ಆಧುನಿಕ ಕೃಷಿಯಲ್ಲಿ ಬೆಳೆಗಳಿಗೆ ಅನೇಕ ರೋಗಗಳು ತಗಲುತ್ತವೆ. ರೋಗಗಳು ಶಿಲೀಂಧ್ರ ದುಂಡಾಣು, ನಂಜಾಣು ಜಂತು, ಪೈಟೊಪ್ಲಸ್ಮ ವೈರಸ್ ಗಳಿಂದ ಬರುತ್ತವೆ. ಈ ರೋಗಾಣುಗಳು ಪೈರುಗಳ ಭಾಗಗಳಿಗೆ ಅಂಟಿಕೊಂಡು ಜೀವನ ಚಕ್ರಕ್ಕೆ ಅವಶ್ಯಕವಾದ ಆಹಾರವನ್ನು ಪರಾವಲಂಬಿಗಳಾಗಿ ಪಡೆಯುತ್ತವೆ. ಇದರಿಂದ ಬೆಳೆಗಳ ಬೆಳವಣಿಗೆ ಕುಂಠಿತವಾಗಿ ಇಳುವರಿಯ ಮೇಲೆ ದುಷ್ಪರಿಣಾಮವಾಗುತ್ತದೆ. ಅಲ್ಲದೇ ಕೆಲವೊಂದು ಹಾನಿಕಾರಕ ರೋಗಗಳಿಂದ ಪೈರು ಸಂಪೂರ್ಣನಾಶವಾಗುತ್ತದೆ.

ರೋಗ ನಿಯಂತ್ರಣದ ಕ್ರಮಗಳಿವೆ:ರಾಸಾಯನಿಕ, ಜೈವಿಕ, ಬೇಸಾಯ ಕ್ರಮ ಪದ್ಧತಿ ಹಾಗೂ ರೋಗ ನಿರೋಧಕ ತಳಿಗಳ ಉಪಯೋಗ ಇತ್ಯಾದಿಗಳಿವೆ. ಕೃಷಿಯಲ್ಲಿ ರಾಸಾಯನಿಕಗಳ ಉಪಯೋಗ ಒಂದು ಶತಮಾನದಷ್ಟು ಹಳೆಯದಾದರೂ ಇವುಗಳ ಹೆಚ್ಚಿನ ಬಳಕೆ ಕಳೆದ ನಾಲ್ಕೈದು ದಶಕಗಳಿಂದ ಎಂದು ಹೇಳಬಹುದು. ಈ ರಾಸಾಯನಿಕಗಳ ಉಪಯೋಗದಿಂದ ಮೊದ-ಮೊದಲು ಹೆಚ್ಚಿನ ಇಳುವರಿ ರೋಗ ನಿಯಂತ್ರಣ ಕಂಡು ಬಂದರೂ ಆ ನಂತರ ಈ ರಾಸಾಯನಿಕಗಳಿಂದ ಆಗುವ ದುಷ್ಪರಿಣಾಮಗಳು ಕೂಡ ಬೆಳಕಿಗೆ ಬರಲಾರಂಭಿಸಿದವು. ಈ ಹೆಚ್ಚಿನ ರಾಸಾಯನಿಕಗಳ ಉಪಯೋಗದಿಂದ ಆಗುವ ಲಾಭಕ್ಕಿಂತ ಹಾನಿಯೇ ಜಾಸ್ತಿ ಎಂದು ಇತ್ತೀಚೆಗೆ ಜನರು ಮನಗಾಣಲು ಆರಂಭಿಸಿದ್ದಾರೆ. ಆದ್ದರಿಂದ ಜೈವಿಕ ಸಸ್ಯರೋಗ ನಿರ್ವಹಣೆ ಇತ್ತೀಚಿನ ದಿನಗಳಲ್ಲಿ ಪ್ರಮುಖ ಪಾತ್ರವಹಿಸಿದೆ.

