸಿಗುತ್ತದೆ.ಉಳಿದ 18 ಕೆಜಿ ಭೂಮಿಯಲ್ಲಿ ಬೆರೆತು ವಿಷವಾಗುತ್ತಿದೆ.
*ರಾಸಾಯನಿಕ ಕೃಷಿ ಎನ್ನುವುದು ಪರಿಸರ ನಾಶ ಮಾಡುವ ಮತ್ತು ಆಗ್ರೋ ಇಂಡಸ್ಟ್ರೀಸ್ಗಳಿಗೆ ಲಾಭ ಮಾಡಿಕೊಡುವ ಉದ್ದೇಶವೇ ಹೊರತು ರೈತರ ಉದ್ದಾರವನ್ನಲ್ಲ ‘ಕಾಸು ಹೋಯ್ತು, ಶನಿ ಬಂತು’ ಅನ್ನೋ ತರಹ ಆಗಿದೆ ನಮ್ಮ ಕೃಷಿ ವಿಜ್ಞಾನ.
*ಕಳೆದ ಕೆಲವು ವರ್ಷಗಳಲ್ಲಿ ಲಕ್ಷಾಂತರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಅದರಲ್ಲಿ ಶೇ 98% ರೈತರು ಕೃಷಿ ಸಾಲದ ಹೊರೆಗೆ ಬೇಸತ್ತು ಸಾವನ್ನಪ್ಪಿದ್ದಾರೆ.ಪರಿಸರ ಸ್ನೇಹಿ ಕೃಷಿ ಮಾಡಿಕೊಂಡಿರುವ ರೈತರು ಆತ್ಮಹತ್ಯೆ ಮಾಡಿಕೊಂಡ ಪ್ರಸಂಗ ನೋಡಿಲ್ಲ.
*ಕಳೆಗಳು ಮಾರಕವಲ್ಲ,ಪೂರಕ.ಕಳೆಗಳು ಮಣ್ಣಿನ ಆರೋಗ್ಯವನ್ನು ವೃದ್ಧಿಸುವಲ್ಲಿ ಸಹಕಾರಿಯಾಗಿವೆ. ಕಳೆ ನಾಶಕವನ್ನು ಬಳಸಿದ ಪರಿಣಾಮ ಸಹಜವಾಗಿ ಬರುತ್ತಿದ್ದ ಹಲವಾರು ಜಾತಿಯ ಸೊಪ್ಪುಗಳು ಕಣ್ಮರೆಯಾಗಿವೆ. ಇವು ಮನುಷ್ಯರು ಮತ್ತು ಪ್ರಾಣಿಗಳಿಗೆ ಪೌಷ್ಟಿಕಾಂಶ ಮತ್ತು ಔಷದೀಯ ಗುಣಗಳನ್ನು ಒದಗಿಸಿಕೊಡುತ್ತಿತ್ತು. ಕಳೆ ನಾಶಕವನ್ನು ಉಪಯೋಗಿಸದೇ ಇದ್ದಿದ್ದರೆ ನಾವು ತರಕಾರಿ ಮತ್ತು ಮೇವು ಬೆಳೆಯುವ ಅರ್ಧ ಶ್ರಮ ಉಳಿಯುತ್ತಿತ್ತು.
*ಕಳೆನಾಶಕದ ಜಾಹಿರಾತಿನಲ್ಲಿ ‘Pride of India'(ಭಾರತದ ಹೆಮ್ಮೆ) ಎಂದು ಹಾಕಿಕೊಡಿರುತ್ತಾರೆ.ಆದರೆ ಅಲ್ಲಿ ‘Curse for India’ ಅಂದರೆ ‘ಭಾರತದ ಶಾಪ’ ಎಂದು ಇರಬೇಕಿತ್ತು.
*ಮಣ್ಣಿನ ರಚನೆಯಲ್ಲಿ ಗೆದ್ದಲು Cheif Engineer ಆದರೆ,ಎರೆಹುಳು Assistant Engineer ಇದ್ದಂತೆ.Termites are better freinds than Earthworms.
*ಸುಖ,ಸಂತೋಷ,ನೆಮ್ಮದಿ ಬೇಕೆಂದರೆ ಮರ ಬೆಳೆಸಲೇಬೇಕು.
