ಆಹಾರ – ಆರೋಗ್ಯ – ಆದಾಯಕ್ಕೆ  ಸಿರಿಧಾನ್ಯ ಇದೇ ಕೃಷಿಮೇಳದ ಮಂತ್ರ

0
  • ಕೃ.ವಿ.ವಿ, ಬೆಂಗಳೂರು, ಕೃಷಿ ಮೇಳ – 2023

ಕೃಷಿ ವಿಶ್ವವಿದ್ಯಾನಿಲಯ,  ಬೆಂಗಳೂರಿನ, ಗಾಂಧಿ ಕೃಷಿ ವಿಜ್ಞಾನ ಕೇಂದ್ರದ (ಜಿಕೆವಿಕೆ) ಆವರಣದಲ್ಲಿ ಕೃಷಿ ಮೇಳವನ್ನು  ನವೆಂಬರ್ 17 ರಿಂದ 20, 2023 ರವರೆಗೆ ನಾಲ್ಕು ದಿನಗಳ ಕಾಲ “ಆಹಾರ – ಆರೋಗ್ಯ – ಆದಾಯಕ್ಕಾಗಿ ಸಿರಿಧಾನ್ಯಗಳು” ಎಂಬ ಘೋಷವಾಕ್ಯದೊಂದಿಗೆ ಆಯೋಜಿಸಲಾಗಿದೆ ಎಂದು ವಿಶ್ವವಿದ್ಯಾನಿಲಯದ ಕುಲಪತಿ ಎಸ್.ವಿ. ಸುರೇಶ್‌ ತಿಳಿಸಿದರು.

ಅವರಿಂದು ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿರುವ ಆಡಳಿತ ಸಮುಚ್ಚಯ ನಾಯಕ್‌ ಭವನದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು. ಈ ವರ್ಷ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ, ಕರ್ನಾಟಕ ಸರ್ಕಾರದ ಕೃಷಿ, ತೋಟಗಾರಿಕೆ, ರೇಷ್ಮೆ, ಅರಣ್ಯ, ಪಶುಸಂಗೋಪನೆ, ಮೀನುಗಾರಿಕೆ, ಕೃಷಿ ಮಾರುಕಟ್ಟೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಕರ್ನಾಟಕ ಹಾಲು ಮಹಾಮಂಡಳಿಗಳ ಸಂಯುಕ್ತ ಆಶ್ರಯದಲ್ಲಿ  ಕೃಷಿಮೇಳ ನಡೆಯುತ್ತಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದ (ಎಡದಿಂದ) ಹಿರಿಯ ವಾರ್ತಾತಜ್ಞ ಡಾ. ಕೆ, ಶಿವರಾಮು, ವಿಸ್ತರಣಾ ನಿರ್ದೇಶಕ ಡಾ. ವಿ.ಎಲ್. ಮಧು ಪ್ರಸಾದ್‌, ಕುಲಪತಿ ಡಾ. ಎಸ್.ವಿ. ಸುರೇಶ್‌,‌ ಶಿಕ್ಷಣ ನಿರ್ದೇಶಕ ಡಾ. ಕೆ.ಸಿ. ನಾರಾಯಣಸ್ವಾಮಿ, ಸಂಶೋಧನಾ ನಿರ್ದೇಶಕ ಡಾ. ವೆಂಕಟೇಶ್

ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಅಭಿವೃದ್ಧಿಪಡಿಸಿರುವ ಒಟ್ಟು ಐದು ತಳಿಗಳನ್ನು ಕೃಷಿಮೇಳದಲ್ಲಿ ಬಿಡುಗಡೆ ಮಾಡಲಾಗುವುದು. ಎಂದ ಅವರು ಅವುಗಳ ಗುಣಗಳನ್ನು ಸಂಕ್ಷಿಪವಾಗಿ ವಿವರಿಸಿದರು.