ಫ್ಲೂರಸಂಟ್ ಸೂಡೋಮೊನಾಸ್: ಇದೊಂದು ಗ್ರಾಮ್ ನೆಗೆಟಿವ್ ದುಂಡಾಣು ಜೈವಿಕ ರೋಗ ನಾಶಕವಷ್ಟೆಯಲ್ಲದೆ, ಬೆಳವಣಿಗೆ ಪ್ರಚೋದಕ. ವಿಶಾಲ ತಾಪಮಾನ ವ್ಯಾಪ್ತಿಯಲ್ಲಿ ಬೆಳೆಯುವ ಸಾಮರ್ಥ್ಯವನ್ನು ಹೊಂದಿದೆ. ಇದರ ಬಳಕೆಯಿಂದಾಗಿ ಅತ್ಯಂತ ಅಪಾಯಕಾರಿ ರೋಗಗಳನ್ನುಂಟು ಮಾಡುವ, ಮಣ್ಣಿನಲ್ಲಿ ವಾಸಿಸುವ ಹಾಗೂ ಎಲೆಗಳ ಮೇಲೆ ಪಸರಿಸುವ ಗಾಮಿನೊಮೈಸಿಸ್, ಪಿರಿಕ್ಯುಲೇರಿಯಾ, ರೈಜಕ್ಟೋನಿಯ, ಕ್ಸಾಂತೊಮಾನಾಸ್, ಎರ್ವಿನಿಯಾ ಮತ್ತು ಕೊಲೆಟೋಟ್ರಿಕಂ ಮುಂತಾದ ಸಿಡಿ/ಸೊರಗು ರೋಗ, ಬೇರು ಕೊಳೆ ರೋಗ, ಹಣ್ಣು ಕೊಳೆ ರೋಗ ಮತ್ತು ಚಿಬ್ಬು ರೋಗಗಳನ್ನುಂಟು ಮಾಡುವ ಶಿಲೀಂದ್ರಗಳು ಮತ್ತು ದುಂಡಾಣುಗಳನ್ನು ನಿರ್ವಹಣೆ ಮಾಡುತ್ತದೆ. ಭಾರತದಲ್ಲಿ ಸುಡೋಮಾನಾಸ್ ದುಂಡಾಣು ಪ್ರಭೇದವು, ಪಿ.ಎಫ್-1, ಪಿ.ಎಫ್-2 ಮತ್ತು ಪಿ.ಎಫ್-9 ಎಂಬ ವಾಣಿಜ್ಯ ಹೆಸರುಗಳಲ್ಲಿ ಲಭ್ಯವಾಗುತ್ತದೆ.

 

ರಂಜಕವನ್ನು ರೈತರು ಬೆಳೆಗೆ ಕೊಟ್ಟಕೂಡಲೇ ಮಣ್ಣಿನ ರಸಸಾರವನ್ನು ಶೇ.50-70 ರಷ್ಟು ಮಣ್ಣಿನಲ್ಲಿ ಉಳಿಯುವುದು. ಕ್ಷಾರ ಮಣ್ಣಿನಲ್ಲಿ ರಂಜಕದ ಲಭ್ಯತೆ ಕಡಿಮೆ. ಇಂತಹ ಸಂದರ್ಭಗಳಲ್ಲಿ ರಂಜಕವನ್ನು ಪೂರೈಸುವ ಸೂಕ್ಷಜೀವಿಗಳಾದ ಸುಡೋಮೊನಸ್ ಬೀಜೋಪಚಾರದ ಮೂಲಕ ಉಪಯೋಗಿಸಿದರೆ, ರಂಜಕವು ಸಸ್ಯಗಳ ಬೆಳವಣಿಗೆಗೆ ಪೂರಕವಾಗಿ, ಇಳುವರಿಯಲ್ಲಿಯೂ ಶೇ. 10-12 ರಷ್ಟು ಅಭಿವೃದ್ಧಿ ಆಗುತ್ತದೆ. ಇದಲ್ಲದೇ ಕೆಲವು ಸುಡೋಮಾನಾಸ್ ಪ್ರಭೇದಗಳು ಸಿಡೆರೋಫೊರ್ಸ್ ಎಂಬ ಕಿಣ್ವಗಳನ್ನು ಉತ್ಪಾದಿಸುತ್ತದೆ.

ಈ ಸಿಡೆರೋಫೊರ್ಸ್ ಕಿಣ್ವಗಳು ಕಬ್ಬಿಣ ಹೀರುವ ಆಕರ್ಷಣೆ ಬಲವನ್ನು ಹೊಂದಿರುತ್ತವೆ. ಈ ಸಿಡೆರೋಫೊರ್ಸ್ ಕಿಣ್ವಗಳು ಮಣ್ಣಿನಲ್ಲಿರುವ ಕಬ್ಬಿಣವನ್ನು ಕರಗಿಸಿ ಸಸ್ಯಗಳ ಬೆಳವಣಿಗೆಗೆ ಪೂರಕವಾಗುವಂತೆ ಮಾಡುತ್ತವೆ. ಸುಡೋಮಾನಾಸ್ ಬೆಳೆಗಳಲ್ಲಿ ಅಂತರ್ವಾಪಿಯಾಗಿ ರೋಗ ಹಾಗೂ ಪೀಡೆ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ರಕ್ಷಣಾತ್ಮಕ ಕಿಣ್ವಗಳಿಂದ ಸಸ್ಯಗಳಿಗೆ ಹೆಚ್ಚಿನ ಶಕ್ತಿ ಒದಗಿಸಬಲ್ಲದು ಎಂದು ಇತ್ತೀಚಿನ ಸಂಶೋಧನೆಯಿಂದ ಕಂಡುಬಂದಿದೆ.

