ಪೂರ್ವಕಾಲದಿಂದಲೂ ಮನಷ್ಯನು ತನ್ನ ಸುತ್ತಮುತ್ತಲಿರುವ ಗಿಡ, ಮರ, ಪ್ರಾಣಿ, ಪಕ್ಷಿಸಂಕುಲಗಳೊಡನೆ ತನ್ನ ಜೀವನವನ್ನು ಸಾಗಿಸುತ್ತಾ ಬಂದಿದ್ದಾನೆ. ಹೈನುಗಾರಿಕೆ, ಪ್ರಾಣಿ, ಪಕ್ಷಿಗಳ ಸಾಕಾಣೆ, ಕೃಷಿ ಭೂಮಿ ಮುಂತಾದ ಮಾರ್ಗಗಳನ್ನು ತನ್ನ ಜೀವನೋಪಾಯವನ್ನಾಗಿ ಮಾಡಿಕೊಂಡಿದ್ದಾನೆ. ಈ ನಿಟ್ಟಿನಲ್ಲಿ ಕೋಳಿ ಸಾಕಾಣೆ ಪದ್ಧತಿಯೂ ಮನುಷ್ಯನ ಜೀವನದ ಮಾರ್ಗೋಪಾಯವಾಗಿದೆ. ಪ್ರಪಂಚದಾದ್ಯಂತ ಕೋಳಿ ಸಾಕಣೆ ಉದ್ಯಮ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಇದು ಕಡಿಮೆ ವೆಚ್ಚದಲ್ಲಿ ಅಧಿಕ ಲಾಭ ನೀಡುವ ಉದ್ಯಮವಾಗಿದೆ.

ಕೋಳಿ ಸಾಕಣೆಯಲ್ಲಿ ಅನೇಕ ಪದ್ಧತಿಗಳನ್ನು ಅನುಸರಿಸುತ್ತಾರೆ. ಅಂತಹ ಪದ್ಧತಿಗಳಲ್ಲಿ ಬಯಲು ವಿಧಾನವೂ ಒಂದು. ಈ ವಿಧಾನವು ಶುದ್ಧಗಾಳಿ, ಸ್ವಚ್ಛ ಮೇವು, ನೀರು, ಸ್ವಾಭಾವಿಕ ಶತೃಗಳಾದ ಭಕ್ಷಕಗಳಿಂದ ರಕ್ಷಣೆ, ಚಳಿ ಮಳೆ, ಗಾಳಿ ಮತ್ತು ಹೆಚ್ಚು ತಾಪಮಾನದಿಂದ ರಕ್ಷಣೆಯನ್ನು ನಿರೀಕ್ಷಿಸುತ್ತದೆ. ಇಂತಹ ಬಯಲು ವಿಧಾನದಲ್ಲಿ ಕೋಳಿಯ ಮರಿಗಳಿಗೆ ಶಾಖವನ್ನು ಒದಗಿಸಬೇಕಲ್ಲದೆ, ಕೋಳಿಗಳು ಆರಾಮವಾಗಿ ನಿದ್ರಿಸಿ, ಬೆಳೆದು ಮೊಟ್ಟೆಗಳನ್ನು ಉತ್ಪಾದಿಸುವಂತಿರಬೇಕು. ಜೊತೆಗೆ ಒತ್ತಡ ಹಾಗು ರೋಗ ಮುಕ್ತವಾಗಿರಬೇಕು.

