ಬೆಂಗಳೂರು: ಮಾರ್ಚ್ 09: ಕೃಷಿ ಬೆಳೆಗಳಿಗೆ ಹಾಗೂ ತೋಟಗಾರಿಕೆ ಬೆಳೆಗಳಿಗೆ ಸಿಂಪಡಿಸುವ ಕೀಟನಾಶಕ ಔಷಧಿಗಳನ್ನು ತಯಾರಿಸುವ ಮೊದಲು ಅವುಗಳನ್ನು ಪುಯೋಗಾಲಯದಲ್ಲಿ ಪರೀಕ್ಷಿಸಲಾಗುವುದು. ಈ ಕೀಟನಾಶಕಗಳು ಬೆಳೆಗಳ ಮೇಲೆ ಹಾಗೂ ಮಾನವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದೇ ಇಲ್ಲವೇ ಎಂಬುದನ್ನು ಸಂಶೋಧನೆ ನಡೆಸಲಾಗುವುದು. ಈ ನಂತರವೇ ರೈತರಿಗೆ ಕೀಟನಾಶಕ ಔಷಧಿಗಳನ್ನು ನೀಡುವ ಸಲುವಾಗಿ ರಾಜ್ಯದಲ್ಲಿ ಒಟ್ಟು 06 ಕೀಟ ನಾಶಕ ಸಂಶೋಧನಾ ಪ್ರಯೋಗಾಲಯಗಳನ್ನು ಸ್ಥಾಪನೆ ಮಾಡಲಾಗಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರು ತಿಳಿಸಿದರು.

ಇಂದು ವಿಧಾನ ಪರಿಷತ್ತಿನ ಕಲಾಪದ ವೇಳೆ ವಿಧಾನ ಪರಿಷತ್ತಿನ ಸದಸ್ಯರಾದ ಗೋವಿಂದರಾಜು ಅವರ ನಿಯಮ 72ರಡಿ ಗಮನ ಸೆಳೆಯುವ ಸೂಚನೆಗೆ ಸಚಿವರು ಮಾಹಿತಿ ನೀಡಿದರು. ಕೀಟನಾಶಕ ಕಾಯ್ದೆ, 1968 ಮತ್ತು ಕೀಟನಾಶಕ ಕಾಯ್ದೆಯನ್ವಯ ರೂಪಿಸಲಾಗಿರುವ ನಿಯಮಗಳನ್ವಯ ಕೀಟನಾಶಕ ಗುಣಮಟ್ಟವನ್ನು ಪರೀಕ್ಷಿಸಲು ರಾಜ್ಯದಲ್ಲಿ ಒಟ್ಟು 6  ಪೀಡೆನಾಶಕ ಪರೀಕ್ಷಣಾ ಪ್ರಯೋಗಾಲಯಗಳನ್ನು ಬೆಂಗಳೂರು, ಬಳ್ಳಾರಿ, ಶಿವಮೊಗ್ಗ, ಧಾರವಾಡ, ಕಲಬುರಗಿ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಸ್ಥಾಪಿಸಲಾಗಿದೆ. ಶಿವಮೊಗ್ಗ ಮತ್ತು ಧಾರವಾಡ ಪ್ರಯೋಗಾಲಯಗಳು ಎನ್.ಎ.ಐ.ಎಲ್ National Accreditation Board for Testing and Calibration Laboratories (NABL) ಸಂಸ್ಥೆಯಿಂದ ಮಾನ್ಯತೆಯನ್ನು ಪಡೆದಿವೆ ಎಂದರು.

ಉಳಿದ ಪ್ರಯೋಗಾಲಯಗಳಿಗೆ ಎನ್.ಎ.ಬಿ.ಎಲ್. ಮಾನ್ಯತೆ ಪಡೆಯುವ ಕಾರ್ಯ ಪ್ರಗತಿಯಲ್ಲಿರುತ್ತದೆ. ರಾಜ್ಯದಲ್ಲಿ ಸ್ಥಾಪಿಸಲಾಗಿರುವ ಎಲ್ಲಾ 6 ಪ್ರಯೋಗಾಲಯಗಳಲ್ಲಿ ಪೀಡನಾಶಕಗಳ ಗುಣಮಟ್ಟವನ್ನು ಪರೀಕ್ಷಿಸಲಾಗುತ್ತಿದೆ. ಕೀಟನಾಶಕ ಕಾಯ್ದೆಯ ಸೆಕ್ಷನ್ 19 ಮತ್ತು ಕೀಟನಾಶಕ ನಿಯಮಗಳು, 1971ರ ನಿಯಮ 23 ರನ್ವಯ ಕರ್ನಾಟಕ ಸರ್ಕಾರದಿಂದ ಮೇಲ್ಕಂಡ 6 ಪ್ರಯೋಗಾಲಯಗಳನ್ನು, ಅಧಿಸೂಚನೆಗೊಳಿಸಿ ಆದೇಶಿಸಲಾಗಿರುತ್ತದೆ ಎಂದು ವಿವರಿಸಿದರು.

