ಪ್ರಕೃತಿ ವಿಕೋಪ; ಕೈಗೊಳ್ಳಬೇಕಾದ ಮುಂಜಾಗ್ರತೆ

ಎಷ್ಟೋ ಬಾರಿ ಮುನ್ಸೂಚನೆ ನೀಡಿದ್ದರೂ ಅಗತ್ಯ ಮುಂಜಾಗ್ರತೆ ಕ್ರಮಗಳ ಅರಿವಿಲ್ಲದೇ ಅತೀ ಹೆಚ್ಚು ಹಾನಿ ಸಂಭವಿಸಿದ್ದೂ ಇದೆ. ಇದೇ ಕಾರಣದಿಂದ ಹವಾಮಾನ ಇಲಾಖೆ ಹಾಗೂ ವಿಕೋಪ ನಿರ್ವಹಣಾ ಸಂಸ್ಥೆ ಎಚ್ಚರಿಕೆ ನೀಡಿದಾಗ ನಿರ್ಲಕ್ಷವಹಿಸದೇ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು ಬಹಳ ಮುಖ್ಯ.

0
ಲೇಖಕರು: ಸಹನಾ ಶ್ರೀಧರ್ ಹೆಗಡೆ, ಕೃಷಿವಿಜ್ಞಾನಿ

ಇತ್ತೀಚಿನ ದಿನಗಳಲ್ಲಿ ಹವಾಮಾನ ವೈಪರೀತ್ಯಗಳು ಅಧಿಕವಾಗುತ್ತಿದ್ದು ಪ್ರತೀ ವರ್ಷ ಅನೇಕ ಜನರು ಪರದಾಡುವಂತಾಗುತ್ತಿದೆ. ದೇಶದಾದ್ಯಂತ ಪ್ರವಾಹ, ಭೂಕುಸಿತ, ಬರ, ಚಂಡಮಾರುತ, ಬಿಸಿಗಾಳಿ, ಸಿಡಿಲು ಹೀಗೆ ಅನೇಕ ಪ್ರಕೃತಿ ವಿಕೋಪಗಳು ಒಂದಿಲ್ಲೊಂದು ಪ್ರದೇಶದಲ್ಲಿ ಘಟಿಸುತ್ತಲಿವೆ. ಇಂತಹ ಸಂದರ್ಭಗಳಲ್ಲಿ ಭಾರತೀಯ ಹವಾಮಾನ ಇಲಾಖೆ ಹಾಗೂ ವಿಕೋಪ ನಿರ್ವಹಣಾ ಸಂಸ್ಥೆಯ ಸಮಯೋಚಿತ ಮುನ್ಸೂಚನೆ ಮತ್ತು ಮುಂಜಾಗ್ರತಾ ಕ್ರಮಗಳಿಂದಾಗಿ ಪ್ರಾಣ ಹಾನಿ ಕಡಿಮೆಯಾಗುತ್ತಿದೆ. ಆರ್ಥಿಕ ನಷ್ಟದಲ್ಲಿಯೂ ಇಳಿಕೆಯಾಗುತ್ತಿದೆ.
ರಾಜ್ಯದಲ್ಲಿ ಕಳೆದ ಎರಡು ವರ್ಷಗಳಿಂದ ಸತತವಾಗಿ ಆಗಸ್ಟ್ ತಿಂಗಳಿನಲ್ಲಿ ಪ್ರವಾಹ ಮತ್ತು ಭೂಕುಸಿತದಂತಹ ವಿಕೋಪಗಳು ಘಟಿಸಿವೆ. ಈ ವರ್ಷವೂ ಹವಾಮಾನ ಇಲಾಖೆಯು ಆಗಸ್ಟ್ ತಿಂಗಳಿನ ಮೊದಲೆರಡು ವಾರದಲ್ಲಿ ಕರಾವಳಿ ಹಾಗೂ ಮಲೆನಾಡು ಪ್ರದೇಶಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ನೀಡಿದೆ. ಇದರಿಂದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಅತ್ಯವಶ್ಯಕವಾಗಿದೆ.
