
ಸಾಗರ ತಾಲ್ಲೂಕು ವರದಹಳ್ಳಿಯ ಸಮೀಪದ ಮಾವಿನಸರದ ಕೃಷಿಕ ಶ್ರೀಪಾದರಾವ್ ಅವರು ಸುಮಾರು 35 40 ವರ್ಷಗಳಿಂದ ಹೈನುಗಾರಿಕೆಯನ್ನು ಉಪಕಸುಬಾಗಿ ಮಾಡುತ್ತಿದ್ದಾರೆ. ಜಾನುವಾರುಗಳ ಮೇವಿಗೆ 3 ಎಕ್ರೆ ತೆಂಗಿನ ತೋಟದ ಮಧ್ಯೆ ಹಸಿರು ಹುಲ್ಲು (ಕೊ-3 ತಳಿ) ಬೆಳೆಸಿದ್ದಾರೆ. ಇತ್ತೀಚೆಗೆ ಆಳುಗಳ ಕೊರತೆಯಿಂದ ಜಾನುವಾರುಗಳ ಸಂಖ್ಯೆ 15-20 ರಿಂದ 7-8 ಕ್ಕೆ ಇಳಿದಿದೆ. ಅದಕ್ಕೂ ಹಸಿ ಹುಲ್ಲಿನ ಪೂರೈಕೆ ಕಷ್ಟವಾದ ಸಮಯದಲ್ಲಿ ಆಕಸ್ಮಿಕವಾಗಿ ಒದಗಿದ್ದು ‘ಹಾಲುವಾಣ’ ಮೇವು.
ಮುಳ್ಳಿಲ್ಲದ ಹಾಲುವಾಣ:
ಸುಮಾರು 5 ವರ್ಷಗಳ ಹಿಂದೆ ತೆಂಗಿನತೋಟದಲ್ಲಿ ಕಾಳುಮೆಣಸು ನೆಡಲು 3-4 ಜಾತಿಯ ಸ್ಥಳೀಯವಾಗಿ ದೊರಕುವ ಹಾಲುವಾಣಗಳನ್ನು ತಂದು ನೆಟ್ಟರು. ಬಿಳಿ ಹಾಲುವಾಣ, ಮುಳ್ಳಿಲ್ಲದ ಸ್ಥಳೀಯ ಹಾಲುವಾಣ, ಮುಳ್ಳಿರುವ ಹಾಲುವಾಣ…ಹೀಗೆ. ಈ ಸ್ಥಳೀಯ ಹಾಲುವಾಣಗಳಿಗೆ ಎಲೆ ಮುರುಟು (ಇದು ಕೀಟ ಬಾಧೆ; ಬಹುತೇಕ ಸ್ಥಳೀಯ ಹಾಲುವಾಣ ಇರುವಲ್ಲೆಲ್ಲಾ ಬಂದಿತ್ತು, ಈಗಲೂ ಅಲ್ಲಲ್ಲಿ ಇದೆ) ರೋಗ ಬಂದು ಇವರ ತೋಟದಲ್ಲಿ ಸಂಪೂರ್ಣ ನಾಶವಾಯಿತು.
ಹಬ್ಬಿಸಿದ್ದ ಮೆಣಸಿನ ಬಳ್ಳಿಗಳೆಲ್ಲಾ ಜರಿದು ಬಿದ್ದವು. ಆದರೆ ಮುಳ್ಳಿರುವ ಹಾಲುವಾಣಕ್ಕೆ ರೋಗ ಬರದಿದ್ದರೂ ಮುಳ್ಳು ಜಾಸ್ತಿ ಇರುವುದರಿಂದ ಕತ್ತರಿಸುವುದು, ವಿಲೇವಾರಿ ಹಾಗೂ ನಿರ್ವಹಣೆ ಕಷ್ಟವಾಯಿತು. ಹಾಗಾಗಿ ಕೃಷಿ ಗೆಳೆಯರಿಂದ ಮುಳ್ಳಿಲ್ಲದ ಇನ್ನೊಂದು ಜಾತಿಯ ಹಾಲುವಾಣ ತಂದು ಬೆಳೆಸಿದರು. ಇದು ಸಾಗರದ ಕೃಷಿಕ ಜಯಪ್ರಕಾಶ್ ಮತ್ತಿಕೊಪ್ಪ ಅವರು ಚಿಕ್ಕಮಗಳೂರಿನ ಕಾಫಿ ಪ್ಲಾಂಟೇಶನ್‌ನಿAದ ತರಿಸಿ ನೆರಳು ಹಾಗೂ ತಂಪಿಗೆ ತೋಟದ ಸುತ್ತ ಹಾಕಿದ್ದು. ಇವರಿಂದ ಸುತ್ತಮುತ್ತ ಕೃಷಿ ಬಳಗಕ್ಕೆ ಹಬ್ಬಿದೆ.
