ಮಾಳಿ ಕುಟುಂಬದ ಆಸರೆಯಾಗಿ ಸುಸ್ಥಿರ ಕೃಷಿ

0
ಚಿತ್ರ-ಲೇಖನ: ವಿನೋದ ರಾ ಪಾಟೀಲ ಚಿಕ್ಕಬಾಗೇವಾಡಿ

“ಮನೆಯೇ ಮೊದಲ ಪಾಠ ಶಾಲೆ”ಎನ್ನುವ ಹಾಗೆ ನಾವು ಆರಂಭದಲ್ಲಿಯೇ ಮಕ್ಕಳಿಗೆ ಕೃಷಿ ಸಂಸ್ಕಾರ ಕೊಟ್ಟರೆ ಅವರು ಸ್ವಾವಲಂಬನೆ ಬದುಕು ಸಾಗಿಸಬಲ್ಲರು. ಹಳ್ಳಿಗಳ ಯುವಕರು ಇಂದು ಶಾಲೆ ಕಲಿತು ನೌಕರಿ ಹುಡುಕಿ ನಗರವಾಸಿಗಳಾಗುತ್ತಿದ್ದಾರೆ. ಇಂಥ ಸಂದರ್ಭದಲ್ಲಿ  ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಿಡಕಲ್ ಗ್ರಾಮದ ಪದವೀಧರ ಯುವಕ ಶಿವಾನಂದ ಲಕ್ಷಣ ಮಾಳಿ ಕೃಷಿಯಲ್ಲಿ ಬದುಕು ರೂಪಿಸಿಕೊಂಡಿದ್ದಾರೆ.

ದೊಡ್ಡಪ್ಪನ ಕೃಷಿ ನೋಡುತ್ತಾ ಬೆಳೆದ ಇವರು ಮಣ್ಣಿನ ಕಾಯಕವನ್ನು ಶ್ರದ್ಧೆಯಿಂದ  ಮಾಡುತ್ತಾ ಮಾದರಿಯಾಗಿದ್ದಾರೆ. ನಾಲ್ಕೂವರೆ ಏಕರೆಯ ಸಣ್ಣ ಹಿಡುವಳಿದಾರರಾದ ಇವರು ಸಮಗ್ರ ಬೇಸಾಯದ ತತ್ವ ಅಳವಡಿಸಿಕೊಂಡಿದ್ದಾರೆ. ನಿತ್ಯವೂ ಅನೇಕರು ಬಂದು ನೋಡಿ ಕಲಿಯುವ ರೀತಿಯಲ್ಲಿ  ಕೃಷಿಕ್ಷೇತ್ರ ಅಭಿವೃದ್ಧಿಪಡಿಸಿದ್ದಾರೆ. ಕೃಷಿ/ತೋಟಗಾರಿಕೆ ಅಧಿಕಾರಿಗಳು ಈ ಕ್ಷೇತ್ರದಲ್ಲಿ ಹಲವಾರು ಬೆಳೆ ಕ್ಷೇತ್ರೋತ್ಸವಗಳನ್ನು ಮಾಡಿದ್ದಾರೆ.

ಸಮಗ್ರ ಬೇಸಾಯ
ದೊಡಪ್ಪ ಕಲ್ಲಪ್ಪ ಅವರು ಅಳವಡಿಸಿದ್ದ ಸಾವಯವ ಪದ್ಧತಿಯನ್ನೇ ಅನುಸರಿಸುತ್ತಿರುವ ಶಿವಾನಂದ ಅವರು ಅದಕ್ಕೆ ನಾವೀನ್ಯತೆಯ ಸ್ಪರ್ಶ ನೀಡಿದ್ದಾರೆ. ಬೆಳೆಗಳಿಗೆ ಕೊಟ್ಟಿಗೆ ಗೊಬ್ಬರ, ಎರೆಹುಳು ಗೊಬ್ಬರ  ,ಜೀವಾಮೃತ ನೀಡುತ್ತಾರೆ. ಬಿತ್ತನೆ ಬೀಜಗಳಿಗೆ ಬೀಜೋಪಚಾರ ಮಾಡಿಯೇ ಬಳಸುತ್ತಾರೆ. ಇದರೊಂದಿಗೆ ಉಪಕಸಬುಗಳನ್ನು ಅಳವಡಿಸಿಕೊಂಡು ಸುಸ್ಥಿರ ಬದುಕು ಕಟ್ಟಿಕೊಂಡಿದ್ದಾರೆ.