ಎಷ್ಟೋ ಬಾರಿ ಮುನ್ಸೂಚನೆ ನೀಡಿದ್ದರೂ ಅಗತ್ಯ ಮುಂಜಾಗ್ರತೆ ಕ್ರಮಗಳ ಅರಿವಿಲ್ಲದೇ ಅತೀ ಹೆಚ್ಚು ಹಾನಿ ಸಂಭವಿಸಿದ್ದೂ ಇದೆ. ಇದೇ ಕಾರಣದಿಂದ ಹವಾಮಾನ ಇಲಾಖೆ ಹಾಗೂ ವಿಕೋಪ ನಿರ್ವಹಣಾ ಸಂಸ್ಥೆ ಎಚ್ಚರಿಕೆ ನೀಡಿದಾಗ ನಿರ್ಲಕ್ಷವಹಿಸದೇ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು ಬಹಳ ಮುಖ್ಯ.


ಪಶ್ಚಿಮ ಘಟ್ಟಗಳಲ್ಲಿ ಇತ್ತೀಚಿಗೆ ಪ್ರಮುಖವಾಗಿ ಪ್ರವಾಹ ಹಾಗೂ ಭೂಕುಸಿತದ ಸಾದ್ಯತೆ ಅಧಿಕವಾಗಿದೆ. ಪ್ರವಾಹದ ಕಾರಣಗಳು ಅನೇಕವಿದ್ದರೂ ಮುಖ್ಯವಾಗಿ ಅತಿ ಹೆಚ್ಚು ಮಳೆ ಹಾಗೂ ನೀರಿನ ಹರಿವಿಗೆ ಅಡೆತಡೆಗಳಾದಾಗ ನೀರಿನ ಮಟ್ಟ ಹೆಚ್ಚಳವಾಗಿ ಪ್ರವಾಹ ಪರಿಸ್ಥಿತಿ ಉಂಟಾಗುತ್ತದೆ. ಇಂತಹ ಸಂದರ್ಭಗಳಲ್ಲಿ ತೆಗೆದುಕೊಳ್ಳುವ ಕೆಲವು ನಿರ್ಧಾರಗಳು ಅನೇಕ ಜನರ ಜೀವ ಹಾಗೂ ಆಸ್ತಿಗಳನ್ನು ಸಂರಕ್ಷಿಸಿಕೊಳ್ಳಲು ಸಹಕಾರಿಯಾಗಿದೆ.
ಪ್ರವಾಹಕ್ಕೂ ಮೊದಲು ಅನುಸರಿಸಬೇಕಾದ ಕ್ರಮಗಳು:
• ಹವಾಮಾನ ಇಲಾಖೆಯವರು ನೀಡುವ ಮುನ್ಸೂಚನೆಯ ಮಾಹಿತಿಯನ್ನು ಆಗಾಗ ತಿಳಿದುಕೊಳ್ಳಬೇಕು.
• ಪ್ರಥಮ ಚಿಕಿತ್ಸೆಗೆ ಬೇಕಾಗುವ ವಸ್ತುಗಳು (First aid kit), ನೀರಿನ ಬಾಟಲಿ, ಟಾರ್ಚ್, ರೇಡಿಯೋ, ಹೀಗೆ ತುರ್ತು ಪರಿಸ್ಥಿತಿಯಲ್ಲಿ ಬೇಕಾಗುವ ಸಾಮಾನುಗಳನ್ನು ಸಿದ್ಧವಾಗಿಟ್ಟುಕೊಂಡಿರಬೇಕು.