ಕೀಟನಾಶಕಗಳ ಆಮದು, ತಯಾರಿಕೆ, ಮಾರಾಟ, ಸಾಗಣೆ, ವಿತರಣೆ ಮತ್ತು ಬಳಕೆಯ ಕೇಂದ್ರ ಸರ್ಕಾರ ಅಧಿಸೂಚನೆಗೊಳಿಸಿರುವ ಕೀಟನಾಶಕ ಕಾಯ, 1968 ಮತ್ತು ಕಾಯ್ದೆಯನ್ವಯ ರೂಪಿಸಲಾಗಿರುವ ನಿಯಮಗಳನ್ವಯ ನಿಯಂತ್ರಣಕ್ಕೆ ಒಳಪಡುವುದರಿಂದ ಸದರಿ ಕಾಯ್ದೆ ಮತ್ತು ನಿಯಮದನ್ವಯ ಕೀಟನಾಶಕ ಪರಿವೀಕ್ಷಕರು ಹಾಗು ವಿಶ್ಲೇಷಕರನ್ನು ಅಧಿಸೂಚನೆಗೊಳಿಸಲಾಗಿರುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಕೀಟನಾಶಕ ನಿಯಂತ್ರಣದ ಬಗ್ಗೆ ಆಡಳಿತ ಮತ್ತು ತಾಂತ್ರಿಕ ವಿಷಯಗಳ ಬಗ್ಗೆ ಸಲಹೆಗಳನ್ನು ನೀಡಲು ಕೀಟನಾಶಕ ಕಾಯ್ದೆಯ ಸೆಕ್ಷನ್ 4 ರನ್ವಯ ಕೇಂದ್ರ ಸರ್ಕಾರದ ವತಿಯಿಂದ ಕೇಂದ್ರೀಯ ಕೀಟನಾಶಕ ಮಂಡಳಿಯನ್ನು ಸ್ಥಾಪಿಸಲಾಗಿರುತ್ತದೆ. ರಾಜ್ಯ ಸರ್ಕಾರಕ್ಕೆ, ಕೀಟನಾಶಕ ಕಾಯ್ದೆಯನ್ವಯ ಪ್ರತ್ಯೇಕವಾಗಿ ಕೀಟನಾಶಕ ನಿಯಂತ್ರಣ ಮಂಡಳಿಯನ್ನು ರಚಿಸುವ ಅವಕಾಶ ಇರುವುದಿಲ್ಲ ಎಂದರು.

ಯಾವುದೇ ಕೀಟನಾಶಕ ತಯಾರಿಕೆ ಮುನ್ನ ಕೀಟನಾಶಕ ಕಾಯ್ದೆಯ ಸೆಕ್ಷನ್ 9 ರನ್ವಯ ಕೇಂದ್ರೀಯ ಕೀಟನಾಶಕ ಮಂಡಳಿ ಮತ್ತು ನೊಂದಣಿ ಸಮಿತಿಯಿಂದ ನೊಂದಣಿ ಪಡೆದು ಕೀಟನಾಶಕ ಕಾಯ್ದೆಯ ಸೆಕ್ಷನ್ 13 ಮತ್ತು ಕೀಟನಾಶಕ ನಿಯಮಗಳು, 1971 ರ ನಿಯಮ 10ರನ್ವಯ ಕೀಟನಾಶಕ ತಯಾರಿಕಾ ಪರವಾನಗಿ ಪಡೆಯುವುದು ಕಡ್ಡಾಯವಾಗಿರುತ್ತದೆ. ಯಾವುದೇ ಸಂಸ್ಥೆಗೆ ಪೀಡೆನಾಶಕದ ನೊಂದಣಿಯನ್ನು ನೀಡುವ ಮೊದಲು ಪೀಡೆನಾಶಕದ ಕ್ರಿಯಾಘಟಕದೊಂದಿಗೆ ಸಂಯೋಜನೆ, ವಿಷಶಾಸ್ತ್ರ ಅಧ್ಯಯನ, ಬಹು ಸ್ಥಳದ ಪ್ರಯೋಗಗಳ ವರದಿ, ನಿರ್ದಿಷ್ಟ ಬೆಳೆಗಳ ಮೇಲೆ ಕೈಗೊಂಡ ಪುಯೋಗಗಳ ವರದಿಗಳನ್ನು ಪರಿಶೀಲಿಸಲಾಗುವುದು. ನೋಂದಣಿಯನ್ನು ನಿರ್ಧಿಷ್ಟ ಪಡಿಸಿದ ಬೆಳೆ ಮತ್ತು ಪೀಡೆಗಳಿಗೆ ಶಿಫಾರಸ್ಸು ಮಾಡಿ ನೊಂದಣಿ ಪ್ರಮಾಣ ಪತ್ರಗಳನ್ನು ಕೇಂದ್ರೀಯ ಕೀಟನಾಶಕ ಮಂಡಳಿ ಮತ್ತು ನೊಂದಣಿ ಸಮಿತಿಯ ವತಿಯಿಂದ ನೀಡಲಾಗುತ್ತಿದೆ ಎಂದರು.