===========

ಹಿತ್ತಲಿನ ಹುಲ್ಲು ಹಾಸಿನಲ್ಲಿ ಕೋಳಿಗಳನ್ನು ಸಾಕುವುದು ಪರ್ಯಾಯ ಪದ್ಧತಿಯ ಮೂಲ ವಿಧಾನ. ಈ ಪದ್ಧತಿಯಲ್ಲಿ ಬೆಳೆದ  ಕೋಳಿಗಳು ಸ್ವಾಭಾವಿಕವಾಗಿ ಬದುಕಿ, ಬೆಳೆಯುವತ್ತ ಒತ್ತು ನೀಡುತ್ತದೆ. ಇಂತಹ ಬಯಲು ಸಾಕಣೆ ವಿಧಾನದಲ್ಲಿ ಭೂಮಿಯು ಫಲವತ್ತಾಗಿರಬೇಕು. ನೀರು ಉತ್ತಮವಾಗಿ ಬಸಿದು ಹೋಗುವಂತಿರಬೇಕು. ರೋಗಕಾರಕಗಳ ಉಪಟಳ, ಹೆಚ್ಚಿನ ತೇವಾಂಶ, ಅಧಿಕ ಗೊಬ್ಬರಗಳು ಇಲ್ಲದಂತಾಗುತ್ತವೆ. ಸಾಮಾನ್ಯವಾಗಿ ಕೋಳಿಗಳನ್ನು ಮೂರು ವಿಧಾನದಲ್ಲಿ ಸಾಕಾಲಾಗುತ್ತಿದೆ.

1.ಒಳಸಾಕುವಿಕೆ  2.ಹೊರಸಾಕುವಿಕೆ  (ನಿರ್ಬಂಧಿತ) 3.ಹೊರಸಾಕುವಿಕೆ (ಅನಿರ್ಬಂಧಿತ)

===========

ಕೋಳಿಗಳನ್ನು ಮನೆಯೊಳಗೆ ಇರಿಸಿ, ಕೂಡಿ ಸಾಕುವುದು ಒಳಸಾಕುವಿಕೆಯ ವಿಧಾನ. ಇತ್ತೀಚಿನ ದಿನಗಳಲ್ಲಿ ಒಳಸಾಕುವಿಕೆ ಪದ್ಧತಿಯು ಅತ್ಯಂತ ಪ್ರಾಮುಖ್ಯತೆ ಪಡೆದಿದೆ. ಕೋಳಿ ಸಾಕಣೆ ಉದ್ಯಮ ಈ ಪದ್ಧತಿಯನ್ನು ಅನುಸರಿಸುತ್ತದೆ. ಈ ವಿಧಾನದಲ್ಲೂ ಪರ್ಯಾಯಗಳುಂಟು. ಕೋಳಿ ಉದ್ಯಮದಲ್ಲಿ ಮಾಂಸಕ್ಕಾಗಿ ಸಾಕುವ ಬಾಯ್ಲರ್ ಗಳನ್ನು ಮನೆಯೊಳಗೆ ದಪ್ಪಸತ್ತೆ ವಿಧಾನದಲ್ಲಿ ಸಾಕಲಾಗುತ್ತದೆ. ಆದರೆ ಮೊಟ್ಟೆ ಕೋಳಿಗಳನ್ನು ಪಂಜರಗಳಲ್ಲಿ ಸಾಕುವುದು ಸಾಮಾನ್ಯವಾಗಿದೆ.

ಹೊರ ನಿರ್ಬಂಧಿತ ಸಾಕುವಿಕೆಯಲ್ಲಿ ಕೋಳಿಗಳನ್ನು ಬೇಲಿಗಳ ಒಳಗೆ, ಸಂಚಾರಿ ಗೂಡುಗಳಲ್ಲಿ ಸಾಕಲಾಗುತ್ತದೆ. ಇಂತಹ ವಿಧಾನದಲ್ಲಿ ಕೋಳಿಗಳು ಸ್ವೇಚ್ಚೆಯಿಂದ ಮೇಯುವಂತೆ ಒಂದು ನಿರ್ಬಂಧನೆಯಲ್ಲಿ ನೋಡಿಕೊಳ್ಳಬೇಕು. ಅಲ್ಲದೆ ಈ ನಿರ್ಬಂಧಿತ ಕೋಳಿಸಾಕುವಿಕೆಯಲ್ಲಿ ಸ್ಥಳಾಂತರಿಸಬಹುದಾದ ಸಣ್ಣ ಸಂಚಾರಿ ಕೋಳಿಮನೆಗಳನ್ನು ಹಾಗು ಸ್ಥಿರವಾದ ಕೋಳಿ ಮನೆಗಳನ್ನು ಸಹ ಬಳಸಬಹುದು. ಈ ರೀತಿ ಹೊರ ಸಾಕುವಿಕೆಯಲ್ಲಿ ಕೋಳಿಗಳನ್ನು ನೆಲಗಟ್ಟಿಲ್ಲದ ಸಂಚಾರಿ ಗೂಡುಗಳಲ್ಲಿ ಸಾಕುವುದರಿಂದ ತೋಟದ ಫಲವತ್ತತೆ ಹಾಗು ಪ್ರತಿದಿನ ಜಾಗ ಬದಲಾಯಿಸುವುದರಿಂದ ನೆಲ ಕೆದಕಿದಂತಾಗುತ್ತದೆ.