1) ರಾಗಿ : ಎಂ.ಎಲ್-322 : ಈ ತಳಿಯು ಅಲ್ಪಾವಧಿ ತಳಿಯಾಗಿದೆ.  ಬಿತ್ತನೆಯಾದ 105 ರಿಂದ 110 ದಿನಗಳಲ್ಲಿ ಕಟಾವಿಗೆ ಬರುತ್ತದೆ. ಗಟ್ಟಿಮುಟ್ಟಾದ ಕಾಂಡವನ್ನು ಹೊಂದಿದ್ದು ತೆನೆ ನೆಲಕ್ಕೆ ಬೀಳುವುದಿಲ್ಲ. ಒಕ್ಕಣೆ ಮಾಡುವಾಗ ಕಡಿಮೆ ಹೊಟ್ಟಿನ ದೂಳು. ಬೆಂಕಿ ರೋಗ ನಿರೋಧಕ ಮತ್ತು ಬರ ಸಹಿಷ್ಣುತೆಯನ್ನು ಹೊಂದಿದೆ. ಪ್ರತಿ ಎಕರೆಗೆ ಧಾನ್ಯ: 15-20 ಕ್ವಿ/ಎ (ನೀರಾವರಿ) ಹಾಗೂ 10-12 ಕ್ವಿ/ಎ (ಖುಷ್ಕಿ) ಹುಲ್ಲು: 2-2.2 ಟ/ಎ ಇಳುವರಿ ನೀಡುವ ಸಾಮರ್ಥ್ಯವನ್ನು ಹೊಂದಿರುತ್ತದೆ. ವಲಯ-5 ಕ್ಕೆ ಶಿಫಾರಸ್ಸು ಮಾಡಲಾಗಿದೆ.

2) ಸಾಮೆ : ಜಿ.ಪಿ.ಯು.ಎಲ್-11: ಈ ತಳಿಯು ಅಲ್ಪಾವಧಿ ತಳಿಯಾಗಿದೆ. ಬಿತ್ತನೆಯಾದ 90-95 ದಿನಗಳ ನಂತರ ಕಟಾವಿಗೆ ಬರುತ್ತದೆ. ಮಧ್ಯಮ ಸಾಂದ್ರತೆ ಮತ್ತು ಆರ್ಕಿಡ್ ಆಕಾರದ ತೆನೆ. ಬೀಜಗಳು ಅಂಡಾಕಾರವಿದ್ದು ಬೂದು ಬಣ್ಣದಿಂದ ಕೂಡಿವೆ. ಎಲೆ ಅಂಗಮಾರಿ ರೋಗ ಮತ್ತು ತೆನೆ ಕಾಡಿಗೆ ರೋಗಕ್ಕೆ ನಿರೋಧಕತೆಯನ್ನು ಹೊಂದಿದೆ. ಈ ತಳಿಯು ಪ್ರತಿ ಎಕರೆಗೆ ಧಾನ್ಯ : 6-8 ಕ್ವಿಂ/ಎ ಮತ್ತು ಮೇವು: 1-1.5 ಟ/ಎ. ಇಳುವರಿ ನೀಡುವ ಸಾಮರ್ಥ್ಯವನ್ನು ಹೊಂದಿರುತ್ತದೆ. ವಲಯ-5 ಮತ್ತು 6ಕ್ಕೆ ಶಿಫಾರಸ್ಸು ಮಾಡಲಾಗಿದೆ.