ಕೀಟನಾಶಕ ಮಂಡಳಿ ಮತ್ತು ನೋಂದಣಿ ಸಮಿತಿ ಶಿಫಾರಸ್ಸು ಮಾಡಿರುವ ಬೆಳೆ ಪೀಡೆ ಮತ್ತು ಪ್ರಮಾಣದಲ್ಲಿ ಬಳಕೆ ಮಾಡುವ ಬಗ್ಗೆ ಕೀಟನಾಶಕದ ಲೇಬಲ್ ಮತ್ತು ಹಸ್ತಪತ್ರದಲ್ಲಿ ಮುದ್ರಿಸಿ ಕೀಟನಾಶಕಗಳನ್ನು ಮಾರಾಟ ಮಾಡುವುದು ಕಡ್ಡಾಯವಾಗಿರುತ್ತದೆ. ಕೀಟನಾಶಕಗಳನ್ನು ತಯಾರಿಸಿ ಮಾರುಕಟ್ಟೆಗೆ ಮಾರಾಟ ಮಾಡುವ ಮುನ್ನ ತಯಾರಿಕಾ ಘಟಕದಲ್ಲಿಯೇ ಪರೀಕ್ಷಿಸಿ ನಂತರ ಪ್ಯಾಕಿಂಗ್ ಮಾಡುವುದು ಕೀಟನಾಶಕ ಕಾಯ್ದೆ ಮತ್ತು ನಿಯಮಗಳನ್ವಯ ಕಡ್ಡಾಯವಾಗಿರುತ್ತದೆ ಎಂದರು.

ಅದಾಗ್ಯೂ ಮಾರುಕಟ್ಟೆಯಲ್ಲಿ ಮಾರಾಟವಾಗುವ ಕೀಟನಾಶಕಗಳ ಗುಣಮಟ್ಟವನ್ನು ಪರೀಕ್ಷಿಸಲು ಇಲಾಖೆಯಲ್ಲಿ ಕೃಷಿ ಪದವಿಯನ್ನು ಹೊಂದಿರುವ ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಯಲ್ಲಿ ಸಹಾಯಕ ಕೃಷಿ ಅಧಿಕಾರಿ, ಕೃಷಿ ಅಧಿಕಾರಿ ತಾಲೂಕು ಮಟ್ಟದಲ್ಲಿ ಸಹಾಯಕ ಕೃಷಿ ನಿರ್ದೇಶಕರು, ಕೃಷಿ ಅಧಿಕಾರಿ, ವಿಭಾಗೀಯ ಮಟ್ಟದಲ್ಲಿ ಉಪ ಕೃಷಿ ನಿರ್ದೇಶಕರು, ಕೃಷಿ ಅಧಿಕಾರಿ, ಜಿಲ್ಲಾ ಮಟ್ಟದಲ್ಲಿ ಜಂಟಿ ಕೃಷಿ ನಿರ್ದೇಶಕರು, ಸಹಾಯಕ ಕೃಷಿ ನಿರ್ದೇಶಕರು ಮತ್ತು ಕೃಷಿ ಅಧಿಕಾರಿಗಳನ್ನು ಹಾಗು ಇಲಾಖೆಯ ಜಾರಿ ದಳದ ಅಧಿಕಾರಿಗಳನ್ನು ಕೀಟನಾಶಕ ಪರಿವೀಕ್ಷಕರನ್ನಾಗಿ ಅಧಿಸೂಚನೆಗೊಳಿಸಲಾಗಿರುತ್ತದೆ.