ಇನ್ನು ಅನಿರ್ಭಂದಿತ ಸಾಕುವಿಕೆಯಲ್ಲಿ ಕೋಳಿಗಳು ಬಯಲಿನಲ್ಲಿ ಯಾವುದೇ ನಿರ್ಬಂಧನವಿಲ್ಲದೇ, ಬೇಕಾದ ಜಾಗದಲ್ಲಿ ಸ್ವತಂತ್ರವಾಗಿ ಮೇಯಬಹುದು. ಹಗಲಲ್ಲಿ ಕೋಳಿಗಳು ಯಾವುದೇ ತಡೆಯಿಲ್ಲದೆ ತಮಗೆ ಬೇಕಾದಲ್ಲಿ ಮೇವು ಪಡೆದು ರಾತ್ರಿ ಗೂಡಿಗೆ ಹಿಂದಿರುಗುತ್ತವೆ. ಕೋಳಿಯ ಗೂಡುಗಳನ್ನು ಆಗಾಗ ಹೊಸ ಜಾಗಗಳಿಗೆ ಬದಲಾಯಿಸಬೇಕಾಗುತ್ತದೆ. ಪ್ರಧಾನವಾಗಿ ಕೋಳಿ ಸಾಕಣೆಯಲ್ಲಿ ಒಳಸಾಕುವಿಕೆ  ಹಾಗು ಹೊರಸಾಕುವಿಕೆಯ ಪದ್ಧತಿ ಅನುಸರಿಸಲಾಗುತ್ತದೆ. ಇದಲ್ಲದೆ ಸ್ವೇಚ್ಛಾ ಬಯಲು, ಹಾಗು ಕಾಲೋನಿ ಪದ್ಧತಿ ಸಹ ರೂಢಿಯಲ್ಲಿದೆ,

ಕೋಳಿ ಸಾಕಣೆ ವಿಧಾನ ಆಯ್ಕೆಯಲ್ಲಿ ಕೆಲವು ಅಂಶಗಳನ್ನು ನಾವು ಗಮನಿಸಬೇಕು. ಅಧಿಕ ಉತ್ಪಾದನೆಗೆ ಕೋಳಿ ಸಾಕಣೆ ಮಾಡುವುದಾದರೆ ತೀವ್ರ ಸಾಕಣೆ ಹಾಗು ಬಯಲು ಸಾಕಣೆ ಪದ್ಧತಿ ಉತ್ತಮ ಹಾಗು ಫಲಕಾರಿ. ಸಣ್ಣಸಣ್ಣ ಬಯಲಲ್ಲಿ ಹೆಚ್ಚು ಸಾಕಣೆ ಹಾಗು ದೊಡ್ಡ ಬಯಲಲ್ಲಿ ಕಡಿಮೆ ಸಾಕಾಣೆ ಮಾಡುವುದರಿಂದ ತೋಟದ ಅಥವಾ ನೆಲದ ಫಲವತ್ತತೆಯ ಮೇಲೆ ಪ್ರಭಾವ ಬೀರುತ್ತದೆ. ಅತ್ಯಂತ ಕಡಿಮೆ ಬಂಡವಾಳದೊಂದಿಗೆ ಈ ಸಾಕಣೆ ಉದ್ಯಮವನ್ನು ಪ್ರಾರಂಭಿಸಿ, ಮುಂದೆ ಸಾಕುವಿಕೆಯ ವಿಧಾನವನ್ನು ಬದಲಿಸಬಹುದು. ಕೋಳಿ ಸಾಕಣಿಕೆಯ ಉದ್ಯಮ ದೊಡ್ಡ ಪ್ರಮಾಣದಲ್ಲಿ ಕೆಲಸಗಾರರನ್ನು ಅವಲಂಬಿಸುತ್ತದೆ.

