ಕಾಂಕ್ರಿಟ್ ಕಾಡುಗಳ ನಡುವೆ ಕೈತೋಟಗಳು ಕಾಣಿಸುವುದು ಅಪರೂಪ. ಅದರಲ್ಲಿಯೂ ತುಂಬ ವ್ಯವಸ್ಥಿತವಾದ ಯೋಜನೆ ಮಾಡಿ ಸಾಧ್ಯವಿರುವಷ್ಟು ಸಸ್ಯಗಳನ್ನು ಬೆಳೆಸುವುದು ಸವಾಲೇ ಸರಿ. ಇಂಥ ಸವಾಲು ಸ್ವೀಕರಿಸಿ ಅತ್ಯುತ್ತಮ ಕೈತೋಟ ಮಾಡಿರುವ ಬೆಂಗಳೂರು, ಬನಶಂಕರಿ ನಿವಾಸಿ ಡಾ. ಮೈತ್ರಿ ಶಂಕರ್ ಅವರಿಗೆ ಪ್ರತಿಷ್ಠಿತ ಆಸ್ಪೀ ಪ್ರಶಸ್ತಿ ಲಭಿಸಿದೆ.
ಬೆಂಗಳೂರಿನಲ್ಲಿಂದು (ಮೇ 5, 2019) ಆಸ್ಪೀ ಪ್ರತಿಷ್ಠಾನ ಆಯೋಜಿಸಿದ ಸಮಾರಂಭದಲ್ಲಿ ಡಾ. ಮೈತ್ರಿ ಶಂಕರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಜೊತೆಗೆ ಇವರ ಪತಿ ಉದಯಶಂಕರ್ ಅವರನ್ನೂ ಪತ್ನಿಯ ಯಶಸ್ಸಿಗೆ ನಿರಂತರ ಪ್ರೋತ್ಸಾಹ, ಸಹಕಾರ ನೀಡುತ್ತಿರುವ ದೃಷ್ಟಿಯಿಂದ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಶಸ್ತಿ ವಿಜೇತರು ‘ಇಂಥ ಯಾವುದೇ ಪ್ರಶಸ್ತಿಯನ್ನೂ ನಿರೀಕ್ಷೆ ಮಾಡಿರಲಿಲ್ಲ. ಕ್ಯಾನ್ಸರ್ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ತಾನು, ಗಿಡ-ಮರ-ಬಳ್ಳಿಗಳ ಒಡನಾಟದಲ್ಲಿಯೂ ಖುಷಿ ಕಂಡುಕೊಂಡಿದ್ದೇನೆ. ಪ್ರಯತ್ನಗಳ ಮೇಲೆ ಪ್ರಯತ್ನಗಳನ್ನು ಮಾಡಿದ ನಂತರ ಕೈತೋಟಕ್ಕೊಂದು ವ್ಯವಸ್ಥಿತ ಸ್ವರೂಪ ದೊರೆತಿದೆ.
“ತರಕಾರಿ, ಹಣ್ಣಿನಗಿಡಗಳು, ಬಳ್ಳಿಗಳು, ಹೂವಿನ ಗಿಡಗಳು, ಚಿಟ್ಟೆಗಳನ್ನು ಆಕರ್ಷಿಸುವ ಸಸ್ಯಗಳನ್ನು ಬೆಳೆದಿದ್ದೇನೆ. ಅಲ್ಪಾವಧಿಯಲ್ಲಿ ಕೊಯ್ಲಿಗೆ ಬರುವಂಥ ಸಸ್ಯಗಳನ್ನು ಕೃಷಿ ಮಾಡುತ್ತಿದ್ದು, ಅವುಗಳನ್ನು ಮೂರು ತಿಂಗಳಿಗೊಮ್ಮೆ ಬದಲಾಯಿಸುತ್ತೇನೆ. ನಿರಂತರವಾಗಿ ಗಿಡ-ಬಳ್ಳಿಗಳನ್ನು ಒಡನಾಟದಲ್ಲಿರುವುದು ಮೈಮನಗಳ ನೆಮ್ಮದಿಗೆ ಪೂರಕವಾಗಿರುತ್ತದೆ” ಎಂದು ಅಭಿಪ್ರಾಯಪಟ್ಟರು.
ಕೃಷಿವಲಯದಲ್ಲಿ ತಮ್ಮ ಸಾಧನೆಯಿಂದ ಖ್ಯಾತರಾಗಿರುವ, 2002ರ ಸಾಲಿನಲ್ಲಿ ಆಸ್ಪೀ ಅವಾರ್ಡ್ ಪುರಸ್ಕೃತರು ಆಗಿರುವ ಆಶಾ ಶೇಷಾದ್ರಿ ಅವರು ಆಸ್ಪೀ ಪ್ರಶಸ್ತಿಗೆ ಆಯ್ಕೆ ಮಾಡುವುದರಲ್ಲಿ ಪಾರದರ್ಶಕತೆ ಇದೆ. ಸ್ಥಳಭೇಟಿ, ತಜ್ಞರ ಅಭಿಪ್ರಾಯ ಸಂಗ್ರಹಣೆ ಮತ್ತು ಸಂದರ್ಶನಗಳ ನಂತರ ಪ್ರಶಸ್ತಿಗೆ ಅರ್ಹರಾದವರನ್ನು ಆಯ್ಕೆ ಮಾಡಲಾಗುತ್ತದೆ. ಡಾ. ಮೈತ್ರಿ ಶಂಕರ್ ಅವರಿಗೆ ನಗರ ಪ್ರದೇಶದ ಕಿಚನ್ ಗಾರ್ಡನ್ ವಿಭಾಗದಲ್ಲಿ ಪ್ರಶಸ್ತಿ ದೊರೆತಿದೆ ಎಂದು ವಿವರಿಸಿದರು.