ನಾಲ್ಕೂವರೆ ಎಕರೆ ಕೃಷಿಕ್ಷೇತ್ರದಲ್ಲಿ  ಚೆಂಡು ಹೂ,ಕಬ್ಬು,ತರಕಾರಿಗಳು,ಸದಕ, ಅರಿಶಿಣ,ಗೋವಿನಜೋಳ ಹಾಗೂ ರೇಷ್ಮೆಕೃಷಿಯನ್ನು ಮಾಡಿಕೊಂಡು ಬರುತ್ತಿದ್ದಾರೆ. ಇವೆಲ್ಲದರ ನಡುವೆ ಉಪಕಸಬುಗಳಾದ ಹೈನುಗಾರಿಕೆ,ಮೊಲಸಾಕಾಣಿಕೆಯು ಇವರ ಆದಾಯಕ್ಕೆ ಕೈ ಜೋಡಿಸಿವೆ.ಸಾಮಾನ್ಯವಾಗಿ ಏಕರೆಗೆ ೫೦ ಟನ್ ಕಬ್ಬು ಇಳುವರಿ ಬಂದರೆ ಇವರು ಸಾವಯವ ಪದ್ಧತಿಯಲ್ಲಿ ಕಬ್ಬು ಬೆಳೆಸಿ ೬೫ ರಿಂದ ೭೦ ಟನ್ ವರೆಗೆ ಇಳುವರಿ ಪಡೆಯುತ್ತಾರೆ.

ಮಿಶ್ರಬೆಳೆ ಬೇಸಾಯ
ಒಂದೂವರೆ ಏಕರೆಯಲ್ಲಿ ಇವರು ಮಿಶ್ರಬೆಳೆಯಾಗಿ ಹಿಪ್ಪುನೆರಳೆಯ ಜೊತೆ ಕಬ್ಬು ಕೃಷಿ ಬೆಳೆ ಮಾಡುತ್ತಿರುವುದು ಎಲ್ಲರ ಗಮನಸೆಳೆಯುತ್ತದೆ.ಇಲ್ಲಿ ಮೊದಲು ಸಾಲಿನಿಂದ ಸಾಲಿಗೆ ೧೨ ಫೂಟ್ ಇದ್ದು, ಕಬ್ಬಿನ ಸಸಿಯ ಪಿಟ್ ದಿಂದ ಪಿಟ್ ಗೆ ೬ ಪೂಟ್ ಇದೆ. ಆ ೧೨ ಪೂಟ್ ಅಂತರದಲ್ಲಿ ಹಿಪ್ಪುನೆರಳೆ ,ಅವರೆ, ನವಣೆ, ತರಕಾರಿ,ಚಿಯಾ,ಸುವಣಗಡ್ಡೆ ಹೀಗೆ ಹಲವು ಬೆಳೆಗಳನ್ನು ಬೆಳೆದಿದ್ದಾರೆ.

ಇವರು ಸೂಕ್ತ ರೀತಿಯಲ್ಲಿ ಬೀಜೋಪಚಾರ ಮಾಡಿಕೊಂಡು ನಾಟಿ ಮಾಡುತ್ತಾರೆ.ಜೀವಾಮೃತ, ಟ್ರೈಕೋಡರ್ಮಾಗಳನ್ನು  ಬೆಳೆಗಳಿಗೆ ನೀಡುತ್ತಾರೆ.ಇದರಿಂದ ಬೆಳೆಗಳಿಗೆ ಟಾನಿಕ ದೊರೆತು ಸಮೃದ್ದವಾಗಿ ಬೆಳೆದಿವೆ. ಇಳುವರಿಯಲ್ಲೂ ಗಣನೀಯವಾಗಿ ಹೆಚ್ಚಳವಾಗಿರುವುದನ್ನು ಕಾಣಬಹುದಾಗಿದೆ.ದನಗಳ ತಾಜ್ಯವನ್ನು ಸಮರ್ಪಕವಾಗಿ ಬಳಸಿಕೊಂಡಿದ್ದಾರೆ ತಾಜ್ಯದಿಂದ ಎರೆಹುಳುಗೊಬ್ಬರ ಮಾಡಿಕೊಂಡು ಜಮೀನಿಗೆ ಹಾಕಲಾಗುತ್ತಿದೆ. ವೇಸ್ಟ್ ಡಿ ಕಂಪೋಸರ ಮೂಲಕ ತಾಜ್ಯಗಳನ್ನು ಕಳಿಸಿ ಜಮೀನಿಗೆ ಪೂರೈಸುತ್ತಾರೆ. ಹನಿ ನೀರಾವರಿ ಪದ್ಧತಿ ಮೂಲಕ ನೀರೂಣಿಸುವದರಿಂದ ನೀರು ಮಿತವ್ಯಯವಾಗುತ್ತಿದೆ. ಮಣ್ಣಿನ ಫಲವತ್ತತೆ ಕಾಯ್ದುಕೊಳ್ಳಲು ಸಹಾಯಕವಾಗಿದೆ.