ಸಾಕಣಿಕೆ ವಿಧಾನದಲ್ಲಿ ತಾಜಾ ಮೇವು, ತಾಜಾ ಗಾಳಿ, ಒದಗಿಸಿ ಸ್ವಾಭಾವಿಕ ನಡವಳಿಕೆಗೆ ಅವಕಾಶ ಒದಗಿಸುವುದು, ಭಕ್ಷಕಗಳು, ರೋಗಕಾರಕಗಳಿಂದ ರಕ್ಷಿಸಬಹುದು. ಗಮನಿಸಬೇಕಾದ ಮುಖ್ಯ ಅಂಶಗಳು ಅಸಮ ಜಾಗದಲ್ಲಿ ಸಾಕಣೆ ಮಾಡುವುದು ಸ್ವಚ್ಛ ಮೊಟ್ಟೆ ಉತ್ಪಾದನೆಗೆ ಪೂರಕ.

===========

ಕೋಳಿ ಸಾಕಣಿಕೆ ಉದ್ಯಮದಲ್ಲಿ ಬೆಳಕು ನಿರ್ವಹಣೆ ತುಂಬ ಅತ್ಯಗತ್ಯ. ಕೋಳಿಗಳ ಮೊಟ್ಟೆ ಉತ್ಪಾದನಾ ಮಟ್ಟ ಹಾಗು ಗುಣಗಳು ಬೆಳಕಿನ ಅವಧಿಯ ಮೇಲೆ ಅವಲಂಬಿತವಾಗಿರುತ್ತದೆ. ಸ್ವಾಭಾವಿಕವಾಗಿ ದೊರೆಯುವ ಬೆಳಕನ್ನು ಕೋಳಿ ಮತ್ತು ಮೊಟ್ಟೆಗಳ ನಿರ್ವಹಣೆಗೆ ಬಳಸಲಾಗುತ್ತದೆ. ನೈಸರ್ಗಿಕ ಬೆಳಕಿನೊಂದಿಗೆ 16.5 ಗಂಟೆಗಳ ಕೃತಕ ಬೆಳಕನ್ನು ಒದಗಿಸುವುದರಿಂದ ಉತ್ಪಾದನೆ ಹೆಚ್ಚಾಗುತ್ತದೆ. ಕೆಂಪು ಮತ್ತು ಹಳದಿ ತರಂಗಾಂತರದ ಬೆಳಕು, ಮೊಟ್ಟೆ ಕೋಳಿಗಳ ಲೈಂಗಿಕ ಚಟುವಟಿಕೆಯನ್ನು ವೃದ್ಧಿಸುತ್ತದೆ.