ಆಸ್ಪೀ ಪ್ರತಿಷ್ಠಾನದ ಕಿರಣ್ ಪಟೇಲ್ ಮಾತನಾಡಿ ಈ ಬಾರಿ ಕೈತೋಟ ವಿಭಾಗದಲ್ಲಿ ಪ್ರಶಸ್ತಿಗೆ ಆಯ್ಕೆ ಮಾಡುವುದು ತುಂಬ ಕಠಿಣವಾದ ಕಾರ್ಯವಾಗಿತ್ತು. ಇಬ್ಬರು ಮಹಿಳೆಯರಿಗೆ ಸಮಾನ ಅಂಕಗಳು ದೊರೆತಿದ್ದವು. ಇವರಲ್ಲಿ ಒಬ್ಬರು ಮಹಾರಾಷ್ಟ್ರದ ಗ್ರಾಮೀಣ ಭಾಗದ ಕೃಷಿಮಹಿಳೆ ಮಾಧುರಿ ಮಾಧವ, ಮತ್ತೊಬ್ಬರು ಬೆಂಗಳೂರು ನಗರದ ವೈದ್ಯೆ ಮೈತ್ರಿ ಶಂಕರ್. ಒಬ್ಬರ ಆಯ್ಕೆ ಕಠಿಣವಾಗಿದ್ದರಿಂದ ಇಬ್ಬರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. ಮೈತ್ರಿ ಅವರಿಗೆ ಬೆಂಗಳೂರಿನಲ್ಲಿಯೇ ಪ್ರಶಸ್ತಿ ವಿತರಣೆ ಮಾಡಲಾಗುತ್ತಿದೆ ಎಂದರು. ಈ ಸಾಧಕ ಮಹಿಳೆಯರಿಬ್ಬರ ಸಾಧನೆಗಳನ್ನು ಪರಿಚಯಿಸುವ ಡಾಕ್ಯುಮೆಂಟರಿಗಳ ಪ್ರದರ್ಶನವೂ ಇತ್ತು.
ಇದೇ ಸಂದರ್ಭದಲ್ಲಿ ಕಿರಣ್ ಪಟೇಲ್ ಅವರು ಆಸ್ಪೀ ಪ್ರತಿಷ್ಠಾನದ ಕಾರ್ಯಗಳ ಬಗ್ಗೆಯೂ ವಿವರಣೆ ನೀಡಿದರು. ಕೃಷಿಕ್ಷೇತ್ರದ ವಿವಿಧ ವಿಭಾಗಗಳಲ್ಲಿ ಪ್ರತಿಷ್ಠಾನ ಕೆಲಸ ಮಾಡುತ್ತಿದ್ದು, ಸುಸ್ಥಿರ ಕೃಷಿಗೆ ತನ್ನದೇ ಆದ ಕಾಣಿಕೆ ನೀಡುತ್ತಿದೆ. ಕೃಷಿ-ವಾಣಿಜ್ಯ ಕಾಲೇಜುಗಳನ್ನು ಸ್ಥಾಪಿಸಿ ನಿರ್ವಹಿಸಲಾಗುತ್ತಿದೆ ಎಂದರು.
ಈ ಹಿಂದಿನ ಸಾಲುಗಳಲ್ಲಿ ಕರ್ನಾಟಕ ರಾಜ್ಯದಿಂದ ಆಸ್ಪೀ ಪ್ರಶಸ್ತಿಗೆ ಪಾತ್ರರಾದ ಕೃಷಿಸಾಧಕರನ್ನೂ ಸಮಾರಂಭಕ್ಕೆ ಆಹ್ವಾನಿಸಿ, ಮತ್ತೊಮ್ಮೆ ಅಭಿನಂದನೆ ಸಲ್ಲಿಸಿದ್ದು ವಿಶೇಷವಾಗಿತ್ತು. ಆಸ್ಪೀ ಪ್ರಧಾನ ವಿತರಕರಾಗಿರುವ ಬೆಂಗಳೂರು ನಗರದ ಎಸ್.ವಿ.ರಂಗಸ್ವಾಮಿ ಆ್ಯಂಡ್ ಕಂಪನಿ ಪ್ರೈವೇಟ್ ಲಿಮಿಟೆಡ್ ಹಿರಿಯ ಮಾರುಕಟ್ಟೆ ಅಧಿಕಾರಿ ಎಸ್. ಶಂಕರರಾವ್ ಅವರು ಸ್ವಾಗತ ಭಾಷಣ ಮಾಡಿದರು.
ವೇದಿಕೆಯಲ್ಲಿ ಆಶಾ ಶೇಷಾದ್ರಿ, ರಾಜ್ಯ ತೋಟಗಾರಿಕೆ ಇಲಾಖೆಯ ನಿವೃತ್ತ ಅಪರ ನಿರ್ದೇಶಕ ಎಸ್.ವಿ. ಹಿತ್ತಲಮನಿ, ಬೆಂಗಳೂರು ನಗರ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಡಾ. ದೇವರಾಜ್, ಆಸ್ಪೀ ಪ್ರತಿಷ್ಠಾನದ ಕಿರಣ್ ಪಟೇಲ್, ಎಸ್.ವಿ.ರಂಗಸ್ವಾಮಿ ಆ್ಯಂಡ್ ಕಂಪನಿ ಪ್ರೈವೇಟ್ ಲಿಮಿಟೆಡ್ ನಿರ್ದೇಶಕ ಎಸ್.ಆರ್. ಶ್ರೀನಿವಾಸ್ ಸಮಾರಂಭದಲ್ಲಿ ಉಪಸ್ಥಿತರಾಗಿದ್ದರು.