• ಮನೆಯ ಹಾಗೂ ಊರಿನಿಂದ ಹೊರಹೋಗುವ ಬದಲಿ ರಸ್ತೆಗಳನ್ನು ತಿಳಿದಿಟ್ಟುಕೊಳ್ಳುವುದು ಉತ್ತಮ
• ಪ್ರವಾಹದ ಸಾದ್ಯತೆಯಿರುವ ಪ್ರದೇಶವಾಗಿದ್ದರೆ ಏಣಿ, ಹಗ್ಗ ಹಾಗೂ ಮರಳಿನ ಚೀಲವನ್ನು ಮನೆಯಲ್ಲಿ ಇಟ್ಟುಕೊಳ್ಳಬೇಕು.
• ದನ ಕರು ಹಾಗೂ ಸಾಕುಪ್ರಾಣಿಗಳನ್ನು ಸುರಕ್ಷಿತ ಸ್ಥಳಗಳನ್ನು ಇರಿಸಕೊಳ್ಳಬೇಕು. ಹಗ್ಗ, ಚೈನಿನಿಂದ ಕಟ್ಟಿಹಾಕದೇ ಇರುವುದು ಅವುಗಳ ದೃಷ್ಟಿಯಿಂದ ಕ್ಷೇಮ. ಇದರಿಂದ ಅವುಗಳು ಪ್ರವಾಹ – ಭೂ ಕುಸಿತದ ಅಪಾಯದಿಂದ ಸಾಧ್ಯವಾದಷ್ಟು ಮಟ್ಟಿಗೆ ಪಾರಾಗಲು ನೆರವಾಗುತ್ತದೆ.
ಪ್ರವಾಹದ ಸಮಯದಲ್ಲಿ ಅನುಸರಿಸಬೇಕಾದ ಕ್ರಮಗಳು:
• ವಿದ್ಯುತ್ ಹಾಗೂ ಗ್ಯಾಸ್ ಗಳನ್ನು ಆಫ್ ಮಾಡಬೇಕು
• ವಿಕೋಪ ನಿರ್ವಹಣಾ ತಂಡ ಮತ್ತು ಜಿಲ್ಲಾಡಳಿತ ಮನೆಯನ್ನು ಖಾಲಿ ಮಾಡಲು ಸೂಚನೆಯನ್ನು ನೀಡಿದರೆ ಅಗತ್ಯ ವಸ್ತುಗಳೊಂದಿಗೆ ಆದಷ್ಟು ಬೇಗ ಮನೆಯಿಂದ ಹೊರಡಬೇಕು.
• ಮರಳಿನ ಚೀಲದಿಂದ ಶೌಚಾಲಯದ ಗುಂಡಿಗಳನ್ನು ಮುಚ್ಚುವುದರಿಂದ ನೀರು ಕಲುಷಿತಗೊಳ್ಳುವುದನ್ನು ತಡೆಯಬಹುದು
• ನಿಂತ ನೀರಿನಲ್ಲಿ ಗುಂಡಿಗಳು ಕಾಣದಿರುವುದರಿಂದ ಹಾಗೂ ಕಲುಷಿತ ನೀರು ಸೇರಿ ಚರ್ಮಕ್ಕೆ ಹಾನಿಯಾಗುವ ಸಾದ್ಯತೆಯಿರುವುದರಿಂದ ಆದಷ್ಟು ನೀರು ನಿಂತಿರುವ ಜಾಗದಲ್ಲಿ ಓಡಾಡುವುದನ್ನು ತಪ್ಪಿಸಿ
ಪ್ರವಾಹದ ನಂತರ ಅನುಸರಿಸಬೇಕಾದ ಕ್ರಮಗಳು:
• ಎಲೆಕ್ಟ್ರಿಕ್ ಲೈನ್ ಗಳು ಮುರಿದು ಬಿದ್ದ ಜಾಗದಲ್ಲಿ ನಡೆದಾಡಬಾರದು ಹಾಗೂ ಅದು ನೀರಿಗೆ ತಾಗಿದ್ದರೆ ಆದಷ್ಟು ಶೀಘ್ರ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಿ.