===========

ಕೋಳಿಮರಿಯ ಸಾಕಣೆ ಹಾಗು ಸಂಚಾರಿ ಗೂಡುಗಳಲ್ಲಿ ಸತ್ತೆಯ ಬಳಕೆಯಾಗುತ್ತದೆ. ಸತ್ತೆಯು ಚಳಿಗಾಲದ ಶೀತದಿಂದ ರಕ್ಷಣೆ ಒದಗಿಸುತ್ತದೆ. ಅಲ್ಲದೆ ಇದು ತೇವವನ್ನು ಹೀರಿಕೊಳ್ಳುತ್ತದೆ. ಆದ್ದರಿಂದ ಸತ್ತೆಯನ್ನು ಉಪಯೋಗಿಸಿದ ನಂತರ ಸಾವಯವ ಗೊಬ್ಬರವಾಗಿ ಬಳಸಬಹುದು. ಇತ್ತೀಚಿನ ದಿನಗಳಲ್ಲಿ ಕೋಳಿಗಳಿಗೆ, ಮೆಲುಕು ಹಾಕುವ ಪ್ರಾಣಿಗಳಿಗಾಗಿ ಭೂ ನಿರ್ವಹಣೆ ಮಾಡಲಾಗುತ್ತದೆ. ಆದರೆ ಸಾಕಣೆಗಾರರು ಕೋಳಿಗಳಿಗೆ ವಿಶೇಷ ಹುಲ್ಲುಗಾವಲು ಹಾಗು ಮೇವು ತಾಣಗಳ ಬಗ್ಗೆ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ ಕೋಳಿಗಳು ಹುಲ್ಲಿಗಿಂತ ಅಗಲ ಎಲೆಯ ಸಸ್ಯಗಳನ್ನು ಇಷ್ಟಪಡುವುದರಿಂದ ಕುದುರೆ ಮಸಾಲೆ, ಕ್ಲೋವರ್ ಹಾಗು ಇತರೆ ಸಸ್ಯಗಳ ಮೇವುತಾಣಗಳಿಗೆ ಹೆಚ್ಚೆಚ್ಚು ಬೇಡಿಕೆಯಿದೆ.

ಕೋಳಿ ಮೊಟ್ಟೆ ಉತ್ಪಾದಕರು, ಕುಡಿಯುವ ನೀರಿನ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಅದರಲ್ಲೂ ಬೇಸಿಗೆಯಲ್ಲಿ ಸಂಚಾರಿ ಗೂಡುಗಳಲ್ಲಿ ಕೋಳಿಗಳನ್ನು ಸಾಕುವವರು ನೀರಿನ ವಿಚಾರವಾಗಿ ಗಮನ ನೀಡಬೇಕು. ನೀರಿನ ತೊಟ್ಟಿಗಳ ಬದಲು ಕೊಳವೆ ನೀರುಣಿಕೆಗಳನ್ನು, ಹೆಚ್ಚು ಮೇವು ಹಿಡಿಯುವ ದೊಡ್ಡ ಮೇವುಣಿಕೆಗಳನ್ನು ನಿರ್ಮಿಸಬೇಕು.

ಕೋಳಿ ಸಾಕಣೆ ಪದ್ಧತಿಯಲ್ಲಿ ಹವಾಮಾನವು ಮಹತ್ವದ ಪಾತ್ರ ವಹಿಸುತ್ತದೆ. ಹವಾಮಾನಕ್ಕೆ ಅನುಗುಣವಾಗಿ ಸಾಕುವ ಪದ್ಧತಿಗಳನ್ನು  ರೂಪಿಸಿಕೊಳ್ಳಬಹುದು. ಚಳಿಗಾಲದ ಸಮಯದಲ್ಲಿ ಹಿತ್ತಲ ಕೋಳಿ ಸಾಕಣೆ ಹೆಚ್ಚು ಸಮಸ್ಯೆಯನ್ನು ಎದುರಿಸುತ್ತದೆ. ಹವಾಮಾನ ವಿಪರೀತವಿದ್ದಾಗ ಕೋಳಿಗಳನ್ನು ಹೆಚ್ಚು ಸಮಯ ಗೂಡಿನೊಳಗಿಟ್ಟಿದ್ದು ಮೊಟ್ಟೆಗಳ ಜೋಪಾನ ಮಾಡಬೇಕಾಗುತ್ತದೆ.

===========

ಚಳಿಗಾಲದ ಸಮಯದಲ್ಲಿ ಬ್ರಾಯ್ಲರ್ ಹಾಗು ಮೊಟ್ಟೆಕೋಳಿಯ ಉತ್ಪಾದನೆಯು ಹೆಚ್ಚು ಲಾಭದಾಯಕವಾಗಿರುತ್ತದೆ. ಮೊಟ್ಟೆ ಇಡುವ ಕೋಳಿಗಳನ್ನು ವಿದ್ಯುತ್ಪೂರಿತ ಬಲೆಬೇಲಿ ಹಾಗು ಉಪದ್ರವಕಾರಿ ಕೀಟ, ಪ್ರಾಣಿಗಳು ಬರದಂತೆ, ಕೋಳಿಗಳನ್ನು ರಕ್ಷಿಸಬೇಕು. ಗಿಡುಗಗಳಿಂದ ಇನ್ನಿತರ ಪ್ರಾಣಿಭಕ್ಷಕಗಳಿಂದ ರಕ್ಷಿಸಬೇಕು.