3) ಬರಗು: ಜಿ.ಪಿ.ಯು.ಪಿ-32: ಈ ತಳಿಯು ಅಲ್ಪಾವಧಿ ತಳಿಯÁಗಿದ್ದು, ಬಿತ್ತನೆಯಾದ 80-85 ದಿನಗಳಲ್ಲಿ ಕಟಾವಿಗೆ ಬರುತ್ತದೆ. ಇದು ಮಧ್ಯಮ ಸಾಂಧ್ರತೆ ಮತ್ತು ಹರಡಿದ ಆಕಾರದ ತೆನೆಯನ್ನು ಹೊಂದಿದೆ. ಬೀಜಗಳು ಅಂಡಾಕಾರವಿದ್ದು ಹಳದಿ ಬಣ್ಣದಿಂದ ಕೂಡಿವೆ. ಎಲೆ ತೆನೆ ಕಾಡಿಗೆ ರೋಗ ಮತ್ತು ಕಂದು ಚುಕ್ಕೆ ರೋಗಕ್ಕೆ ನಿರೋಧಕತೆಯನ್ನು ಹೊಂದಿದೆ. ಈ ತಳಿಯು ಪ್ರತಿ ಎಕರೆಗೆ ಧಾನ್ಯ : 7-8 ಕ್ವಿಂ/ಎ ಮತ್ತು ಮೇವು: 1 – 1.50 ಟ/ಎ. ಇಳುವರಿ ನೀಡುವ ಸಾಮರ್ಥ್ಯವನ್ನು ಹೊಂದಿರುತ್ತದೆ. ವಲಯ-5 ಮತ್ತು 6ಕ್ಕೆ ಶಿಫಾರಸ್ಸು ಮಾಡಲಾಗಿದೆ.

4) ಸೂರ್ಯಕಾಂತಿ: ಕೆ.ಬಿ.ಎಸ್.ಹೆಚ್.-85: ಈ ತಳಿಯು ಅಲ್ಪಾವಧಿ ತಳಿಯಾಗಿದೆ. ಬಿತ್ತನೆಯಾದ 95-98 ದಿನಗಳಲ್ಲಿ ಕಟಾವಿಗೆ ಬರುತ್ತದೆ. ಕೇದಿಗೆ ರೋಗ ನಿರೋಧಕ ಶಕ್ತಿ ಹೊಂದಿದೆ. ಈ ತಳಿಯು ಪ್ರತಿ ಎಕರೆಗೆ 9-10.50 (ನೀರಾವರಿ) ಮತ್ತು 6-7 (ಖುಷ್ಕಿ) ಇಳುವರಿ ನೀಡುವ ಸಾಮರ್ಥ್ಯ ಹೊಂದಿದೆ. ತೈಲ: 3.6 -4.0 ಕ್ವಿಂ/ಎ. ವಲಯ-5 ಮತ್ತು 6ಕ್ಕೆ ಶಿಫಾರಸ್ಸು ಮಾಡಲಾಗಿದೆ.

5) ಹಲಸು: ಜಿ.ಕೆ.ವಿ.ಕೆ ಕೆಂಪು ಹಲಸು : ಈ ತಳಿಯು 3.5 ವರ್ಷಕ್ಕೆ ಫಸಲಿಗೆ ಬರುತ್ತದೆ. 10 ವರ್ಷದ ಮರ ಪ್ರತಿ ವರ್ಷ ಪ್ರತಿ ಮರ 120-150 ಹಣ್ಣುಗಳನ್ನು ನೀಡುತ್ತದೆ. ಒಂದು ಕೆ.ಜಿ ಹಣ್ಣಿಗೆ ತೊಳೆಗಳ ತೂಕ :600 – 700 ಗ್ರಾಂ. ತಾಮ್ರ ಕಡು ಕೆಂಪು ಬಣ್ಣದ ಉದ್ದವಾದ ಉತ್ತಮವಾದ ತೊಳೆ. ಅಂಟು ರಹಿತ ತಳಿ. ವಲಯ-5 ಕ್ಕೆ ಶಿಫಾರಸ್ಸು ಮಾಡಲಾಗಿದೆ.