ವಿಶೇಷ ಗುಣ:
ಇದರ ಕೊಂಬೆಗಳು ದಟ್ಟ, ಎಲೆಗಳೂ ಅಗಲ, ಚಿಗುರು ಬರುವುದೂ ಬೇಗ. ಬೀಜ, ಹೂ ಚಿಕ್ಕದು. ಇನ್ನೊಂದು ವಿಶೇಷ ಸಂಗತಿಯೆAದರೆ ಬೇಗ ಎಲೆ ಉದುರುವುದಿಲ್ಲ. ಆದ್ದರಿಂದ ನೆರಳು ಜಾಸ್ತಿ. ಮತ್ತೊಂದು ವಿಶೇಷವೆಂದರೆ ಇದು ಕಾಳುಮೆಣಸಿಗೆ ಅತ್ಯಂತ ಸೂಕ್ತವಾದ ಹಾಲುವಾಣ. ಸ್ಥಳೀಯ ಹಾಲುವಾಣದಲ್ಲಿ ಎಲೆಗಳು ದಟ್ಟವಿರುವುದಿಲ್ಲ. ವರ್ಷದಲ್ಲೊಮ್ಮೆ ಎಲೆ ಉದುರುತ್ತದೆ. ಆ ಸಮಯದಲ್ಲಿ ಕಾಳುಮೆಣಸು ನೆರಳಿಲ್ಲದೆ ಬಳ್ಳಿ ಸ್ವಲ್ಪ ಸೊರಗುತ್ತದೆ.
ಪಶು ಆಹಾರವಾದ ಬಗೆ:
ಶ್ರೀಪಾದರು ದನಗಳನ್ನು ಮೇಯಲು ಬಿಟ್ಟಾಗ ಈ ಹಾಲುವಾಣದ ಗಿಡಗಳನ್ನು ಎಳೆದು ತಿನ್ನುತ್ತಿದ್ದವು. ಅದರೆಡೆಗೆ ಅಷ್ಟು ಆಕರ್ಷಿತವಾಗಿದ್ದನ್ನು ಕಂಡು ನಾಲ್ಕಾರು ಕೊಂಬೆ(ಎಳೆ) ತಂದು ಹಾಕಿದರು. ಹಸುಗಳು ಎಳೆಯ ದಂಟನ್ನೂ ಬಿಡದೇ ತಿಂದವು. ಸಂಪರ್ಕಿಸಿದ ಪಶುವೈದ್ಯರಿಂದಲೂ ಸಕಾರಾತ್ಮಕ “ಹಾಲುವಾಣವನ್ನು ಕೊಟ್ಟರೆ ಏನೂ ತೊಂದರೆ ಇಲ್ಲ” ಉತ್ತರವೇ ಬಂತು.
ಈಗ ಅವರು ಹೇಳುತ್ತಾರೆ “ಸುಮಾರು 2 ವರ್ಷಗಳಿಂದ ನಿತ್ಯವೂ ಹಸಿರು ಮೇವಿನ ಶೇಕಡ 50ರಷ್ಟು ಈ ಹಾಲುವಾಣವನ್ನೇ ಕೊಡುತ್ತಿದ್ದೇನೆ. ಕಳೆದ ಬೇಸಿಗೆಯ 3 ತಿಂಗಳು ಹಸಿಹುಲ್ಲಿನ ಕೊರತೆಯಾದಾಗ ಪೂರ್ಣಪ್ರಮಾಣದಲ್ಲಿ ಪ್ಲಾಂಟೇಶನ್ ಹಾಲುವಾಣ (ಇದು ಈ ಮುಳ್ಳಿಲ್ಲದ ಹಾಲುವಾಣದ ಇನ್ನೊಂದು ಹೆಸರು, ಮೂಲ ಕಾಫಿ ಪ್ಲಾಂಟೇಶನ್ ಆದ್ದರಿಂದ ಈ ಹೆಸರು!)ವನ್ನೇ ಕೊಟ್ಟಿದ್ದೇನೆ. ಹಸುಗಳ ಆರೋಗ್ಯದಲ್ಲಿ ಯಾವುದೇ ಬದಲಾವಣೆ ಕಂಡುಬAದಿಲ್ಲ. ಹಾಲಿನಲ್ಲಿ ಗಣನೀಯ ಏರಿಕೆ ಕಂಡುಬಂದಿದೆ” ಖಚಿತ ನುಡಿ.
ಬಹುಬಗೆ ಲಾಭ:
ಸಾಮಾನ್ಯವಾಗಿ ಜಾನುವಾರು ಸಾಕುವವರಿಗೆ ಹಸಿಹುಲ್ಲು ಬೆಳೆಯಲು ಜಾಸ್ತಿ ಜಾಗ ಬೇಕು. ಕೊಯ್ಯುವುದಕ್ಕೆ ಮತ್ತು ನಿರ್ವಹಣೆಗೆ ಸಮಯ ಬೇಕು. ಕನಿಷ್ಠ 3-4 ವರ್ಷಕ್ಕೊಮ್ಮೆಯಾದರೂ ಮತ್ತೆ ನೆಡುವ ಅಗತ್ಯವಿದೆ. ಆದರೆ ಕಡಿಮೆ ವಿಸ್ತೀರ್ಣವಿರುವವರಿಗೆ ಈ ಹಾಲುವಾಣ ಉತ್ತಮ ಮೇವಿನ ಬೆಳೆ. ಮುರುಟು ಬಾಧೆಯೂ ಇಲ್ಲ. ವರ್ಷದಲ್ಲಿ ಒಂದು ಗಿಡ ಸುಲಭವಾಗಿ ಮೂರು ಬಾರಿ ಕಟಾವಿಗೆ ಸಿಗುತ್ತದೆ. ಜೊತೆಗೆ ಕಾಳುಮೆಣಸು ಅಥವಾ ವೀಳ್ಯದೆಲೆಯ ಕೃಷಿಯನ್ನೂ ಮಾಡಬಹುದು.