ಮರವಿಲ್ಲವೆಂದರೆ ಮಳೆಯಿಲ್ಲ.ಮರ ನಾಶ ಮಾಡುವ ಯಾವ ದೇಶಗಳು ಉದ್ದಾರವಾಗುವುದಿಲ್ಲ.ಸಕಲ ಜೀವರಾಶಿಗಳಿಗೂ ಆಹಾರ-ನೀರು-ಆಶ್ರಯ ಒದಗಿಸಲು ಮರಗಳಿಂದ ಮಾತ್ರ ಸಾಧ್ಯವೇ ಹೊರತು,ಕೂಡಿಟ್ಟ ಚಿನ್ನ ಮತ್ತು ಹಣದಿಂದಲ್ಲ.
*ಕೃಷಿಯಲ್ಲಿ ಹೆಚ್ಚು ಬಂಡವಾಳ ಹಾಕಿ ರಾಸಾಯನಿಕ ಬಳಸಿ ಹೆಚ್ಚು ಇಳುವರಿ ಪಡೆಯುವ ಸಾಹಸ ಕೆಲವು ವರ್ಷಗಳಿಗೆ ಸೀಮಿತವೇ ಹೊರತು,ಕೈಗಾರಿಕೆಗಳಲ್ಲಿ ಯಂತ್ರದ ಮೂಲಕ ತೆಗೆಯುವ ಉತ್ಪನದಂತೆ ನಿರಂತರವಾಗಿ ಬೆಳೆ ಬೆಳೆಯಲಾಗುವುದಿಲ್ಲ.ಆ ರೀತಿ ನಿರಂತರ ಉತ್ಪಾದನೆ ತೆಗೆದು ತೋರಿಸುವವರಿದ್ದರೆ ನಾನು ಅವರ ಮನೆಯಲ್ಲಿ ಕೂಲಿ ಕೆಲಸ ಮಾಡಲು ಸಿದ್ದ.
*1943 ರಲ್ಲಿ ಬಂಗಾಳದ ಮಹಾ ಕ್ಷಮಾದಲ್ಲಿ ಆಹಾರ ಇಲ್ಲದೆ ಲಕ್ಷಾಂತರ ಮಂದಿ ಸತ್ತಿದ್ದು ಬರಗಾಲದಿಂದ ಅಲ್ಲ. ಆ ರೀತಿ ಬಿಂಬಿಸಲಾಗಿದೆ ಅಷ್ಟೇ. ಅದಕ್ಕೆ ಬ್ರಿಟಿಷ್ ಸರ್ಕಾರದ ಆಡಳಿತ ನೀತಿಗಳು ಕಾರಣ, ಜನ ಸತ್ತದ್ದು ಆಹಾರದ ಕೊರತೆಯಿಂದಲ್ಲ, ಸರಬರಾಜು ವ್ಯವಸ್ಥೆಯಲ್ಲಿ ಅದ ಲೋಪದಿಂದ.
*ಆಹಾರದ ಕೊರತೆ ಅನ್ನುವ ಕಾರಣ ಮುಂದಿಟ್ಟುಕೊಂಡು ರೈತರ ಮನೆಗಳಲ್ಲಿ ಇದ್ದ ಧವಸ-ಧನ್ಯಗಳನ್ನು ಜಪ್ತಿ ಮಾಡುತ್ತಿದ್ದರು. ದೇಶದಲ್ಲಿ ಆಹಾರದ ಕೊರತೆ ಎಂದು ಬಿಂಬಿಸಿ ‘ನಾವು ಹೆಚ್ಚು ಇಳುವರಿ ಕೊಡುವ ಬೀಜ ಕೊಡುತ್ತೇವೆ, ಇದು ಮುಂದಿನ ಬೆಳೆಗೆ ಬಿತ್ತನೆಗೆ ಬರುವುದಿಲ್ಲ, ನಾವೇ ಪುನಃ ಬೀಜ ಕೊಡುತ್ತೇವೆ’ ಅಂದರು. ಈ ರೀತಿ ಬೀಜದ ಮೇಲೆ ನಿಯಂತ್ರಣ ಸಾಧಿಸಿ, ಬೀಜಗಳ ಮೇಲೆ ನಮ್ಮ ರೈತರು ಅವಲಂಬನೆಯಾಗುವ ರೀತಿ ಮಾಡಿದರು.
