ಲೇಖಕರು: ಶಿವಾನಂದ ಕಳವೆ

ಸಣ್ಣ ಮೆಣಸು ಪ್ರಾದೇಶಿಕ ಹೆಸರುಗಳು
ಸೂಜಿ ಮೆಣಸು, ಜೀರಿಗೆ ಮೆಣಸು, ಗಾಂಧಾರಿ ಮೆಣಸು, ಲವಂಗ ಮೆಣಸು, ಸಣ್ಣ ಮೆಣಸು, ತುರುಕು ಮೆಣಸು ( ಸಕಲೇಶಪುರ) ಭತ್ತ ಮೆಣಸು

ಹಸಿ ಮೆಣಸಿನ ಕಾಯಿಗಳು ದೊರೆಯದ ಕಾಲದಲ್ಲಿ ಅಡುಗೆ ಮನೆ ಸಾಮ್ರಾಜ್ಯ ಆಳಿದ ಪುಟ್ಟ ಜೀವ ನೀನೇ! ಅದರಲ್ಲಿಯೂ ಮಲೆನಾಡಿನ ಅಕ್ಕರೆಯ ಮಾವಿನ ಕಾಯಿ ಗೊಜ್ಜು, ಬಜ್ಜಿ,ಹಲಸು, ಕೆಸವಿನ ಎಲೆ ಅಡುಗೆಗೆ ಬೇಕಾದ ಸರಕು ನೀನೇ ಆಗಿದ್ದೆ. ಎಳೆ ಸವತೆಗೆ ಉಪ್ಪು ಮೆಣಸು ಹಾಕಿ ತಿನ್ನುವ ಹುಚ್ಚು ಹತ್ತಲು ನಿನ್ನದೇ ರುಚಿ ಕಾರಣವೆಂದು ಎಲ್ಲರೂ ಒಪ್ಪುತ್ತಾರೆ.

ಹಲಸಿನ ಹಣ್ಣು ( ಚಕ್ಕೆ, ಮೆತ್ತನೆ ಸೊಳೆ) ಸೊಳೆಗೆ ಹುಳಿ ಪುಡಿ(ವಾಟೆ ಕಾಯಿ ಪುಡಿ) ಉಪ್ಪು,ಕೊಬ್ಬರಿ ಎಣ್ಣೆ ಹಾಕಿಕೊಂಡು ತಿನ್ನುವ ಸಂಭ್ರಮದ ದೊಡ್ದ ಯಶಸ್ಸಿನ ಮೂಲ ನೀನು ಎಂಬುದು ಮರೆಯಲಾಗದು. ಸಣ್ಣ ಮೆಣಸು ನೋಡಿದಾಕ್ಷಣ ನೆನಪಾಗುವ ಬಾಲ್ಯ ಬೆರಗು ದೊಡ್ಡದು.

ಕಾಡು,ಹಿತ್ತಲು,ತೋಟದಲ್ಲಿ ತಾನಾಗಿಯೇ ಹುಟ್ಟಿ ಬೆಳೆದ ನೀನು ನಮ್ಮ ಅಡುಗೆ ರುಚಿಗೆ ಬಂದಿದ್ದು ಭಾಗ್ಯ. ಹಳ್ಳಿ ಅಡುಗೆಯಲ್ಲಿ ಕಾಡುವ ನೀನು ಈಗ ಕಣ್ಮರೆ ಆಗಿಲ್ಲ, ಹಾಗೇ ಇದ್ದೀಯ. ಈಗಂತೂ ಕೆಲವೆಡೆ ಪಾನಿ ಪೂರಿ ರುಚಿ ಹಿಂದೆ ಇದ್ದವಳು ನೀನೇ ಅಂಥ ಕೇಳಿದ್ದೇನೆ. ಕ್ವಿಂಟಾಲ್ ಗೆ ನಿನ್ನ ಮಾರುಕಟ್ಟೆ ದರ 45-50 ಸಾವಿರ ಎಂದು ಕೇಳಿದ್ದೇನೆ.

