ಬಿದಿರು, ವಾಟೆಗಳು ಕಣ್ಮರೆಯ ಹಾದಿಯಲಿ

0
ಚಿತ್ರ – ಲೇಖನ: ನೆಂಪೆ ದೇವರಾಜ್‌, ಹಿರಿಯ ಪತ್ರಕರ್ತರು

ಕಟ್ಟೆ ಬಂದು ಬಿದಿರು ಮತ್ತು ವಾಟೆಗಳು ಸಂಪೂರ್ಣ ನಿರ್ನಾಮವಾದಾಗ ಇದರ ಪರಿಣಾಮ ಬರೀ ಬೇಲಿ – ಬಂಕ ಮಾಡಲು ಮತ್ತು ಮನೆ ಕಟ್ಟಲು ಬೇಕಾದ ಗಳಗಳ ಮೇಲೆ ಮಾತ್ರ ಆಗಲಿಲ್ಲ; ಕಾಳಿಂಗ ಸರ್ಪಗಳ ವಾಸ ಸ್ಥಳದ ಮೇಲೂ ಆಯಿತು ಎಂಬುದನ್ನು ನಾವೆಲ್ಲ ಕೇಳಿದ್ದೇವೆ. ಕಟ್ಟೆಯಿಂದಾಗಿ ಕಗ್ಗಾಡಿನಲ್ಲಿ ಸುಮನೋಹರ ಬದುಕು ಸಾಗಿಸುತ್ತಾ, ರಕ್ಷಣೆಗಾಗಿ ಬಿದಿರನ್ನೇ ಹೊದಿಕೆಯಾಗಿಸಿಕೊಂಡಿದ್ದ ಹಾವುಗಳು ಮನೆ ಮನೆಗಳತ್ತ ಸುತ್ತಾಡುವುದನ್ನು ಕೇಳಿದ್ದೀರಿ, ಓದಿದ್ದೀರಿ.

ಅದಕ್ಕಿಂತಲೂ ಹೆಚ್ಚಾಗಿ ಇದರ ಪರಿಣಾಮ ಉಂಟಾದದ್ದು ಅಡಿಕೆ ಕೊನೆಗಾರರ ಮೇಲೆ. ದೋಟಿಗಾಗಿ ಅಡಿಕೆ ಕೊನೆಗಾರರು ಹುಡುಕುತ್ತಾ ಹೋಗದ ಸ್ಥಳಗಳಿಲ್ಲ.ಮೂಡಿಗೆರೆಯಿಂದ ದಾಂಡೇಲಿಯವರೆಗು ಹೋಗಿ ಇದನ್ನು ತಲಾಶು ಮಾಡಿಕೊಂಡು ಬಂದವರಿದ್ದಾರೆ. ಪಿಕಪ್ ಮತ್ತು ಗೂಡ್ಸಿನಂತಹ ವಾಹನ ಮಾಡಿಕೊಂಡು ಮೂರ್ನಾಲ್ಕು ಜನರು ಸೇರಿಕೊಂಡು ತಂದರೆ ಒಂದಷ್ಟು ಗೀಟಬಲ್ಲುದು. ಅದರೂ ಇತರೆ ಖರ್ಚು, ಲೆಕ್ಕಕ್ಕೆ ಸಿಗದಂತದ್ದು. ಒಬ್ಬರೇ ಒಂದೇ ದೋಟಿಗಾಗಿ ವಾಹನ ಮಾಡಿಕೊಂಡು ಹೋಗಿ ತರುವುದೆಂದರೆ ಆಗಿ ಹೋಗಿ ಬರುವ ಬಾಬತ್ತಲ್ಲ.

ಮೊನ್ನೆ ಮೊನ್ನೆ ನನ್ನ ಗೆಳೆಯರಿಬ್ಬರು ಮೂಡಿಗೆರೆಗೆ ಹೋಗಿ ಕೊನೆ ದೋಟಿಗಳನ್ನು ತಲಾಶು ಮಾಡಿಕೊಂಡು ಬರುವಾಗ ಪಟ್ಟ ಪಡಿಪಾಟಲುಗಳು ಹಸಿರಾಗಿರುವಾಗ ಅವುಗಳು ಅದೆಂತಹ ದುಬಾರಿ ಎಂಬುದು ಗೊತ್ತಾಗುತ್ತದೆ. ದಾಂಡೇಲಿಯವರೆಗೂ ಹೋಗಿ ತಲಾಶು ಮಾಡಿಕೊಂಡು ಬಂದವರಿದ್ದಾರೆ.
ಆದರೀಗ ದೋಟಿಗಳಿಗಾಗಿ ದೂರದ ಊರುಗಳಿಗೆ ಹೋಗುವ ಅಗತ್ಯವಿಲ್ಲ.ನಮ್ಮೂರಿಗೆ ಅಂದರೆ ತೀರ್ಥಹಳ್ಳಿಗೆ ಬಂದು ರಾಸಿ ಹಾಕಿಕೊಂಡಿದ್ದಾರೆ. ಚನ್ನರಾಯಪಟ್ಟಣದಿಂದ ಮೂರ್ನಾಲ್ಕು ಮಂದಿ ಬಂದಿದ್ದಾರೆ.ನೂರಾರು ದೋಟಿಗಳನ್ನು ತಂದಿಟ್ಟಿದ್ದಾರೆ. ಕೊನೆಗಾರರು ಆಯುತ್ತಿದ್ದಾರೆ.

ಇವುಗಳಲ್ಲೆ ಎರಡು ವಿಧ.ತ್ಯಾವೆ ಮತ್ತು ಬಿದಿರಿನ ದೋಟಿಗಳು.ತ್ಯಾವೆಯ ದೋಟಿಗಳು ಬಳುಕಿದರೂ ತುಂಡಾಗುವುದಿಲ್ಲವಂತೆ.ಒಂಚೂರು ಹಗುರವಂತೆ. ಬಿದಿರು ದೋಟಿಗಳು ಬಳುಕುವುದಿಲ್ಲ. ಮುರಿಯುವ ಸಾದ್ಯತೆಯೂ ಹೆಚ್ಚು. ಅದರೆ ನಮ್ಮಂತಹ ಅನನುಭವಿಗಳುಗಳು ಇದನ್ನು ಗುರುತಿಸಲು ಸಾದ್ಯವಿಲ್ಲ. ಇದೆಲ್ಲ ಗೊತ್ತಾಗುವಂತದ್ದಲ್ಲ.

ಒಂದೇ ಬಿದಿರು ಉಡಿಗಳಲ್ಲಿ ಬೆಳೆದ ಕವಲುಗಳ ಆಧಾರದ ಮೇಲೆ ದೋಟಿಗಳ ವಿಂಗಡಣೆ ಮಾಡಿರಬಹುದೆ?ಬೆಲೆ ಸಾವಿರದ ಇನ್ನೂರು ರೂಪಾಯಿಗಳು. ನಿನ್ನೆ ನೋಡಿದ್ದು. ಇವತ್ತು ಖಾಲಿಯಾಗಿದ್ದರೂ ಅಗಿರಬಹುದು.ಫೈಬರ್ ದೋಟಿಗಳ ಆಗಮನದಿಂದ ಇವುಗಳು ಮುಂದಿನ ದಿನಗಳಲ್ಲಿ ಮ್ಯೂಸಿಯಮ್ಮುಗಳ ಆಕರ್ಷಣೆಯ ವಸ್ತುಗಳಾದರೂ ಆಗಬಹುದು.
ಲೇಖಕರು: ನೆಂಪೆ ದೇವರಾಜ್

LEAVE A REPLY

Please enter your comment!
Please enter your name here