*ಬ್ರಿಟಿಷರು ಬಟ್ಟೆ ಕಾರ್ಖಾನೆಗಳಿಗೆ ಬಣ್ಣ ಹಾಕಲು ಬಳಸುತ್ತಿದ್ದ ಇಂಡಿಗೋ ಬೆಳೆ, ಸಿಗರೇಟ್ಗೆ ಬೇಕಿದ್ದ ಹೊಗೆಸೊಪ್ಪು ಬೆಳೆಯುವಂತೆ ನಮ್ಮ ರೈತರನ್ನು ಹೆದರಿಸಿ, ಬೆದರಿಸಿ ಬೆಳೆಸಿಕೊಳ್ಳುತ್ತಿದರು. ಅವರ ಈ ರೀತಿಯ ಒತ್ತಡಗಳು ಮತ್ತು ಆಹಾರ ಬೆಳೆ ಬೆಳೆದರೆ ಜಪ್ತಿ ಮಾಡುವ ಭಯದಿಂದ ಕಾಲಕ್ರಮೇಣ ಆಹಾರದ ಬೆಳೆಗಳನ್ನು ಬೆಳೆಯುವುದು ಕಡಿಮೆಯಾಗುತ್ತ ಹೋಯಿತು.
*ಸ್ವತಂತ್ರ ಬಂದ ನಂತರ ನಮ್ಮ ಸರ್ಕಾರಗಳು ಕೂಡ ಸೂಕ್ತ ಕೃಷಿ ಯೋಜನೆಗಳನ್ನು ರೂಪಿಸಲು ವಿಫಲವಾದವು.ಆಹಾರದ ಕೊರತೆ ಎದುರಾಗಿ ಅಮೇರಿಕಾದಿಂದ ಆಹಾರ ತಂದು ತಿನ್ನುವ ಪರಿಸ್ಥಿತಿ ಉಂಟಾಯಿತು.
*ಇದನ್ನೇ ಬಂಡವಾಳ ಮಾಡಿಕೊಂಡ ಅಮೇರಿಕಾದವರು ‘ವಿಶ್ವವಿದ್ಯಾನಿಲಯ ಕಟ್ಟೋಕೆ ದುಡ್ಡು ಕೊಡ್ತೀವಿ, ಟ್ರ್ಯಾಕ್ಟರ್ ಕೊಡ್ತೀವಿ, ಹೈಬ್ರಿಡ್ ಬೀಜ, ಗೊಬ್ಬರ ಎಲ್ಲಾ ಕೊಡ್ತೀವಿ’ ಎಂದು ಹೇಳಿ ನಮ್ಮ ಮೇಲೆ ಹಿಡಿತ ಸಾಧಿಸಿ, ವ್ಯಪಾರ ಕುದುರಿಸಿಕೊಂಡು ಪ್ರತಿ ವರ್ಷ ಲಕ್ಷಾಂತರ ಕೋಟಿ ಲಾಭ ಮಾಡಿ ಕೊಳ್ಳುತ್ತಿದ್ದಾರೆ.
*ಹಿಮಾಲಯ ಪ್ರದೇಶದಲ್ಲಿರುವ ಕಾಡುಗಳನ್ನು ಕಡಿದು ಸೇಬು ಬೆಳೆಯುತ್ತಾರೆ,ಪಶ್ಚಿಮ ಘಟ್ಟಗಳಲ್ಲಿ ಕಾಫಿ, ಕೋಕೋ, ಅಡಿಕೆ ಬೆಳೆಯಲು ಮತ್ತು ಮೈಸೂರ್ ಭಾಗದಲ್ಲಿ ಹೊಗೆಸೊಪ್ಪು ಬೇಯಿಸಲು ಕಾಡುಗಳನ್ನು ನಿರಂತರ ಕಡಿಯಲಾಗುತ್ತಿದೆ, ಇದು ಮಳೆ ಕೊರತೆ ಮಾತ್ರವಲ್ಲ ಆಹಾರ ಕೊರೆತೆಗೂ ಕಾರಣವಾಗಿದೆ.
