ಆದಾಯ ಹೆಚ್ಚಿಸಲು ಕಾಳುಮೆಣಸು ಸಂಸ್ಕರಣೆ

0

ಸಾಂಬಾರು ಬೆಳೆಯ ರಾಜ ಎಂದೇ ಕರೆಯಲ್ಪಡುವ ಕಾಳು ಮೆಣಸನ್ನು ಪಶ್ಚಿಮ ಘಟ್ಟಗಳಲ್ಲಿ ಏಕ ಮತ್ತು ಮಿಶ್ರ ಬೆಳೆಯಾಗಿ ಬೆಳೆಯಲಾಗುತ್ತದೆ. ಕರಿ ಮೆಣಸನ್ನು ಸಾಂಬಾರು ವಸ್ತುವಾಗಿ ಅಡುಗೆ, ತಿಂಡಿ ತಿನಿಸುಗಳಲ್ಲಿ ಬಳಸುವುದಲ್ಲದೆ, ಅದರಿಂದ ಓಲಿಯೋರೈಸಿನ್ ಎಂಬ ಅಂಶವನ್ನು ಬೇರ್ಪಡಿಸಿ ಔಷಧ ಸುಗಂಧ ದ್ರವ್ಯ ವಸ್ತುಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ.

ಕಾಳುಮೆಣಸಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ. ರೈತರು ಕಾಳುಮೆಣಸನ್ನು ಕೊಯ್ದು ನಂತರ ನೇರವಾಗಿ ಬಿಸಿಲಿನಲ್ಲಿ ಒಣಗಿಸುವುದರಿಂದ ಅದರ ಬಣ್ಣ ಹಾಗೂ ಗಾತ್ರದಲ್ಲಿ ವ್ಯತ್ಯಾಸವನ್ನು ಕಾಣಬಹುದು. ಆದ್ದರಿಂದ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ. ಸಂಸ್ಕರಣೆ ಮಾಡುವುದರಿಂದ ಕಾಳುಮೆಣಸಿನಲ್ಲಿ ಒಂದೇ ಬಣ್ಣದ ಹಾಗೂ ಗಾತ್ರದ ಮೆಣಸನ್ನು ಪಡೆಯಬಹುದಾಗಿದೆ ಅದರ ಜೊತೆಗೆ ಹೆಚ್ಚಿನ ಆದಾಯವನ್ನು ಪಡೆಯಬಹುದು.

ಸಂಸ್ಕರಣೆ ಮಾಡುವ ವಿಧಾನಗಳು:

ಮೆಣಸಿನ ಬಳ್ಳಿಯು ಹೂಬಿಟ್ಟ ನಂತರ ಕೊಯ್ಲಿನವರೆಗೆ 8 ರಿಂದ 10 ತಿಂಗಳು ತೆಗೆದುಕೊಳ್ಳುತ್ತದೆ. ಮೆಣಸನ್ನು ಕರಿಮೆಣಸು ಮತ್ತು ಬಿಳಿಮೆಣಸು ಎಂದು ಎರಡು ಬಗೆಯಾಗಿ ಸಂಸ್ಕರಿಸಬಹುದು.

ಕರಿಮೆಣಸಿನ ಸಂಸ್ಕರಣಾ ವಿಧಾನ:

ಗೊಂಚಲಿನ ಒಂದೆರಡು ಕಾಳುಗಳು ಹೊಳಪು ಕಿತ್ತಳೆ ಅಥವಾ ನೇರಳೆ ಬಣ್ಣಕ್ಕೆ ತಿರುಗಿದಾಗ ಪೂರ್ತಿ ಗೊಂಚಲನ್ನು ತೆಗೆಯಬೇಕು. ಅನಂತರ ಉತ್ತಮ ಬಣ್ಣ ಪಡೆಯಲು ಒಂದು ನಿಮಿಷ ಕುದಿಯುವ ನೀರಿನಲ್ಲಿ ಅದ್ದಬೇಕು. ಗೊಂಚಲುಗಳಿಂದ ಕಾಳುಗಳನ್ನು ಬೇರ್ಪಡಿಸಿ 2-3 ದಿನಗಳ ಕಾಲ 200 ಗೇಜ್‌ನ ನೇರಳಾತೀತ ನಿರೋಧಕ ಪಾಲಿಥೀನ್ ಹಾಳೆಯ ಮೇಲೆ ಹಾಕಿ ಅದನ್ನು ಪಾಲಿಥೀನ್ ಹಾಳೆಯಿಂದ ಮುಚ್ಚಿ ಬಿಸಿಲಿನಲ್ಲಿ ಒಣಗಿಸಬೇಕು ನಂತರ ಹೊದಿಸಿರುವ ಪಾಲಿಥೀನ್ ಹಾಳೆಯನ್ನು ತೆಗೆದು ಬಿಸಿಲಿನಲ್ಲಿ 6-8 ದಿನಗಳ ಕಾಲ ಒಣಗಿಸಿದಾಗ ಕರಿಮೆಣಸು ತಯಾರಾಗುತ್ತದೆ.

ಬಿಳಿ ಮೆಣಸು ಸಂಸ್ಕರಣಾ ವಿಧಾನ:

ಬಹುಪಾಲು ಕಾಳುಗಳು ಕೆಂಪು ಬಣ್ಣಕ್ಕೆ ತಿರುಗಿದಾಗ ಕೊಯ್ಲು ಮಾಡಬೇಕು. ಗೊಂಚಲುಗಳನ್ನು ಒಂದೆರಡು ದಿನ ಗುಡ್ಡೆ ಹಾಕಬೇಕು. ಆಗ ಕಾಳುಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ಅನಂತರ ಕಾಳುಗಳನ್ನು ಬೇರ್ಪಡಿಸಿ 8-10 ದಿನ ನೀರಿನಲ್ಲಿ ನೆನೆಸಿ ಹೊರಗೆ ತೆಗೆದು ಗುಡ್ಡೆ ಹಾಕಿ ಮುಚ್ಚಬೇಕು. ಲಘುವಾಗಿ ಹುಳಿಸುವಿಕೆ (ಫರ್ಮೆಂಟೇಷನ್) ಕ್ರಿಯೆ ನಡೆದು ಕಾಳುಗಳ ಮೇಲಿನ ತೆಳುವಾದ ಹೊದಿಕೆಯು ಸಡಿಲಗೊಳ್ಳುವುದು ಆಗ ನೀರಿನಲ್ಲಿ ತೊಳೆದು ಕಾಳು ಮತ್ತು ಹೊದಿಕೆಯನ್ನು ಬೇರ್ಪಡಿಸಬೇಕು. ಹೀಗೆ ದೊರೆಯುವ ಬಿಳಿ ಮೆಣಸಿನ ಕಾಳುಗಳನ್ನು ಬಿಸಿಲಿನಲ್ಲಿ ಒಣಗಿಸಬೇಕು. ಕೃ.ವಿ.ವಿ ಬೆಂಗಳೂರಿನ ಕೊಯ್ಲೋತ್ತರ ತಾಂತ್ರಿಕತೆ ವಿಭಾಗವು ನಿರೂಪಿಸಿದ ಬಿಳಿ ಮೆಣಸು ಮಾಡುವ ಯಂತ್ರವನ್ನು ಬಳಸಬಹುದು.

ಹೀಗೆ ಕಾಳುಮೆಣಸನ್ನು ಸಂಸ್ಕರಣೆ ಮಾಡುವುದರಿಂದ ಮಾರುಕಟ್ಟೆಯಲ್ಲಿ ಹೆಚ್ಚಿನ ಆದಾಯವನ್ನು ಪಡೆಯಬಹುದು

ಲೇಖಕರು: ಕು. ಮಮತ ಎನ್.ಪಿ., ಕು. ದೀಪ ಜಿ. ಎಸ್.

LEAVE A REPLY

Please enter your comment!
Please enter your name here