===========

ಕೋಳಿ ಮನೆಗಳನ್ನು, ಮರಗಳಿಂದ ದೂರವಿರಿಸುವುದು, ಆಗಾಗ ಜಾಗ ಬದಲಾವಣೆ ಮಾಡುವುದರಿಂದ ಕಾವಲು ಪ್ರಾಣಿಗಳನ್ನು ಸಾಕುವುದರಿಂದ ಕೋಳಿಗಳನ್ನು ರಕ್ಷಿಸಬಹುದು. ಬೆದರು ಬೊಂಬೆ, ಹೊಳೆಯುವ ಪದಾರ್ಥಗಳು ಹಾಗು ಫಾರಂ ಅನ್ನು ವಾಸದ ಮನೆಯ ಸಮೀಪ ಇಟ್ಟುಕೊಳ್ಳುವುದರಿಂದಲೂ ಸಹ ಕೋಳಿಗಳನ್ನು ರಕ್ಷಿಸಬಹುದು.

ಬಯಲಲ್ಲಿ ಸಾಕುವ ಕೋಳಿಗಳಿಗಿಂತ ಮನೆಯೊಳಗೆ ಸಾಕುವ/ಸಾಕಿದ ಕೋಳಿಗಳು ಹೆಚ್ಚು ಸುರಕ್ಷಿತ ಹಾಗು ಆರೋಗ್ಯದಿಂದಿರುತ್ತವೆ. ಬಯಲಲ್ಲಿ ಸಾಕಿದ ಕೋಳಿಗಳು ನೈಸರ್ಗಿಕ ಪ್ರಾಣಿ ಸಂಕುಲದ ಜೊತೆಗೆ ಬೆಳೆಯುವುದರಿಂದ ಅಂದರೆ ದನ, ಎರೆಹುಳು, ಮಿಡತೆ, ಬಸವನ ಹುಳು, ಗೊಂಡೆಹುಳು ಮುಂತಾದವುಗಳು ಹರಡುವ ರೋಗಗಳು ಕೋಳಿಗಳ ಮೇಲೆ ನೇರ ಪರಿಣಾಮವನ್ನುಂಟು ಮಾಡುತ್ತದೆ.

ಬಯಲಲ್ಲಿ ಎಲ್ಲ ವಯಸ್ಸಿನ ಕೋಳಿಗಳಿರುವುದರಿಂದ ಬೆಳೆದ ಕೋಳಿಗಳು ಎಳೆಯ ಮರಿಕೋಳಿಗಳಿಗೆ ರೋಗ ಹರಡುತ್ತವೆ. ವಿವಿಧ ಪ್ರಬೇಧಗಳನ್ನು ಸಾಕಣೆ ಮಾಡಿದಾಗ ಒಂದರಲ್ಲಿ ರೋಗ ಉಂಟು ಮಾಡದೇ ಇರುವುದು ಮತ್ತೊಂದರಲ್ಲಿ ರೋಗ ಉಂಟು ಮಾಡಬಹುದು. ಬಯಲಲ್ಲಿ ಹೆಚ್ಚು ಕಾಲ ಕೋಳಿಗಳನ್ನು ಸಾಕುವುದರಿಂದಲೂ ರೋಗ ಹರಡುವ ಸಾಧ್ಯತೆ ಹೆಚ್ಚು.

2 COMMENTS

  1. Sir,
    Very good Useful articles for formers, Agricultural Students & New enterpriners.

    THANKS & Regards

    NHN MURTHY RAO
    Managing Trustee
    Shirdi Sai Trust
    Bangalore & Nelamangla

LEAVE A REPLY

Please enter your comment!
Please enter your name here