*ಸಹಜವಾಗಿ ಹೆಚ್ಚು ಶ್ರಮವಿಲ್ಲದೆ ಬೆಳೆಯುವ ಹಣ್ಣು, ಬಳಿ ತರಕಾರಿ,ಧವಸ, ಧಾನ್ಯ, ಎಣ್ಣೆಕಾಳು, ಸೊಪ್ಪು, ಗೆಡ್ಡೆ ಬೆಳೆ ಇವುಗಳಿಗೆ ಪ್ರಾಮುಖ್ಯತೆ ಕೊಡಬೇಕು. ದುಬಾರಿ ಬೀಜ, ಹೆಚ್ಚು ಗೊಬ್ಬರ, ಕೀಟನಾಶಕ ಬಯಸುವ ಬೆಳೆಗಳಿಗೆ ಕಂಪನಿಗಳು ಪ್ರಾಮುಖ್ಯತೆ ಕೊಡುತ್ತಿರುವ ಹುನ್ನಾರಗಳನ್ನು ರೈತರು ಮತ್ತು ಗ್ರಾಹಕರು ಅರಿತುಕೊಳ್ಳಬೇಕು.
*ಭತ್ತ, ಗೋಧಿ, ಮೆಕ್ಕೆಜೋಳ ಇವುಗಳನ್ನು ಬೆಳೆಯಲು ಯಥೇಚ್ಚವಾಗಿ ನೀರು ಬಳಸಿಕೊಳ್ಳುವುದೇ ಅಲ್ಲದೇ, ಅಪಾರ ಪ್ರಮಾಣದ ಶ್ರಮ, ಹಣ ಬಳಕೆಯಾಗುತ್ತಿದೆ. ಒಂದು ಕಿಲೋ ಗ್ರಾಂ ಭತ್ತ ಬೆಳೆಯಲು ಸುಮಾರು 5 ಸಾವಿರ ಲೀಟರ್ ನೀರು ಬಳಸಲಾಗುತ್ತಿದೆ.15 quintal ಅಕ್ಕಿ ಮತ್ತು ಗೋಧಿ ಬೆಳೆಯಲು ಬೇಕಾಗುವ ಪ್ರಮಾಣದ ನೀರಿನಲ್ಲಿ 45 quintal ರಾಗಿ, ಬಿಳಿಜೋಳ, ಸಜ್ಜೆ, ನವಣೆ ಇನ್ನಿತರೆ ಸಿರಿಧಾನ್ಯಗಳನ್ನು ಬೆಳೆಯಬಹುದು. ಅತ್ಯಲ್ಪ ಮಳೆಯಲ್ಲಿ, ಫಲವತ್ತತೆ ಇಲ್ಲದ ಭೂಮಿಯಲ್ಲೂ ಇವುಗಳನ್ನು ಹೆಚ್ಚು ಶ್ರಮ ಇಲ್ಲದೆ ಬೆಳೆಯಬಹುದು. ನಮ್ಮಲ್ಲಿ ಶೇಕಡಾ 65 ರಷ್ಟು ರೈತರು ಒಣಭೂಮಿ ಹೊಂದಿದ್ದು, ಮಳೆಯಾಶ್ರಿತ ಪ್ರದೇಶಗಳಲ್ಲಿ ಬೆಳೆಗಳನ್ನು ಬೆಳೆಯಲು ವ್ಯಾಪಕ ಸಿದ್ಧತೆ ಮಾಡಬೇಕಿದೆ.
