ಕಡಕನಾಥ್ ಕೋಳಿ ಸಾಕಣೆ ತಂದ ಯಶಸ್ಸು

0
Kumara Raitha
ಕುಮಾರ ರೈತ

ಮಧ್ಯಪ್ರದೇಶದ ಅರಣ್ಯಗಳು ಮತ್ತು ಅವುಗಳ ಅಂಚಿನಲ್ಲಿದ್ದ ಬುಡಕಟ್ಟು ಸಮುದಾಯಗಳವರು ಸಾಕಣೆ ಮಾಡುತ್ತಿದ್ದ ಕಡಕನಾಥ್ ಕೋಳಿಗೆ ಈ ಪರಿ ಬೇಡಿಕೆ ಬರಬಹುದೆಂದು ಯಾರೂ ಅಂದಾಜು ಮಾಡಿರಲಿಕ್ಕಿಲ್ಲ. ಪ್ರಸ್ತುತ ಇವುಗಳನ್ನು ಅಗತ್ಯವಿರುವಷ್ಟು ಪ್ರಮಾಣದಲ್ಲಿ ಪೂರೈಕೆ ಮಾಡಲಾಗದಷ್ಟು ಬೇಡಿಕೆ ಇದೆ. ಇದರಿಂದಾಗಿಯೇ ಕರ್ನಾಟಕದಲ್ಲಿ ಇವುಗಳ ಸಾಕಣೆಕೇಂದ್ರಗಳು ಹೆಚ್ಚಾಗುತ್ತಿವೆ.

ಮಂಡ್ಯಜಿಲ್ಲೆ, ಮದ್ದೂರು ಸಮೀಪದ ಬಾಚಹಳ್ಳಿಯ ಕವಿತಾ ಮತ್ತು ರಾಧಾ ಅವರು ಮನೆಯ ಅಗತ್ಯಕ್ಕಾಗಿ ಕಡಕನಾಥ್ ಕೋಳಿ ಸಾಕಣೆ ಮಾಡುತ್ತಿದ್ದರು. ಮುಂದೆ ಇದೇ ಉದ್ಯಮವನ್ನು ಆರಂಭಿಸುತ್ತೇವೆಂದು ಅವರು ಸಹ ಊಹಿಸಿರಲಿಲ್ಲ. ನಿಧಾನವಾಗಿ ಬೇಡಿಕೆ ಹೆಚ್ಚತೊಡಗಿದಾಗ ಈ ಕುರಿತು ಅವರು ಯೋಚಿಸಿ ಕಾರ್ಯಪ್ರವೃತ್ತರಾದರು. ಸಾಕಷ್ಟು ಅಧ್ಯಯನ ಮಾಡಿದರು. ಕೋಳಿ ಸಾಕಣೆಯನ್ನು ಆರೋಗ್ಯಕರವಾಗಿ ನಡೆಸುವ ಬಗ್ಗೆ ಮತ್ತಷ್ಟೂ ವಿವರಗಳನ್ನು ತಿಳಿದುಕೊಂಡರು.

ಆರಂಭದಲ್ಲಿ ಸಣ್ಣಪ್ರಮಾಣದಲ್ಲಿ ಈ ಉದ್ಯಮ ಆರಂಭಿಸಿದರು. ನೋಡುನೋಡುತ್ತಿದ್ದಂತೆ ಉದ್ಯಮ ಬೆಳೆಯುತ್ತಾ ಹೋಯಿತು. ಆರಂಭದಲ್ಲಿ ನೂರೇ ಕೋಳಿಗಳಿದ್ದ ಈ ಘಟಕ ಪ್ರಸ್ತುತ ದೊಡ್ಡ ಘಟಕವಾಗಿ ಬೆಳೆದಿದೆ. ಸಾಕಣೆ ಕಾರ್ಯಕ್ಕಾಗಿ ಸಹಾಯಕರ ನೇಮಕವಾಗಿದೆ. ಒಂದಷ್ಟು ಮಂದಿಗೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಉದ್ಯೋಗವನ್ನೂ ನೀಡಿದೆ. ಇದಕ್ಕೆಲ್ಲ ಕವಿತಾ ಮತ್ತು ರಾಧಾ ಅವರ ಆಸಕ್ತಿ, ಶ್ರದ್ಧೆ, ಶ್ರಮ ಕಾರಣ.