ಆದಾಯ
ಇವರು ಬೆಳೆದ ಕಬ್ಬಿನಿಂದ ಮನೆಗೆ ಬೇಕಾಗುವಷ್ಟು ಬೆಲ್ಲವನ್ನು ಮಾಡಿಸಿಕೊಂಡು ಬರುತ್ತಾರೆ. ಇವರ ಕೊಟ್ಟಿಗೆಯಲ್ಲಿ ಒಟ್ಟು ೧೫ ಜಾನುವಾರುಗಳಿವೆ. ಅದರಲ್ಲಿ ೮ ಆಡುಗಳಿವೆ. ೨ ಹಸುಗಳು ನಿತ್ಯ ೫ ಲೀಟರ ವರೆಗೆ ಹಾಲು ನೀಡುತ್ತವೆ. ಕಬ್ಬು,ರೇಷ್ಮೆ ,ಇತರ ಬೆಳೆಗಳಿಂದ ವಾರ್ಷಿಕವಾಗಿ ೭ ರಿಂದ ೮ ಲಕ್ಷದವರೆಗೆ ಆದಾಯ ಪಡೆಯುತ್ತಾರೆ.ರೇಷ್ಮೆಯಿಂದ ೨ ತಿಂಗಳಿಗೆ ೩೦ ರಿಂದ ೫೦ ಸಾವಿರದವರೆಗೆ ಆದಾಯ ಪಡೆಯುತ್ತಾರೆ.ಇತ್ತೀಚಿಗೆ ಮೊಲಸಾಕಾಣಿಕೆ ಮಾಡಿಕೊಂಡಿದ್ದು ಸದ್ಯ ೧೫ ಮೊಲಗಳಿವೆ.ಕೃಷಿ ಉತ್ಪನ್ನಗಳನ್ನು ಸ್ಥಳೀಯ ಮಾರುಕಟ್ಟೆಗಳಾದ ಹಾರೋಗೇರಿ,ಮಹಾಲಿಂಗಪೂರದಲ್ಲಿ ಮಾರಾಟ ಮಾಡುತ್ತಾರೆ. ಚೆಂಡು ಹೂವನ್ನು ಒಪ್ಪಂದ ಮಾಡಿಕೊಂಡು ಮಾರಾಟ ಮಾಡುತ್ತಾರೆ.

ಯುವಕರು ಮನಸ್ಸು ಮಾಡಿದರೆ ಎಲ್ಲವೂ ಸಾಧ್ಯ ಎನ್ನುವದಕ್ಕೆ ಇವರು ಉದಾಹರಣೆ.ಮಾರುಕಟ್ಟೆಯಿಂದ ಎಣ್ಣೆ ಮತ್ತು ಉಪ್ಪನ್ನು ಮಾತ್ರ ತರುವ ಇವರು ತಮಗೆ ಬೇಕಾದ ಆಹಾರವನ್ನು ತಾವೇ ಬೆಳೆದುಕೊಳ್ಳುತ್ತಾರೆ. ಇದರಿಂದ ಕುಟುಂಬ ನಿರ್ವಹಣೆ ಖರ್ಚು ಉಳಿತಾಯವಾಗಿದೆ.ಇನ್ನೂ ಸಾವಯದಲ್ಲಿ ವಿಷಮುಕ್ತ ಆಹಾರವನ್ನು ಸೇವಿಸುವದರಿಂದ ಆರೋಗ್ಯವಾಗಿದ್ದೇವೆ ಮತ್ತು ದವಾಖಾನೆ ಖರ್ಚು ಉಳಿತಾಯವಾಗಿದೆ ಎಂದು ಶಿವಾನಂದ ಮಾಳಿ ಅವರು ತಿಳಿಸುತ್ತಾರೆ.

LEAVE A REPLY

Please enter your comment!
Please enter your name here