• ಪ್ರವಾಹದ ನೀರಿನಲ್ಲಿ ವಿಷಜಂತುಗಳು ಹರಿದಾಡುವ ಸಾದ್ಯತೆ ಹೆಚ್ಚಿರುವುದರಿಂದ ಎಚ್ಚರದಿಂದಿರಿ
• ಮನೆಯನ್ನು ಸೋಂಕು ನಿವಾರಕ ಪುಡಿ ಅಥವಾ ಬ್ಲೀಚಿಂಗ್ ಪುಡಿಯಿಂದ ಸ್ವಚ್ಛಗೊಳಿಸಿದ ನಂತರ ವಾಸಮಾಡಬೇಕು.
• ಆದಷ್ಟು ಕುದಿಸಿ ಆರಿಸಿದ ನೀರನ್ನೇ ಕುಡಿಯಲು ಬಳಸಿ
ಭೂಕುಸಿತದ ಮುಂಜಾಗ್ರತ ಕ್ರಮಗಳು
ಭೂಕುಸಿತದ ಸೂಚನೆಗಳು ಹಾಗೂ ಲಕ್ಷಣಗಳು


ಭೂಕುಸಿತದ ಮುನ್ನ ಕೆಲವು ಲಕ್ಷಣಗಳು ಅದರ ಸೂಚನೆಯನ್ನು ನೀಡುತ್ತದೆ. ಉದಾಹರಣೆಗೆ
• ಮಣ್ಣು ಶೇಖರಣೆ ಆಗುವುದರಿಂದ ಬಾಗಿಲು ಅಂಟಿಕೊಂಡು ತೆರೆಯಲು ಕಷ್ಟವಾಗಬಹುದು
• ಮರಗಿಡಗಳು ಹಾಗೂ ಮನೆಯ ಗೋಡೆ ತುಸು ವಾಲಿದ ಅನುಭವವಾಗಬಹುದು
• ರಸ್ತೆ ಹಾಗೂ ಇಳಿಜಾರುಗಳಲ್ಲಿ ಬಿರುಕು ಕಾಣಿಸಿಕೊಳ್ಳಬಹುದು
• ಕೆರೆ ಹೊಳೆಗಳಲ್ಲಿ ಇದ್ದಕ್ಕಿದ್ದ ಹಾಗೆ ನೀರಿನ ಪ್ರಮಾಣ ಅಧಿಕವಾಗುವುದು
• ಕುಸಿತದ ಸದ್ದು ಕೇಳಿಬರುವುದು
ಭೂಕುಸಿತದ ಪ್ರದೇಶಗಳಲ್ಲಿ ಅನುಸರಿಸಬೇಕಾದ ಸೂತ್ರಗಳು
• ಬೆಟ್ಟಗುಡ್ಡದ ಇಳಿಜಾರಿನಲ್ಲಿ ಮನೆಗಳನ್ನು ಕಟ್ಟಬಾರದು
• ಇಳಿಜಾರಿನಲ್ಲಿ ಆದಷ್ಟು ಮರಗಿಡಗಳನ್ನು ಬೆಳೆಸಬೇಕು
• ಎಲ್ಲಿಯಾದರೂ ಬಿರುಕು ಕಂಡುಬಂದಲ್ಲಿ ಹತ್ತಿರ ಹೋಗಿ ಪರೀಕ್ಷಿಸುವ ಸಾಹಸ ಮಾಡಬಾರದು
ಭೂಕುಸಿತದ ಮುನ್ನ ಕೈಗೊಳ್ಳಬೇಕಾದ ಕ್ರಮಗಳು
• ಹವಾಮಾನದ ಮುನ್ಸೂಚನೆ ಹಾಗೂ ಎಚ್ಚರಿಕೆಗಳನ್ನು ಗಮನದಲ್ಲಿರಿಸಿ ಜಾಗೃತರಾಗಿರಿ
• ಮುಂಜಾಗ್ರತೆಗೆ ಬೇಕಾಗಿರುವ ಪ್ರಥಮ ಚಿಕಿತ್ಸೆ, ನೀರು, ಆಹಾರ, ಟಾರ್ಚ್ ಮುಂತಾದವುಗಳನ್ನು ತಯಾರಿಟ್ಟುಕೊಳ್ಳಿ.