ಸೂಡೋಮೋನಾಸ್ಗಳ ರೋಗನಾಶಕ ಮತ್ತು ಇತರ ಗುಣಗಳು: ಈ ದುಂಡಾಣುವು ಬೇರುಗಳ ಸಮೀಪದಲ್ಲಿ ಬೆಳೆದು ಬೇರಿನ ಸುತ್ತಲೂ ಅತ್ಯಂತ ಪ್ರಬಲ ಕವಚವನ್ನು ನಿರ್ಮಿಸಿ ಹಾನಿಕಾರಕ ಶಿಲೀಂಧ್ರ ಹಾಗೂ ರೋಗ ಜಂತುಗಳಿಂದ ಬೇರನ್ನು ರಕ್ಷಿಸುವ ಸಾಮರ್ಥ್ಯ ಹೊಂದಿದೆ. ರೋಗಕಾರಕ ಶಿಲೀಂಧ್ರಗಳ ಮೇಲೆ ಪರವಲಂಬಿಯಾಗಿ ಬೆಳೆದು ಅವುಗಳಿಗೆ ಆಹಾರ ಮತ್ತು ಸ್ಥಳ ಸಿಗದ ಹಾಗೆ ಮಾಡಿ ಅವುಗಳ ಸಂಖ್ಯೆ ಮತ್ತು ಸಂತಾನೋತ್ಪತ್ತಿಯನ್ನು ಕಡಿಮೆ ಮಾಡುತ್ತದೆ. ಮೊಳಕೆಯೊಡೆದ ಬೀಜಗಳ ಸುತ್ತಲೂ ರೋಗಾಣುಗಳಿಂದ ರಕ್ಷಿಸುತ್ತದೆ. ವಿಶೇಷವಾಗಿ ಮಣ್ಣಿನಲ್ಲಿರುವ ರೋಗಣುಗಳಾದ ಪೀಥಿಯಂ, ಫೈಟೋಫ್ತರಾ, ಪ್ಯುಜೇರಿಯಂ ಹಾಗೂ ಇತರೆ ಮಣ್ಣಿನ ಶಿಲೀಂಧ್ರ ಹಾಗೂ ಬೀಜ ಶಿಲೀಂಧ್ರ್ರಗಳಿಂದ ಪ್ರಥಮ ಹಂತದಲ್ಲಿ ರಕ್ಷಣೆ ನೀಡುತ್ತದೆ. ಮಣ್ಣಿನಲ್ಲಿರುವ ಅಂಟಿಬಯೋಟಿಕ್ ವಸ್ತುಗಳಾದ ಫಿನಾಜಿನ್, ಡಿಎಪಿಜಿ ಪೈಯೋಕಿಲಿನ್, ಪೈರೋಲ್ನಿಟ್ರಿನ್, ಪೈಯೋವಿರಿಡಿನ್ ಮತ್ತು ಅನೇಕ ಕಿಣ್ವಗಳನ್ನು ಬಿಡುಗಡೆ ಮಾಡಿ, ಬೀಜ ಮತ್ತು ಮಣ್ಣಿನಿಂದ ಹರಡುವ ಅನೇಕ ರೋಗಾಣುಗಳನ್ನು ನಿರ್ವಹಣೆ ಮಾಡುತ್ತದೆ. ಈ ದುಂಡಾಣುವು ರೋಗಕಾರಕ ಶಿಲೀಂಧ್ರ್ರ, ದುಂಡಾಣು ಹಾಗೂ ಜಂತುಗಳನ್ನು ನಿಯಂತ್ರಿಸುವುದಲ್ಲದೇ ತಕ್ಕ ಮಟ್ಟಿಗೆ ನಂಜಾಣು ರೋಗವನ್ನು ನಿರ್ವಹಿಸಬಲ್ಲ ಶಕ್ತಿ ಹೊಂದಿದೆ. ಸೂಡೋಮಾನಾಸ್ ಬೆಳೆ ಪ್ರಚೋದಕ ಗುಣವನ್ನು ಹೊಂದಿದ್ದು ಬೆಳೆಗಳಲ್ಲಿ ಅಂತರ್ವಾಪಿಯಾಗಿ ರೋಗ ಹಾಗೂ ಪೀಡೆ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ರಕ್ಷಣಾತ್ಮಕ ಕಿಣ್ವಗಳಿಂದ ಸಸ್ಯಗಳಿಗೆ ಹೆಚ್ಚಿನ ಶಕ್ತಿ ಒದಗಿಸಬಲ್ಲದು ಎಂದು ಸಂಶೋಧನೆಯಿಂದ ಕಂಡು ಬಂದಿದೆ.

ಶೃತಿ, ಟಿ. ಹೆಚ್. ಮಧುಶ್ರೀ ಕೆರಕಲಮಟ್ಟಿ, ರಂಜನಾ ಜೋಶಿ, ಅನನ್ಯ ಕಟ್ಟಿಮನಿ, ಕೃಷಿ ವಿಶ್ವವಿದ್ಯಾಲಯ ರಾಯಚೂರು – ತೋಟಗಾರಿಕಾ ವಿಶ್ವವಿದ್ಯಾಲಯ ಬಾಗಲಕೋಟೆ

LEAVE A REPLY

Please enter your comment!
Please enter your name here