“ಈ ಹಾಲುವಾಣವನ್ನು ಕತ್ತರಿಸುವುದು ಸುಲಭ, ಮೈಕೈ ತರಚು ಗಾಯವಾಗುವುದಿಲ್ಲ. ಹಸಿರುಹುಲ್ಲಿನಂತೆ ಬಗ್ಗಿ ಕೊಯ್ಯುವುದು ಬೇಡ” ಎನ್ನುವುದು ಮನೆಯ ಹೆಣ್ಣಾಳಿನ ಖುಷಿಯ ಸಂಗತಿ.
ಜಾನುವಾರು ಹಸಿರು ಹುಲ್ಲನ್ನು ತಿಂದ ತಕ್ಷಣ ಅದರ ದಂಟಿನ ವಿಲೇವಾರಿ ಹಾಲುವಾಣಕ್ಕಿಂತ ಕಷ್ಟ. ಹಾಲುವಾಣದಲ್ಲಿ 75 % ಭಾಗ ದಂಟನ್ನು ಹಾಗೂ ಹಾಗೂ ಬಲಿತ ದಂಟಿನ ಮೇಲಿನ ಸಿಪ್ಪೆಯನ್ನೂ ಜಾನುವಾರುಗಳು ಸುಲಭವಾಗಿ ತಿನ್ನುತ್ತವೆ. ಉಳಿದ ದಂಟಿನ ಭಾಗ ಎರೆಗೊಬ್ಬರದ ಕಾಂಪೋಸ್ಟ್ ಗುಂಡಿಗೆ. ಬೇಗ ಒಣಗುವುದರಿಂದ ಒಲೆಗೂ ಬಳಕೆ. ಸದ್ಯ ಯಾವುದೇ ರೋಗಬಾಧೆ ಇಲ್ಲ. ಈ ಹಾಲುವಾಣ ಕತ್ತರಿಸಲು ಚಿಕ್ಕ ಏಣಿ ಅಗತ್ಯ. ಈ ತೊಂದರೆಯನ್ನು ಬಿಟ್ಟರೆ ಹಾಲುವಾಣವೇ ಒಳ್ಳೆಯದು ಎನಿಸಿದ್ದರಿಂದ ಶ್ರೀಪಾದರು ಪೂರ್ಣಪ್ರಮಾಣದಲ್ಲಿ ಇದನ್ನೇ ಬಳಸುವ ಯೋಚನೆಯಲ್ಲಿದ್ದಾರೆ.
ಈ ಹಾಲುವಾಣ ಬೆಳೆಸಲು ಕೆಲ ಟಿಪ್ಸ್ಗಳು:
- ಹಾಲುವಾಣದ ಗಿಡಗಳನ್ನು ನೆಡುವಾಗ ಒಂದೂವರೆ ಆಡಿ ಗಾತ್ರದ ಚಚ್ಚೌಕದ ಗುಂಡಿ ಅಗತ್ಯ. ಇದರಿಂದ ಗಿಡಗಳ ಬುಡ ಗಟ್ಟಿಯಾಗುತ್ತದೆ.
2. ನೆಟ್ಟ 2 ವರ್ಷಗಳ ನಂತರವೇ ಕಾಳುಮೆಣಸನ್ನು ಹಬ್ಬಿಸಿ. ಆಗ ಕಾಂಡ ದಪ್ಪವಾಗಿ, ಗಿಡ ಸ್ಥಿರವಾಗುತ್ತದೆ. ಇಲ್ಲದಿದ್ದರೆ ಬಳ್ಳಿ ಬೆಳೆದ ನಂತರ ಗಿಡ ಬೀಳುತ್ತದೆ.
3. ಮಲೆನಾಡಿನಲ್ಲಿ ಸ್ವಲ್ಪ ನೀರು ಗೊಬ್ಬರ ಕೊಟ್ಟರಂತೂ ಚೆನ್ನಾಗಿ ಬೆಳವಣಿಗೆ ಯಾಗುತ್ತದೆ. ಸುಲಭವಾಗಿ 3 ಕೊಯ್ಲು ಮಾಡಬಹುದು.
4. ಗಿಡಗಳ ಅಂತರ ಕನಿಷ್ಟ 10 ಅಡಿ ಇರಬೇಕು