ಸುಗಮ ವೀಕ್ಷಣೆಗೆ ಅವಕಾಶ:

ಭಾರಿ ಸಂಖ್ಯೆಯಲ್ಲಿ ಕೃಷಿ ಆಸಕ್ತರ ಬರುವಿಕೆ ನಿರೀಕ್ಷಿಸಲಾಗಿದೆ. ಭಾರಿ ವಾಹನಗಳಿಗೆ ಕೃಷಿ ವಿಶ್ವವಿದ್ಯಾನಿಲಯ ಎದುರಿನ ಜಕ್ಕೂರು ವಿಮಾನ ನಿಲ್ದಾಣದ ಆವರಣದಲ್ಲಿ ನಿಲುಗಡೆಗೆ ಅವಕಾಶ ಮಾಡಲಾಗಿದೆ. ಆ ವಾಹನಗಳಲ್ಲಿ ಬಂದವರು ಕೃಷಿ ವಿಶ್ವವಿದ್ಯಾನಿಲಯದ ಮುಂಭಾಗದ ಗೇಟುಗಳ ಬಳಿ ನಿಂತಿರುವ ವಾಹನಗಳಲ್ಲಿ ಕೃಷಿಮೇಳದ ಆವರಣ ತಲುಪಬಹುದು. ವೀಕ್ಷಣೆ ನಂತರವೂ ವಾಪಸ್‌ ಗೇಟಿನ ಬಳಿ ಕರೆತಂದು ಬಿಡುವ ವ್ಯವಸ್ಥೆ ಮಾಡಲಾಗಿದೆ. ಇದು ಸಂಪೂರ್ಣ ಉಚಿತ ಎಂದು ತಿಳಿಸಿದರು.‌

ಕೃಷಿ ವಿಶ್ವವಿದ್ಯಾನಿಲಯ ಅಭಿವೃದ್ಧಿಪಡಿಸಿರುವ ನೂತನ ಬದನೆ ತಳಿ ಪ್ರದರ್ಶನ

ಭದ್ರತೆಗೆ ಆದ್ಯತೆ

ಕಾರುಗಳಲ್ಲಿ, ದ್ವಿಚಕ್ರ ವಾಹನಗಳಲ್ಲಿ ಬರುವವರಿಗೆ ನಿಲುಗಡೆ ವ್ಯವಸ್ಥೆಯನ್ನು ವೈಜ್ಞಾನಿಕವಾಗಿ ಮಾಡಲಾಗುತ್ತಿದೆ. ಇದರಿಂದ ಯಾವುದೇ ಗೊಂದಲಕ್ಕೆ ಅವಕಾಶವಿಲ್ಲ. ಜೊತೆಗೆ ವಿಶ್ವವಿದ್ಯಾನಿಲಯದ ವಿಶಾಲ ಆವರಣದಲ್ಲಿ ಪೊಲೀಸರು ಮತ್ತು ಖಾಸಗಿ ಭದ್ರತಾ ಏಜೆನ್ಸಿಗಳಿಂದ ಭದ್ರತೆ ವ್ಯವಸ್ಥೆ ಮಾಡಲಾಗಿದೆ. ಸಿಸಿಟಿವಿ ಕಣ್ಗಾವಲುಗಳಿರುತ್ತವೆ ಎಂದರು.

ರಿಯಾಯತಿ ದರದ ಊಟ

ಪ್ರತಿವರ್ಷ ಮೈಸೂರು ಗ್ರಾಮೀಣ ಶೈಲಿಯಲ್ಲಿ ಪುಲ್‌ ಮಿಲ್ಸ್‌ ವ್ಯವಸ್ಥೆ ಮಾಡಲಾಗುತ್ತಿದೆ. ಇದನ್ನು ರಿಯಾಯತಿ ದರದಲ್ಲಿ ಒದಗಿಸಲಾಗುತ್ತಿದೆ. ಕಳೆದ ವರ್ಷಗಳಲ್ಲಿ ಒಂದು ಊಟದ ದರ 50 ರೂಪಾಯಿ ಇತ್ತು. ಈ ವರ್ಷ ಇದನ್ನು 40 ರೂಪಾಯಿ ಮಾಡಲಾಗಿದೆ ಎಂದು ತಿಳಿಸಿದರು.

LEAVE A REPLY

Please enter your comment!
Please enter your name here