• ಭೂಕುಸಿತದಂತಹ ವಿಕೋಪವಾದಾಗ ಕ್ರಮ ತೆಗೆದುಕೊಳ್ಳಲು ಅತೀ ಕಡಿಮೆ ಸಮಯ ದೊರಕುವುದರಿಂದ ಭೂಕುಸಿತದ ಸೂಚನೆ ಸಿಗುವ ಮೊದಲು ಅಥವಾ ಸಿಕ್ಕ ತಕ್ಷಣ ಆ ಜಾಗವನ್ನು ಬಿಡುವುದು ಒಳ್ಳೆಯದು
ಭೂಕುಸಿತದ ಸಮಯದಲ್ಲಿ ಅನುಸರಿಸಬೇಕಾದ ಕ್ರಮಗಳು
• ಆದಷ್ಟು ಬೇಗ ಸುರಕ್ಷಿತ ಜಾಗವನ್ನು ಸೇರಿಕೊಳ್ಳಬೇಕು
• ಭೂಕುಸಿತದ ಸ್ಥಳದಲ್ಲೆ ಇದ್ದು ತಪ್ಪಿಸಿಕೊಳ್ಳಲು ಕಾಲಾವಕಾಶ ಇಲ್ಲದಿದ್ದಾಗ ಆದಷ್ಟು ತಲೆಯನ್ನು ರಕ್ಷಿಸಿಕೊಳ್ಳುವ ಪ್ರಯತ್ನ ಮಾಡಿ
ಭೂಕುಸಿತದ ನಂತರ ಕೈಗೊಳ್ಳಬೇಕಾದ ಕ್ರಮಗಳು
• ಭೂಕುಸಿತವಾದ ಸ್ಥಳಗಳು ಸುರಕ್ಷಿತವೆಂದು ವಿಕೋಪ ನಿರ್ವಹಣಾ ವಿಭಾಗದಿಂದ ಸೂಚನೆ ದೊರೆತರೆ ಮಾತ್ರ ಆ ಪ್ರದೇಶಗಳಿಗೆ ತೆರಳಿ
• ಮನೆಯನ್ನು ಪ್ರವೇಶಿಸುವ ಮುನ್ನ ವಿದ್ಯುತ್ ಸಂಪರ್ಕ ಹಾಗೂ ಗೋಡೆಗಳನ್ನು ಪರೀಕ್ಷಿಸಿದ ನಂತರವೇ ಪ್ರವೇಶಿಸಿ
ಮೇಲಿನ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವ ಮೂಲಕ ವಿಕೋಪಗಳಿಂದಾಗುವ ಹಲವು ಅನಾಹುತಗಳನ್ನು ತಡೆಯಬಹುದು. ಜೊತೆಗೆ ಪ್ರಕೃತಿ ವಿಕೋಪ ಸಹಾಯವಾಣಿ ಸಂಖ್ಯೆಯನ್ನು ಹಾಗೂ ವಿಕೋಪದ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಮಾರ್ಗಸೂಚಿಗಳ ಬಗ್ಗೆ ಮನೆಯ ಎಲ್ಲ ಸದಸ್ಯರೊಂದಿಗೆ ಚರ್ಚಿಸಿ ಅವರಿಗೂ ತಿಳಿ ಹೇಳಿದರೆ ಮುಂದೆ ಗಾಬರಿಯಲ್ಲಿ ಉಂಟಾಗುವ ಅನೇಕ ಗೊಂದಲಗಳನ್ನು ಕಡಿಮೆ ಮಾಡಬಹುದು.

LEAVE A REPLY

Please enter your comment!
Please enter your name here