ಕೃಷಿ ನಿರ್ದೇಶಕರು, ಅಪರ ಕೃಷಿ ನಿರ್ದೇಶಕರು (ಸಾವಯವ ಕೃಷಿ), ಜಂಟಿ ಕೃಷಿ ನಿರ್ದೇಶಕರು (ರಸಗೊಬ್ಬರ ಮತ್ತು ಸಸ್ಯ ಸಂರಕ್ಷಣೆ), ಜಂಟಿ ಕೃಷಿ ನಿರ್ದೇಶಕರು (ಸಾವಯವ ಕೃಷಿ ಮತ್ತು ಪ್ರಯೋಗಾಲಯಗಳು) ಮತ್ತು ಉಪ ಕೃಷಿ ನಿರ್ದೇಶಕರು (ಸಸ್ಯ ಸಂರಕ್ಷಣೆ) ಕೃಷಿ ಆಯುಕ್ತಾಲಯ, ಅಪರ ಕೃಷಿ ನಿರ್ದೇಶಕರು (ಜಾಗೃತ ಕೋಶ), ಸಚಿವಾಲಯ ವಿಭಾಗ, ಬೆಂಗಳೂರು ಅಧಿಕಾರಿಗಳನ್ನು, ರಾಜ್ಯ ಮಟ್ಟದ ಕೀಟನಾಶಕ ಪರಿವೀಕ್ಷಕರನ್ನಾಗಿ ಅಧಿಸೂಚನೆಗೊಳಿಸಲಾಗಿರುತ್ತದೆ. ಕೀಟನಾಶಕ ಪರಿವೀಕ್ಷಕರಿಂದ ನಿಯಮಿತವಾಗಿ ಕೀಟನಾಶಕ ತಯಾರಿಕೆ ಮತ್ತು ಮಾರಾಟ ಮಳಿಗೆಗಳ ತಪಾಸಣೆಯನ್ನು ಕೈಗೊಂಡು ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗೆ ಒಳವಡಿಸಲಾಗುತ್ತಿದೆ ಎಂದರು.

ರಾಜ್ಯದಲ್ಲಿ ವಾರ್ಷಿಕವಾಗಿ 6800 ಮಾದರಿಗಳ ಸಂಗ್ರಹಣೆ ಗುರಿಯನ್ನು ಕೀಟನಾಶಕ ಪರಿವೀಕ್ಷಕರುಗಳಿಗೆ ನೀಡಲಾಗಿರುತ್ತದೆ. ವಿಶ್ಲೇಷಣೆಯಲ್ಲಿ ಕಳಪೆ ಗುಣಮಟ್ಟವೆಂದು ವರದಿಯಾದ ಮಾದರಿಗಳ ಕೀಟನಾಶಕ ತಯಾರಕರ ಮತ್ತು ಮಾರಾಟಗಾರರ ವಿರುದ್ಧ ಕೀಟನಾಶಕ ಕಾಯ್ದೆ, 1968 ಮತ್ತು ಕಾಯ್ದೆಯನ್ವಯ ರೂಪಿಸಲಾಗಿರುವ ನಿಯಮಗಳನ್ವಯ ಆಡಳಿತಾತ್ಮಕ ಮತ್ತು ಕಾನೂನು ಕ್ರಮಗಳನ್ನು ಜರುಗಿಸಲಾಗುತ್ತಿದೆ ಎಂದು ವಿವರಿಸಿದರು.

2020-21ನೇ ಸಾಲಿನಲ್ಲಿ 5390 ಪೀಡೆನಾಶಕ ಮಾದರಿಗಳನ್ನು ಗುಣಮಟ್ಟ ವಿಶ್ಲೇಷಣೆಗೆ ಒಳಪಡಿಸಲಾಗಿದ್ದು ವಿಶ್ಲೇಷಣೆಯಲ್ಲಿ 66 ಪೀಡೆನಾಶಕಗಳು ಕಳಪೆ ಎಂದು ವರದಿಯಾಗಿರುತ್ತವೆ. 2021-22ನೇ ಸಾಲಿನಲ್ಲಿ ಜನವರಿ 2022ರ ಅಂತ್ಯಕ್ಕೆ 4401 ಪೀಡೆನಾಶಕ ಮಾದರಿಗಳನ್ನು ಗುಣಮಟ್ಟ ವಿಶ್ಲೇಷಣೆಗೆ ಒಳಪಡಿಸಲಾಗಿದೆ. ವಿಶ್ಲೇಷಣೆಯಲ್ಲಿ 59 ಪೀಡನಾಶಕಗಳು ಕಳಪೆ ಎಂದು ವರದಿಯಾಗಿರುತ್ತವೆ. ಕಳಪೆ ಎಂದು ವರದಿಯಾದ ಪೀಡೆನಾಶಕಗಳ ತಯಾರಕರ ಮತ್ತು ಮಾರಾಟಗಾರರ ವಿರುದ್ಧ ಆಡಳಿತಾತ್ಮಕ ಮತ್ತು ಕಾನೂನು ರೀತ್ಯ ಕ್ರಮಗಳನ್ನು ಜರುಗಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

LEAVE A REPLY

Please enter your comment!
Please enter your name here