ರಾಜ್ಯದ ಹಲವೆಡೆ ಮಿನಿ ಶೀತಲಗೃಹ ಸ್ಥಾಪನೆಗೆ ಸರ್ಕಾರ ಮುಂದು

0

ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ 2023 – 24ನೇ ಹಣಕಾಸು ವರ್ಷದ ಪೂರಕ ಬಜೆಟ್  ಮಂಡನೆಯಾಗಿದೆ. ಕೃಷಿ ಉತ್ಪನ್ನಗಳನ್ನು ದೀರ್ಘಾವಧಿ ಸಂರಕ್ಷಿಸಲು ಹಣ ಮೀಸಲಿರಸಲಾಗಿದೆ.  ಈ ಕುರಿತಂತೆ ಬಜೆಟ್ ಭಾಷಣದಲ್ಲಿ ಅವರು ಹೇಳಿರುವ ಅಂಶಗಳು ನಿಮ್ಮ ಮುಂದೆ ಇದೆ.

ಶೀಘ್ರ ಹಾಳಾಗುವ ಹಣ್ಣು, ಹೂವು, ತರಕಾರಿಗಳ ಬೆಲೆ ಕುಸಿತದಿಂದ ರೈತರು ಒತ್ತಡದ ಮಾರಾಟ ಮಾಡುವುದನ್ನು ತಪ್ಪಿಸಿ, ನ್ಯಾಯಯುತ ಬೆಲೆ ಒದಗಿಸುವುದಕ್ಕೆ ನೆರವಾಗಲು ರಾಜ್ಯದ ಆಯ್ದ 50 ತರಕಾರಿ ಮಾರುಕಟ್ಟೆಗಳಲ್ಲಿ KAPPEC ಸಹಯೋಗದೊಂದಿಗೆ ಮಿನಿ ಶೀತಲ ಗೃಹಗಳನ್ನು ಸ್ಥಾಪಿಸಲಾಗುವುದು.

ಕೃಷಿ ಉತ್ಪನ್ನ ಮಾರುಕಟ್ಟೆಗಳು, ರೈತರ ಉತ್ಪನ್ನಗಳಿಗೆ ಯೋಗ್ಯ ಬೆಲೆ ಒದಗಿಸಿ, ಅವರ ಹಿತ ಕಾಯುವ ಸಂಸ್ಥೆಗಳಾಗಬೇಕು ಎಂಬ ಆಶಯ ಕಾಂಗ್ರೆಸ್  ಸರ್ಕಾರದ್ದಾಗಿದೆ. ಈ ಉದ್ದೇಶದಿಂದ ನಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ರಾಜ್ಯದ ಕೃಷಿ ಉತ್ಪನ್ನ ಮಾರುಕಟ್ಟೆಗಳನ್ನು ಬಲಪಡಿಸಿ, ಆನ್‌ಲೈನ್ ಮಾರುಕಟ್ಟೆ ವ್ಯವಸ್ಥೆಯನ್ನು ದೇಶದಲ್ಲೇ ಮೊದಲ ಬಾರಿಗೆ ಜಾರಿಗೊಳಿಸಲಾಯಿತು.

ಹಿಂದಿನ ಸರ್ಕಾರ (ಬಿಜೆಪಿ )ವು ಎ.ಪಿ.ಎಂ.ಸಿ. ಕಾಯ್ದೆಗೆ ತಿದ್ದುಪಡಿ ಮಾಡುವ ಮೂಲಕ ಸದೃಢ ಮಾರುಕಟ್ಟೆ ಜಾಲವನ್ನು ದುರ್ಬಲಗೊಳಿಸಿ ಎ.ಪಿ.ಎಂ.ಸಿ ಗಳ ಮೇಲೆ ಅವಲಂಬಿತವಾಗಿರುವ ಲಕ್ಷಾಂತರ ರೈತರ ಬದುಕಿನ ಅನಿಶ್ಚಿತತೆಗೆ ಕಾರಣವಾಗಿದೆ. ಎ.ಪಿ.ಎಂ.ಸಿ ಕಾಯ ತಿದ್ದುಪಡಿಯ ಮೊದಲು, 2018-19 ರಲ್ಲಿ ರಾಜ್ಯದ 167 ಕೃಷಿ ಉತ್ಪನ್ನ ಮಾರುಕಟ್ಟೆಗಳ ಒಟ್ಟು ಆದಾಯ 570 ರಿಂದ 600 ಕೋಟಿ ರೂ. ಗಳಷ್ಟಿದ್ದು, 2022-23 ರಲ್ಲಿ ಎ.ಪಿ.ಎಂ.ಸಿ. ಕಾಯ್ದೆ ತಿದ್ದುಪಡಿಯ ನಂತರ ಕೇವಲ 193 ಕೋಟಿ ರೂ.ಗಳಿಗೆ ಕುಸಿದಿದೆ. ಅಲ್ಲದೆ, ಮುಕ್ತ ಮಾರುಕಟ್ಟೆಯಲ್ಲಿ ಖಾಸಗಿ ಸಂಸ್ಥೆಗಳು ರೈತರನ್ನು ವಂಚಿಸಿದ. ಶೋಷಣೆಗೆ ಒಳಪಡಿಸಿದ ಹಲವಾರು ನಿದರ್ಶನಗಳು ನಮ್ಮ ಕಣ್ಣ ಮುಂದಿವೆ. ಈ ಅವ್ಯವಸ್ಥೆಯನ್ನು ಸರಿಪಡಿಸಿ ರೈತರ ಹಿತರಕ್ಷಣೆ ಮಾಡಲು ನಮ್ಮ ಸರ್ಕಾರವು ಸದರಿ ರೈತ ವಿರೋಧಿ ಕಾಯ್ದೆಯನ್ನು ಹಿಂಪಡೆಯಲು ನಿರ್ಧರಿಸಿದೆ.

‘ಕಾಯಕ ನಿಧಿ’ ಯೋಜನೆಯಡಿ ರಾಜ್ಯದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹಮಾಲರು ಮರಣ ಹೊಂದಿದಲ್ಲಿ ಅವರ ಶವಸಂಸ್ಕಾರಕ್ಕಾಗಿ ನೀಡುವ ಮೊತ್ತವನ್ನು 10,000 ರೂ. ಗಳಿಂದ 25,000 ರೂ. ಗಳಿಗೆ ಹೆಚ್ಚಿಸಲಾಗುವುದು.

LEAVE A REPLY

Please enter your comment!
Please enter your name here