ಇಂದಿಗೂ ನಾಲ್ಕು ಗಿಡ ನೆಡದ ನಾವು ಎಲ್ಲೋ ಬಿದ್ದು ಹುಟ್ಟಿದ ನಿನ್ನ ಗಿಡದಿಂದ ಹತ್ತಿಪ್ಪತ್ತು ಕಾಯಿ ಕೊಯ್ದು ಖುಷಿ ಪಡುವವರು. ಹಕ್ಕಿಗಳು ತಿನ್ನದೆ ಬಿಟ್ಟ ಹಣ್ಣು ನಮಗೆ ಸಿಕ್ಕು ಬಳಕೆಯ ಪ್ರೀತಿ ಉಳಿದಿದೆ . ಪುಟಾಣಿ ಮಕ್ಕಳಾದ ಹೊತ್ತು ನಾವುಗಳೆಲ್ಲ ಯಾರದೋ ಒತ್ತಾಯಕ್ಕೆ ಸಣ್ಣ ಮೆಣಸಿನ ಹಣ್ಣು ತಿಂದು ಬಾಯಿ ಉರಿಗೆ ಕೊನೆಗೆ ಊರೇ ಕೇಳುವಂತೆ ಅತ್ತವರು ಎಂಬುದು ಎಲ್ಲರಿಗೂ ಗೊತ್ತು.

ನಾನು ಯಾವತ್ತೂ ಹೇಳುತ್ತೇನೆ,ಪರಿಸರ ಪ್ರತ್ಯಕ್ಷ ಒಡನಾಟ, ಬಳಸಿ ಬಲ್ಲ ಜ್ಞಾನ ಎಲ್ಲ ಪರಿಸರ ಪಾಠಕ್ಕಿಂತ ಮಹತ್ವದ್ದು. ಇವತ್ತು ನಿನ್ನ ನೋಡಿದಾಗ ನುಗ್ಗಿ ಬರುತ್ತಿರುವ ನೆನಪುಗಳು ಕಾನು ಮೂಲೆಯ ಒರತೆಯ ಹಾಗೇ! ಕಾನು ಇರುವವರೆಗೆ ಬತ್ತುವುದಿಲ್ಲ.

ನಿನ್ನ ಬಗ್ಗೇ ಹೇಳೋದು ಇನ್ನೂ ಇದೆ,ಬೇಸಿಗೆಯಲ್ಲಿ ಸುಸ್ತಾಗಿ ಕೆಲಸ ಮಾಡಿ ಮನೆಗೆ ಬಂದಾಗ ಮಜ್ಜಿಗೆ ಉಪ್ಪಿನ ಜೊತೆಗೆ ನಿಂತವಳು ನೀನೇ ಅಲ್ಲವೇನೆ? ಒಂದು ತಟ್ಟೆ (ನಮ್ಮಲ್ಲಿ ಲೋಟ, ಗ್ಲಾಸ್ ಗೆ ತಟ್ಟೆ ಎನ್ನುತ್ತೇವೆ….)ಕುಡಿದರೆ ಮತ್ತೆ ಬೇಕೆನಿಸುವ ರುಚಿ. ನಮ್ಮ ನಾಲಿಗೆ ರುಚಿಯ ಹಿಂದೆ ನಿಂತು ಏನೆಲ್ಲ ಚಮತ್ಕಾರ ಮಾಡಿದವಳು ಅಬ್ಬಾ! ಅಂದ್ರೇ ನೀನು ಊರಿಗೆ ದೊಡ್ಡವಳು . ನಿನ್ನ ತಿಂದರೆ ಬಾಯಿಗೆ ಮೆಣಸು ಆದ್ರೂ ಹೊಟ್ಟೆಗೆ ತಂಪು ಅನ್ನುತ್ತಾರೆ. ಇದಕ್ಕೆ ಸರಿ ಉತ್ತರ ಮೆಣಸು ತಜ್ಞರೇ ಹೇಳಬೇಕು

ನೆನಪಿದೆಯಾ ಡಾ. ಮೋಹನ್‌ ತಲಕಾಲುಕೊಪ್ಪ ಅವರೇ ದಶಕದ ಹಿಂದೆ ನಮ್ಮ ತಿಪಟೂರು ಪತ್ರಿಕೋದ್ಯಮ ಶಿಬಿರಕ್ಕೆ ನೀವೊಮ್ಮೆ ಬಂದಾಗ ಅವತ್ತೇ ಪರಿಚಿತನಾದ ಪತ್ರಕರ್ತನೊಬ್ಬನಿಗೆ ನಾವು ಇಬ್ಬರೂ ಹೇಳಿದ್ದು ಇವನೊಬ್ಬ ”ಸಣ್ಣ ಮೆಣಸು’ ಎಂದು,ಚುರುಕಿಗೆ ಪರ್ಯಾಯ ಪದವಾಗಿಯೂ ವಾಡಿಕೆಯಲ್ಲಿ ಮೆಣಸು ಮಾತಿನ ರುಚಿಯಲ್ಲಿಯೂ ಇದೆ

LEAVE A REPLY

Please enter your comment!
Please enter your name here