*ಕೋಳಿ-ಕುರಿ -ಮೇಕೆ -ಹಂದಿ ಇವುಗಳನ್ನು ಕೃಷಿ ತ್ಯಾಜ್ಯ, ಹುಲ್ಲು, ಕಸ-ಕಡ್ಡಿಗಳನ್ನು ಕೊಟ್ಟು ಬೆಳೆಸಬಹುದು. ಆದರೆ ಹೆಚ್ಚು ನೀರು ಮತ್ತು ರಸಗೊಬ್ಬರ ಬೇಡುವ ಮೆಕ್ಕೆಜೋಳವನ್ನು ಬೆಳೆದು ಕೋಳಿ -ಹಂದಿಗಳಿಗೆ ಹಾಕಲಾಗುತ್ತಿದೆ. ನೀರಾವರಿಯಲ್ಲಿ ಶೇ 90 ಕ್ಕೂ ಹೆಚ್ಚು ರೈತರು ಮೆಕ್ಕೆಜೋಳವನ್ನು ಬೆಳೆಯುತ್ತಿದ್ದಾರೆ. ಆದರೆ, ಇದು ಕೋಳಿ -ಹಂದಿಗಳ ಬಾಯಿಗೆ ಆಹಾರವಾಗುತ್ತಿರುವುದನ್ನು ನೋಡಿದ್ರೆ ಹೊಟ್ಟೆ ಉರಿಯುತ್ತದೆ.8 ಕಿಲೋ ಗ್ರಾಂ ಕಾಳು ತಿಂದು ಒಂದು ಕಿಲೋ ಗ್ರಾಂ ಕೋಳಿ ಮಾಂಸ ಉತ್ಪತ್ತಿ ಆಗುತ್ತದೆ. ಅದೇ ಕಾಳನ್ನು ಬಳಸಿಕೊಂಡಿದ್ದರೆ 64 ಜನರಿಗೆ ಆಹಾರವಾಗುತಿತ್ತು. ಒಂದು ಕಿಲೋಗ್ರಾಮ್ ಹಂದಿ ಮಾಂಸಕ್ಕೆ ಸುಮಾರು 16,500 ಲೀಟರ್ ನೀರು ಉಪಯೋಗಿಸಿ ಕಾಳು ಬೆಳೆಯಲಾಗುತ್ತದೆ.60 ಲೀಟರ್ ನೀರಿನಲ್ಲಿ ಒಂದು ಒಂದು ಕಿಲೋಗ್ರಾಮ್ ಮೂಲಂಗಿ ಬೆಳೆಯಬಹುದು. ಹಾಗಂತ ನಾನು ಮಾಂಸ ತಿನ್ನುವವರನ್ನು ವಿರೋಧ ಮಾಡುತ್ತಿಲ್ಲ, ಯಾವುದಕ್ಕೆ ಪ್ರೋತ್ಸಾಹ ಕೊಡಬೇಕು ಅನ್ನುವ ವಿಚಾರ ಅಷ್ಟೇ.
*ಬ್ರಿಟಿಷರಿಂದ ಕಾಫಿ, ಟೀ ಕುಡಿಯುವ ಚಟ ಶುರುವಾಯಿತು. ಕಾಫಿ, ಟೀ, ಮಜ್ಜಿಗೆ, ತುಪ್ಪ ಇಷ್ಟಕ್ಕೆ ಹಾಲಿನ ಬಳಕೆಯನ್ನು ಸೀಮಿತ ಮಾಡಿಕೊಂಡರೆ ಈಗ ಉತ್ಪಾದನೆ ಮಾಡುತ್ತಿರುವ ಹಾಲಿನ ಪ್ರಮಾಣವನ್ನು ಶೇ 80 ರಷ್ಟು ಕಡಿಮೆ ಮಾಡಬಹುದು. ನಮ್ಮಗೆ ಅಗತ್ಯವಿರುವುದು ನಮ್ಮ ಉತ್ಪಾದನೆಯಲ್ಲಿ ಶೇ 20 ರಷ್ಟು ಮಾತ್ರ, ಅಧಿಕವಾಗಿ ಹಾಲು ಉತ್ಪಾದಿಸಿ ಅದರಿಂದ ಹಾಲಿನ ಪುಡಿ ಮಾಡಿ ಬೆಟ್ಟದಂತೆ ರಾಶಿ ಮಾಡಲಾಗುತ್ತಿದೆ.ಬೇಡವಾದ ಕೋವಾ, ಚೀಸ್, ಮಿಲ್ಕ್ ಶೇಕ್, ಪನ್ನೀರ್, ಚಾಕಲೇಟ್ಸ್, ಹಾಲಿನಿಂದ ಮಾಡುವ ಸಿಹಿ ತಿಂಡಿಗಳು, ಬರ್ಫಿ….. ಇವುಗಳನ್ನು ಪೌಷ್ಟಿಕಾಂಶಗಳ ಪೂರೈಕೆಯ ಹೆಸರಿನಲ್ಲಿ ತಿರುಚಿ ಜನರ ಮೇಲೆ ಅನಗತ್ಯವಾಗಿ ಹೇರಲಾಗುತ್ತಿದೆ. ಇದನ್ನು ತಿಂದು ಬೊಜ್ಜು ಮತ್ತು ಇನ್ನಿತರೆ ಆರೋಗ್ಯ ಸಮಸ್ಯೆಯಿಂದ ನರಳುವ ಜನಗಳಿಗೆ ಆರೋಗ್ಯ ಸೇವೆ ನೆಪದಲ್ಲಿ ಔಷಧಿ ತಯಾರಿಕೆ ಕಂಪನಿಗಳಿಗೆ ದೊಡ್ಡ ಲಾಭವಾಗುತ್ತಿದೆ.
