ಸತ್ತಲ್ಲಿ ಹುಟ್ಟುವ ಸಂಭ್ರಮ

0

ಲೇಖಕರು: ಶಿವಾನಂದ ಕಳವೆ

ಸಿಡಿಲಿನ ಪ್ರಹಾರಕ್ಕೆ ಸುಮಾರು 180 ವರ್ಷದ ಹೊನ್ನೆ ಸಾವನ್ನಪ್ಪಿತು. ದೊಡ್ಡ ಮರವೆಂದು ಫಲಕ ಹಾಕಿದ್ದೆ ಸತ್ತಿದ್ದು ಬೇಜಾರಾಯ್ತು. ಮರದ ಪಕ್ಕವೇ ಇದ್ದ ಗೊಂಬಳೆ,ಸಳ್ಳೆ, ಜಂಬೆ, ಮಸೆ ಮರ ಗಿಡಗಳು ಒಣಗಿದವು. ಮಳೆಗಾಲದ ಶುರುವಿನಲ್ಲಿ ಈ ಸಾವು ಘಟಿಸಿದೆ, ಈಗ ಆರೇಳು ತಿಂಗಳು ಕಳೆದಿದೆ.

ಇಂದು ಒಣಗಿ ನಿಂತ ಮರದ ಕೆಳಗಡೆ ಚಂದಕಲು (ಉಪ್ಪು ಚಂದ್ರಿಕೆ), ಹೊಳೆ ಗೇರು, ನಡ್ತೆ (ದಿಪ್ಪಡಿಗೆ), ತಗ್ಗಿ, ಗಾಳಿ ಮುಂತಾದ ಗಿಡಗಳು ಬಹಳ ಸೊಂಪಾಗಿ ಹುಟ್ಟಿ ಬೆಳೆದಿವೆ.

ಹಿರಿಯರ ಸಿಡಿಲ ಹತ್ಯೆಯ ನೋವಿನ ನೆರಳಿನಲ್ಲಿ ಖುಷಿಯಲ್ಲಿ ನಗುತ್ತಿವೆ.ಮಿಂಚು ಗುಡುಗಿನ ಮಳೆ ಬಿದ್ದ ಮೂರು ನಾಲ್ಕು ದಿನಕ್ಕೆ ಇಡೀ ಕಾಡು ಚೆಂದ ಚಿಗುರಿ ಬೆಳೆಯುವುದನ್ನು ಗಮನಿಸಿರಬಹುದು. ಗಾಳಿಯ ಮೂಲಕ ಗೊಬ್ಬರ ಸಿಂಪರಣೆ ನಡೆದಂತೆ ಮಿಂಚಿನ ಲಾಭ ಗಿಡಗಳಿಗೆ ದೊರೆಯುತ್ತದೆ. ಆದರೆ ಸಿಡಿಲಿನ ಪ್ರಖರತೆಗೆ ಅಲ್ಲಲ್ಲಿ ಮರ ಸುಟ್ಟು ಒಣಗೋದು ಸಾಮಾನ್ಯ.

ಮರ ಒಣಗಿದ ಪ್ರದೇಶ ಮತ್ತೇ ಖಾಲಿ ಬಿಡದಂತೆ ಬಹುಬೇಗ ಬೆಳೆಯುವ ಮೃದು ಜಾತಿಯ ಸಸ್ಯಗಳು ದಟ್ಟವಾದ ಪರಿಯಲ್ಲಿ ನಿಸರ್ಗ ನಡೆಯಿದೆ. ಒಂದಕ್ಕೊಂದು ಪೂರಕವಾಗಿ ಸಸ್ಯ ಜಾತಿ ಬೆಸೆದು ಒಂದೇ ಸೀಮಿತ ಪರಿಸರದಲ್ಲಿ ಭೂಮಿಗೆ ಹಸಿರು ತೊಡಿಸಲು ಮುಂಚೂಣಿಯಲ್ಲಿ ನಿಲ್ಲುವ ಸಸ್ಯ ನಡೆ ನಿಸರ್ಗದ ಚಮತ್ಕಾರ.

ಇಂಥ ನೆಲೆಯಲ್ಲಿ ಮೊದಲು ಬೆಳೆಯೋದು ಚಂದಕಲು, ಕತ್ತಿವರಸೆ ನಡೆಯುವಾಗ ಸೈನಿಕರು ಗುರಾಣಿ ಹಿಡಿಯುವುದು ಗೊತ್ತಿರಬಹುದು. ಅದೇ ಕಾದಾಟದ ರೀತಿ ಈ ಮೆಕರಂಗ ಪೆಲ್ಟಾಟ ಸಸ್ಯ ಶಾಸ್ತ್ರೀಯ ಹೆಸರು ಹೊತ್ತ ಇದು ಕಾರ್ಯ ನಿರ್ವಹಿಸುತ್ತದೆ. ಈ ಸಸ್ಯದ ವಿವರ ಕೆದಕಿದರೆ ಬೆಂಕಿ ಬಿದ್ದಲ್ಲಿ ಬೆಳೆಯುತ್ತದೆ, ಬೆಂಕಿ ಕಡ್ಡಿ ತಯಾರಿಗೆ ಬಳಕೆ ಆಗ್ತದೆ ಎಂಬ ವಿವರ ಸಿಗುತ್ತದೆ. ಸಸ್ಯ ವರ್ತನೆ ಹಾಗೇ ಇದೆ.

ಈ ನಿಸರ್ಗದಲ್ಲಿ ಸಾವು ಅಂದ್ರೆ ಸಂಕಟ ಮಾತ್ರ ಅಲ್ಲ, ಅದು ನಮ್ಮಂಥವರಿಗೆ ಸಂಭ್ರಮವೂ ಹೌದು ಎಂದು ಮರದಡಿ ಗಿಡಗಳು ಜೋರಾಗಿ ಮಾತಾಡುತ್ತಿದೆ. ಉರಿಯಲ್ಲಿ ಭೂಮಿ ಬೆಂದಲ್ಲಿ ಮೇಲೆದ್ದು ಬೆಳೆಯೋದು ಕೆಲವು ಸಸ್ಯಗಳ ಮೂಲ ಗುಣದಲ್ಲಿಯೇ ಇರುವಾಗ ಇವು ತಮ್ಮ ಜನನಕ್ಕೆ ಯಾವುದೋ ಮರ ಸಾಯುವ ಸಂದರ್ಭಕ್ಕೆ ಕಾಯ್ತಾ ಇರ್ತವೆ! ದುಃಖ ಹೀರಿ ಹಸಿರಾಗಿ ಹಿಗ್ಗುತ್ತವೆ.

ಚಿತ್ರಗಳ ಛಾಯಾಗ್ರಹಕರು: ಶಿವಾನಂದ ಕಳವೆ

LEAVE A REPLY

Please enter your comment!
Please enter your name here