ಸಮೀಪದ ಊರುಗಳಲ್ಲಿ ಕೃಷಿಮೇಳಗಳು ನಡೆದಾಗ ಮಳಿಗೆಗಳನ್ನು ತೆರೆಯುತ್ತಾರೆ. ಅಲ್ಲಿಗೆ ಬರುವ ಸಹಸ್ರಾರು ಮಂದಿ ಆಸಕ್ತರಿಗೆ ಮಾಹಿತಿ ನೀಡುತ್ತಾರೆ. ಈ ಸಂದರ್ಭದಲ್ಲಿ ಕೋಳಿ ಮತ್ತು ಮೊಟ್ಟೆಗಳಿಗೆ ಅಪಾರ ಬೇಡಿಕೆಯಿದೆ. ಹೊರಜಿಲ್ಲೆ ಮತ್ತು ಹೊರರಾಜ್ಯಗಳಿಂದಲೂ ಬೇಡಿಕೆ ಬರುತ್ತಿದೆ. ಇವುಗಳನ್ನು ಸಮರ್ಪಕವಾಗಿ ನಿರ್ವಹಿಸುವ ಸಲುವಾಗಿಯೇ ಆನ್ ಲೈನ್ ನಲ್ಲಿಯೂ ಬೇಡಿಕೆ ಸಲ್ಲಿಸುವಂಥ ವ್ಯವಸ್ಥೆ ಮಾಡಿದ್ದಾರೆ.

ಮೊದಮೊದಲು ಸಾಂಪ್ರದಾಯಿಕ ಮಾದರಿಯಲ್ಲಿಯೇ ಕಡಕನಾಥ್ ಕೋಳಿ ಸಾಕಣೆ ಕೇಂದ್ರವನ್ನು ನಿರ್ವಹಣೆ ಮಾಡುತ್ತಿದ್ದರು. ಆದರೆ ಡಿಮ್ಯಾಂಡ್ ಹೆಚ್ಚಿದಂತೆಲ್ಲ ಅವುಗಳನ್ನು ಪೂರೈಸುವ ಸಲುವಾಗಿ ಮೊಟ್ಟೆಗಳಿಗೆ ಕಾವು ನೀಡಿ ಮರಿ ಮಾಡಲು ಯಾಂತ್ರೀಕೃತ ವ್ಯವಸ್ಥೆ ಅಳವಡಿಸಿದ್ದಾರೆ. ಇದರಿಂದ ಮೊಟ್ಟೆಗಳು ಹಾಳಾಗುವ ಸಂಖ್ಯೆ ಗಣನೀಯವಾಗ ಕಡಿಮೆಯಾಗುತ್ತದೆ. ನಾಟಿಕೋಳಿಗಳ ವರ್ಗಕ್ಕೆ ಸೇರಿದ ಕಡಕನಾಥ್ ತಳಿ ಕೋಳಿಗಳಿಗೆ ಸಹಜವಾಗಿಯೇ ರೋಗ ನಿರೋಧಕ ಶಕ್ತಿ ಹೆಚ್ಚಿದೆ. ಆದರೂ ಮುಂಜಾಗ್ರತಾ ಕ್ರಮವಾಗಿ ಅವುಗಳಗಳ ಆರೋಗ್ಯ ತಪಾಸಣೆಯನ್ನು ನಿಯಮಿತವಾಗಿ ನಡೆಸಲಾಗುತ್ತದೆ. ಅಗತ್ಯವಿರುವಷ್ಟು ಪ್ರಮಾಣದ ಪೌಷ್ಟಿಕ ಆಹಾರ, ನೀರನ್ನು ಸಮಯಕ್ಕೆ ಸರಿಯಾಗಿ ಒದಗಿಸಲಾಗುತ್ತಿದೆ.

ಕವಿತಾ ಮತ್ತು ರಾಧಾ ಅವರು ಪಟ್ಟ ಪರಿಶ್ರಮ ಫಲ ನೀಡಿದೆ. ಮಹಿಳಾ ಸಬಲೀಕರಣಕ್ಕೊಂದು ಉತ್ತಮ ಉದಾಹರಣೆಯೂ ಆಗಿದೆ. ಅವರು ನಡೆಸುವ ಉದ್ಯಮ ಬೆಳೆಯುತ್ತಾ ಸಾಗಿದೆ. ” ಸರ್ಕಾರದಿಂದ ಸೂಕ್ತ ಪ್ರೋತ್ಸಾಹ ದೊರೆತರೆ ಈ ಉದ್ಯಮವನ್ನು ಇನ್ನೂ ದೊಡ್ಡ ಪ್ರಮಾಣದಲ್ಲಿ ಮಾಡಬಹುದು. ಅನೇಕರಿಗೆ ಉದ್ಯೋಗಗಳನ್ನು ನೀಡಬಹುದು” ಎಂದು ರಾಧಾ ಅಭಿಪ್ರಾಯಪಡುತ್ತಾರೆ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: ಮೊ: 99027 77375

LEAVE A REPLY

Please enter your comment!
Please enter your name here