*ಒಂದು ಚಿಕ್ಕ ಕುಟುಂಬದಲ್ಲಿ ಶೇ 20 ರಷ್ಟು, ಮದುವೆ ಸಮಾರಂಭಗಳಲ್ಲಿ ಶೇ 70 ರಷ್ಟು, ದೊಡ್ಡ ಮತ್ತು ಚಿಕ್ಕ ಹೋಟೆಲ್ಗಳಲ್ಲಿ ಕ್ರಮವಾಗಿ ಶೇ 50 ಮತ್ತು ಶೇ 20 ರಷ್ಟು, ಆಹಾರ ನಿಗಮದ ಗೋದಾಮಿನಲ್ಲಿ ಶೇ 12 ರಷ್ಟು ಆಹಾರವನ್ನು ಅನಗತ್ಯವಾಗಿ ವ್ಯರ್ಥ ಮಾಡಲಾಗುತ್ತಿದೆ. ಆಹಾರ ಭದ್ರತೆ ಎಂದರೆ ಕೇವಲ ಬೆಳೆ ಬೆಳೆಸುವುದೊಂದೇ ಅಲ್ಲ, ಬೆಳೆದ ಆಹಾರವನ್ನು ಸದ್ಭಳಕೆ ಮಾಡಿಕೊಳ್ಳುವ ಕಡೆಗೂ ಗಮನಹರಿಸಬೇಕು.
*1858 ರಲ್ಲಿ ಯುರೋಪ್ ನಲ್ಲಿ ಮೊದಲು ರಾಸಾಯನಿಕ ಕೃಷಿ ಪ್ರಾರಂಭವಾಗುತ್ತದೆ, ಮೊದಲ ವರ್ಷಗಳಲ್ಲಿ ಉತ್ತಮ ಇಳುವರಿ ಬಂದು ಕ್ರಮೇಣ ಕಡಿಮೆಯಾಗುತ್ತಿರುವ ಬಗ್ಗೆ ಆತಂಕಗೊಂಡು 1923 ರಲ್ಲಿ ಪರಿಸರ ಸ್ನೇಹಿ ಕೃಷಿ ಪ್ರಾರಂಭಿಸುತ್ತಾರೆ.
*ರಾಸಾಯನಿಕ ಕೃಷಿ ಮಾಡದೇ ಇದ್ದರೆ ನಮ್ಮ ದೇಶದ ಅಗಾಧ ಜನಸಂಖ್ಯೆಗೆ ಆಹಾರ ಭದ್ರತೆ ಒದಗಿಸುವುದು ಸಾಧ್ಯವಿಲ್ಲ ಅನ್ನುವ ಭೂತ ತೋರಿಸುತ್ತಿದ್ದಾರೆ. ಇದು ಶುದ್ಧ ಸುಳ್ಳು, ತೇತ್ರಾಯುಗ, ದ್ವಾಪರಯುಗದಲ್ಲೂ ಬರಗಾಲವಿತ್ತು. ಎಲ್ಲಾ ಕಾಲದಲ್ಲೂ ಕೆಲವು ವರ್ಷಗೊಳಿಗೊಮ್ಮೆ ಬರಗಾಲ ಬರುವುದು ಸಹಜ. ಗೆಡ್ಡೆ -ಗೆಣಸು ತಿಂದುಕೊಂಡು ಬರಗಾಲ ಎದುರಿಸಿರುವ ದೇಶ ನಮ್ಮದ್ದು.125 ಕೋಟಿ ಅಲ್ಲ 200 ಕೋಟಿ ಜನಸಂಖ್ಯೆಗೆ ಬೇಕಾದರೂ ಪರಿಸರ ಸ್ನೇಹಿ ಕೃಷಿಯಲ್ಲಿ ಆಹಾರ ಒದಗಿಸುವ ತಾಕತ್ತು ನಮಗಿದೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 9342434530